ADVERTISEMENT

ನದಿಯ ಮಡಿಲಲ್ಲಿ ಬೆಳೆದ ನಗರಿ

ಸುಚೇತಾ ಕೆ.ಎನ್.
Published 17 ಜೂನ್ 2017, 19:30 IST
Last Updated 17 ಜೂನ್ 2017, 19:30 IST
ಪೋಚಿಟೆಲಿ ನಗರ. ಚಿತ್ರ: ಅನೂಪ್ ಕೆ.ಎಸ್.
ಪೋಚಿಟೆಲಿ ನಗರ. ಚಿತ್ರ: ಅನೂಪ್ ಕೆ.ಎಸ್.   

ಯುಗೊಸ್ಲಾವಿಯ ಎಂಬ ಹೆಸರಿನಿಂದ ಒಟ್ಟಾಗಿದ್ದ ಪ್ರಾಂತ್ಯಗಳು, 1993ರ ಹೊತ್ತಿಗೆ ಸಮರಕ್ಕಿಳಿದು ಹರಿದು ಚೂರಾದದ್ದು ಈಗ ಇತಿಹಾಸ. ಅವುಗಳಲ್ಲಿ ಒಂದಾದ ಬೋಸ್ನಿಯಾ ಮತ್ತು ಹೆರ್ಝಿಗೋವಿನಿಯ ದೇಶವನ್ನು ವೀಕ್ಷಿಸುವ ಯೋಜನೆ ನಮ್ಮದಾಗಿತ್ತು. ಅಲ್ಲಿಗೆ ಹೋಗುತ್ತೇವೆಂದು ಹೇಳಿದಾಗ, ಅಲ್ಲೇನಿದೆ! ಎಂದು ಮೂಗು ಮುರಿದವರೇ ಹೆಚ್ಚು. ಅಲ್ಲಿನ ಜನರು ಬಡವರು. ನೀವು ಓಡಾಡುತ್ತಿದ್ದರೆ ನಿಮ್ಮ ವಸ್ತುಗಳನ್ನೆಲ್ಲ ಕಿತ್ತುಕೊಂಡಾರು. ಬಾಲ್ಕನ್ ಯುದ್ಧದ ಅಡ್ಡ ಪರಿಣಾಮಗಳು ಇನ್ನೂ ಮಾಸಿಲ್ಲ. ಲ್ಯಾಂಡ್ ಮೈನ್ಸ್ ಗಳ ಭೀತಿ ಇದೆ. ಅಲ್ಲಿಗೆ ಹೋಗದಿದ್ದರೆ ಒಳಿತು ಎಂದು ಉಪದೇಶಿಸಿದವರೂ  ಇದ್ದರು. ಇಷ್ಟೆಲ್ಲಾ ಕೇಳಿ ನಮ್ಮ ಮನದಲ್ಲೂ ಅಳುಕು ಟಿಸಿಲೊಡೆದಿತ್ತು. ಆದರೆ ನಮ್ಮ ಪ್ರಯಾಣವನ್ನು ನಿಲ್ಲಿಸಲಿಚ್ಛಿಸದೆ ಬಂದದ್ದು ಬರಲಿ ಎಂದುಕೊಂಡೇ ಹೊರಟಿದ್ದೆವು. ಸ್ವೀಡನ್‌ನಿಂದ ಹೊರಡುವಾಗಲೂ ಇಮಿಗ್ರೇಷನ್ ಕೌಂಟರ್‌ನಲ್ಲಿ ಕುಳಿತಿದ್ದವನಿಗೆ ಆಶ್ಚರ್ಯ. ಅಲ್ಲಿಗೇಕೆ ಹೋಗುತ್ತಿರುವಿರಿ? ಮೊದಲ ಬಾರಿಯ ಪ್ರಯಾಣವೇ? ವೀಸಾದ  ನಿಯಮಗಳನ್ನೆಲ್ಲ ನೋಡಿಕೊಂಡಿರುವಿರಿ ತಾನೇ ಎಂದೆಲ್ಲ ಪ್ರಶ್ನಿಸಿಯೇ ನಮ್ಮ ಪಾಸ್ ಪೋರ್ಟ್ ನ ಮೇಲೆ ಅಚ್ಚೊತ್ತಿ ಮುಂದೆ ಹೋಗಲು ರಹದಾರಿ ನೀಡಿದ್ದ.

ಸ್ವೀಡನ್‌ನಿಂದ ಹೊರಟು ಕೇವಲ 3 ಗಂಟೆಯೊಳಗಾಗಿ ವಿಮಾನ ತುಜ್ಲಾ ಇಂಟರ್‌ನ್ಯಾಷನಲ್ ಏರ್‌ಪೋರ್ಟ್‌ನಲ್ಲಿ ಇಳಿಯಿತು. ಒಂದು ದೊಡ್ಡ ಮನೆಯಷ್ಟೇ ದೊಡ್ಡದಿತ್ತು ತುಜ್ಲಾ ವಿಮಾನ ನಿಲ್ದಾಣ. ಅಲ್ಲಿಂದ ಮೊಸ್ಟಾರ್ ತಲುಪುವುದು ನಮ್ಮ ಯೋಜನೆಯಾಗಿತ್ತಾದ್ದರಿಂದ ತುಜ್ಲಾದಿಂದ ಸರಯೇವೋ ಮುಖಾಂತರವಾಗಿ ಮೊಸ್ಟಾರ್‌ನೆಡೆಗೆ ನಮ್ಮ ಪ್ರಯಾಣ ಪ್ರಾರಂಭಿಸಿದೆವು. ರಸ್ತೆಯ ಪಕ್ಕೆಲದಲ್ಲಿ ಗುಡ್ಡಗಳು, ಮೇಲಣ ಹಸುರ ಹೊದಿಕೆ,ಗುಡ್ಡಗಳ ತುದಿಯಲ್ಲಿ ಒಂದೊಂದೇ ಮನೆ, ಮನೆಯ ಮುಂದೆ ಮಣ್ಣಿನ ಕಾಲುದಾರಿ, ಎಷ್ಟೋ ದೂರ ನಡೆದರೆ ಒಂದು ಬಸ್ ನಿಲ್ದಾಣ, ಅಲ್ಲಲ್ಲಿ ಜುಳು ಜುಳು ಹರಿಯುವ ತೊರೆಗಳು ಇದು ಯೂರೋಪಿನ ಇತರೆ ಮುಂದುವರಿದ ದೇಶಗಳಂತಿರದೆ ಬೇರೆಯದೇ ಛಾಪು ಮೂಡಿಸಿತ್ತು. ಒಮ್ಮೊಮ್ಮೆ ನಮ್ಮೂರಲ್ಲೇ ನಾನಿದ್ದೇನೆ ಎಂದೆನಿಸಿಬಿಡುತಿತ್ತು. ಅಂತೂ ಗಂಟೆಗಟ್ಟಲೆ ಬಸ್ಸಿನಲ್ಲಿ ಪ್ರಯಾಣ ಮಾಡಿ ರಾತ್ರಿಯ ವೇಳೆಗೆ ಹೆರ್ಝಿಗೋವಿನಿಯ ಪ್ರಾಂತ್ಯದ ಮೊಸ್ಟಾರ್ ಪಟ್ಟಣ ತಲುಪಿಕೊಂಡೆವು.

(ಕ್ರಾವಿಚ ಜಲಪಾತದ ಕಣ್ಮನ ಸೆಳೆಯುವ ನೋಟ)

ADVERTISEMENT

**

ಸ್ನೇಹ ಸೇತುವೆ
ಮೊಸ್ಟಾರ್ ನೆರೇತ್ವಾ ನದಿಯ ಮಡಿಲಲ್ಲಿ ಬೆಳೆದು ನಿಂತ ನಗರಿ. ಆ ನದಿಗೆ 16 ನೇ ಶತಮಾನದಲ್ಲಿ ಕಟ್ಟಲಾದ ಸೇತುವೆಯೇ ಸ್ಟಾರಿ ಮೋಸ್ಟ್. ‘ಸ್ಟಾರಿ ಮೋಸ್ಟ್’ ಎಂಬ ಪದವನ್ನು ಅನುವಾದಿಸಿದರೆ ಹಳೆಯ ಸೇತುವೆ ಎಂಬರ್ಥ ಬರುತ್ತದೆ. ಈ ಹೆಸರನ್ನೇ ತನ್ನದಾಗಿಸಿಕೊಂಡಿದೆ ಮೊಸ್ಟಾರ್ ಪಟ್ಟಣ. 1993ರ ಬಾಲ್ಕನ್ ಯುದ್ಧದ ಸಮಯದಲ್ಲಿ ಈ ಸೇತುವೆ ನಾಶ ಹೊಂದಿತ್ತು. ಆದರೆ 2004 ರ ವೇಳೆಗೆ ಪುನರ್ನಿರ್ಮಾಣ ಮಾಡಲಾಗಿ ಅದೀಗ ಮೊಸ್ಟಾರಿಗರ ಹೆಮ್ಮೆಯ ಪ್ರತೀಕವಾಗಿ ತಲೆ ಎತ್ತಿದೆ. ವರ್ಷವೂ ಅದನ್ನು ವೀಕ್ಷಿಸಲು ಪ್ರಪಂಚದ ಮೂಲೆ ಮೂಲೆಗಳಿಂದ ಜನ ಆಗಮಿಸುತ್ತಾರೆ. ನಾವೂ ಬೆಳಗ್ಗೆ ಬೇಗನೆ ಎದ್ದು ಆ ಸೇತುವೆಯೆಡೆ ನಡೆದೆವು. ಆಗಿನ್ನೂ ಮುಂಜಾನೆಯ ಹಿತವಾದ ಬಿಸಿಲು ಅಲ್ಲಲ್ಲಿ ಹರಡಿತ್ತು. ಅಂಗಡಿಗಳು ಒಂದೊಂದಾಗೆ ತೆರೆದುಕೊಳ್ಳುತ್ತಿದ್ದವು. ನೆರೇತ್ವಾ ನದಿ ಹೆಚ್ಚು ಸೆಳವಿಲ್ಲದೆ ಶಾಂತವಾಗಿ ಹರಿಯುತಿತ್ತು. ಮಧ್ಯದಲ್ಲಿ ಕಮಾನಿನ ಆಕಾರದ ಸೇತುವೆ ಜನರ ಮನಸ್ಸನ್ನು ಬೆಸೆಯುವ ಸ್ನೇಹದ ಕೊಂಡಿಯಾಗಿ ನಿಂತಂತಿತ್ತು. ನಾವು ಮುಂಚಿತವಾಗಿ ಅಲ್ಲಿದ್ದುದರಿಂದ ನಮ್ಮನ್ನು ಹೊರತುಪಡಿಸಿ ಬೇರೆ ಯಾವ ಪ್ರವಾಸಿಗರೂ ಇರಲಿಲ್ಲ. ಆಗಾಗ ಸೇತುವೆಯ ಮೇಲೆ ನಿಂತು ನದಿಗೆ ಹಾರುವ ಗಟ್ಟಿ ಗುಂಡಿಗೆಯ ಜನರನ್ನು ನೋಡಬಹುದು. ನದಿಯ ಆಚೆ ದಡ ಮೊಸ್ಟಾರ್ ನ ಇನ್ನೊಂದು ಮುಖ. ಹೊಸ ಕಟ್ಟಡಗಳು, ಪಾರ್ಕ್‌ಗಳು, ಅಗಲವಾದ ರಸ್ತೆಗಳು, ಸಿಗ್ನಲ್ ಲೈಟುಗಳು ಹೀಗೆ ಆ ಸ್ಥಳ ನಾವೀನ್ಯತೆಯಿಂದ ತುಂಬಿತ್ತು. ಆದರೂ ಅಲ್ಲಲ್ಲಿ ಪಾಳುಬಿದ್ದ ಕಟ್ಟಡಗಳು, ಸ್ಮಶಾನಗಳು, ಡೋಂಟ್ ಫಾರ್ಗೆಟ್ 93 ಎಂಬ ನಾಮ ಫಲಕಗಳು ಯುದ್ಧದ ಕರಾಳತೆಯನ್ನು ಎತ್ತಿ ತೋರಿಸುತ್ತಿತ್ತು.

ಅಲ್ಲಿಂದ ಒಂದು ಟ್ಯಾಕ್ಸಿ ತೆಗೆದುಕೊಂಡು ಕ್ರಾವಿಚ ಜಲಪಾತ ನೋಡಲು ಹೋದೆವು. ಎಲ್ಲೆಲ್ಲೂ ಚೆರ್ರಿ ಹಣ್ಣಿನ ಗಿಡಗಳು, ಕೆಂಪಾದ ಚಿಕ್ಕ ಚಿಕ್ಕ ಹಣ್ಣುಗಳನ್ನು ಹೊತ್ತುಕೊಂಡು ನಿಂತಿದ್ದವು. ಅಲ್ಲಲ್ಲಿ ದಾಳಿಂಬೆಯ ಗಿಡಗಳೂ ಕಂಡವು. ಎಲ್ಲಕ್ಕಿಂತ ಹೆಚ್ಚಿನ ಗಮನ ಸೆಳೆದದ್ದು, ವಿಶಾಲವಾದ ದ್ರಾಕ್ಷಿ ತೋಪುಗಳು. ಆ ಜಾಗಗಳೆಲ್ಲ ದ್ರಾಕ್ಷಾರಸ ತಯಾರಿಕೆಗೆ ಪ್ರಸಿದ್ಧ. ಕಪ್ಪು ದ್ರಾಕ್ಷಿ ಹಣ್ಣುಗಳನ್ನು ಕೊಯ್ದು ದೊಡ್ಡ ಪ್ರಮಾಣದಲ್ಲಿ ವೈನ್ ತಯಾರಿಸಿ ಮಾರುತ್ತಾರೆ. ಪ್ರವಾಸಿಗರು ಲೀಟರುಗಟ್ಟಲೆ ವೈನ್‌ಗಳನ್ನು ಅಲ್ಲಿಂದ ಹೊರುತ್ತಾರಂತೆ. ನಾವು ಕ್ರಾವಿಚ ಜಲಪಾತ ತಲುಪುವಷ್ಟರಲ್ಲಿ ಬಹಳಷ್ಟು ಜನ ಆಗಲೇ ಅಲ್ಲಿದ್ದರು. ಕೆಲವರಂತೂ  ಕೊರೆಯುವ ನೀರಿನಲ್ಲಿ ಈಜುವ ಸಾಹಸಕ್ಕಿಳಿದಿದ್ದರು. ಬಹಳ ಎತ್ತರದಿಂದ ಭೋರ್ಗರೆದು ಧುಮುಕುವ ಜಲಪಾತವಲ್ಲ ಅದು. ಆದರೆ ಇಷ್ಟಗಲ ಹರಡಿಕೊಂಡು ಗಿಡಗಂಟಿಗಳ ನಡುವಿನಿಂದ ಜಾರುತ್ತ ನೋಡಲು ಅಮೋಘವೆನಿಸುತ್ತದೆ. ಚಳಿಗಾಲದಲ್ಲಿ ಇಲ್ಲಿನ ಗಿಡಗಳೆಲ್ಲ ಎಲೆಯುದುರಿಸಿಕೊಂಡು ಬೋಳಾಗಿದ್ದರೆ, ವಸಂತದಲ್ಲಿ ಪೂರ್ತಿ ಹಸಿರಸಿರು. ಶರದೃತು ಬಂತೆಂದರೆ ಹಳದಿ, ಕೇಸರಿ,ಕೆಂಪು ಬಣ್ಣಗಳ ಮೇಳ. ಮೊಸ್ಟಾರ್ ನಿಂದ ಇಲ್ಲಿಗೆ ತಲುಪಲು ಯಾವುದೇ ಸಾರ್ವಜನಿಕ ಸಾರಿಗೆಯ ವ್ಯವಸ್ಥೆಗಳಿಲ್ಲ. ಹಾಗಾಗಿ ಟ್ಯಾಕ್ಸಿ ಕಾಯ್ದಿರಿಸಿಕೊಂಡು ಹೋದರೆ ಒಳಿತು.

ನಮ್ಮ ಮುಂದಿನ ಪಯಣ ಮೊಸ್ಟಾರ್‌ನಿಂದ ಸುಮಾರು ಮೂವತ್ತು ಕಿ. ಮೀ ದೂರದಲ್ಲಿದ್ದ ಪೋಚಿಟೆಲಿ ಎಂಬ ಮಧ್ಯಕಾಲೀನ ಪಟ್ಟಣದೆಡೆಗೆ ಸಾಗಿತ್ತು. ನೆರೇತ್ವಾ ನದಿಯೇ ಇವರಿಗೆ ಜೀವದಾತೆ. ಈ ನದಿಯ ದಡದಲ್ಲಿ ನಿರ್ಮಿತಗೊಂಡು ಇವತ್ತಿಗೂ ಪ್ರಾಚೀನ ವಾಸ್ತುಶಿಲ್ಪದ ಕುರುಹಾಗಿ ನಿಂತಿದೆ ಪೋಚಿಟೆಲಿ. ಮಧ್ಯಾಹ್ನದ ಬಿಸಿಲು ನೆತ್ತಿಯನ್ನು ಸುಡುತಿತ್ತು. ನಮ್ಮ ಟ್ಯಾಕ್ಸಿ ಚಾಲಕ ಅರ್ಥವಾಗದ ಇಂಗ್ಲಿಷ್ ನಲ್ಲಿ ಗುಡ್ಡದ ತುದಿಯೆಡೆ ಕೈ ತೋರಿಸಿ ಅಲ್ಲಿಗೆ ಹತ್ತಿ ಹೋಗಬೇಕೆಂದು ಹೇಳಿದ. ತಾನಿಲ್ಲೇ ಕೂತಿರುವೆನೆಂದು, ನೀವು ಹೋಗಿ ಬನ್ನಿರೆಂದು ನಮ್ಮನ್ನು ಬೀಳ್ಕೊಟ್ಟ. ನಾವು ಕಾಲೆಳೆಯುತ್ತಾ ಒಂದೊಂದೇ ಮೆಟ್ಟಿಲು ಹತ್ತತೊಡಗಿದೆವು. ಇಡಿಯ ಸಂಕೀರ್ಣವನ್ನು ಕಲ್ಲಿನ ಗೋಡೆಯೊಂದು ಆವರಿಸಿತ್ತು. ಅಲ್ಲಲ್ಲಿ ಹಾಳಾಗಿದ್ದರೂ ಬಹುಪಾಲು ಕೋಟೆಯ ಗೋಡೆಗಳು, ಬುರುಜುಗಳು, ಕಲ್ಲಿನ ಮನೆಗಳು ಎಲ್ಲವನ್ನೂ ಕಾಣಬಹುದಿತ್ತು. ಒಟ್ಟೋಮನ್ ತುರ್ಕರ ಕಾಲದಲ್ಲಿ ನಿರ್ಮಾಣವಾದ ಮಸೀದಿಗಳು, ಸ್ನಾನ ಗೃಹಗಳು (ಹಮ್ಮಾಮ್), ಮದರಸಾಗಳು ಹಾಳಾಗದೆ ಉಳಿದಿದ್ದವು. ಅಲ್ಲಿನ ಮನೆಗಳಲ್ಲಿ ಈಗಲೂ ಜನ ವಾಸವಾಗಿದ್ದಾರೆ. ಬೆಟ್ಟದ ತುದಿಯಲ್ಲಿ ನಿಂತು ನೋಡಿದರೆ ಕೆಳಗೆ ಹತ್ತಿರದ ಊರುಗಳೆಲ್ಲ ಮಲಗಿದ್ದವು. ನೆರೇತ್ವಾ ನದಿ ಮಂದವಾಗಿ ಹರಿಯುತ್ತಿತ್ತು. ಪೂರ್ತಿಯಾಗಿ ನೋಡಿ ಮುಗಿಸುವಷ್ಟರಲ್ಲಿ ಎರಡು ಗಂಟೆಗಿಂತ ಹೆಚ್ಚೇ ಸಮಯ ಬೇಕಾಯಿತು. ಕೆಳಗೆ ಬಂದಾಗ ಚೆರ್ರಿ ಹಣ್ಣುಗಳನ್ನು ಮಾರುತ್ತಿರುವುದು ಕಂಡು ಹಸಿವಿನ ನೆನಪಾಗಿ ಒಂದು ಕೆಜಿಯಷ್ಟು ಹಣ್ಣನ್ನು ಕೊಂಡುಕೊಂಡೆವು. ಕೆಂಪಗೆ ಗುಂಡಗಿದ್ದ ಹಣ್ಣುಗಳು ಬಹಳ ಸಿಹಿಯಾಗಿದ್ದವು. ಹಸಿವಿನ ಮಹಿಮೆಯೋ ಅಥವಾ ಆ ಹಣ್ಣು ನಿಜಕ್ಕೂ ಅಷ್ಟು ರುಚಿಯಾಗಿತ್ತೋ ನನಗಂತೂ ಚೆರ್ರಿ ಹಣ್ಣೆಂದರೆ ಇಷ್ಟ ಎನ್ನುವಂತಾಯಿತು.

ಬ್ಲಾಗಾಯ್ ಎನ್ನುವ ಸ್ಥಳ ನಮ್ಮ ಕೊನೆಯ ನಿಲ್ದಾಣ. ಅದು ಬ್ಯುನ ನದಿಯ ಉಗಮ ಸ್ಥಾನ. ಬಾನೆತ್ತರಕ್ಕೆ ಎದ್ದು ನಿಂತ ಕಲ್ಲು ಪರ್ವತಗಳ ಬುಡದಲ್ಲಿ ಒಂದು ಸಣ್ಣ ಗುಹೆಯಿಂದ ನೀರು ಹೊರಬಂದು ಹಳ್ಳವಾಗಿ ಹರಿಯುತ್ತಿತ್ತು. ಬ್ಯುನ ಒಂದು ಚಿಕ್ಕ ನದಿ. ಬಹಳ ದೂರ ಒಬ್ಬಂಟಿಯಾಗಿ ಸಾಗಲಿಚ್ಛಿಸದೆ ಬ್ಯುನ ಎಂಬ ಹಳ್ಳಿಯಲ್ಲಿ ನೆರೇತ್ವಾ ನದಿಯೊಂದಿಗೆ ಮೈತ್ರಿ ಮಾಡಿಕೊಳ್ಳುತ್ತದೆ. ಅಲ್ಲಿ ಹರಿಯುತ್ತಿದ್ದ ನೀರು ಒಂದೊಂದೆಡೆ  ಮೈಲು ತುತ್ತದ ನೀಲಿ ಬಣ್ಣದಲ್ಲಿ ಕಂಡರೆ ಇನ್ನೊಂದೆಡೆ ಪಾಚಿ ಹಸಿರು ಬಣ್ಣದಲ್ಲಿದ್ದಂತೆ ಕಾಣುತ್ತಿತ್ತು. ಹಾಗಾಗಿ ನೀರು ನೀಲಿಯೊ ಹಸಿರೋ ಎಂದು ಗೊತ್ತಾಗದೆ ಗೊಂದಲದಲ್ಲಿದ್ದೆ ನಾನು. ನದಿಯ ಪಕ್ಕದಲ್ಲೇ ಬ್ಲಾಗಾಯ್ ತೆಕ್ಕೆ ಎನ್ನುವ ಹೆಸರಿನ ಡೆರ್ವಿಶ್ ಮೊನಾಸ್ಟರಿ ಇದೆ. 16 ನೇ ಶತಮಾನದಲ್ಲಿ ಇದನ್ನು ನಿರ್ಮಿಸಲಾಯಿತು ಎನ್ನುವ ಅಂಶವನ್ನು ಹೊರತು ಪಡಿಸಿ ಅಲ್ಲಿ ನೋಡುವಂತದ್ದು ನನಗೇನೂ ಕಾಣಲಿಲ್ಲ. ಸುಮ್ಮನೆ ಇದ್ದ ಕೋಣೆಗಳನ್ನೆಲ್ಲ ಹೊಕ್ಕು ಹೊರಬಂದೆವು. ಇದನ್ನೊಂದು ಸ್ಮಾರಕವೆಂದು ಗುರುತಿಸಿ ಇಂದಿಗೂ ಸಂರಕ್ಷಿಸಲಾಗಿದೆ.

ಅಲ್ಲಿಂದ ವಾಪಸು ಕರೆತಂದ ಟ್ಯಾಕ್ಸಿ ಡ್ರೈವರ್ ನಮ್ಮನ್ನು ಹೋಟೆಲ್ ಎದುರು ಇಳಿಸಿದ. ಇನ್ನೂ ಕತ್ತಲಾಗಲು ಬಹಳ ಸಮಯವಿತ್ತು. ಹಾಗಾಗಿ ಮೊಸ್ಟಾರ್‌ನಲ್ಲಿರುವ ಹಳೆಯ ಟರ್ಕಿಷ್ ಹೌಸ್ ಎಂದೇ ಹೆಸರಾದ ಕೈತಾಜ್ ಹೌಸ್ ನೋಡಲು ಹೊರಟೆವು. ಇದು ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಗೆ ಸೇರಿದೆ. ಆದರೆ ಇಂದಿಗೂ ಇದರ ಒಡೆತನ ಕೈತಾಜ್ ಮನೆತನದ ಸೊತ್ತು. ಕೈತಾಜ್ ಮನೆ ಅಲ್ಲಿನ ನ್ಯಾಯಾಧೀಶರೊಬ್ಬರ ನಾಲ್ಕು ಜನ ಹೆಂಡತಿಯರಿಗೆ ಸೇರಿತ್ತು. ಯಾವುದೋ ಸಂದಿಮೂಲೆಯಲ್ಲಿ ಅಲೆದು ದಾರಿಯಲ್ಲಿ ಸಿಕ್ಕವರನ್ನು ವಿಚಾರಿಸುತ್ತಾ ಆ ಮನೆಯನ್ನು ತಲುಪಿದೆವು. ಹೊರಾಂಗಣವನ್ನು ಸುತ್ತುವರಿದಿದ್ದ ಎತ್ತರೆತ್ತರದ ಗೋಡೆಗಳಿಗೆ ಬೃಹತ್ ಬಾಗಿಲೊಂದಿತ್ತು. ಕರೆಗಂಟೆಯ ಶಬ್ದ ಕೇಳಿ ಒಬ್ಬಾಕೆ ಬಂದು ಬಾಗಿಲು ತೆಗೆದಳು. ನಮ್ಮನ್ನು ಒಳಗೆ ಕರೆದು ಕೂರಲು ಹೇಳಿ ಗುಲಾಬಿ ಹೂವಿನ ಎಸಳಿನಿಂದ ಮನೆಯಲ್ಲೇ ಮಾಡಿದ ಪಾನಕ ತಂದುಕೊಟ್ಟಳು. ಬಿಸಿಲಲ್ಲಿ ಬಂದವರಿಗೆ ಅಮೃತ ಕೊಟ್ಟಷ್ಟು ತಂಪೆನಿಸಿತು. ಆಕೆಯ ಹೆಸರು ಇಂದಿರಾ. ತನ್ನ ತಂದೆಗೆ ಇಂದಿರಾ ಎನ್ನುವ ಹೆಸರು ಇಷ್ಟವೆನಿಸಿ ಅದನ್ನು ತನಗಿಟ್ಟರೆಂದು ತಿಳಿಸಿದಳು. ಮುಂದೆ ಮನೆಯನ್ನೊಮ್ಮೆ ಸುತ್ತಾಡಿಸಿ ನಮಗೆ ಅಲ್ಲಿದ್ದ ಪ್ರತಿಯೊಂದು ವಸ್ತುಗಳ ಬಗ್ಗೆಯೂ ಮಾಹಿತಿ ನೀಡಿದಳು. ನ್ಯಾಯಾಧೀಶರ ನಾಲ್ವರು ಹೆಂಡತಿಯರಿಗೆ ಪ್ರತ್ಯೇಕವಾದ ಒಂದೊಂದು ಕೋಣೆಗಳು, ಅದಕ್ಕೆ ಸೇರಿಕೊಂಡಿದ್ದ ಸ್ನಾನಗೃಹಗಳಿದ್ದವು. ಆದರೆ ಅವರಲ್ಲೊಬ್ಬಳಿಗೆ ಮೇಲಿನ ಸ್ಥಾನ. ಆಕೆಗೆ ಹೆಚ್ಚಿನ ಉಪಚಾರವನ್ನು ಉಳಿದವರು ಮಾಡಬೇಕಿತ್ತಂತೆ. ಅವಳ ಆಣತಿಯಂತೆ ಮನೆಯ ಆಗುಹೋಗುಗಳು ನಿರ್ಧಾರವಾಗುತ್ತಿದ್ದವಂತೆ. ಊಟೋಪಚಾರ, ಉಡುಗೆ ತೊಡುಗೆ ಎಲ್ಲದರಲ್ಲೂ ಅವಳದ್ದು ಮೇಲುಗೈ. ಇದೆಲ್ಲವನ್ನು ಇಂದಿರೆಯಿಂದ ಕೇಳಿ ತಿಳಿದುಕೊಂಡೆವು. ಕಲ್ಲಿನ ಮನೆಯಾದ್ದರಿಂದ ಬೇಸಿಗೆಯಲ್ಲಿ ಧಗೆಯಿಂದ ರಕ್ಷಣೆ ನೀಡುತಿತ್ತು. ಅಡಿಗೆ ಮನೆಯನ್ನು ಉಳಿದೆಲ್ಲ ಕೋಣೆಗಳಿಗಿಂತ ಹೆಚ್ಚಿಗೆ ತಂಪಾಗಿರುವಂತೆ ಮಾಡಲಾಗಿತ್ತು. ಇದಲ್ಲದೆ ಅವರು ಬಳಸುತ್ತಿದ್ದ ಬಟ್ಟೆಗಳು, ಚಪ್ಪಲಿ, ತಲೆಗೇರಿಸುತ್ತಿದ್ದ ಟೊಪ್ಪಿ, ಮಗುವನ್ನು ತೂಗುವ ತೊಟ್ಟಿಲು, ಕಾಫಿ ಬಟ್ಟಲು ಇವೆಲ್ಲವನ್ನೂ ನೋಡುವ ಅವಕಾಶ ಸಿಕ್ಕಿತು.

(ಡೆರ್ವಿಶ್ ಮೊನಾಸ್ಟರಿ ‘ಬ್ಲಾಗಾಯ್ ತೆಕ್ಕೆ’)

***
ಯುದ್ಧದ ಮಾಸದ ನೆನಪು

ಇಂದಿರಾ ಸಣ್ಣವಳಿದ್ದಾಗಿನಿಂದ ಅಲ್ಲೇ ಪಕ್ಕದ ಮನೆಯಲ್ಲಿ ಬೆಳೆದವಳಂತೆ. ಯುದ್ಧದ ಭೀಕರತೆಯನ್ನು ವಿವರಿಸುತ್ತಾ ಹೀಗೆಂದಳು. ಒಂದು ದಿನ ಅವಳ ತಂಗಿ ಮಧ್ಯ ರಾತ್ರಿ ಏನೋ ಸದ್ದಾಯಿತು ಎಂದು ಮಲಗಿದ್ದ ಕೊಠಡಿಯ ಬಾಗಿಲು ತೆಗೆದರೆ, ಮನೆಯ ಅರ್ಧ ಭಾಗ ಹೊತ್ತಿ ಉರಿಯುತ್ತಿತ್ತಂತೆ. ಎಲ್ಲರೂ ಹೊರಗೆ ಬಂದು ಬೀದಿಯಲ್ಲಿ ನಿಲ್ಲಬೇಕಾಯಿತಂತೆ. ಆ ಘಟನೆ ನಡೆದ ಮೇಲೆ ಅವರ ತಂದೆ ಹೆಣ್ಣು ಮಕ್ಕಳಿಬ್ಬರನ್ನು ಬಸ್ಸಿನಲ್ಲಿ ಜರ್ಮನಿಗೆ ಕಳಿಸಿದರಂತೆ. ಆ ದಿನದ ನೆನಪು ಅವಳಿಗಿನ್ನೂ ಮಾಸಿರಲಿಲ್ಲ. ಬೆಳಿಗ್ಗೆ ಬಸ್ಸಿನಲ್ಲಿ ಕೂತವಳಿಗೆ ತಂದೆ ಹೇಳುತ್ತಿದ್ದರಂತೆ, ಇನ್ನೊಂದು ವಾರವಷ್ಟೇ ಯುದ್ಧ ಮುಗಿಯುತ್ತದೆ. ಎಲ್ಲರೂ ಜೊತೆಯಾಗಿ ಅದೇ ಮನೆಯಲ್ಲಿ ಇರಬಹುದು ಎಂದು. ಆದರೆ ನಾವು ಇನ್ನೊಂದು ವಾರದಲ್ಲಿ ವಾಪಸಾಗಲಾರೆವು ಎಂದು ಅವಳ ಮನಸಿಗೆ ಖಚಿತವಾಗಿತ್ತು. ಬಸ್ಸಿನಲ್ಲಿ ಕುಳಿತ ಪ್ರತಿಯೊಬ್ಬರೂ ರೋಧಿಸುತ್ತಿದ್ದರಂತೆ. ಅಂದು ನನ್ನ ತಂದೆಯ ಕಣ್ಣಲ್ಲೂ ನೀರಿತ್ತು. ಈಗ ಯುದ್ಧವೆಲ್ಲ ಮುಗಿದು ನಾವು ವಾಪಸಾದರೂ ನನ್ನ ಎಷ್ಟೋ ಸ್ನೇಹಿತರನ್ನು, ಪರಿಚಯಸ್ಥರನ್ನು ಕಳೆದುಕೊಂಡಿದ್ದೇನೆ. ನಮ್ಮವರು ಮಾನವೀಯತೆ, ಪ್ರೀತಿ, ಅಭಿಮಾನವನ್ನು ಕಳೆದುಕೊಂಡಿದ್ದಾರೆ. ಈಗ ನಮ್ಮಲ್ಲೇನೂ ಉಳಿದಿಲ್ಲ ಎಂದು ಹನಿಗಣ್ಣಾದಳು. ಅವಳ ದುಃಖದ ಕಥೆ ಕೇಳಿ  ಬೇಸರವಾಯಿತು.

ಮಾರನೆಯ ದಿನ ಬೆಳಿಗ್ಗೆಯೇ ಹೊರಡಬೇಕಿದ್ದರಿಂದ ಇನ್ನೊಮ್ಮೆ ಸ್ಟಾರಿ ಮೋಸ್ಟ್ ಕಡೆಗೆ ಹೋದೆವು. ಮುಂಜಾನೆ ಜನರಿಲ್ಲದೆ ಖಾಲಿಯಾಗಿದ್ದ ಸೇತುವೆ ಸಂಜೆಯ ವೇಳೆಗೆ ಗಿಜಿಗುಡುತಿತ್ತು. ಅಂಗಡಿಗಳು, ಹೋಟೆಲ್‌ಗಳಲ್ಲಿ ಜನವೋ ಜನ. ಅಲ್ಲಾವುದ್ದೀನ ಅದ್ಭುತ ದೀಪಗಳು, ಹೂದಾನಿಗಳು, ತುರ್ಕರ ಮಾದರಿಯ ಕಾಫಿ ಹೂಜಿಗಳು, ಬಟ್ಟಲುಗಳು, ಹರಳಿನಿಂದ ಸಿಂಗರಿಸಿದ ಆಭರಣದ ಪೆಟ್ಟಿಗೆಗಳು, ಹೊಳೆಹೊಳೆವ ಸರಗಳು, ಹಳೆಯ ಅಂಚೆ ಚೀಟಿಗಳು, ನಾಣ್ಯಗಳು, ವಿದ್ಯುತ್ ತೂಗುದೀಪಗಳು ಎಲ್ಲವೂ  ಆ ಬೀದಿಯನ್ನು ಬಣ್ಣಬಣ್ಣದಿಂದ ಸಿಂಗರಿಸಿದ್ದವು. ನಾವೂ ಮೊಸ್ಟಾರ್‌ನ ನೆನಪಿಗೆಂದು ಒಂದೆರಡು ವಸ್ತುಗಳನ್ನು ಖರೀದಿಸಿ ವಾಪಸಾದೆವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.