ADVERTISEMENT

ತ್ರಿವಿಧ ದಂತ-ದುರಂತ

ಎನ್.ವಾಸುದೇವ್
Published 16 ಫೆಬ್ರುವರಿ 2013, 19:59 IST
Last Updated 16 ಫೆಬ್ರುವರಿ 2013, 19:59 IST
ತ್ರಿವಿಧ ದಂತ-ದುರಂತ
ತ್ರಿವಿಧ ದಂತ-ದುರಂತ   

ದಂತ-ನಿಮಗೇ ತಿಳಿದಿರುವಂತೆ ಅದು ಆನೆಯೊಡನೆ ಬೆಸೆಗೊಂಡ ಪ್ರಸಿದ್ಧ ಹೆಸರು. ಆನೆಯ ಖ್ಯಾತಿಗೆ ಒಂದು ಮುಖ್ಯ ಕಾರಣವಾಗಿರುವ ಈ ಸೃಷ್ಟಿಯೇ ಆನೆ ಬಾಳಿನ ದುರಂತಕ್ಕೂ ಕಾರಣವಾಗಿರುವುದು ಒಂದು ವಿಪರ್ಯಾಸ.

ವಿಸ್ಮಯ ಏನೆಂದರೆ ಹೀಗೆ ಭವ್ಯವಾದ, ಆಕರ್ಷಕವಾದ, ಬೃಹದಾಕಾರದ ದಂತವನ್ನು ಧರಿಸಿರುವ ಪ್ರಾಣಿ ಆನೆಯೊಂದೇ ಏನಲ್ಲ. ಆನೆಯಂತೆಯೇ ಭಾರೀ ಶರೀರದ, ಸ್ತನಿವರ್ಗಕ್ಕೇ ಸೇರಿದ ಇನ್ನೂ ಇಬ್ಬಗೆಯ ಪ್ರಾಣಿಗಳಿವೆ: “ವಾಲ್ರಸ್ (ಚಿತ್ರ-6) ಮತ್ತು ನಾರ್ವಾಲ್ (ಚಿತ್ರ-10)”. ಆನೆಗೂ ಈ ಎರಡು ಪ್ರಾಣಿಗಳಿಗೂ ಮತ್ತೂ ಒಂದು ಸಾಮ್ಯ ಏನೆಂದರೆ ಆನೆಯಂತೆಯೇ ಇವೂ ಕೂಡ ತಮ್ಮ ದಂತದಿಂದಾಗಿಯೇ ಮನುಷ್ಯರ ಕೋವಿಗೆ ಗುರಿಯಾಗಿವೆ; ಅಪಾಯದ ನೆರಳಿನಲ್ಲೇ ಬದುಕುತ್ತಿವೆ.
`ಆನೆ, ವಾಲ್ರಸ್ ಮತ್ತು ನಾರ್ವಾಲ್' ಈ ತ್ರಿವಿಧ ದಂತಧಾರಿಗಳ ದಂತ-ದುರಂತಗಳ ಸಂಕ್ಷಿಪ್ತ ಪರಿಚಯ:

ಆನೆ-ದಂತ
ಆನೆಯ ದಂತ ಪಂಕ್ತಿಯಲ್ಲಿ ಬಾಯಿಂದ ಹೊರಕ್ಕೆ ಚಾಚಿ ಬೆಳೆವ ಒಂದು ಜೊತೆ `ಕೋರೆಹಲ್ಲು'ಗಳೇ ಆನೆ ದಂತ. ಮರಿಆನೆಯ ಹಾಲು ಹಲ್ಲುಗಳು ಮರಿಯ ಆರು ತಿಂಗಳಿನಿಂದ ಹನ್ನೆರಡು ತಿಂಗಳು ವಯಸ್ಸಿನ ಅವಧಿಯಲ್ಲಿ ಬಿದ್ದು ಶಾಶ್ವತ ಹಲ್ಲುಗಳು ಹುಟ್ಟುತ್ತವೆ. ಅವು ನಿಧಾನವಾಗಿ ನಿರಂತರವಾಗಿ ಬೆಳೆಯುತ್ತಲೇ ಹೋಗುತ್ತವೆ.

ಆ ಒಂದು ಜೊತೆ ಹಲ್ಲುಗಳೇ ಆನೆದಂತ. ಆಫ್ರಿಕದ ಆನೆಗಳಲ್ಲಿ ಗಂಡು-ಹೆಣ್ಣು ಎರಡರಲ್ಲೂ ಏಷಿಯನ್ ಆನೆಗಳಲ್ಲಿ (ಚಿತ್ರ-1) ಗಂಡುಗಳಲ್ಲಿ ಮಾತ್ರ ಬೆಳೆವ ಈ ದಂತಗಳು ಹತ್ತು ಅಡಿ ಉದ್ದ ಮೀರಿರುವ ದಾಖಲೆಗಳಿವೆ. ತೂಕದಲ್ಲಿ ಆಫ್ರಿಕನ್ ಆನೆಗಳ ದಂತ ಒಂದು ನೂರು ಕಿ.ಗ್ರಾಂ ಮತ್ತು ಏಷಿಯನ್ ಆನೆಗಳ ದಂತ 39 ಕಿಲೋ ಮುಟ್ಟಿರುವ ದಾಖಲೆಗಳಿವೆ. ಏಷಿಯನ್ ಆನೆಗಳ ದಂತ ತುಂಬ ತೆಳು. ಅದಕ್ಕೇ ಈ ಅಂತರ.

ಆನೆಗಳ ಪ್ರಾಚೀನ ಪ್ರಭೇದಗಳ (ಚಿತ್ರ 2, 3) ಮತ್ತು ಈಗಿನ ಪ್ರಭೇದಗಳ ದಂತಗಳ ನೈಸರ್ಗಿಕ ಉದ್ದೇಶ. ಉಪಯೋಗಗಳು ಹಲವಾರು: ನೀರಿಗಾಗಿ ನೆಲ ತೋಡಲು, ಉಪ್ಪನ್ನು ಬಗೆಯಲು, ಬೇರುಗಳನ್ನು ಅಗೆಯಲು, ಶತ್ರುಗಳನ್ನು ತಿವಿಯಲು, ಪ್ರತಿಸ್ಪರ್ಧಿಗಳನ್ನು ಹಿಮ್ಮೆಟ್ಟಿಸಲು (ಚಿತ್ರ-4).... ಜೊತೆಗೆ `ಗಜಗಾಂಭೀರ್ಯ' ಪ್ರದರ್ಶಿಸಲೂ ದಂತಗಳು ಉಪಯುಕ್ತ.

ಮನುಷ್ಯರಿಗೆ ಬೇಕಾಗುವಂತೆ ಧವಳ ಕಾಂತಿಯ ಈ ಜೈವಿಕ ಸೃಷ್ಟಿ ಕುಶಲ ಕೆತ್ತನೆಗಳಿಗೆ, ಕಲಾಕೃತಿಗಳ ನಿರ್ಮಿತಿಗೆ ಅತ್ಯಂತ ಸೂಕ್ತ, ಪ್ರಶಸ್ತ. ಹಾಗಾಗಿ ಆನೆದಂತಕ್ಕೆ ಬಹಳ ಬೆಲೆ ಆದ್ದರಿಂದಲೇ ನಿಷೇಧ ಇದ್ದರೂ ಆನೆಗಳ ಕಳ್ಳಬೇಟೆ ನಡೆದೇ ಇದೆ. ದಂತದ ಕಲಾಕೃತಿಗಳ ಹಿಂದೆ (ಚಿತ್ರ-5) ಮನುಷ್ಯರ ಕ್ರೌರ್ಯದ, ಆನೆಗಳ ದುರಂತದ ಕಥೆಗಳು ಇದ್ದೇ ಇವೆ.

ವಾಲ್ರಸ್-ದಂತ
ಆಹಾರಕ್ಕಾಗಿ ಕಡಲನ್ನು, ವಿಶ್ರಾಂತಿಗಾಗಿ ದ್ವೀಪ-ನಡುಗಡ್ಡೆಗಳ ಕಡಲಂಚಿನ ಪ್ರದೇಶಗಳನ್ನು ಆಶ್ರಯಿಸಿರುವ ವಾಲ್ರಸ್ (ಚಿತ್ರ 6, 7, 8, 9) ವಾಸ್ತವವಾಗಿ ಒಂದು ವಿಸ್ಮಯಕರ ದಂತಧಾರೀ ಪ್ರಾಣಿ. ಆರ್ಕ್‌ಟಿಕ್ ಸನಿಹದ ಅತಿ ಶೀತಲ ನೆಲ-ಜಲ ಪ್ರದೇಶಗಳು ಇದರ ನೆಲೆ. ವಾಲ್ರಸ್‌ಗಳದೂ ಭಾರೀ ಗಾತ್ರ. ಗಂಡುಗಳು ಒಂದು ಟನ್ ತೂಕ ತಲುಪುತ್ತವೆ; ಹೆಣ್ಣುಗಳದು ಅದರರ್ಧ. ಹಿಮಲೋಕದ ಬದುಕಿಗೆ ಒಪ್ಪವಾಗುವಂತೆ ಎರಡಂಗುಲ ದಪ್ಪ ಚರ್ಮ. ಅದರ ಕೆಳಗೆ ಆರಿಂಚು ದಪ್ಪದ ಕೊಬ್ಬಿನ ಪದರ.

ವಾಲ್ರಸ್‌ಗಳಲ್ಲಿ ಗಂಡು-ಹೆಣ್ಣು ಎರಡಕ್ಕೂ ದಂತ ಇದೆ. ಮೂರಡಿ ಉದ್ದ ಮುಟ್ಟುವ ವಾಲ್ರಸ್ ದಂತ ಬಹಳ ದೃಢ. ತೇಲುತ್ತಿರುವ ಹಿಮ ಚಪ್ಪಡಿಗಳಿಗೆ ತನ್ನ ದಂತ ಜೋಡಿಯನ್ನು ತಗುಲಿಸಿ ಹಿಡಿದು ಇಡೀ ಶರೀರವನ್ನೇ ವಾಲ್ರಸ್ ಮೇಲಕ್ಕೆ ಎಳೆದುಕೊಳ್ಳುತ್ತದೆ. ಪ್ರಣಯ ಕಾಲದಲ್ಲಿ ಗಂಡುಗಳು ತಮ್ಮ ಪ್ರತಿಸ್ಪರ್ಧಿಗಳೊಡನೆ ಹೋರಾಡಲು, ಹಿಮ್ಮೆಟ್ಟಿಸಲು ತಮ್ಮ ದಂತಗಳನ್ನು ಬಳಸುತ್ತವೆ.

ಸುಂದರವಾದ, ಸ್ವಚ್ಛ ಬಿಳುಪಿನ ವರ್ಣದ, ಸುದೃಢವಾದ ವಾಲ್ರಸ್ ದಂತ ಕೆತ್ತನೆಗೆ ತುಂಬ ಪ್ರಶಸ್ತ. ಬೆಲೆಬಾಳುವ ಈ ದಂತಕ್ಕಷ್ಟೇ ಅಲ್ಲದೆ ಚರ್ಮ ಕೊಬ್ಬು ಮತ್ತು ಮಾಂಸಕ್ಕಾಗಿಯೂ ವಾಲ್ರಸ್‌ಗಳನ್ನು ಕಳ್ಳಬೇಟೆಯಾಡುತ್ತಿರುವುದರಿಂದ ವಾಲ್ರಸ್‌ಗಳದು ಬಹುಮುಖ ದುರಂತದ ಸ್ಥಿತಿ.

ನಾರ್ವಾಲ್-ದಂತ
ನಾರ್ವಾಲ್ ಎಂಬ ದಂತಧಾರಿ ವಾಲ್ರಸ್‌ಗಿಂತ ಅಪರಿಚಿತ. ವಾಸ್ತವ ಏನೆಂದರೆ ನಾರ್ವಾಲ್ ಒಂದು ವಿಧದ ತಿಮಿಂಗಿಲ. ಹದಿಮೂರು-ಹದಿನೈದು ಅಡಿ ಉದ್ದ ಶರೀರದ ಈ ಪ್ರಾಣಿ ಸಹಜವಾಗಿಯೇ ಸಂಪೂರ್ಣ ಸಾಗರವಾಸಿ (ಚಿತ್ರ-10). ಆರ್ಕ್‌ಟಿಕ್ ಸನಿಹದ ಅಲ್ಲೂ ಗ್ರೀನ್‌ಲ್ಯಾಂಡ್ ಮತ್ತು ಬಫಿನ್ ದ್ವೀಪಗಳ ಆಸುಪಾಸಿನ ಸಾಗರಾವಾರ ಅದರ ನೆಲೆ.

ನಾರ್ವಾಲ್‌ಗಳಲ್ಲಿ ಗಂಡುಗಳಲ್ಲಿ ಮಾತ್ರ ಮೇಲ್ದವಡೆಯ ಮುಂಭಾಗದ ಒಂದೇ ಒಂದು ಹಲ್ಲು ಈಟಿಯಂತೆ ಚಾಚಿ ಬೆಳೆಯುತ್ತದೆ (ಚಿತ್ರ 11, 12, 13). ಒಂಬತ್ತರಿಂದ ಹತ್ತು ಅಡಿ ಉದ್ದ ಮುಟ್ಟುವ ಈ ದಂತ `ತಲೆಯಿಂದ ಚಾಚಿ ಬೆಳೆದ ತಿರುಚಿದ ಕೊಂಬಿನಂತೆ' ದೂರದಿಂದ ಗೋಚರಿಸುತ್ತದೆ.

ಹಾಗಾಗಿ ಹಲವಾರು ಶತಮಾನಗಳಿಂದಲೂ `ಪೌರಾಣಿಕ ಏಕಶೃಂಗಿ'ಯ ಮಿಥ್ಯಾಕಲ್ಪನೆಯ ಮೂರ್ತಸ್ವರೂಪವಾಗಿ ನಾರ್ವಾಲ್ ಮೂಢನಂಬಿಕೆಗಳಿಗೆ ಗುರಿಯಾಗಿದೆ. ನಾರ್ವಾಲ್ ದಂತಕ್ಕೆ ನಾನಾ ನಿಗೂಢ ದೈವೀ ಗುಣಗಳನ್ನೂ, ಅದ್ಭುತ ಔಷಧೀಯ ಸಾಮರ್ಥ್ಯಗಳನ್ನೂ ಆರೋಪಿಸಿ, ನಂಬಿ ನಾರ್ವಾಲ್‌ಗಳನ್ನು ಬೇಟೆಯಾಡಲಾಗುತ್ತಿದೆ.

ಜೊತೆಗೇ ನಾರ್ವಾಲ್‌ನ ಚರ್ಮ ಕೊಬ್ಬು ಮತ್ತು ಮಾಂಸಕ್ಕಾಗಿಯೂ ಬೇಟೆ ನಡೆದಿದ್ದು ಈ ಪ್ರಾಣಿಯ ಕಗ್ಗೊಲೆ ನಡೆದಿದೆ.
ಪೌರುಷ ಮೆರೆಯಲು, ಹೆಣ್ಣುಗಳನ್ನು ಆಕರ್ಷಿಸಲು ನಾರ್ವಾಲ್ ಗಂಡುಗಳು ಪಡೆದಿರುವ ವಿಶೇಷ ದಂತ ಅವುಗಳ ಅವಸಾನಕ್ಕೆ ದಾರಿ ಮಾಡಿರುವುದೂ ಒಂದು ದಂತ ದುರಂತವೇ ಅಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.