ADVERTISEMENT

ನಾಲ್ಕು ಪದ್ಯಗಳು

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2011, 19:30 IST
Last Updated 17 ಸೆಪ್ಟೆಂಬರ್ 2011, 19:30 IST
ನಾಲ್ಕು ಪದ್ಯಗಳು
ನಾಲ್ಕು ಪದ್ಯಗಳು   

ಪದ್ಯ1

ನಾನು ಯಾರ ಹಾಗೂ ಅಲ್ಲ
ಎಲ್ಲರಂತೆಯೇ ಇದ್ದು, ನೋಡುಗರ ಕಣ್ಣಿಗೆ
ನಗಿಸುವ ಬೊಂಬೆಯಂತಿದ್ದೆ... ಆಗ
ಹೇಳಿಕೊಳ್ಳಲು ನನಗೆ ಮುಖವೇ ಇರಲಿಲ್ಲ.
 
ನಾನೇನೆಂದು ನನಗೇ ಗೊತ್ತಿಲ್ಲ
ನೋಡುಗರ ಕಣ್ಣಿಗೆ ನಾನೊಂದು
ಮುದ್ದಾದ ಪ್ರೀತಿಯ ಹುಡುಗಿ
 
ಜೋಕಾಲಿಯಲ್ಲಿ ಜೀಕಿದಂತೆ ಅನಿಸುತ್ತಿದೆ
ನನ್ನ ಕೂದಲು ಹಿಂದಕ್ಕೆ ಹಾರುತ್ತಿದೆ
ಅದು ಬಾಚಿದೆಯೇ ಸಿಕ್ಕುಸಿಕ್ಕಾಗಿದೆಯೇ
ಒಂದೂ ಅರಿವಿಗೆ ಬರುವುದಿಲ್ಲ
ಹೊದ್ದ ಸೆರಗು ಕೆಳಕ್ಕೆ ತೊಯ್ದಾಡುತ್ತಿದೆ
ಕೂತಿದ್ದೇನೆ... ನಿಂತಿದ್ದೇನೆ... ಅಸ್ಪಷ್ಟ
 
ಕಾಲ ಬದಲಾಗುತ್ತಿದೆ... ಈಗ
ನಾನು, ಸುಂದರ ಹುಡುಗಿ
ಅನಿಸಿಕೊಳ್ಳುತ್ತಿದ್ದೇನೆ.

ಪದ್ಯ 2

ನಾನು... ಈ ಪದವನ್ನು
ಅಹಂನಿಂದ ಹೇಳಿಕೊಳ್ಳುತ್ತಿಲ್ಲ.
ನಾನೇನಾದರೂ ಆಗಬಲ್ಲೆ, ಹಾರುವ ಹಕ್ಕಿ... ಹೀರುವ ದುಂಬಿ,
ಓಡುವ ನದಿ... ತೇಲುವ ಮೋಡ,
ಹೀಗೆ ಹಲವಾರು...
ಆದರೆ ನಾನೇನೆಂದು ನನಗೇ ಗೊತ್ತಿಲ್ಲ
 
ದೇವರಲ್ಲಿ ನನಗೆ ಈಗ ನಂಬಿಕೆ ಇದೆ,
ಮೊದಲು ಇರಲಿಲ್ಲವೆಂದಲ್ಲ.
ಹಲವು ಜನರಲ್ಲಿ ನನಗೆ ನಂಬಿಕೆಯಿಲ್ಲ,
ಕೆಲವರು ಹೇಳುತ್ತಾರೆ... ನನಗೆ ಜಗತ್ತನ್ನೇ
ಆಳುವ ಶಕ್ತಿಯಿದೆ ಎಂದು, ಆದರೆ
ಅದನ್ನು ಕೇಳಿ ನನಗೆ ನಂಬಿಕೆಯಿರಲಿ... ಹಾಗಿದ್ದಿದ್ದರೆ...
ಎಂಬ ಕನಸು ಕೂಡಾ ಹುಟ್ಟುವುದಿಲ್ಲ

ನನಗೆ ಅಪಮಾನ ಮಾಡಿದವರಿಗೆ
ಸೇಡು ತೀರಿಸಿಕೊಳ್ಳಬೇಕೆಂಬ
ಆಸೆ ಇದೆ, ಆದರೆ ಅದು
ನಿಜವಾದ ಸೇಡಲ್ಲ, ಸಮಸ್ಯೆ
-ಯ ಅರಿವು ಮೂಡಿಸುವುದು
ಎಂಬುದಷ್ಟೆ
ಅಂದುಕೊಳ್ಳುತ್ತೇನೆ.

ಪದ್ಯ 3

ADVERTISEMENT

ನನ್ನ ಮನೆಯ ಮುಂದಿನ ದೊಡ್ಡ ಹೊನ್ನೆಯ ಮರದಲ್ಲಿ
ಒಂದು ಜೋಕಾಲಿಯಿದೆ. ಅದರಲ್ಲಿ
ನಾನು ದಿನವೂ ಜೀಕುತ್ತೇನೆ
ಸಂತೋಷವನ್ನು - ದುಃಖವನ್ನು
ಎರಡನ್ನೂ ಹಂಚಿಕೊಳ್ಳುತ್ತೇನೆ

ದುಃಖವಾದಾಗಲೆಲ್ಲ ಅದು ನನಗೆ
ಸಾಂತ್ವನ ಹೇಳಲು ಬಯಸುತ್ತದೆ.

ಸಂತೋಷವನ್ನು ಅದು ನನ್ನೊಂದಿಗೆ
ಹಂಚಿಕೊಳ್ಳುತ್ತದೆ
ಈಗ ನಾನು ಅವೆರಡನ್ನೂ ಅರಿತಿದ್ದೇನೆ.
ನನ್ನ ಜೋಕಾಲಿಯನ್ನು ಕಟ್ಟಿದವರು ನನ್ನ ಅಪ್ಪನೇ
ಆದರೆ ಒಂದು ದಿನ
ನನ್ನ ಜೋಕಾಲಿ ಹಗ್ಗ ಕಳಚಿ ಮುರಿದು ಬಿತ್ತು
ಅದನ್ನು ಮತ್ತೆ ಕಟ್ಟಿದವರೂ
ನನ್ನ ಅಪ್ಪನೇ ಅನಿಸುತ್ತದೆ

ಈ ಜೋಕಾಲಿ ನನ್ನನ್ನೂ
ಯಾವಾಗಲೂ ಆಟವಾಡಿಸುತ್ತಲೂ
ನಗಿಸುತ್ತಲೂ ಇರುತ್ತದಾದ್ದರಿಂದ ಇದು
ನನ್ನ ಅಣ್ಣನೇ ಇರಬೇಕು.
 
ನಾನಿದನ್ನು ಮರೆಯಲು ಇಷ್ಟಪಡುವುದಿಲ್ಲ
ಎಂದಷ್ಟೇ ಹೇಳುತ್ತೇನೆ.
 

ಪದ್ಯ 4

ಇಷ್ಟು ದಿನ ದೇವರೇ ನಿನಗೆ
ಆರೋಗ್ಯ ಸರಿಯಿರಲಿಲ್ಲ ಎಂದುಕೊಳ್ಳುತ್ತೇನೆ.
ಅದಕ್ಕೇ ನನ್ನನ್ನು ಕಂಗೆಡಿಸಿಬಿಟ್ಟೆ
ಇಲ್ಲ... ಇಲ್ಲ... ಮತ್ತೆಂದೂ ಇಲ್ಲ
ನೀನು ಮತ್ತೆಂದೂ..., ನಾನು ದುಃಖದಲ್ಲಿ
ಕೈ ತೊಳೆಯುವಂತೆ ಮಾಡುವುದಿಲ್ಲ...
ನಿನ್ನಲ್ಲಿ ನಂಬಿಕೆಯಿಡುತ್ತೇನೆ.
ದೇವರೇ... ನೀನು ಇರುತ್ತೀ
ನನ್ನನ್ನೂ ಬದುಕಿಸುತ್ತೀ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.