ADVERTISEMENT

ಕವಿತೆ: ನೀಲಗಾರನಾಗಿ ವರ್ಷಧಾರೆಯನ್ನೇ ಕರೆಯುತ್ತೇನೆ...

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2011, 18:30 IST
Last Updated 5 ಫೆಬ್ರುವರಿ 2011, 18:30 IST

ಬಿಚ್ಚಿಕೊಂಡಂತೆ ನಗರ
ವೃತ್ತಪತ್ರಿಕೆಗಳ ಮುಖಪುಟದ ಸುದ್ದಿ
ಗಳು, ಕಣ್ಣ ನೋಯಿಸುತ್ತಿವೆ
ತಲೆ ಬರಹಗಳೇ, ಸಾಕು ಎದೆ ಝಲ್ ಎನ್ನಿಸುವುದಕ್ಕೆ
ಓದುವುದಿಲ್ಲ ಸಂಕ್ಷಿಪ್ತ ಆತಂಕ ಹೆಚ್ಚಾಗುತ್ತದೆ.

ಬಿಡುವಿಲ್ಲ ಯಾರಿಗೂ ಯಾವುದಕ್ಕೂ
ನಿದ್ರೆಯಲ್ಲಿನ ಮಗುವಿನ ನಗುವನ್ನು ನೋಡಲು
ಗಾಳಿ ಕೂಡ ತನ್ನ ದಾರಿ ಹುಡುಕುತ್ತಿದೆ
ದಿಕ್ಕು ತೋಚದೆ ನಗರದ ಅಡ್ಡ ಉದ್ದ ಗೋಡೆಗಳಿಂದಾಗಿ
ಇದು ನಡೆದಂತೆ, ಬೆಳೆದಂತೆ ನೆಲವನ್ನೆ ಮುರಿದು ಕಟ್ಟಿದಂತೆ

ತಿವಿಯುತ್ತಿದ್ದಾನೆ ನನ್ನೊಳಗಿನ ಇನ್ನೊಬ್ಬ
ಮಗುವಿನಂತ ಕೆನ್ನೆಯ ಬಾಯಿಯಲ್ಲಿ ಹಿಟ್ಲರ್ ಹಲ್ಲುಗಳು
ಬೆಳೆಯುತ್ತಿವೆ. ಕಲ್ಲು, ಮಣ್ಣು, ಮಸಿ ತಿಂದವರು.
ಮುಕ್ಕಳಿಸಿ ಉಗಿಯುತ್ತಿದ್ದಾರೆ ನೆತ್ತರದಲ್ಲಿ ಜೀವಗಳನ್ನ,
ಹಸಿದವನೊಬ್ಬ ಮಾರ್ಕೆಟ್ಟಿನಲ್ಲಿ ಸೇಬು ಕದ್ದನೆಂದು
ಹಿಡಿದು ಬಡಿದವರ ಕೈಯಿಂದ, ನನ್ನ ಮೈ ನೋಯುತಿತ್ತು.

ADVERTISEMENT

ನಗರವೇ ನನ್ನ ನಡೆಸಿದಂತೆ ಮೊನ್ನೆ
ಮೆಟ್ರೋ ಮಾಲ್‌ನ ಮಹಲಿನಲ್ಲಿ
ನಿಂತು ನೋಡಿದರೆ ಸುಂದರ ಸ್ವಪ್ನಗಳು
ಅಲ್ಲೊಂದು ಫಲಕ ಕೈಬೀಸಿ ಕರೆದಂತೆ
‘ಅಸ್ಪೃಶ್ಯರ ಫಲಾಹಾರ ಮಂದಿರ’ ಕಣ್ಣಗೋಲಿಗಳು
ಅಲುಗಾಡದೆ ನಿಂತು ನೋಡಿದವು.

ಒಳ ಹೋದರು, ಹೊರಗೆ ನಿಂತಂತೆ
ಮೋಕ್ಷಕ್ಕೆ ‘ದೀಕ್ಷೆ’ ಪಡೆದು ತೀರ್ಥ ಪ್ರಸಾದ ಸ್ವೀಕರಿಸಿ
ಮಾತು ಬೆಣ್ಣೆಯಂತೆ
ಕಾಫಿ ಕುಡಿದಿದ್ದಕ್ಕೆ ಕೈಮುರಿದು ಕೊರಳಿಗೆ ನೇತು
ಹಾಕಿದ ಧರ್ಮ(ಣ್ಣ)ವೇ ಕೈಮುಗಿದು ಕರೆದಂತೆ
ಇದನ್ನು ನಂಬಲುಂಟೆ ಪ್ರಿಯ ಅನಿಕೇತನವೇ-

ನೋಡಿದೆ ಕಣ್ಣು ಉಜ್ಜಿಕೊಂಡು... ಓಡಿದೆ...
ಬಿಳಿ, ಹಳದಿ, ನಾಮ ಬಳಿದ ರಸ್ತೆಗಳ ಮೇಲೆ,
ನೂರಾರು ವಾಹನಗಳು ಕಣ್ಮುಚ್ಚಿ ಬಿಡುವುದರೊಳಗೆ
ನನ್ನ ಮೇಲೆ ಚಲಿಸಿದಂತೆ.

ಅಗೋ ಅಲ್ಲಿ ದೂರದಲ್ಲಿ...
ಬಗ್ಗಿ ಬಗ್ಗಿ ನೋಡುತ್ತಿದ್ದಾರೆ ಮ್ಯಾನ್‌ಹೋಲ್ ಅನ್ನು
ಹತ್ತಿರ ಹೋಗಿ ಕೇಳಿದರೆ
ಇದರೊಳಕ್ಕೆ ಇಳಿದವರು ಬರಲಿಲ್ಲ ಮೇಲೆ.

ಜೀವ ಮುಷ್ಟಿಗೆ ಸಿಕ್ಕ ಹಾಗೇ
ಜಾರಲಿಲ್ಲ ಕಣ್ಣೀರು
ಹಳ್ಳಿಯಲ್ಲಿ ಚಿಟ್ಟೆ ಹಾರುತಿಲ್ಲ ಯಾಕೋ
ಪಟ್ಟಣದಲ್ಲೂ ಹೊಸ ಗಾಳಿ ಬೀಸುತ್ತಿಲ್ಲ
ನಡೆದರೂ ನಿಂತಂತೆ ಪ್ರತಿಮೆಯಾಗಿ...

ಹಾರಿ ಹೋಗಿ, ಕಾಗೆ ತಲೆಯ ಮೇಲೆ
ನೆನಪಾಗಿ ಎಲ್ಲಾ, ನೀರು ಹುಟ್ಟಿದ ಘಳಿಗೆಯಿಂದ
ನೆಲ ಸುಡುವ ಯಜ್ಞಕುಂಡಗಳು
ಅನಾದಿ ನನ್ನೆದೆಯಲ್ಲಿ ಮಾಯದ ಗಾಯಗಳು.

ಮರೆಯಲಾರೆ ಮತ್ತೆ ಹಾಡು ಕಟ್ಟುತ್ತೇನೆ
ನೀಲಗಾರನಾಗಿ ವರ್ಷಧಾರೆಯನ್ನೇ ಕರೆಯುತ್ತೇನೆ
ಜಲಗಾರನಾಗಿ ನಾಳೆಯ ಅವಳ ಕನಸಿಗಾಗಿ
ಮತ್ತೆ... ಮತ್ತೇ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.