ADVERTISEMENT

ಜಿರಾಫ್ ಎಂಬ ವಿಸ್ಮಯ

ಎನ್.ವಾಸುದೇವ್
Published 18 ಫೆಬ್ರುವರಿ 2012, 19:30 IST
Last Updated 18 ಫೆಬ್ರುವರಿ 2012, 19:30 IST
ಜಿರಾಫ್ ಎಂಬ ವಿಸ್ಮಯ
ಜಿರಾಫ್ ಎಂಬ ವಿಸ್ಮಯ   

1. `ಜಿರಾಫ್~-ಅದೆಂಥ ಪ್ರಾಣಿ?
* `ಈ ಲೋಕದ ಜೀವಿಯೇ ಅಲ್ಲ~ ಎಂಬ ಭಾವ ಬರಿಸುವ ಅತಿ ವಿಚಿತ್ರ ಪ್ರಾಣಿ ಜಿರಾಫ್ (ಜಿರಾಫ್‌ನ ಬಹುವಚನ ಜೆರಾಫೆ) ನಿಂತಾಗ, ನಡೆವಾಗ, ಓಡುವಾಗ, ನೀರು ಕುಡಿದಾಗ, ಶತ್ರುಗಳನ್ನು ಎದುರಿಸುವಾಗ..... ಹಾಗೆ ಪ್ರತಿಯೊಂದರಲ್ಲೂ ಜಿರಾಫ್‌ನದು ಅತ್ಯಂತ ವಿಭಿನ್ನ ಕ್ರಮ-ವಿಕ್ರಮ.

ಮುಗಿಲೆತ್ತರದ ನಿಲುವು, ಅದನ್ನೂ ಮೀರಿಸುವ ಸಭ್ಯತೆಯ ಈ ಪ್ರಾಣಿ ಸ್ತನಿ ವರ್ಗಕ್ಕೇ ಸೇರಿದೆ. ಸಮಗೊರಸಿನ, ದಟ್ಟ ಕೂದಲುಗಳ ಜೋಡಿ `ಕೊಂಬಿನ~, ಸಂಪೂರ್ಣ ಸಸ್ಯಾಹಾರಿಯಾದ ಈ `ಮೇಯುವ ಪ್ರಾಣಿ~ ಮೆಲುಕು ಹಾಕುತ್ತದೆ ಕೂಡ.

2. ಜಿರಾಫ್‌ನ ವೈಶಿಷ್ಟ್ಯ ಏನು?
* ಜಿರಾಫ್‌ನ ಪರಮ ವೈಶಿಷ್ಟ್ಯ ಅದರ ಎತ್ತರ (ಚಿತ್ರಗಳಲ್ಲಿ ಗಮನಿಸಿ). ಇಡೀ ಪ್ರಾಣಿಸಾಮ್ರಾಜ್ಯದಲ್ಲಿ ಎತ್ತರದ ನಿಲುವಿನಲ್ಲಿ ಜಿರಾಫ್‌ನದೇ ವಿಶ್ವದಾಖಲೆ. ವಯಸ್ಕ ಜಿರಾಫ್‌ಗಳು ಹದಿನೆಂಟು ಅಡಿ ಎತ್ತರ ಮುಟ್ಟುತ್ತವೆ. ಒಂದು ಟನ್ ತೂಕ ತಲುಪುತ್ತವೆ. ಅಷ್ಟು ಎತ್ತರ ಇಷ್ಟು ತೂಕ ಇದ್ದೂ ಗಂಟೆಗೆ 55 ಕಿ.ಮೀ. ವೇಗದಲ್ಲಿ ಓಡುತ್ತವೆ!

ಜಿರಾಫ್‌ನ ಈ ಮಿಂಚಿನ ವೇಗದ ಓಟವನ್ನು ಮೊದಲು ಗಮನಿಸಿದ ಅರಬ್ಬರು ಅದನ್ನು `ಜ್ವರಾಫಾ~ (ವೇಗದ ಪ್ರಾಣಿ) ಎಂದೇ ಕರೆದರು. ಆ ಹೆಸರೇ ಕೊಂಚ ಮಾರ್ಪಟ್ಟು `ಜಿರಾಫ್~ ಎಂದಾಗಿ ಹಾಗೇ ಬಳಕೆಯಲ್ಲಿ ಉಳಿದಿದೆ. ಭಾರೀ ಮಚ್ಚೆಗಳ ಚರ್ಮಾಲಂಕಾರವೂ ಜಿರಾಫ್‌ನದೇ ವೈಶಿಷ್ಟ್ಯ.

3. ಜಿರಾಫ್‌ಗಳಲ್ಲೂ ಬೇರೆ ಬೇರೆ ವಿಧಗಳಿವೆಯೇ?
* ಎಲ್ಲ ಜಿರಾಫ್‌ಗಳದೂ ಒಂದೇ ವಿಧ-ಒಂದೇ ಪ್ರಭೇದ ಎಂದೇ ಇತ್ತೀಚಿನವರೆಗೂ ಭಾವಿಸಲಾಗಿತ್ತು. ಆದರೆ ಜಿರಾಫ್‌ಗಳ ವಿಸ್ತೃತ ಅಧ್ಯಯನದಿಂದ ಅವುಗಳಲ್ಲಿ ಒಂಬತ್ತು ಭಿನ್ನ ವಿಧಗಳಿರುವುದು ಪತ್ತೆಯಾಗಿದೆ. ಅಷ್ಟೇ ಅಲ್ಲ ಆ ಪೈಕಿ ಆರು ವಿಧಗಳನ್ನು ಬೇರೆ ಬೇರೆ ಪ್ರಭೇದಗಳನ್ನಾಗಿಯೇ ಪರಿಗಣಿಸಬಹುದೆಂದೂ ಸ್ಪಷ್ಟವಾಗಿದೆ: “ಮಸಾಯ್ ಜಿರಾಫ್, ಕೇಪ್ ಜಿರಾಫ್, ವೆಸ್ಟ್‌ಆಫ್ರಿಕನ್ ಜಿರಾಫ್, ರಾತ್ಸ್‌ಚೈಲ್ಡ್ ಜಿರಾಫ್, ರೆಟಿಕ್ಯುಲೇಟೆಡ್ ಜಿರಾಫ್ ಮತ್ತು ಅಂಗೋಲನ್ ಜಿರಾಫ್‌” (ಚಿತ್ರ 3 ರಲ್ಲಿ ನೋಡಿ). ಬೇರೆ ಬೇರೆ ಬಣ್ಣಗಳ ಚರ್ಮಾಲಂಕಾರಗಳೇ ಅವುಗಳ ನಡುವಣ ಪ್ರಧಾನ ಅಂತರ (ಚಿತ್ರ 1, 6, 9, 10, 11 ರಲ್ಲಿ ಗಮನಿಸಿ).

4. ಜಿರಾಫ್‌ಗಳ ನೈಸರ್ಗಿಕ ವಾಸಕ್ಷೇತ್ರ ಯಾವುದು?
* ಆಫ್ರಿಕ ಖಂಡದ ಸವನ್ನಾ ಹುಲ್ಲುಬಯಲುಗಳಿಗಷ್ಟೇ ಇವು ಸೀಮಿತ. ಅಲ್ಲಿ ದಟ್ಟೈಸಿರುವ ಆನೆ (ಚಿತ್ರ-7), ಘೇಂಡಾ, ಜೀಬ್ರಾ, ವೈಲ್ಡ್ ಬೀಸ್ಟ್, ಗುನೂ, ಕುಡು, ಇಂಪಾಲಾ ಇತ್ಯಾದಿ ಸಸ್ಯಾಹಾರಿಗಳೊಡನೆ ಹಾಗೂ ಸಿಂಹ, ಚೀತಾ, ಲೆಫರ್ಡ್ ಇತ್ಯಾದಿ ಬೇಟೆಗಾರರ ನಡುವೆ ಜಿರಾಫ್‌ಗಳ ಬದುಕು. ಇದು ಬೇರೆ  ಪ್ರಾಣಿಯೊಡನೆ ಮೇವಿಗಾಗಿ ಸ್ಪರ್ಧಿಸಬೇಕಿಲ್ಲ. ಏಕೆಂದರೆ ಆಗಸದೆತ್ತರದ ಜಿರಾಫ್ ಇನ್ನಾವ ಪ್ರಾಣಿಗೂ ಎಟುಕದಷ್ಟು ಎತ್ತರದಲ್ಲಿನ ಎಲೆಗಳನ್ನೇ ಮೇಯುತ್ತದೆ (ಚಿತ್ರ-1).

ಜಿರಾಫ್‌ನ ಅತ್ಯಂತ ಪ್ರಿಯ ಆಹಾರ `ಅಕೇಶಿಯಾ~ ವೃಕ್ಷಗಳ ಚಿಗುರೆಲೆಗಳು. ಆಫ್ರಿಕದ ಸವನ್ನಾಗಳಲ್ಲಿ ಜಿರಾಫ್ ಪ್ರತಿದಿನ ಸಮೀಪ 45 ರಿಂದ 50 ಕಿಲೋಗ್ರಾಂನಷ್ಟು ಎಲೆಗಳನ್ನು ಮೇಯುತ್ತದೆ. ಉದ್ದುದ್ದನಾದ ಚೂಪಾದ ಮುಳ್ಳುಗಳು ತುಂಬಿದ ಅಕೇಶಿಯಾ ವೃಕ್ಷಗಳಿಂದ ಮೇಯುವುದು ಕಷ್ಟವಾಗದಿರಲೆಂದೇ ಜಿರಾಫ್‌ನದು ಉದ್ದ ಕತ್ತಿನ ತುದಿಯಲ್ಲಿ ಪುಟ್ಟತಲೆ; ತುಂಬ ಗಡಸಾದ ತುಟಿಗಳು; ಅರ್ಧ ಮೀಟರ್ ಉದ್ದದ, ದೃಢವಾದ, ಬೆರಳುಗಳಂತೆ ಆಡಬಲ್ಲ-ಹಿಡಿಯಬಲ್ಲ ನಾಲಿಗೆ!

5. ಜಿರಾಫ್‌ಗಳಿಗೂ  ಶತ್ರುಗಳು ಉಂಟೇ?
* ಜಿರಾಫ್‌ಗಳ ನೈಸರ್ಗಿಕ ನೆಲೆಯಲ್ಲಿ ಹಲವಾರು ಬಲಿಷ್ಠ ಬೇಟೆಗಾರ ಪ್ರಾಣಿಗಳಿವೆ. ಆದರೂ ಜಿರಾಫ್‌ಗಳ ಪ್ರಧಾನ ಶತ್ರು ಸಿಂಹ (ಚಿತ್ರ-8). ಜಿರಾಫ್ ಮರಿಗಳ ಮೇಲೇ ಇವುಗಳ ಕಣ್ಣು. ತಾಯಿ ಎಷ್ಟೇ ರಕ್ಷಿಸಿದರೂ ಹುಟ್ಟುವ ಮರಿಗಳ ಅರ್ಧ ಪಾಲು ಸಿಂಹಗಳಿಗೆ ಬಲಿಯಾಗುತ್ತವೆ. ವಯಸ್ಕ ಜಿರಾಫ್‌ಗಳಿಗೆ `ನೀರು ಕುಡಿವ ಕಾಲ~ ಗಂಡಾಂತರದ್ದು.

ಉದ್ದುದ್ದ ಕಾಲುಗಳ ಆಕಾಶದೆತ್ತರದ ಜಿರಾಫ್ ನೀರು ಕುಡಿವಾಗ ಕಾಲಗಲಿಸಿ, ಕತ್ತು ಬಾಗಿಸಿ ಹರಡಿಕೊಂಡಿರುತ್ತದೆ. ಈ ಸ್ಥಿತಿಯಿಂದ (ಚಿತ್ರ-4) ಕ್ಷಿಪ್ರವಾಗಿ ನಿಲ್ಲುವುದು ಅಸಾಧ್ಯ. ಇಂಥ ಸಂದರ್ಭಗಳಲ್ಲೇ ಸಿಂಹಗಳು ಮೇಲೆರಗುತ್ತವೆ. ಆದರೂ ಜಿರಾಫ್ ತುಂಬ ಬಲಿಷ್ಠ ಪ್ರಾಣಿ. ಎಂಥ ಬೇಟೆಗಾರರನ್ನೂ ಮುಂಗಾಲು-ಹಿಂಗಾಲುಗಳಿಂದ ಒದ್ದು ಉರುಳಿಸುತ್ತದೆ.

ಅದೃಷ್ಟವಶಾತ್ ಇವುಗಳ ಮೇಲೆ ಮನುಷ್ಯರ ದುಷ್ಟ ದೃಷ್ಟಿ ಬಿದ್ದಿಲ್ಲ.  ಆನೆಗಳ ದಂತ, ಘೇಂಡಾಗಳ ಕೊಂಬು ಚಿರತೆಗಳ ಚರ್ಮ ಹೀಗೆ ಯಾವ ಆಕರ್ಷಣೆಯನ್ನೂ ಜಿರಾಫ್‌ಗಳು ಮನುಷ್ಯರಿಗೆ ಒದಗಿಸಿಲ್ಲ. ಆದರೂ ಆಫ್ರಿಕದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಯಿಂದಾಗಿ ಸವನ್ನಾ ಪ್ರದೇಶ ಮನುಷ್ಯರ ದಾಳಿಗೆ ಸಿಲುಕಿದೆ. ಹಾಗೆ ಕುಗ್ಗುತ್ತಿರುವ ವಾಸ ಕ್ಷೇತ್ರದಿಂದಾಗಿ ಜಿರಾಫ್‌ಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಪ್ರಸ್ತುತ ಅವುಗಳ ಸಂಖ್ಯೆ ಸುಮಾರು ನಾಲ್ಕು ಲಕ್ಷದಷ್ಟಿದೆ.
-
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.