ADVERTISEMENT

ಕರುಣಾಶ್ರಯ ಕೊನೆಯ ತಂಗುದಾಣ

ಪ್ರವೀಣ ಕುಲಕರ್ಣಿ
Published 14 ಡಿಸೆಂಬರ್ 2013, 19:30 IST
Last Updated 14 ಡಿಸೆಂಬರ್ 2013, 19:30 IST

ಬೆಂಗಳೂರಿನ ‘ಕರುಣಾಶ್ರಯ’ ಎಂಬ ‘ಸಾವಿನ ಮನೆ ಯಾತ್ರಿಕರ ಕೊನೆಯ ತಂಗುದಾಣ’ದ ಕಥೆಯನ್ನು ಹೇಗೆ ಆರಂಭಿಸುವುದು? ಯಾವ ದಿಕ್ಕಿನಿಂದ ಆ ಪ್ರಪಂಚದೊಳಗೆ ನುಗ್ಗಿದರೂ ಕಣ್ಣುಗಳು ತೇವಗೊಳ್ಳುತ್ತವೆ. ಹೃದಯ ಕ್ಷಣಕಾಲ ರಕ್ತ ಹರಿಸುವುದನ್ನು ಮರೆತು ಕಣ್ಣೀರು ಹಾಕುತ್ತದೆ. ಸಾವಿನ ದವಡೆಯಲ್ಲಿದ್ದರೂ ನೆಮ್ಮದಿಯಿಂದ ಕುಳಿತ ಆ ಜೀವಗಳ ಸಂಗ ನಮ್ಮ ಮಾನಸ ಸರೋವರದಲ್ಲಿ ಸುಂಟರ ಗಾಳಿಯನ್ನೇ ಎಬ್ಬಿಸುತ್ತದೆ. ಕರುಳನ್ನು ಹಿಂಡಿ ಹಿಪ್ಪೆಮಾಡುವ ಇಂತಹ ಸನ್ನಿವೇಶದ ನಡುವೆ, ದಣಿದ ಯಾತ್ರಿಕರ ನೋವನ್ನು ಉಪಶಮನ ಮಾಡಿ, ಅಂತಿಮ ಪಯಣಕ್ಕೆ ಅವರನ್ನು ಸನ್ನದ್ಧರನ್ನಾಗಿಸುವ ದಾದಿಯರು ಮಾತ್ರ ಅಕ್ಷರಶಃ ದೇವತೆಗಳಂತೆಯೇ ಗೋಚರಿಸುತ್ತಾರೆ!

ಕರುಣಾಶ್ರಯ ಎಂಬ ಚಿತ್ತಾಕರ್ಷಕ ಮನೆಗೆ ಈಗಷ್ಟೇ ಹದಿನಾಲ್ಕರ ಹರೆಯ. ಇದು ಕೇವಲ ಕಲ್ಲು–ಸಿಮೆಂಟುಗಳಿಂದ ನಿರ್ಮಿಸಿದ ಕಟ್ಟಡವಲ್ಲ. ಕರುಣೆ, ಮಮತೆ, ಸೇವೆ, ಪ್ರೀತಿಗಳ ಸ್ಪರ್ಶದಿಂದ ರೂಪುಗೊಂಡ ಜೀವಂತ ಮನೆ. ವಾತ್ಸಲ್ಯಮಯವಾದ ಈ ನಿಲಯದ ಮಡಿಲಲ್ಲಿ ಈಗಾಗಲೇ 6,000 ಜನ ನೆಮ್ಮದಿಯಿಂದ ಕಣ್ಣು ಮುಚ್ಚಿದ್ದಾರೆ. ಒಂದೇ ಕಟ್ಟಡದಲ್ಲಿ ಎಷ್ಟೊಂದು ಸಾವುಗಳು! ಅಂದಹಾಗೆ, ಈ ಕಟ್ಟಡದಿಂದ ಸಾವಿಲ್ಲದ ದಿನ ಸಾಸಿವೆ ತರಬೇಕೆಂದರೆ ಆಗುವುದಿಲ್ಲ. ಏಕೆಂದರೆ ಅಂತಹ ದಿನ ಸಿಕ್ಕುವುದೇ ಇಲ್ಲ. ತಮ್ಮ ಮನೆಯಲ್ಲಿ ಪ್ರತಿನಿತ್ಯ ಒಬ್ಬರಾದರೂ ಕೊನೆಯುಸಿರು ಎಳೆಯುತ್ತಾರೆ ಎನ್ನುವುದು ಇಲ್ಲಿನ ವಾರ್ಡ್‌ಗಳ ಪ್ರತಿ ಹಾಸಿಗೆಗೂ ಗೊತ್ತಾಗಿದೆ. ಜೀವವೊಂದು ಹಾರಿ ಹೊರಟಾಗ ಅದರ ಸಂತೃಪ್ತ ಯಾತ್ರೆಗೆ ಅಗತ್ಯ ಸೇವೆ ಸಲ್ಲಿಸಲು ನಿರ್ಜೀವ ವಸ್ತುಗಳೂ ಇಲ್ಲಿ ಜೀವಪಡೆದು ನಿಂತು ಬಿಡುತ್ತವೆ.

ಕ್ಯಾನ್ಸರ್‌ನಿಂದ ನರಕಯಾತನೆ ಅನುಭವಿಸಿ ಬಳಲಿದ ಜೀವಗಳಿಗೆ ಸಾವಿನ ಮುನ್ನವೇ ಸ್ವರ್ಗವನ್ನು ತೋರುತ್ತದೆ ಕರುಣಾಶ್ರಯ. ‘ಇನ್ನು ವಾಸಿಯಾವುದು ಅಸಾಧ್ಯ’ ಎಂದು ಆಸ್ಪತ್ರೆಗಳು ಹೊರಹಾಕಿದ ಜೀವಗಳನ್ನು ಆರೈಕೆಗಾಗಿ ಈ ನಿಲಯ ಒಳಗೆ ಬಿಟ್ಟುಕೊಳ್ಳುತ್ತದೆ. ಸಾವಿನ ಸೋಪಾನದಲ್ಲಿ ಇರುವ ರೋಗಿಗಳ ಜೋಪಾನವನ್ನು ‘ಕರುಣಾಶ್ರಯ’ ನಯಾಪೈಸೆಯನ್ನೂ ಪಡೆಯದೆ ಬಲು ಅಂತಃಕರಣದಿಂದ ಮಾಡುತ್ತದೆ.

ಪರಿಸರದ ಸಾಂಗತ್ಯ
ಕಟ್ಟಡ ವಿನ್ಯಾಸದಲ್ಲಿ ಮುಂಬೈನ ಶಾಂತಿ ಅವೇದನ ಆಶ್ರಮದಿಂದ ‘ಕರುಣಾಶ್ರಯ’ ಸ್ಫೂರ್ತಿ ಪಡೆದಿದೆ. ಹಾಸಿಗೆ ಮೇಲೆ ಮಲಗಿದ ಪ್ರತಿ ರೋಗಿಯೂ ಅರಬ್ಬಿ ಸಮುದ್ರ ನೋಡಲು ಅವಕಾಶ ಆಗುವಂತೆ ಅಲ್ಲಿನ ವಾರ್ಡ್‌ಗಳನ್ನು ರೂಪಿಸಲಾಗಿದೆ. ಬೆಂಗಳೂರಿನಲ್ಲಿ ಸಮುದ್ರ ಇಲ್ಲ. ಆದರೆ, ಪ್ರಾಕೃತಿಕ ಸೊಬಗಿನಲ್ಲಿ ವಿಹರಿಸುತ್ತಾ ರೋಗಿಗಳು ಕೊನೆಯ ಕ್ಷಣದ ತಳಮಳ ಮರೆಯಬೇಕು ಎನ್ನುವ ಉದ್ದೇಶಕ್ಕೆ ಅದರಿಂದ ಹಿನ್ನಡೆ ಆಗಿಲ್ಲ. ಒಂದು ಕಡೆ ವಿಶಾಲವಾದ ಕೊಳವನ್ನೂ ಮತ್ತೊಂದು ಕಡೆ ಪುಟ್ಟ ಕಾಡನ್ನೂ ನಿರ್ಮಿಸಲಾಗಿದೆ. ದಣಿದ ಜೀವಗಳಿಗೆ ಅಲ್ಲಿನ ವಾತಾವರಣ ‘ಹಾಯ್‌’ ಎನಿಸುವಂತಹ ಸಮಾಧಾನ ನೀಡುತ್ತದೆ. ಕಟ್ಟಡದ ಈ ಅಪ್ಯಾಯಮಾನ ವಿನ್ಯಾಸಕ್ಕಾಗಿ ‘ಕರುಣಾಶ್ರಯ’ಕ್ಕೆ ಜಾಗತಿಕ ಪ್ರಶಸ್ತಿ ಬೇರೆ ಸಂದಿದೆ.

ಅಂತಿಮ ದಿನ ಎಣಿಸುತ್ತಿರುವ ಕ್ಯಾನ್ಸರ್‌ ರೋಗಿಗಳ ಸೇವೆಗಾಗಿ ಕರ್ನಾಟಕ ಕ್ಯಾನ್ಸರ್‌ ಸೊಸೈಟಿ ಮತ್ತು ರೋಟರಿ ಕ್ಲಬ್‌ ಇಂದಿರಾನಗರ ಸಂಸ್ಥೆಗಳು ಜತೆಯಾಗಿ ಆರಂಭಿಸಿದ ಟ್ರಸ್ಟ್‌ ಕರುಣಾಶ್ರಯ. 1994ರಲ್ಲಿ ಈ ಸಂಸ್ಥೆಯನ್ನು ಹುಟ್ಟು ಹಾಕಲಾಯಿತು. ಆಗಿನಿಂದಲೂ ಕಿಶೋರ್‌ ಎಸ್‌. ರಾವ್‌ ಮತ್ತು ಗುರ್ಮೀತ್‌ ಸಿಂಗ್‌ ರಾಂಧ್ವಾ ಈ ಮಾನವೀಯ ಸೇವೆಯ ಬಂಡಿಯನ್ನು ಹೆಗಲಿಗೆ ಹೆಗಲು ಕೊಟ್ಟು ಎಳೆದುಕೊಂಡು ಬಂದಿದ್ದಾರೆ. ಆಗ ಆಟೊ ರಿಕ್ಷಾದಲ್ಲಿ ನರ್ಸ್‌ಗಳು ಮತ್ತು ಆಪ್ತ ಸಮಾಲೋಚಕರು ಕ್ಯಾನ್ಸರ್‌ ರೋಗಿಗಳ ಮನೆ–ಮನೆಗೆ ತೆರಳಿ ಆರೈಕೆ ಮಾಡುತ್ತಿದ್ದರು. ದಿನದ 24 ಗಂಟೆಗಳ ಕಾಲ ರೋಗಿಗಳ ಆರೈಕೆ ಮಾಡಲು ಹಾಸ್‌ಪಿಸ್‌ (ಆಸ್ಪತ್ರೆ ರೂಪದ ಛತ್ರ) ಅಗತ್ಯವನ್ನು ಕಂಡ ಟ್ರಸ್ಟ್‌ ಪದಾಧಿಕಾರಿಗಳು, ಹಳೆ ವಿಮಾನ ನಿಲ್ದಾಣ–ವರ್ತೂರು ರಸ್ತೆಯಲ್ಲಿ ರಾಜ್ಯ ಸರ್ಕಾರದಿಂದ ಐದು ಎಕರೆ ಭೂಮಿಯನ್ನು ಲೀಸ್‌ಗೆ ಪಡೆದರು. 1999ರ ವೇಳೆಗೆ ಈ ಸ್ಥಳದಲ್ಲಿ ವಿಶಿಷ್ಟ ವಿನ್ಯಾಸದ ಕಟ್ಟಡ ತಲೆ ಎತ್ತಿ ನಿಂತಿತು.

ನೆಮ್ಮದಿ ನೀಡುವ ಈ ತಂಗುದಾಣದಲ್ಲಿ ಒಟ್ಟಾರೆ 50 ಹಾಸಿಗೆ ಸಾಮರ್ಥ್ಯದ ಐದು ವಾರ್ಡ್‌ಗಳಿವೆ. ಎಲ್ಲವನ್ನೂ ನೀರಿನ ಕೊಳಕ್ಕೆ ಅಭಿಮುಖವಾಗಿ ನಿರ್ಮಿಸಲಾಗಿದೆ. ಸದಾ ಎಲ್ಲ ಹಾಸಿಗೆಗಳು ಭರ್ತಿ ಯಾಗಿದ್ದರೂ ಸದ್ದು–ಗದ್ದಲ ಇಲ್ಲದ ಪ್ರಶಾಂತ ವಾತಾವರಣ. ಆರಾಮ ಕುರ್ಚಿಯಲ್ಲಿ ನೀರು ನೋಡುತ್ತಾ ಕೂರುವ ರೋಗಿಗಳಿಗೆ ಮರಗಳೇ ಛತ್ರಿಯಾಗಿ ನಿಲ್ಲುತ್ತವೆ. ಮರಗಳ ಮೇಲೆ ಆಗಾಗ ಪಕ್ಷಿಗಳು ಸಂಗೀತ ಗೋಷ್ಠಿ ನಡೆಸುತ್ತವೆ. ಟೀವಿ ನೋಡಲು, ಪತ್ರಿಕೆ ಓದಲು ಅವಕಾಶ ಕಲ್ಪಿಸಲಾಗಿದೆ. ಹಾಸ್‌ಪಿಸ್‌ ಪಕ್ಕದಲ್ಲೇ ಪುಟ್ಟ ಅರಣ್ಯವನ್ನೂ ನಿರ್ಮಿಸಲಾಗಿದೆ. ದಟ್ಟ ಹಸಿರಿನ ನಡುವೆಯೊಂದು ಪುಟ್ಟದಾದ ವಾಕಿಂಗ್‌ ಪಾತ್‌. ಅಲ್ಲೊಂದು, ಇಲ್ಲೊಂದು ಹಾಕಲಾದ ಕಲ್ಲಿನ ಬೆಂಚುಗಳಲ್ಲಿ ರೋಗಿಗಳು ತಮ್ಮ ಕುಟುಂಬದ ಜತೆ ಏಕಾಂತದ ಕ್ಷಣಗಳನ್ನು ಹಂಚಿಕೊಳ್ಳುತ್ತಾರೆ. ಸವೆಸಿದ ಹಾದಿ, ಆಸ್ತಿ ವಿವಾದ, ಮಗಳ ಮದುವೆ, ಬ್ಯಾಂಕಿನ ಠೇವಣಿ ಹಂಚಿಕೆ, ಜೀವನದ ಕೊನೆಯ ಆಸೆ... ಇವೇ ಮೊದಲಾದ ಖಾಸಗಿ ವಿಚಾರಗಳು ಪಿಸುಮಾತುಗಳಲ್ಲಿ ವಿನಿಮಯ ಆಗುತ್ತವೆ. ಒಂದೊಂದೇ ಒಳಗುದಿಯನ್ನು ಹೊರಹಾಕುತ್ತಾ ಹೋದಂತೆ ದಣಿದ ಜೀವದಲ್ಲಿ ನೆಮ್ಮದಿಯ ನಿಟ್ಟುಸಿರು. ಭಾರ ಇಳಿಸಿದ ಮನಸ್ಸಿಗೆ ಮುಂದಿನ ಯಾತ್ರೆ ಬಲು ಹಗುರ!

ಮೂರರಿಂದ ನೂರರವರೆಗೆ...
ಪುರುಷ ಮತ್ತು ಮಹಿಳಾ ವಾರ್ಡ್‌ಗಳು ಬೇರೆ, ಬೇರೆಯಾಗಿವೆ. ಕ್ಯಾನ್ಸರ್‌ ಸ್ವರೂಪದ ಆಧಾರದ ಮೇಲೆ ಅವರಿಗೆ ವಾರ್ಡ್‌ ಹಂಚಿಕೆ ಮಾಡಲಾಗುತ್ತದೆ. ಮೂರು ವರ್ಷದ ಪುಟಾಣಿಯಿಂದ ನೂರರ ಹತ್ತಿರವಾಗಿರುವ ಅಜ್ಜ–ಅಜ್ಜಿಯರವರೆಗೆ ಇಲ್ಲಿ ಆರೈಕೆ ಪಡೆದವರ ಯಾದಿ ದೊಡ್ಡದಿದೆ. ಕ್ಯಾನ್ಸರ್‌ ಪೀಡಿತರಲ್ಲಿ ಮಹಿಳೆಯರದ್ದೇ ಸಿಂಹಪಾಲು. ಅದರಲ್ಲೂ ಸ್ತನ ಕ್ಯಾನ್ಸರ್‌ ರೋಗಿಗಳೇ ಹೆಚ್ಚು.

‘ಕರುಣಾಶ್ರಯ’ ತನ್ನ ಮೊದಲ ಒಳರೋಗಿಯನ್ನು ಪಡೆದಿದ್ದು 1999ರ ಮೇ 1ರಂದು. ಅಲ್ಲಿಂದ ಇದುವರೆಗೆ ಇಲ್ಲಿನ ವಾರ್ಡ್‌­ಗಳಲ್ಲಿ 13,000ಕ್ಕೂ ಅಧಿಕ ರೋಗಿಗಳು ದಾಖಲಾಗಿದ್ದಾರೆ. ಅರ್ಧದಷ್ಟು ಜನ ಸಂತೃಪ್ತಿಯಿಂದ ಕಣ್ಣು ಮುಚ್ಚಿದ್ದಾರೆ.

ಹಲವು ಆಸ್ಪತ್ರೆಗಳ ಪಾಲಿಗೆ ಕ್ಯಾನ್ಸರ್‌ ರೋಗಿಗಳೆಂದರೆ ಕಬ್ಬಿನ ಗಣಿಕೆ ಇದ್ದಂತೆ. ಇದ್ದ–ಬಿದ್ದ ಆಸ್ತಿ, ಹಣ ಎಲ್ಲವನ್ನೂ ಹಿಂಡಿ ಹಿಪ್ಪೆ ಮಾಡಿದ ಬಳಿಕ ಸಾಯುವ ಹಂತದಲ್ಲಿರುವ ರೋಗಿಗಳನ್ನು ಅವು ಹೊರಹಾಕುತ್ತವೆ. ಅಕಸ್ಮಾತ್‌ ರೋಗಿ ಆಸ್ಪತ್ರೆಯಲ್ಲೇ ಸತ್ತರೆ ಸಾವಿನ ದಾಖಲೆ ಬೆಳೆದು ಎಲ್ಲಿ ಕೆಟ್ಟ ಹೆಸರು ಬರುವುದೋ ಎನ್ನುವ ಆತಂಕ ಆಸ್ಪತ್ರೆಗಳ ಆಡಳಿತ ಮಂಡಳಿಯನ್ನು ಕಾಡುತ್ತದೆ. ಕರುಣಾಶ್ರಯಕ್ಕೆ ಅಂತಹ ಯಾವ ಭಯವೂ ಇಲ್ಲ. ‘ನಿಮ್ಮಂಥವರಿಗೇ ಇಲ್ಲಿ ಜಾಗ’ ಎಂಬ ಆಹ್ವಾನವನ್ನು ಅದು ನೀಡುತ್ತದೆ.

ಕರುಣಾಶ್ರಯದಲ್ಲಿ ಮೂವರು ವೈದ್ಯರು ಹಾಗೂ 36 ನರ್ಸ್‌ಗಳಿದ್ದಾರೆ. ಜತೆಗೆ ಮೂವರು ಆಪ್ತ ಸಮಾಲೋಚಕರು ಸೇವೆಗೆ ಸದಾ ಸಿದ್ಧರಿರುತ್ತಾರೆ. ಎಲ್ಲ ಬಗೆಯ ಕ್ಯಾನ್ಸರ್‌ ನೋವಿಗೂ ಇಲ್ಲಿ ಉಪಶಮನ ಉಂಟು. ವೈದ್ಯರು ಔಷಧೋಪಚಾರ ಮಾಡಿದರೆ, ನರ್ಸ್‌ಗಳು ದಿನದ 24 ಗಂಟೆ ಆರೈಕೆ ಮಾಡುತ್ತಾರೆ. ಸಣ್ಣ ನರಳಾಟಕ್ಕೂ ಇಲ್ಲಿ ಆಸ್ಪದ ಇಲ್ಲ. ಅಗತ್ಯ ಸೇವೆಗೆ ದೊಡ್ಡ ಪಡೆಯೇ ನಿಂತಿರುತ್ತದೆ. ಆಪ್ತ ಸಮಾಲೋಚಕರು ರೋಗಿಗಳು ಮತ್ತು ಅವರ ಕುಟುಂಬದ ಸದಸ್ಯರ ಜತೆ ಸಮಾಲೋಚನೆ ನಡೆಸಿ, ಸಂಭವಿಸಲಿರುವ ಸಾವಿಗಾಗಿ ಮನಸ್ಸುಗಳನ್ನು ಗಟ್ಟಿಗೊಳಿಸುತ್ತಾರೆ.

ADVERTISEMENT

ದಾದಿ ರೂಪದ ತಾಯಂದಿರು
ಕ್ಯಾನ್ಸರ್‌ ಎಂದೊಡನೆ ಜನಸಾಮಾನ್ಯರಲ್ಲಿ ಒಂದು ರೀತಿಯ ಜಿಗುಪ್ಸೆ ಭಾವ. ಆದರೆ, ಇಲ್ಲಿನ ನರ್ಸ್‌ಗಳು ಅಂತಹ ರೋಗಿಗಳಿಗೆ ತೋರುವ ಮಮತೆ ದೊಡ್ಡದು. 20–22ರ ಹರೆಯದ ನರ್ಸ್‌ಗಳು 80ರ ಅಜ್ಜ–ಅಜ್ಜಿಯರನ್ನು ತಮ್ಮ ಮಗುವಿನಂತೆ ಜೋಪಾನ ಮಾಡುತ್ತಾರೆ. ಆಳವಾದ ಗಾಯಕ್ಕೆ ಮುಲಾಮು ಹಚ್ಚಿ ಡ್ರೆಸ್ಸಿಂಗ್‌ ಮಾಡುವುದು, ಸಮಯಕ್ಕೆ ಸರಿಯಾಗಿ ಮಾತ್ರೆ ನೀಡುವುದು, ಬೇಸರಗೊಂಡ ಜೀವಗಳಿಗೆ ಕಥೆ ಹೇಳುವುದು, ಹೊತ್ತು–ಹೊತ್ತಿಗೆ ತಿಂಡಿ, ಊಟ ಮಾಡಿಸುವುದು, ಕೈಹಿಡಿದು ವಾಕಿಂಗ್‌ಗೆ ಕರೆದೊಯ್ಯುವುದು, ಕಣ್ಣೀರು ಜಿನುಗಿದಾಗ, ಅದು ಆವಿಯಾಗಿ ಹೋಗುವಂತೆ ನಗೆ ಉಕ್ಕಿಸುವುದು... ಹೌದು, ಅಕ್ಷರಶಃ ಫ್ಲಾರೆನ್ಸ್‌ ನೈಟಿಂಗೇಲ್‌ ಅವರ ಪ್ರತಿರೂಪವಾಗಿದ್ದಾರೆ ಇಲ್ಲಿನ ನರ್ಸ್‌ಗಳು.

ಕರುಣಾಶ್ರಯದ ಬಾಣಸಿಗರು ನಿತ್ಯವೂ ಬಿಳಿ ಕಾಗದ ಹಿಡಿದು ಪ್ರತಿ ರೋಗಿಯ ಬಳಿಗೆ ಹೋಗುತ್ತಾರೆ. ‘ನಿಮಗೆ ಇಂದು ಏನು ಊಟ ಬೇಕು’ ಎಂದು ಕೇಳುತ್ತಾರೆ. ಆಯಾ ರೋಗಿಗಳು ಬಯಸಿದ ಊಟ ಮಧ್ಯಾಹ್ನದ ವೇಳೆಗೆ ಅವರ ಟೇಬಲ್‌ ಮೇಲೆ ಇರುತ್ತದೆ. ವಿವಿಧ ಸ್ವಯಂಸೇವಾ ಸಂಸ್ಥೆಗಳು ಇಲ್ಲಿನ ರೋಗಿಗಳಿಗಾಗಿ ಸಂಗೀತ ಗೋಷ್ಠಿಗಳು ಸೇರಿದಂತೆ ಹಲವು ಸಮಾರಂಭಗಳನ್ನು ಏರ್ಪಡಿಸುತ್ತವೆ. ಪ್ರಾರ್ಥನೆಗೂ ವಿಶೇಷ ಸವಲತ್ತು ಒದಗಿಸಲಾಗಿದೆ. ಧರ್ಮ, ಜಾತಿ, ಭಾಷೆ, ಪ್ರಾಂತ ಸೇರಿದಂತೆ ಯಾವ ಜಂಜಡವೂ ಇಲ್ಲಿಲ್ಲ. ಸಾವಿನ ಮನೆ ಕದ ತಟ್ಟುವವರಿಗೆ ಅದರ ಅಗತ್ಯವೂ ಇಲ್ಲ.

ಕರ್ನಾಟಕ ಮಾತ್ರವಲ್ಲದೆ ನೆರೆಯ ಆಂಧ್ರ ಪ್ರದೇಶ, ತಮಿಳುನಾಡು, ಕೇರಳಗಳಿಂದ ರೋಗಿಗಳು ಬರುತ್ತಾರೆ. ದೂರದ ಪಶ್ಚಿಮ ಬಂಗಾಲದ ಜನರೂ ಕರುಣಾಶ್ರಯದ ನೆರಳಿಗಾಗಿ ಹಾತೊರೆದು ಬರುತ್ತಾರೆ. ಹಾಸಿಗೆಗಳು ಯಾವಾಗಲೂ ಭರ್ತಿ ಆಗಿರುವುದರಿಂದ ಸುಲಭವಾಗಿ ಪಾಳಿ ಸಿಗುವುದಿಲ್ಲ. ಆದರೆ, ಹೊರರೋಗಿಗಳಾಗಿ ಚಿಕಿತ್ಸೆ ಪಡೆಯುವವರಿಗೆ ಇಲ್ಲಿನ ಬಾಗಿಲು ಸದಾ ತೆರೆದಿರುತ್ತದೆ. ಎರಡು ಸಂಚಾರಿ ಘಟಕಗಳು ಈಗಲೂ ಮನೆ–ಮನೆಗೆ ತೆರಳಿ ಸೇವೆ ನೀಡುವ ಕೈಂಕರ್ಯವನ್ನು ಮುಂದುವರಿಸಿವೆ.

ಕರುಣಾಶ್ರಯದಲ್ಲಿ ಸಿಗುವ ಚಿಕಿತ್ಸೆಗೆ ಕೆಲವರು ಒಂದಿಷ್ಟು ಗುಣಮುಖರಾಗಿದ್ದೂ ಇದೆ. ಸಾವು ಮುಂದೆ ಹೋದಾಗ ಅಂಥವರಿಗೆ ಕೆಲಕಾಲ ಮನೆಯಲ್ಲಿದ್ದು ಬರುವಂತೆ ಕೇಳಿಕೊಳ್ಳಲಾಗುತ್ತದೆ. ಗಂಭೀರ ಪರಿಸ್ಥಿತಿಯಲ್ಲಿ ಇರುವ ಬೇರೆ ರೋಗಿಗಳಿಗೆ ಅನುಕೂಲ ಕಲ್ಪಿಸಲು ಇಂಥದ್ದೊಂದು ಮನವಿ ಟ್ರಸ್ಟ್‌ ಪಾಲಿಗೆ ಅನಿವಾರ್ಯವಾಗಿದೆ. ಆದರೆ, ಇಲ್ಲಿನ ವಾತ್ಸಲ್ಯ ಅನುಭವಿಸಿದ ರೋಗಿಗಳು ಜಪ್ಪಯ್ಯ ಎಂದರೂ ಬಿಟ್ಟು ಹೋಗಲು ಒಪ್ಪುವುದಿಲ್ಲ. ತಮ್ಮ ಮನೆಯೊಂದಿಗೆ ಭಾವನಾತ್ಮಕವಾಗಿ ಬೆಸುಗೆ ಹೊಂದಿದ ಕೆಲವರು ಮನೆಯಲ್ಲೇ ಪ್ರಾಣ ಬಿಡುವ ಆಸೆ ಹೊತ್ತು ಇಲ್ಲಿಂದ ಬಿಡುಗಡೆ ಹೊಂದುವುದೂ ಇದೆ.

ರೋಗಿಗಳು ಕೊನೆಯುಸಿರು ಎಳೆದಾಗ ಸಂಬಂಧಿಗಳಿಗೆ ತಕ್ಷಣ ಮಾಹಿತಿ ನೀಡಲಾಗುತ್ತದೆ. ಕೊನೆಯ ವಿಧಿಗಳನ್ನು ಪೂರೈಸಲು ಅವಕಾಶ ಮಾಡಿಕೊಡಲಾಗುತ್ತದೆ. ರೋಗಿಗಳ ಸಂಬಂಧಿಗಳು ಬಡವರಾಗಿದ್ದರೆ ಅಂತ್ಯ ಸಂಸ್ಕಾರಕ್ಕೂ ನೆರವು ನೀಡಲಾಗುತ್ತದೆ.

‘ನಮ್ಮ ಸಂಸ್ಥೆಯ ಸಿಬ್ಬಂದಿ ಇಂತಹ ರೋಗಿಗಳ ಆರೈಕೆ ಮಾಡುವಾಗ ತೀವ್ರ ಒತ್ತಡ ಅನುಭವಿಸುತ್ತಾರೆ. ಅವರಿಗೆ ಆಗಾಗ ಒತ್ತಡ ನಿವಾರಿಸಿಕೊಳ್ಳುವಂತಹ ಕಾರ್ಯಕ್ರಮ ಆಯೋಜಿಸ­ಲಾಗುತ್ತದೆ. ಇಂತಹ ಸಮರ್ಪಣಾಭಾವದ ಸಿಬ್ಬಂದಿ ನಮಗೆ ಬೇರೆಲ್ಲಿಯೂ ಸಿಗುವುದಿಲ್ಲ’ ಎಂದು ಅಭಿಮಾನದಿಂದ ಹೇಳುತ್ತಾರೆ ರಾಂಧ್ವಾ. ‘ಬೇಡಿಕೆ ವಿಪರೀತ ಇದ್ದು, ಇನ್ನೂ 24 ಹಾಸಿಗೆಗಳ ಸಾಮರ್ಥ್ಯದ ವಾರ್ಡ್‌ ನಿರ್ಮಿಸುವ ಯೋಜನೆ ಸಿದ್ಧವಾಗಿದೆ. ಅದಕ್ಕಾಗಿ ರೂ 2 ಕೋಟಿ ಅಗತ್ಯವಿದೆ’ ಎಂದು ಅವರು ತಿಳಿಸುತ್ತಾರೆ.

ದಟ್ಟ ಕಾರ್ಮೋಡದಲ್ಲೂ ಕ್ಯಾನ್ಸರ್‌ ರೋಗಿಗಳಿಗೆ ಬೆಳ್ಳಿ ಕಿರಣಗಳನ್ನು ತೋರುವ ಕರುಣಾಶ್ರಯದ ಶ್ರಮ ನೋಡುಗರ ಕಣ್ಣುಗಳು ಆನಂದಭಾಷ್ಪದಿಂದ ಮಂಜಾಗುವಂತೆ ಮಾಡುತ್ತದೆ.

ಗೆಳೆಯ ರಾಹುಲ್‌ ದ್ರಾವಿಡ್‌!
ಕ್ಯಾನ್ಸರ್‌ ರೋಗಿಗಳ ಈ ಅಪೂರ್ವ ಸೇವಾ ಸಂಸ್ಥೆಗೆ ರಾಹುಲ್‌ ದ್ರಾವಿಡ್‌ ಗೆಳೆಯರಾಗಿದ್ದಾರೆ. ತಮ್ಮ ಬ್ಯಾಟ್‌ಗಳನ್ನು ಹರಾಜಿಗೆ ಹಾಕುವ ಮೂಲಕ ಬಂದ ವರಮಾನವನ್ನು ಸಂಸ್ಥೆಗೆ ದೇಣಿಗೆಯಾಗಿ ನೀಡಿದ್ದಾರೆ. ಸಮಯ ಸಿಕ್ಕಾಗಲೆಲ್ಲ ಇಲ್ಲಿಗೆ ಭೇಟಿ ನೀಡುವ ಅವರು, ರೋಗಿಗಳಿಗೆ ಸಾಂತ್ವನ ಹೇಳುತ್ತಾರೆ. ನಟ ಅಮೀರ್‌ ಖಾನ್‌ ಸಹ ಈ ಸಂಸ್ಥೆ ನೀಡುತ್ತಿರುವ ಸೇವೆಗೆ ಮಾರು ಹೋಗಿದ್ದಾರೆ. ಟಾಟಾ ಟ್ರಸ್ಟ್‌ ನೆರವಿನ ಹಸ್ತ ಚಾಚಿದೆ.

ವಸ್ತುವಿನ ರೂಪದಲ್ಲಿ ಬಂದ ದೇಣಿಗೆಗಳನ್ನು ಮಾರಾಟ ಮಾಡಿ, ವೆಚ್ಚಕ್ಕೆ ಹಣಕಾಸಿನ ವ್ಯವಸ್ಥೆ ಮಾಡಿಕೊಳ್ಳಲು ಕಳೆದ ವರ್ಷ ಕರುಣಾಶ್ರಯ ಮಳಿಗೆ ತೆರೆಯಲಾಗಿದೆ. ಬಳಸಬಹುದಾದ ಬಟ್ಟೆಗಳು, ಮಕ್ಕಳ ಆಟಿಕೆಗಳು, ಅಲಂಕಾರಿಕ ಸಾಮಗ್ರಿಗಳು ಮಾರಾಟಕ್ಕೆ ಲಭ್ಯವಿವೆ. ಇಲ್ಲಿನ ವಸ್ತುಗಳನ್ನು ಕೊಂಡುಕೊಳ್ಳುವ ಮೂಲಕ ರೋಗಿಗಳ ನೆರವಿಗೆ ನಿಲ್ಲಲು ಅವಕಾಶ ಒದಗಿಸಲಾಗಿದೆ.

ಹಸಿರು ಮನೆ
ಆಸ್ಪತ್ರೆ ರೂಪದ ಛತ್ರದ ಕಟ್ಟಡವು ಎಲ್ಲ ಅರ್ಥದಲ್ಲೂ ಹಸಿರು ಮನೆ. ಗಾಳಿ–ಬೆಳಕಿಗೆ ತೊಂದರೆ ಇಲ್ಲದಂತೆ ಕಟ್ಟಡ ನಿರ್ಮಿಸಲಾಗಿದ್ದು, ವಾರ್ಡ್‌ ಮತ್ತು ವರಾಂಡದಲ್ಲಿ ಸೌರ ದೀಪಗಳೇ ಬೆಳಗುತ್ತವೆ. ಸೌರಶಕ್ತಿಯಿಂದ ಕಾಯಿಸಿದ ನೀರನ್ನೇ ಬಳಕೆ ಮಾಡಲಾಗುತ್ತದೆ. ಮಳೆ ನೀರಿನ ಸಂಗ್ರಹದ ವ್ಯವಸ್ಥೆಯನ್ನೂ ಮಾಡಲಾಗಿದೆ. ಕ್ಯಾಂಪಸ್‌ನಲ್ಲಿ ಎಲ್ಲಿ ನೋಡಿದರೂ ಹಸಿರೇ ಕಾಣುತ್ತದೆ.


ಚಿತ್ರಗಳು: ಶಶಿಧರ ಹಳೇಮನಿ ಮತ್ತು ಕರುಣಾಶ್ರಯ ಸಂಗ್ರಹದಿಂದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.