ADVERTISEMENT

ಕನ್ನಡದ ನಾಳೆಗಳು: ಭರವಸೆಯೇ ಬೆಳಕು

​ಪ್ರಜಾವಾಣಿ ವಾರ್ತೆ
Published 29 ಜನವರಿ 2011, 18:30 IST
Last Updated 29 ಜನವರಿ 2011, 18:30 IST
ಕನ್ನಡದ ನಾಳೆಗಳು: ಭರವಸೆಯೇ ಬೆಳಕು
ಕನ್ನಡದ ನಾಳೆಗಳು: ಭರವಸೆಯೇ ಬೆಳಕು   

‘ಬೆಂಕಿ ಬಿದ್ದಿದೆ ಮನೆಗೆ ಓ ಬೇಗ ಬನ್ನಿ!
ಎಲ್ಲರೂ ಎದ್ದೆದ್ದು ಓಡಿ ಬನ್ನಿ!
ಕನ್ನಡದ ಗಡಿ ಕಾಯೆ
ಗುಡಿ ಕಾಯೆ, ನುಡಿ ಕಾಯೆ
ಕಾಯಲಾರೆವೆ... ಸಾಯೆವೆ!
ಓ ಬನ್ನಿ ಬನ್ನಿ!’

ಕಾಸರಗೋಡು ಕನ್ನಡ ನಾಡು. ಚಂದ್ರಗಿರಿಯ ಉತ್ತರ ಭಾಗ ಅನ್ಯಾಯವಾಗಿ ಕೇರಳಕ್ಕೆ ಸೇರಿಹೋಗಿದೆ. ಮಹಾಜನ ವರದಿಯೇ ಕಾಸರಗೋಡು ಕರ್ನಾಟಕದ ಪ್ರದೇಶ ಎಂದು ಅನುಕೂಲಕರ ವರದಿ ನೀಡಿದೆ. ಮಹಾಜನ ವರದಿ ಯಥಾವತ್ತಾಗಿ ಜಾರಿಯಾಗಬೇಕು ಎಂಬುದೇ ನನ್ನ ಮಹದಾಸೆ.

ಕರ್ನಾಟಕ ಪ್ರಾಂತ್ಯ ರಚನೆ ಆದದ್ದೇ ಬೃಹತ್ ಕರ್ನಾಟಕ ರೂಪೀಕರಣ ಆಗಬೇಕು ಎಂಬ ಆಶಯದಲ್ಲಿ. ಬೃಹತ್ ಕರ್ನಾಟಕ ಪ್ರದೇಶವಾಗಿ ಹಿಂದೆ ಇದ್ದುದನ್ನು ಆಡಳಿತಕ್ಕೆ ಬಂದ ಕನ್ನಡ ಮೂಲ ಅಲ್ಲದವರು ವ್ಯತ್ಯಾಸ ಮಾಡಿದರು. ಆದರೆ ಕರ್ನಾಟಕ ರಾಜ್ಯ ನಿರ್ಧಾರ ಭದ್ರವಾಗಿ ಉಳಿಯಬೇಕೆಂಬ ಧೀರ ಕನ್ನಡದ ಮಹನೀಯರು ಸಾಧನೆ ಮಾಡಿದ ಫಲವಾಗಿ ಈಗ ಕರ್ನಾಟಕ ರಾಜ್ಯ ಉಳಿದಿದೆ. ಅದನ್ನು ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಕನ್ನಡಿಗರು ಚಿಂತಿಸಬೇಕು.

ಕೆಲವು ಲೋಪದೋಷಗಳು ಈಗಿನ ಕರ್ನಾಟಕದಲ್ಲಿ ಇದ್ದರೂ ಪರಿಹರಿಸಿ ಕರ್ನಾಟಕ ಗಟ್ಟಿಗೊಳ್ಳಲು ಸಾಧ್ಯವಿದೆ. ಆ ಪ್ರಯತ್ನವನ್ನು ಧೀರ ಕನ್ನಡದ ಧುರೀಣರು ಮರೆತಿಲ್ಲ- ಮಾಡುತ್ತಿದ್ದಾರೆ. ಅವರಿಗೆ ನಾಡಿನ ಕನ್ನಡ ಮಹಾಜನತೆ ಖಂಡಿತವಾಗಿಯೂ ಬೆಂಬಲವಾಗಿ ನಿಂತಿದ್ದಾರೆ. ಈ ಬೆಂಬಲ ವಿಚಲಿತಗೊಳ್ಳುವ ಸಾಧ್ಯತೆಗಳಿಗೆ ಅವಕಾಶ ಇರಬಾರದು ಅಷ್ಟೆ.

ಕನ್ನಡಿಗರು ತಾವು ಕಲಿಯುವ ಶಾಲಾ ಕಾಲೇಜುಗಳಲ್ಲಿ ಹಾಗೂ ಅದನ್ನು ಸ್ಥಾಪಿಸಿದ ಮಹನೀಯರು ಕೂಡಾ ಭದ್ರವಾದ ಯೋಚನೆಯಿಂದ ಕನ್ನಡ ಉಳಿಸಲು ಪ್ರಯತ್ನ ಮಾಡಿದ್ದಾರೆ. ತತ್ಫಲವಾಗಿ ಕರ್ನಾಟಕ ರಾಜ್ಯ ನಿರ್ಮಾಣವಾಗಿದೆ. ಬ್ರಾಹ್ಮಣ, ಲಿಂಗಾಯತ, ಒಕ್ಕಲಿಗ- ಈ ಸಮಾಜದವರು ಕರ್ನಾಟಕ ರಾಜ್ಯ ಭದ್ರವಾಗಿರಬೇಕೆಂಬ ನಿಟ್ಟಿನಲ್ಲಿ ಒಂದಾಗಿದ್ದಾರೆ. ಅದಕ್ಕೆ ಕನ್ನಡಿಗರಾದವರ ಸಹಕಾರ ಅಗತ್ಯ. ಈ ಹಿನ್ನೆಲೆಯ ಧ್ಯೇಯ ಇರುವ ಕನ್ನಡ ಜನತೆ ಮುಖ್ಯವಾಗಿ ಕನ್ನಡ ನಾಡಿನ ಸ್ಥಳೀಯ ಧುರೀಣರು ಕನ್ನಡ-ಕರ್ನಾಟಕವನ್ನು ಬಲಗೊಳಿಸುವ ಉದ್ದೇಶದ ಹೋರಾಟವನ್ನು ಕೈಗೆತ್ತಿಕೊಳ್ಳಬೇಕು. ಆಗ ಮಾತ್ರ ಕನ್ನಡ-ಕರ್ನಾಟಕ ರಾಜ್ಯ ಭದ್ರವಾಗಿ ಉಳಿದೀತು-ಬೆಳಗೀತು. ಅದು ಸಾಧ್ಯವಾದೀತು ಎನ್ನುವ ಭರವಸೆ ನನಗಿದೆ; ನಮಗಿರಬೇಕು.
-ಡಾ. ಕಯ್ಯಾರ ಕಿಞ್ಞಣ್ಣ ರೈ
ಮಂಗಳೂರು ಸಾಹಿತ್ಯ ಸಮ್ಮೇಳನ (1997) ಅಧ್ಯಕ್ಷರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT