ADVERTISEMENT

ಜಂಬದ ನವಿಲು

ಪಿ. ಚಂದ್ರಿಕಾ
Published 6 ಅಕ್ಟೋಬರ್ 2012, 19:30 IST
Last Updated 6 ಅಕ್ಟೋಬರ್ 2012, 19:30 IST

ತನ್ನ ಸುಂದರವಾದ ಹೊಳೆಯುವ ನೀಲಿಬಣ್ಣದ ಗರಿಗಳನ್ನು ಬಿಚ್ಚಿಕೊಂಡು ನವಿಲೊಂದು ತಾನೇ ಚಂದ ತನ್ನ ಗರೀನೇ ಚಂದ  ಎನ್ನುತ್ತಾ ಗರ್ವದಿಂದ ಹೋಗುತ್ತಾ ಇತ್ತು. ದಾರಿಯಲ್ಲಿ ಎದುರಾದ ಒಂದು ಕಾಗೆ `ಹಾಯ್ ನವಿಲಣ್ಣಾ ಚೆನ್ನಾಗಿದೀಯಾ?~ ಅಂತ ಮಾತನಾಡಿಸುತ್ತಾ ಹತ್ತಿರ ಬಂತು.

ಆಗ ನವಿಲು `ಛೇ ಛೇ! ಹತ್ತಿರ ಬರಬೇಡ. ದೂರ ನಿಲ್ಲು. ನೀನೋ ನಿನ್ನ ರೂಪವೋ! ನನ್ನಂತಹ ಸುಂದರಾಂಗನಿಗೆ ನಿನ್ನಂತಹ ಕುರೂಪಿಯೊಂದಿಗೆ ಎಂತಹಾ ಮಾತು? ಯಾರಾದರೂ ನೋಡಿ ನಕ್ಕಾರು! ನಡೆ ನಡೆ ಹೋಗಾಚೆ~ ಎಂದು ತಿರಸ್ಕಾರದಿಂದ ನುಡಿದು ತನ್ನ ಚಂದದ ಗರಿಗಳನ್ನು ಕುಣಿಸುತ್ತಾ ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ಜಂಬದಿಂದ ಮುಂದೆ ನಡೆಯಿತು.

ಪಾಪ ಕಾಗೆ, ಏನೂ ಹೇಳದೆ ಅಲ್ಲಿದ್ದ ಮರದ ಮೇಲಕ್ಕೆ ಹಾರಿ ಸುಮ್ಮನೆ ಕುಳಿತುಕೊಂಡಿತು. ಅಷ್ಟರಲ್ಲಿ ಊರ ನಾಯಿಯೊಂದು ನವಿಲನ್ನು ಕಂಡು ಜೋರಾಗಿ ಬೊಗಳುತ್ತಾ ಅಟ್ಟಿಸಿಕೊಂಡು ಬಂತು.

ನವಿಲು ಹೆದರಿ ಓಡಲಾರಂಭಿಸಿತು. ಆದರೆ ಅದರ ಗರಿಗಳ ಭಾರದಿಂದಾಗಿ ಅದಕ್ಕೆ ಜೋರಾಗಿ ಓಡಲೂ ಆಗದೆ ಮೇಲೆ ಹಾರಲೂ ಆಗದೆ ಸುಲಭವಾಗಿ ನಾಯಿಯ ಬಾಯಿಗೆ ಸಿಕ್ಕಿಬಿತ್ತು. ನವಿಲು ಜೀವಭಯದಿಂದ ಕ್ಯಾಂವ್ ಕ್ಯಾಂವ್ ಎಂದು ಅರಚುತ್ತಾ ಸಹಾಯಕ್ಕಾಗಿ ಉಳಿದ ನವಿಲುಗಳನ್ನು ಕರೆಯಿತು.

ADVERTISEMENT

ಆದರೆ ಈ ನವಿಲಿನ ಸಹಾಯಕ್ಕೆ ಹೋದರೆ ನಾಯಿಯ ಜೊತೆ ಕಾದಾಟದಲ್ಲಿ ತಮ್ಮ ಗರಿಗಳೆಲ್ಲಾ ಹರಿದು ಎಲ್ಲ ತಮ್ಮ ಸೌಂದರ್ಯಕ್ಕೆ ಧಕ್ಕೆ ಬರುತ್ತದೆಯೋ ಎಂದು ಹೆದರಿ ಉಳಿದ ನವಿಲುಗಳು ಮುಂದೆ ಬರದೇ ಅಲ್ಲಲ್ಲೇ ಪೊದೆಗಳ ಸಂದಿಯಲ್ಲಿ ಅಡಗಿಕೊಂಡು ಬಿಟ್ಟವು. ನಾಯಿ ನವಿಲಿನ ಕತ್ತಿಗೇ ಬಾಯಿ ಹಾಕಿತ್ತು. ಇನ್ನೇನು ತನ್ನ ಕಥೆ ಮುಗಿದೇ ಹೋಯಿತು ಎಂಬ ನವಿಲು ಗಟ್ಟಿಯಾಗಿ ಕಣ್ಣು ಮುಚ್ಚಿಕೊಂಡಿತು.

ಅಷ್ಟರಲ್ಲಿ ಮರದ ಮೇಲಿಂದ ಇದನ್ನೆಲ್ಲಾ ನೋಡುತ್ತಾ ಇದ್ದ ಕಾಗೆ ಕಾ... ಕಾ.. ಎಂದು ಕೂಗಿ ತನ್ನ ಗೆಳೆಯರನ್ನೆಲ್ಲಾ ಕರೆಯುತ್ತಾ ನಾಯಿಯ ಬಳಿಗೆ ಹಾರಿ ಬಂತು. ಅದೆಲ್ಲಿದ್ದವೋ ನೂರಾರು ಕಾಗೆಗಳು ಗುಂಪುಗುಂಪಾಗಿ ಕಾವ್... ಕಾವ್... ಎನ್ನುತ್ತಾ ಒಟ್ಟಿಗೆ ಹಾರಿ ಬಂದು ನಾಯಿಯ ಮೇಲೆ ಎರಗಿ ಕೊಕ್ಕಿನಿಂದ ಕುಕ್ಕುತ್ತಾ ದಾಳಿ ನಡೆಸಿದವು.

ನಾಯಿ ಹೆದರಿ ನವಿಲನ್ನು ಬಿಟ್ಟು ಓಡಿಹೋಯಿತು. ನೆಲಕ್ಕೆ ಬಿದ್ದು ನಡುಗುತ್ತಿದ್ದ ನವಿಲನ್ನು ಕಾಗೆ ಎತ್ತಿ ನಿಲ್ಲಿಸಿ ಉಪಚರಿಸುತ್ತಿದ್ದಾಗ ನವಿಲು ನಾಚಿಕೆಯಿಂದ ತಲೆತಗ್ಗಿಸಿ ಹೇಳಿತು `ಕ್ಷಮಿಸು ಕಾಗೆಯಣ್ಣಾ, ನನ್ನ ಈ ರೂಪ ಇಂದು ನನ್ನ ಪ್ರಾಣ ಉಳಿಸಲಿಲ್ಲ. ಬದಲಾಗಿ, ನೀನು ಮತ್ತು ನಿನ್ನ ಬಳಗದವರ ಒಗ್ಗಟ್ಟಿನ ಬಲದಿಂದ ನನ್ನ ಜೀವ ಉಳಿಯಿತು.

`ರೂಪಕ್ಕಿಂತ ಗುಣವೇ ಮೇಲು~ ಎಂದು ಈಗ ನನಗೆ ಅರಿವಾಗಿದೆ, ಇಂದಿನಿಂದ ನಾನೂ ನೀನೂ ಒಳ್ಳೆಯ ಸ್ನೇಹಿತರಾಗೋಣವೇ?~ ಎಂದಾಗ ಕಾಗೆ ಸಂತೋಷದಿಂದ ಒಪ್ಪಿತು.
ಕಾಗೆ ಮತ್ತು ನವಿಲು ಕೊಕ್ಕಿಗೆ ಕೊಕ್ಕು ಉಜ್ಜಿಕೊಳ್ಳುತ್ತಾ ಸ್ನೇಹದಿಂದ ಜೊತೆಯಾಗಿ ಮುಂದೆ ನಡೆದವು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.