ADVERTISEMENT

ಪದಬೇಟೆ

​ಪ್ರಜಾವಾಣಿ ವಾರ್ತೆ
Published 4 ಜೂನ್ 2017, 8:13 IST
Last Updated 4 ಜೂನ್ 2017, 8:13 IST
ಪದಬೇಟೆ
ಪದಬೇಟೆ   

ಡಾ. ಶೈಲಜಾ ಕೆ.ಆರ್‌.
ಯಾವ ರೋಗಿಯೂ ಇರಲಿಲ್ಲ. ಅಸ್ಪತ್ರೆ ಆರಾಮಾಗಿತ್ತು. ಮಧ್ಯಾಹ್ನ ಬೇರೆ, ಕೈಲಿದ್ದ ಪುಸ್ತಕ ತಿರುವಿ ಬೇಜಾರಾಗಿತ್ತು. ಪಕ್ಕದ ಕೊಠಡಿಯಲ್ಲಿದ್ದ ಮರಿ ವೈದ್ಯರನ್ನು ಮಾತಾಡಿಸಲು ಎದ್ದು ಹೋದೆ. ಏನು ಮಾಡುತ್ತಿರಬಹುದೆಂದು ಇಣುಕಿದೆ. ಆ ರೂಮ್‌ನಲ್ಲೂ ಆರಾಮ ನೆಲೆಸಿತ್ತು. ಆ ವೈದ್ಯರು ಮಾತ್ರ ಗಹನವಾದ ಯೋಚನೆಯಲ್ಲಿ ಕುಳಿತಿದ್ದರು. ಮುಂದಿದ್ದ ಟೇಬಲ್‌ ಮೇಲೆ ಹಾಳೆಗಳು ಹರಡಿದ್ದವು. ಕಂಪ್ಯೂಟರ್‌ನಿಂದ ವಿಷಯ ಸಂಗ್ರಹಿಸಿ ಹೊಟ್ಟೆಯಲ್ಲಿ ಹೊದ್ದುಕೊಂಡಿದ್ದ ಹಾಳೆಗಳು ಅವು.

ನನ್ನ ಮೊಗ ಕಂಡೊಡನೆ ಎದ್ದು ನಿಂತು ಗೌರವ ಸೂಚಿಸಿದರು. ಇಂದಿನ ದಿನಗಳಲ್ಲಿ ಈ ಯುವಪೀಳಿಗೆಯಿಂದ ಈ ತರಹದ ಗೌರವಸೂಚಕ ನಡವಳಿಕೆಗಳು ಕಂಡುಬಂದರೆ ಅವರು ಪ್ರಪಂಚಜ್ಞಾನವಿಲ್ಲದೆ ಬರೀ ಪುಸ್ತಕಗಳನ್ನು ಓದಿ ರ‍್ಯಾಂಕ್‌ಗೆ ಗೌರವ ತಂದುಕೊಡುವ ಕೂಚಂಭಟ್ಟರೆಂದು ಪ್ರಾಣೇಶ್‌ ತಮ್ಮ ಕಾರ್ಯಕ್ರಮಗಳಲ್ಲಿ ಹೇಳಿದ್ದನ್ನು ಕೇಳಿದ್ದೆ. ಅದು ಸತ್ಯವೂ ಇತ್ತು. ಈ ಮರಿಗೂ ಅಷ್ಟೇ – ಪುಸ್ತಕ ಬಿಟ್ಟು ಬೇರೆ ಏನೂ ಬೇಕಾಗಿರಲಿಲ್ಲ. ಎಲ್‌ಕೆಜಿಯಿಂದ ವೈದ್ಯಕೀಯ ಕೆಜಿ ತನಕ ಫಸ್ಟೋ ಫಸ್ಟು.

ಈ ‘ರ‍್ಯಾಂಕಿ’ ಯಾವುದೇ ವಿಷಯವನ್ನು ಆಳವಾಗಿ ಕೂಲಂಕಷವಾಗಿ ತಿಳಿಯುವವರೆಗೂ ಸಮಾಧಾನ ಪಡ್ತಾ ಇರಲಿಲ್ಲ. ಓದಿದ್ದೆಲ್ಲಾ ಪೂರ್ತಿ ಅರ್ಥ ಆಗಲೇಬೇಕು. ಅದೂ ಯಥಾವತ್ತಾಗಿ, ಸುಖಾಸುಮ್ಮನೆ ಏನ್ನನ್ನೂ ಓದ್ತಾ ಇರಲಿಲ್ಲ. ಎಂತಹ ಮಿದುಳು ಅವರದೆಂದರೆ, ಪಾಠಕ್ಕೆ ಸಂಬಂಧಿಸಿದ ಯಾವ ವಿಷಯವನ್ನೂ ಅರ್ಧಕ್ಕೆ ಹೋಗಲು ಬಿಡ್ತಾ ಇರಲಿಲ್ಲ. ಮಿದುಳುಗತ ಕರಗತ ಆಗೋವರೆಗೂ ಅದರ ಹಿಂದೇನೆ ಸುತ್ತಿ ಲೈನ್‌ ಹೊಡೆದು ಒಲಿಸಿಕೊಳ್ಳೋದು ಇವರ ಲಕ್ಷಣ ಆಗಿತ್ತು. ಆ ರ‍್ಯಾಂಕಿ ನಂಗೆ ವಿಷ್‌ ಮಾಡಿ ‘ಮ್ಯಾಮ್‌, ಪಾಲಿಮಾತ್‌ ಅಂದ್ರೆ ಏನು? ನಿಮಗೆ ಗೊತ್ತಾ?’ ಅಂದ್ರು.

ADVERTISEMENT

ಇಂಗ್ಲೀಷ್‌ ಇರಲಿ, ಕನ್ನಡ ಇರಲಿ, ರ‍್ಯಾಂಕಿ ಪದಜ್ಞಾನ ಅದ್ಭುತ. (ಆತನ ಜೊತೆ ಸಂಭಾಷಿಸಿದಾಗೆಲ್ಲ ನಾನು ಹೊಸ ಹೊಸ ಇಂಗ್ಲೀಷ್‌ ಪದ ಕಲಿತಿರುವೆ). ಅರ್ಥ ಗೊತ್ತಾಗದೆ ಆತ ಮುಂದಿನ ಪದಕ್ಕಾಗಲಿ ವಾಕ್ಯಕ್ಕಾಗಲಿ ದಾಟ್ತಾ ಇರಲಿಲ್ಲ. ಆ ಕ್ಷಣವೇ ಪದದ ಕೆಳಗೆ ಗೆರೆ ಎಳೆದು, ಪ್ರಶ್ನಾರ್ಥಕ ಚಿಹ್ನೆ ಹಾಕಿ, ಹುಡುಕಿದ ಅರ್ಥ ಸೈಡ್‌ನಲ್ಲಿ ಬರೆದಿರೋರು. ನಾನು ಆ ಮಟ್ಟದಲ್ಲಿ ಓದಿದವಳೇ ಅಲ್ಲ.

ಏನಿದ್ದರೂ ಗ್ರೌಂಡ್‌ ಲೆವೆಲ್‌ – ಅರ್ಥ ಆದ್ರೆ ಆಗ್ಬೋದು ಹೋದ್ರೆ ಹೋಗ್ಬೋದು. ನಾನು ತಿಳ್ಕೊಂಡಿದ್ದೆ ಅರ್ಧ ಅಂತ ನಾನು ಭಾವಿಸಿಕೊಳ್ಳೋದು. ಅರ್ಥ ಆಗದಿದ್ದರೆ ಸೀದಾ ಮುಂದಿನ ಪಂಕ್ತಿಗೆ, ಅದೂ ಅರ್ಥ ಆಗಲಿಲ್ಲ ಅಂದ್ರೆ ಮುಂದಿನ ಪುಟ ಅಥವಾ ಮುಂದಿನ ಪಾಠ – ಹೀಗೆ ಎಗರಿಸಿ, ಲಾಂಗ್‌ ಜಂಪ್‌ ಹೈ ಜಂಪ್‌ ಮಾಡಿ ಓದಿದ್ದು, ಓದೋದು. ಆ ಮಟ್ಟದ ಗಹನಿಕೆ ಖಂಡಿತ ಇಲ್ಲ. ಯಾವಾಗಲೂ ಇರ್ಲಿಲ್ಲ.

ನಾನೂ ಕೂಡ ಪದಜ್ಞಾನಿ ಅಂತ ತಿಳ್ಕೊಂಡು ಮರಿ ಕೇಳ್ತಾ ಇರಬೇಕಾದ್ರೆ ಸುಮ್ನೆ ಹೇಗೆ ಇರೋಕ್ಕಾಗುತ್ತೆ?!
ನಾನು ‘ಜಸ್‌್ಟ ಮಾತ್‌’ ಕೇಳಿದ್ದೆ. ‘ಜಸ್‌್ಟ ಮಾತ್‌ ಮಾತಲ್ಲಿ’ ಅಂತ ರಮ್ಯಾ–ಸುದೀಪ್‌ ಕಿತ್ತಾಡಿಕೊಂಡಿದ್ದು ಕೇಳಿದ್ದೆ. ‘ಕೆಟ್ಟ ಮಾತ್‌’ ಕೇಳಿದ್ದೆ. ‘ಪಾಲಿಮಾತ್‌’ ಕೇಳಿರಲಿಲ್ಲ. ‘ಪೋಲಿಮಾತ್‌’ ಕೂಡ ಕೇಳಿದ್ದೆ.

ಒಂದು ಸಣ್ಣ ಸಂಶಯ ಬಂತು. ಈ ರ‍್ಯಾಂಕಿ, ಪೋಲಿಮಾತ್‌ ಅನ್ನೋದನ್ನು ಕನ್‌ಫ್ಯೂಸ್‌ ಮಾಡ್ಕೊಂಡು ಪಾಲಿಮಾತ್‌ ಅಂತಿದ್ದಾನಾ? ಪ್ರಾಣೇಶ್‌ ಹೇಳ್ತಾ ಇರ್‍ತಾರೆ – ರ‍್ಯಾಂಕಿಗಳಿಗೆ ಕಾಮನ್‌ಸೆನ್ಸ್‌ ಅನ್ನೋದು ಇರಾಂಗ್ಹಿಲ್ಲ ಅಂತ. ಆತನ ಮುಖ ನೋಡಿದೆ, ಗೌರವದಿಂದ ನನ್ನ ಕಡೆ ನೋಡ್ತಾ ಇದ್ದ. ನಂಗೇನೆ ಸ್ವಲ್ಪ ಕಿಚಾಯಿಸೋಣ ಅನ್ನಿಸ್ತು. ‘ಪೋಲಿಮಾತಾ?’ ಅಂದೆ, ಹಲ್ಲು ಕಿರಿಯದೆ, ಸಾಧ್ಯವಾದಷ್ಟು ಮುಗುಳ್ನಗುವನ್ನು ಮರೆಮಾಚುತ್ತಾ.

ಮರಿ, ಸಭ್ಯ ಭಾಷೆಯ ವಾರಸುದಾರ. ನಾನು ಹೇಳಿದ್ದು ಅವನಿಗೆ ಅರ್ಥ ಆಗಲಿಲ್ಲ. ಅವನೇ ಒಮ್ಮೆ ಹೇಳಿದಂತೆ, ಆತ ಎಂದೂ ಸ್ನೇಹಿತರ ಜೊತೆ ಒಂದು ರಸ್ತೆಯನ್ನು ಸುತ್ತಿದವನೂ ಅಲ್ಲ, ಸಿನಿಮಾಗೆ ಹೋದವನೂ ಅಲ್ಲ, ಪುಸ್ತಕ ಬಿಟ್ಟು ತಲೆಗೆ ಬೇರೆ ಏನನ್ನೂ ತುರುಕಿಕೊಂಡವನಲ್ಲ. ಗಾಂಭೀರ್ಯದಲ್ಲಿ, ಘನತೆಯಲ್ಲಿ ಮಾರ್ಕ್ಸ್‌ ತುಂಬಿಕೊಂಡಿದ್ದ ಚಿನ್ನತಂಬಿ. ನಾನು ಪೋಲಿಮಾತ್‌ ಅಂದದ್ದು ಅವನ ತಲೆಗೆ ಹೋಗಲೇ ಇಲ್ಲ.

‘ಮ್ಯಾಮ್‌, ನೋ ನೋ... ಅದನ್ನು ಪೋಲಿಮಾತ್‌ ಅಂತ ಉಚ್ಚರಿಸಬಾರ್‍ದು. ಪಾಲಿಮಾತ್‌ ಅಂತಾನೇ ಹೇಳಬೇಕು’ ಅಂದ. ಉಚ್ಚಾಣೆಯಲ್ಲೂ ಪ್ರಾವೀಣ್ಯತೆ ಸಂಪಾದಿಸಿದ್ದ ಆ ಉಚ್ಚಾರಕ. ತರಲೆ ಮಾತುಗಳಿಗೆ ಅವನಲ್ಲಿ ಜಾಗವಿರಲಿಲ್ಲ.

‘ಆ ವಾಕ್ಯ ಓದ್ತೀನಿ ಕೊಡು, ತಿಳೀಬಹುದು’ ಅಂತ ಅವನಲ್ಲಿದ್ದ ಹಾಳೇನ ಎತ್ತಿಕೊಂಡು ನೋಡಿದೆ. ಅದು ಒಬ್ಬ ವಿಜ್ಞಾನಿಯ ಸಂಕ್ಷಿಪ್ತ ಜೀವನ ಚರಿತ್ರೆ. ಅದರಲ್ಲಿ ಒಂದು ವಾಕ್ಯ – ‘ಹಿ ವಾಸ್‌ ಎ ಪಾಲಿಮಾತ್‌’ ಅಂತ ಇತ್ತು.

ನನ್ನ ಇಂಗ್ಲಿಷ್‌ ಜ್ಞಾನ ಅಷ್ಟಕ್ಕಷ್ಟೇ. ಆ ಪದಕ್ಕೆ ಕನ್ನಡದ ಅರ್ಥವನ್ನೇ ಬಳಿದರಾಯ್ತು ಅಂತ, ‘ಅದನ್ನ ಪಾಲಿಮಾತ್‌ ಅಂತಾನೇ ಯಾಕೆ ಓದ್ಕೋತ್ತೀಯ. ಸ್ವಲ್ಪ ಬದಲಾಯಿಸ್ಕೊಂಡು ಹಿ ವಾಸ್‌ ಎ ಪೋಲಿಮಾತ್‌ ಅಂತಾನು ಓದ್ಕೋ. ಕನ್ನಡದಲ್ಲೇ ಅರ್ಥಮಾಡ್ಕೋ ಆ ವಿಜ್ಞಾನಿ ಪೋಲಿಮಾತು’ ಅಂದೆ. ತಮಾಷೆಯಿಂದ ಮರಿ ತುಸು ಮುಗುಳ್ನಕ್ಕರೂ, ‘ಮ್ಯಾಮ್‌ ನಿಮ್ಮ ಮೊಬೈಲ್‌ನಲ್ಲಿ ಇಂಟರ್‌ನೆಟ್‌ ಇದೆಯಾ?’ ಅಂದ.

ಆ ದಿನ ಅವನ ಮೊಬೈಲ್‌ಗೆ ಏನೋ ಟೆಕ್ನಿಕಲ್‌ ತೊಂದರೆಯಾಗಿತ್ತು. ಅದಕ್ಕೆ ಅಂತರ್ಜಾಲ ಜಾಲಾಡಲಾಗಿರಲಿಲ್ಲ ಅವನಿಗೆ. ನಾನು ಹೋಗಿದ್ದು ನೋಡಿ ಅಂತರ್ಜಾಲಕ್ಕೊಂದು ಪರ್‍ಯಾಯ ಬಂದಿದೆ ಅಂತ ನನ್ನ ಮಿದುಳಿನ ಕೀಬೋರ್ಡ್‌ ಮೇಲೆ ಕೈಯಾಡಿಸಿ ಅರ್ಥ ಹುಡುಕಲು ಯತ್ನಿಸಿದ್ದ. ಆದರೆ ಅದು ಬಾಯಿ–ಕೀಬೋರ್ಡ್‌ಗೆ ವರ್ಗಾವಣೆ ಆಗಿ ಏನೇನೋ ಅರ್ಥ ಬಿತ್ತರಿಸಲು ತಯಾರಾಗಿತ್ತು.

ಅಷ್ಟು ಸಲೀಸಾಗಿ ಬಿಟ್ಟುಕೊಡಲಾಗಲಿಲ್ಲ. ಬಾಯಿಕೋಶ ಅದು. ಮತ್ತೆ ತೆರೆಯಿತು. ‘ಪಾಲಿಮಾತ್‌ ಅಂತ ಯಾವುದಾದ್ರೂ ಧರ್ಮ ಇರಬಹುದಾ?’ ಅಂದೆ. ಯಾಕೆಂದರೆ ಕೆಲವು ಮಹಾನ್‌ ವ್ಯಕ್ತಿಗಳ ಚಿತ್ರಣದಲ್ಲಿ ‘ಹಿ ವಾಸ್‌ ಎ ಜ್ಯೂ, ಹಿ ವಾಸ್‌ ಎ ಪಾರ್ಸಿ’ ಅಂತ ಇರುವುದನ್ನು ಓದಿದ್ದೆ. ‘ಇಲ್ಲ ಮ್ಯಾಮ್‌, ಬೇರೆ ಏನೋ ಅರ್ಥ ಇದೆ’ ಅಂದ.

‘ಹಿ ವಾಸ್‌ ಎ ಲೀಡರ್‌ ಅನ್ನೋ ತರಹ ಏನಾದ್ರೂ ಇರಬಹುದಾ?’ ಅಂದೆ. ಈಗ ನನ್ನಲ್ಲೂ ಹುಡುಗಾಟಿಕೆ ಹೋಗಿ, ಆ ಪದದ ಅರ್ಥ ತಿಳೀಬೇಕು ಅನ್ನುವ ಕುತೂಹಲ ಇಣುಕಲು ಶುರುವಾಗಿತ್ತು.

‘ಆ ರೀತಿಯ ಅರ್ಥ ಕೊಡುವಂತಹದ್ದೇ ಏನೋ ಇರಬಹುದು. ನಾನು ಬಹಳ ಪುಸ್ತಕಗಳನ್ನು ಓದಿದ್ದೇನೆ. ಇದೇ ಪ್ರಥಮಬಾರಿಗೆ ಈ ಪದ ಓದಿರೋದು, ನಿಮ್ಮ ಮೊಬೈಲ್‌, ರೂಮಲ್ಲಿ ಇದೆಯಾ?’ ಅಂದ, ನನ್ನ ಎರಡೂ ಕೈ ಬೆರಳುಗಳು ಆರಾಮವಾಗಿರೋದನ್ನ ಗಮನಿಸುತ್ತಾ. ಅವನಿಗೆ ವಿನಾಕಾರಣ ಸಮಯ ಹಾಳುಮಾಡುವುದು ಬೇಕಿರಲಿಲ್ಲ, ತಕ್ಷಣವೇ ಅವನಿಗೆ ಪದದ ಅರ್ಥ ಬೇಕಿತ್ತು. ಅದನ್ನು ತಿಳಿಯುವ ಎಲ್ಲಾ ಪ್ರಯತ್ನವನ್ನು ಮಾಡುತ್ತಿದ್ದ.

ನನ್ನ ಮೊಬೈಲ್‌ ಫೋನ್‌ ವಿಷಯ ಅವನಿಗೆ ಗೊತ್ತಿಲ್ಲ. ಅದು ದಶಕದ ಹಿಂದಿನದು. ಅದರಲ್ಲಿದದ್ದು ಪ್ರಾಥಮಿಕ ಅಗತ್ಯಗಳು ಮಾತ್ರ. ಅದರೊಳಗೆ ಯಾವ ಜಾಲವೂ ಬಲೆಯೂ ಇರಲಿಲ್ಲ. ವಿಶೇಷ ಸಂಪರ್ಕ ಸಾಧನ, ಸಾರಿಗೆ ವ್ಯವಸ್ಥೆಯಿಲ್ಲದ ಗ್ರಾಮೀಣ ಫೋನ್‌ ನನ್ನದು. ಅದು ಸವಲತ್ತು ಪಡೆಯದ ಹಿಂದುಳಿದ ವರ್ಗಕ್ಕೆ ಸೇರಿತ್ತು. ಅವನಿಗೆ ಅನುಕೂಲವಾಗುವಂತಿರಲಿಲ್ಲ. ಅದನ್ನೇ ತಿಳಿಸಿದೆ.

‘ನನ್ನ ಮೊಬೈಲ್‌ ವಿಶ್ವಕೋಶವಲ್ಲ, ಕಂಪ್ಯೂಟರ್‌ನಲ್ಲಿ ನೋಡೋಣ ಬಾ ’ಎಂದು ಆಫೀಸ್‌ ರೂಮ್‌ನತ್ತ ಕರೆದೊಯ್ದೆ. ಅತೀ ಸುಲಭದ ಬೇಟೆಯ ದಾರಿಯತ್ತ. ಕಂಪ್ಯೂಟರ್‌ ಕೀಬೋರ್ಡ್‌ ಮೇಲೆ ಕೈಯಾಡಿಸಿ ಆ ಪದದ ಅಕ್ಷರ ಒತ್ತುತ್ತಿದ್ದಂತೆ, ಪರದೆ ಅನಾವರಣಗೊಂಡಿತು, ‘ಬಹುಮುಖ ಪ್ರತಿಭೆ’ ಅಂತ ಹಿಡಿದು ನಮ್ಮ ಮುಂದೆ ನಿಲ್ಲಿಸಿತು.

‘ಓಹ್‌, ಪಾಲಿಮಾತ್‌ ಅಂದ್ರೆ ಬಹುಮುಖ ಪ್ರತಿಭೆ’ ಎಂದು ಸಂತಸ ವ್ಯಕ್ತಪಡಿಸಿದ. ಈ ಪದಬೇಟೆ ಸುಖಕರವಾಗಿ ಪರಿಣಮಿಸಿತ್ತು. ಆತನ ಮೊಬೈಲ್‌ ಆ ದಿನ ಹಾಳಾಗಿದ್ದಕ್ಕೆ ನನಗೂ ಪದಬೇಟೆ ಮಾಡಲು ಅವಕಾಶ ಸಿಕ್ಕಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.