ADVERTISEMENT

ಚಿಗರಿಮರಿ ಊರಿಗ ಬಂದಿತ್ತ

ಚಂದ ಪದ್ಯ

ಗಿರೀಶ ಚಂದ್ರಕಾಂತ ಜಕಾಪುರೆ
Published 12 ಜುಲೈ 2014, 19:30 IST
Last Updated 12 ಜುಲೈ 2014, 19:30 IST

ಚಿಕ್ಕಿಚಿಕ್ಕಿ ಚಿಗರಿ ಪಟ್ಟಾಪಟ್ಟಿ ಚಿಗರಿ
ಕಿರಿಬಾಲ ಚಿಗರಿ ಕೌಡಿಕಣ್ಣಿನ ಚಿಗರಿ

ಜಿಗಿ ಜಿಗಿ ಜಿಗಿವಾ ಚಿಗರಿ
ಕುಣಿ ಕುಣಿ ಕುಣಿವಾ ಚಿಗರಿ

ಮುಂಜಾನೆದ್ದು ಚಿಗರಿಮರಿ
ಕಾಡಿನಿಂದ ಊರಿಗೆ ಬಂದಿತ್ತ
ಊರಾ ಕೇರಿಗೆ ಬಂದಿತ್ತ!

ಮಂದಿರ ಮಸೀದಿ ಚರ್ಚಗಿರ್ಚೆಲ್ಲಾ ತಿರ್ಗಿ
ಸಂತಿ ನೋಡಿ.. ಸಾಲಿಗ ಬಂದಿತ್ತ..!

ಸಾಲಿ ಚುಕ್ಕೋಳ ಓದ್ಬರಹ ನೋಡಿ
ತಾನೂ ಅ ಆ ಇ ಈ.. ನುಡಿದಿತ್ತ..!

ADVERTISEMENT

ಸಾಲಿ ಮುಗ್ಸಿ ಮಕ್ಳು ಮನಿಗ ಹೊಂಟಾಗ
ತಾನೂ ಕಾಡಿನ ದಾರಿ ಹಿಡಿದಿತ್ತ..!

ಪೂರಾದಿನಾ ತಿರ್ಗಿ ಓಡಿ ಕುಣ್ದಾಡಿ
ಭಾಳಷ್ಟು ದಣಿದಿತ್ತ.. ದಮ್ಮಿಗ ಬಂದಿತ್ತ..!

ಹೊತ್ತಿಳಿದು ತಾಸಾಗಿ ಕತ್ತಲಾಗಿತ್ತ
ದಟ್ಟಕಾಡಿನ ನಡುವ ದಾರಿ ತಪ್ಪಿತ್ತ..!

ದೆವ್ವಿನಂಥಾ ಗಿಡಾ.. ಹಂದಿಹುಲಿ ಉಡಾ
ಕತ್ಲ್ಯಾಗ ಅಂಜ್ಕಿ ಬಂದಿತ್ತ..! ಅಳು ಬಂದಿತ್ತ..!

ದೂರದಾಗ ಅವ್ವನ ದನಿ ಕೇಳಿತ್ತ
ಚಿಗರಿಮರಿಗ ತನ್ನ ಮನಿ ಕಂಡಿತ್ತ..!

ಅಂಜ್ಕೆಲ್ಲ ಹಾರ್ಹೋಗಿ ನಗು ಉಕ್ಕಿತ್ತ
ಓಡ್ಹೋಗಿ ಅವ್ವನ ಕೊರಳಿಗ ಬಿದ್ದಿತ್ತ..!

ಹಾಲ್ಕುಡ್ದು ಹುಲ್ತಿಂದು ಡರಿ ಹೊಡ್ದಿತ್ತ
ಅವ್ವನ ಮಗ್ಗಲ ಸೇರಿ ಬೆಚ್ಚಗ ಮಲ್ಗಿತ್ತ..!

ಮತ್ತ ನಾಳಿಗ ಊರಹೋಗ್ತೀನಿ ಅಂದಿತ್ತ
ಸಾಲಿ ಮಕ್ಕಳ ಜೊತೆಗಾಡುವ ಕನಸ್ ಕಂಡಿತ್ತ..!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.