ADVERTISEMENT

ನದಿಗೆ ಇನ್ನೊಂದು ಕಾಗದದ ದೋಣಿ

ಕವಿತೆ

ಎಚ್.ಎಸ್.ವೆಂಕಟೇಶ ಮೂರ್ತಿ
Published 21 ಡಿಸೆಂಬರ್ 2013, 19:30 IST
Last Updated 21 ಡಿಸೆಂಬರ್ 2013, 19:30 IST
(ಡಾ. ಸಿ. ರವೀಂದ್ರನಾಥ್‌)
(ಡಾ. ಸಿ. ರವೀಂದ್ರನಾಥ್‌)   

ರೆ. ಇದು ಇಹ ಅಲ್ಲವೇ ಅಲ್ಲ. ನಾನು ಸತ್ತಿರಬೇಕು.
ತುಟಿಯ ಮೇಲೆ ಕೈಯಿಟ್ಟು ಸುಮ್ಮನಿರಿ ಅಬದ್ಧ ಆಡಬೇಡಿ
ಎಂದು ಗದರಿಸುತ್ತಾಳೆ ನನ್ನವಳು. ಅರೆ... ಹಾಗಾದರೆ ಇದು
ಸತ್ತವರ ಲೋಕವೇ?!

ಗೋಡೆಗಳಿಗೆ ಬಿಳೀ ಬಣ್ಣ ಬಳಿದ ದೊಡ್ಡ ಹಾಲು. ಸರದಿ
ಕಾಯುತ್ತ ಕೂತಿದ್ದೇವೆ ನಾನು ಮತ್ತು ನನ್ನ ಹೆಂಡತಿ. ಒಬ್ಬಳು
ಬಿಳಿಯುಡುಗೆಯ ಹುಡುಗಿ ಒಬ್ಬೊಬ್ಬರನ್ನೇ ಕೂಗಿ ಕೂಗಿ
ಒಳಗೆ ಕಳಿಸುತ್ತಾಳೆ.

ಒತ್ತರಿಸಿಕೊಂಡು ಬರುತ್ತಿರುವ ಕುಸುಕುಸು ಕೆಮ್ಮು ನನಗೆ.
ಬಾಯಿ ಬಿಡುವಂತೆಯೇ ಇಲ್ಲ. ಬಿಟ್ಟರೆ ಹೊರಕ್ಕುಕ್ಕಿ ಬರು
ವುದು ಭಾಷೆಯಲ್ಲ. ಬೆಂಕಿ ನಾಲಗೆಯಂಥ ಕೆಮ್ಮು. ನೀರು
ಗಣ್ಣಲ್ಲಿ ನಡುಗುತ್ತಿದೆ ಮಿಂಚು.

ಸತ್ತವರನ್ನೂ ಕೆಮ್ಮು ಕಾಡುವುದೇ? ಅಂಗೈಯಿಂದ ಬೆನ್ನು
ನೀವುತ್ತಿರುವ ನನ್ನವಳು. ವಿದ್ಯುತ್ತಿಲ್ಲ. ಬೀಸುವ ಗಾಳಿಯ
ದೆಸೆಯಿಂದ ಬತ್ತಿಗೆ ಹತ್ತದೆ ವಿಲಿವಿಲಿಗುಟ್ಟುವ ಸಾಲು
ಸಾಲು ಮೋಂಬತ್ತಿ.

ನಾವು ಮೊದಲು ಬಂದವರು. ಬಿಳಿಯುಡಿಗೆಯ ಹುಡುಗಿಯೊಡನೆ
ನನ್ನ ಪತ್ನಿಯ ಜಗಳ ಶುರು. ವಿಲಕ್ಷಣವಾದ ಯಾವುದೋ ಭಾಷೆ
ಅವಳದ್ದು. ಉದ್ದ ಕೈ ಆಡಿಸಿ ಬನ್ನಿ ಒಳಗೆ ಎನ್ನುತ್ತಾರೆ ವೈದ್ಯರಿರ
ಬಹುದಾದ ವ್ಯಕ್ತಿ.

ನನ್ನ ವ್ಯಾಧಿಯ ಚಹರೆಪಟ್ಟಿ ಜೋಬಿಂದ ತೆಗೆದು ಅವರ ಹೊಳೆಯುವ
ತಣ್ಣನೆ ಟೇಬಲ್ಲ ಮೇಲಿಡುತ್ತೇನೆ. ಅವರು ಆರ್ದ್ರಕಣ್ಣಿಂದ ನಾನು
ಬರೆದದ್ದ ನೋಡುತ್ತಾ ನೋಡುತ್ತಾ ಲೊಚಗುಟ್ಟುತ್ತಾರೆ. ನಾವು
ಕಂಬನಿ ಒರೆಸಿಕೊಳ್ಳುತ್ತೇವೆ.

ಲೀಕಾಗುತ್ತಿರುವ ನಲ್ಲಿಯಿಂದೆಂಬಂತೆ ಮತ್ತೆ ಮತ್ತೆ ಒದ್ದೆಯಾಗುತ್ತಿರುವ
ಕಣ್ಣು. ಬಿಳಿಯುಡಿಗೆ ಹುಡುಗಿ ಕೊಡುವ ಮೃದುವಾದ ಬೆಳ್ಳನೆಹತ್ತಿಯಿಂದ
ಮೆಲ್ಲಗೊತ್ತುತ್ತಾರಾತ. ಅರೆ! ಅಡಿಗರಲ್ಲವೆ
ಇವರು?

ಅನುಕಂಪ ಜಿನುಗುವ ನಗು ಅದು. ಕಾಗದ ಮಡಿಚಿ ತಿದ್ದಿ ತೀಡಿ
ದೋಣಿಮಾಡಿ ತೇಲಿಬಿಡುತ್ತಾರೆ ಹರಿಯುವ ಝರಿಯಲ್ಲಿ. ಎಲ್ಲಿತ್ತದು?
ನಮ್ಮನ್ನ ಸಾಂತ್ವನಿಸುವಂಥ ಮಾತಿಲ್ಲದ ಮೆಲ್ಲೊತ್ತು ಬೆನ್ನಿನ ಮೇಲೆ.
ಮುಂದೆ ಕಾಣುತ್ತಿಲ್ಲ ಯಾರೂ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.