ADVERTISEMENT

ಪುರುಷರ ಆಯೋಗ ಬೇಕೇ?: ಕ್ರಿಸ್ಪ್‌ ಸಂಘಟನೆಯ ಕುಮಾರ್ ಜಹಗೀರದಾರ್ ಬರಹ

‘ಪುರುಷ’ಸೂಕ್ತ ಪಠಣ

ಕುಮಾರ್ ಜಹಗೀರದಾರ್
Published 29 ಸೆಪ್ಟೆಂಬರ್ 2018, 19:30 IST
Last Updated 29 ಸೆಪ್ಟೆಂಬರ್ 2018, 19:30 IST
purush
purush   

ದೇಶದಲ್ಲಿ ಮಹಿಳಾ ಆಯೋಗ ಇರುವಂತೆಯೇ, ಪುರುಷರ ಆಯೋಗವೊಂದು ಬೇಕು ಎಂದು ಬಿಜೆಪಿಯ ಸಂಸದರೊಬ್ಬರು ಈಚೆಗೆ ಹೇಳಿದ್ದು ಸುದ್ದಿಯಾಯಿತು. ಕೆಲವರು ಈ ಸುದ್ದಿ ಕೇಳಿ ನಕ್ಕು, ಸುಮ್ಮನಾದರು. ಇನ್ನೊಂದಿಷ್ಟು ಇದರ ಬಗ್ಗೆ ಅಲ್ಲಿ–ಇಲ್ಲಿ ಮಾತನಾಡಿಕೊಂಡರು. ಆದರೆ, ಪುರುಷರ ಆಯೋಗವೊಂದು ಇದ್ದರೆ ಸಾಕೇ, ಅದಕ್ಕೂ ಮೀರಿದ್ದು ಬೇಕೇ? ಈ ಬಗ್ಗೆ ‘ಕ್ರಿಸ್ಪ್‌’ ಸಂಘಟನೆಯ ಕುಮಾರ್ ಜಹಗೀರದಾರ್ ಬರೆದಿರುವ ಬರಹ ಇಲ್ಲಿದೆ.

ಕುಟುಂಬ ವ್ಯವಸ್ಥೆ ಹಾಗೂ ಅದರ ಜೊತೆ ಬೆಸೆದುಕೊಂಡಿರುವ ಸಂಪ್ರದಾಯಗಳು ಭಾರತೀಯ ಸಮಾಜದ ಮಟ್ಟಿಗೆ ಬೆನ್ನೆಲುಬು ಇದ್ದಂತೆ. ಕುಟುಂಬ ಎಂದರೆ ಪತಿ, ಪತ್ನಿ, ಮಕ್ಕಳು, ಅತ್ತೆ, ಮಾವ, ಅಕ್ಕ–ತಂಗಿಯರು, ಅಣ್ಣ–ತಮ್ಮಂದಿರು, ಮೊಮ್ಮಕ್ಕಳು ಎಲ್ಲರೂ ಸೇರುತ್ತಾರೆ. ಕುಟುಂಬ ವ್ಯವಸ್ಥೆಯಲ್ಲಿ ಇವರೆಲ್ಲ ಒಬ್ಬರಿಗೊಬ್ಬರು ಗೌರವ ತೋರುತ್ತ ಬಾಳಬೇಕು ಎಂಬುದು ಒಪ್ಪಿತ ಸಂಪ್ರದಾಯ.

ಕಾನೂನಿನ ಹಸ್ತಕ್ಷೇಪ ಇಲ್ಲದಿದ್ದ ಹೊತ್ತಿನಲ್ಲಿಯೂ ನಮ್ಮಲ್ಲಿ ಕೌಟುಂಬಿಕ ಮೌಲ್ಯಗಳು ಭದ್ರವಾಗಿ ಇದ್ದವು. ಆದರೆ, ದುರದೃಷ್ಟದ ಸಂಗತಿಯೆಂದರೆ ನಮ್ಮಲ್ಲಿಗೆ ಆಮದಾದ ಹೊಸ ಮಾದರಿಯ ಕೌಟುಂಬಿಕ ಕಾನೂನುಗಳು ಅದಾಗಲೇ ವೈಫಲ್ಯ ಕಂಡ ಪಾಶ್ಚಿಮಾತ್ಯ ಸಂಸ್ಕೃತಿಯನ್ನು ನಮ್ಮಲ್ಲಿಗೆ ತಂದವು.

ADVERTISEMENT

ನಮ್ಮಲ್ಲಿ ಕೆಲವು ಸಂದರ್ಭಗಳಲ್ಲಿ ಮಹಿಳೆಯರನ್ನು ಕೆಟ್ಟದ್ದಾಗಿ ನಡೆಸಿಕೊಳ್ಳಲಾಯಿತು ಎಂಬುದು ನಿಜ. ಇದು ಮಹಿಳೆಯರ ಪರವಾದ ಹೋರಾಟಗಳಿಗೆ ಕಾರಣವಾಯಿತು. ಇದರ ಪರಿಣಾಮವಾಗಿ, ಕಾನೂನುಗಳ ಬದಲಾವಣೆ ನಿರಂತರವಾಗಿ ನಡೆಯಿತು. ಲಿಂಗ ತಾರತಮ್ಯದಿಂದ ಕೂಡಿದ ಕಾನೂನುಗಳನ್ನು ಮಹಿಳೆಯರು ದುರ್ಬಳಕೆ ಮಾಡಿಕೊಂಡು ತಮ್ಮ ಪತಿ ಹಾಗೂ ಆತನ ಕುಟುಂಬದ ಸದಸ್ಯರ ಮೇಲೆ ಒಂದಾದ ನಂತರ ಒಂದರಂತೆ ಪ್ರಕರಣ ದಾಖಲಿಸುವುದು ಕೂಡ ನಡೆಯಿತು.

ಪತಿಯ ಮನೆಯವರು ವರದಕ್ಷಿಣೆ ಕೇಳುತ್ತಿದ್ದಾರೆ, ತನ್ನನ್ನು ಕೆಟ್ಟದ್ದಾಗಿ ನಡೆಸಿಕೊಳ್ಳುತ್ತಿದ್ದಾರೆ, ತನಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಪತ್ನಿ ತನ್ನ ಪ‍ತಿ ಹಾಗೂ ಆತನ ಮನೆಯವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 498(ಎ) ಅಡಿ ದೂರು ನೀಡಬಹುದು. ಹಾಗೆ ದೂರು ನೀಡಿದಾಗ ಪೊಲೀಸರು ಅದನ್ನು ದಾಖಲಿಸಲೇಬೇಕು ಎನ್ನುತ್ತದೆ ಕಾನೂನು. ಆದರೆ, ಈ ಕಾನೂನು ವ್ಯಾಪಕವಾಗಿ ದುರ್ಬಳಕೆ ಆಯಿತು. ಹಲವರು ಆತ್ಮಹತ್ಯೆ ಮಾಡಿಕೊಂಡ ವರದಿಗಳೂ ಬಂದವು. ಸುಳ್ಳು ದೂರುಗಳ ಪ್ರಮಾಣ ಕೂಡ ಹೆಚ್ಚಾಯಿತು. ಇಲ್ಲಿ ಪತ್ನಿ ದೂರುದಾರೆ, ಪ್ರಭುತ್ವವು ಪತಿಯ ವಿರುದ್ಧ ಕಾನೂನು ಸಮರ ನಡೆಸುತ್ತದೆ. ಆರೋಪಿ ಪತಿ ದೋಷಿ ಎಂಬ ಹಣೆಪಟ್ಟಿ ಬಿಡಿಸಿಕೊಳ್ಳಲು ವರ್ಷಗಳೇ ಬೇಕಾಗುತ್ತವೆ.

ಇಂತಹ ಪರಿಸ್ಥಿತಿಯ ನಡುವಿನಲ್ಲಿ ಸಿಕ್ಕಿಬಿದ್ದ ಆ ಪುರುಷ ತನ್ನ ಕೆಲಸ ಕಳೆದುಕೊಳ್ಳಬಹುದು, ಆತನ ಅಕ್ಕ– ತಂಗಿಯರಿಗೆ ಮದುವೆ ಆಗದೆ ಇರಬಹುದು, ಆತನ ವೃದ್ಧ ತಂದೆ– ತಾಯಿ ಕೊರಗಿನಲ್ಲೇ ಮರಣವಪ್ಪಬಹುದು. ಆತನ ಮಕ್ಕಳು ಅಪ್ಪನ ಪ್ರೀತಿಯಿಂದ ವಂಚಿತರಾಗಬಹುದು. ಈ ಕಾನೂನಿನ ದುರ್ಬಳಕೆಯ ಬಗ್ಗೆ ಸುಪ್ರೀಂ ಕೋರ್ಟ್‌ ತೀರಾ ಈಚೆಗೆ ಗಮನ ಹರಿಸುವವರೆಗೂ ಇದೊಂದು ಕರಾಳ ಶಾಸನವಾಗಿಯೇ ಇತ್ತು.

ಮಹಿಳೆಯರ ಮೇಲೆ ನಡೆಯುವ ಕೌಟುಂಬಿಕ ದೌರ್ಜನ್ಯವನ್ನು ತಡೆಯುವ ಉದ್ದೇಶದಿಂದ ಜಾರಿಗೆ ಬಂದ ‘ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ’ಯ ಬಗ್ಗೆಯೂ ಇಲ್ಲಿ ಒಂದೆರಡು ಮಾತುಗಳನ್ನು ಆಡಬೇಕು. ಇದರ ಅಡಿ ಕೂಡ ಮಹಿಳೆ ತನ್ನ ಪತಿಯ ವಿರುದ್ಧ ದೂರು ಸಲ್ಲಿಸಬಹುದು. ಆತನ ಕುಟುಂಬದ ಸದಸ್ಯರ ವಿರುದ್ಧವೂ ದೂರು ನೀಡಬಹುದು. ದೂರು ನೀಡುತ್ತಿರುವುದಕ್ಕೆ ಕಾರಣ ಏನು ಎಂಬುದರ ಕೆಲವು ಮಾದರಿಗಳು ಕೂಡ ದೂರಿನ ಪ್ರತಿಯಲ್ಲೇ ಲಭ್ಯವಿರುತ್ತವೆ. ದೂರು ನೀಡಿದ ತಕ್ಷಣ ಆ ವಿಚಾರ ಮ್ಯಾಜಿಸ್ಟ್ರೇಟರ ಮುಂದೆ ಹೋಗುತ್ತದೆ.

ಇದಾದ ನಂತರ ಪತಿ ಹಾಗೂ ಆತನ ಮನೆಯವರು ಅಲ್ಲಿ–ಇಲ್ಲಿ ಓಡಬೇಕಾಗುತ್ತದೆ. ಪತ್ನಿಗೆ ಮಧ್ಯಂತರ ಪರಿಹಾರ ಎಂದು ಒಂದಷ್ಟು ಹಣ ಕೊಡಬೇಕಾಗುತ್ತದೆ. ತಾವು ನಿರಪರಾಧಿಗಳು ಎಂಬುದನ್ನು ಸಾಬೀತು ಮಾಡಬೇಕಾಗುತ್ತದೆ. ಪುರುಷರು ಮಾತ್ರ ತಪ್ಪು ಮಾಡುತ್ತಾರೆ. ಮಹಿಳೆಯರು ಮಾತ್ರ ಸಂಕಷ್ಟಕ್ಕೆ ಗುರಿಯಾಗುತ್ತಾರೆ ಎಂದು ಈ ಕಾನೂನು ಗ್ರಹಿಸಿರುವುದು ದೊಡ್ಡ ಸಮಸ್ಯೆ– ಹಾಗೂ ದೊಡ್ಡ ಆಶ್ಚರ್ಯ! ಪುರುಷರು ಮಾತ್ರ ತಪ್ಪು ಮಾಡುತ್ತಾರೆ ಎಂದು ಗ್ರಹಿಸುವುದು ನಾಗರಿಕ ಸಮಾಜದ ತಪ್ಪು ಗ್ರಹಿಕೆ.

ಒಳ್ಳೆಯವರು ಗಂಡಸರಲ್ಲೂ ಇರುತ್ತಾರೆ. ಹೆಂಗಸರಲ್ಲೂ ಇರುತ್ತಾರೆ. ಕೆಟ್ಟವರು ಪುರುಷರಲ್ಲೂ ಇರುತ್ತಾರೆ. ಮಹಿಳೆಯರಲ್ಲೂ ಇರುತ್ತಾರೆ. ಹಾಗಾಗಿ, ನಿರ್ದಿಷ್ಟ ಅಪರಾಧವನ್ನು ಪುರುಷರು ಮಾತ್ರ ಮಾಡುತ್ತಾರೆ ಎಂದು ಹೇಳುವುದು ಎಷ್ಟು ಸರಿ?

ಕೌಟುಂಬಿಕ ಚೌಕಟ್ಟಿನಲ್ಲಿ ನಿಜವಾಗಿಯೂ ಸಂಕಷ್ಟಗಳಿಗೆ ಗುರಿಯಾಗುವ ಹೆಣ್ಣುಮಕ್ಕಳ ರಕ್ಷಣೆಗಾಗಿ ಈ ಕಾನೂನು ರೂಪಿಸಲಾಯಿತು. ಆದರೆ, ಇದು ಹೆಚ್ಚಾಗಿ ದುರ್ಬಳಕೆ ಆಗುತ್ತಿರುವುದು ಕಾಸ್ಮೊಪಾಲಿಟನ್‌ ಸಂಸ್ಕೃತಿ ಇರುವಲ್ಲಿ, ಸಾಮಾಜಿಕವಾಗಿ ಸ್ಥಿತಿವಂತ ಆಗಿರುವ ಕುಟುಂಬಗಳಲ್ಲಿ.

ರಾಷ್ಟ್ರೀಯ ಮಹಿಳಾ ಆಯೋಗದ ಬಳಿ ಬರುವ ಪ್ರಕರಣಗಳ ಪೈಕಿ ಶೇಕಡ 30ರಷ್ಟು ಅತ್ಯಾಚಾರ ಪ್ರಕರಣಗಳು ‘ನಕಲಿ’ ಎಂದು ಆಯೋಗದ ಅಧ್ಯಕ್ಷರು ಹೇಳಿದ್ದಾಗಿ ಈಚೆಗೆ ವರದಿಯಾಗಿತ್ತು. ಪುರುಷರಲ್ಲಿ ಅದೆಷ್ಟು ಜನ ಮುಗ್ಧರು ‘ಅತ್ಯಾಚಾರ’ದ ಆರೋಪ ಎದುರಿಸಿರಬಹುದು ಎಂಬುದನ್ನು ಇದು ತೋರಿಸುತ್ತದೆ. ಪುರುಷರ ಮೇಲೆ ಒಮ್ಮೆ ಇಂತಹ ಆರೋಪ ಕೇಳಿಬಂದರೆ ಆತನ ಹಾಗೂ ಆತನ ಕುಟುಂಬದ ಮರ್ಯಾದೆ ಮಣ್ಣುಪಾಲಾದಂತೆಯೇ. ಮಾಧ್ಯಮಗಳು ಕೂಡ ಇಂತಹ ಪ್ರಕರಣಗಳನ್ನು ಎಫ್‌ಐಆರ್‌ ದಾಖಲಾಗುವ ಹಂತದಿಂದಲೇ ಗಂಭೀರವಾಗಿ ಪರಿಗಣಿಸುತ್ತವೆ, ಆರೋಪಿ ಪುರುಷರ ಭಾವಚಿತ್ರಗಳನ್ನು ಕೂಡ ಪ್ರಕಟಿಸುತ್ತವೆ. ‘ಅತ್ಯಾಚಾರ’ದ ವಿಚಾರದಲ್ಲಿ ತಪ್ಪು ಮಾಡದವರು ಕೆಲಸ ಕಳೆದುಕೊಂಡಿದ್ದಾರೆ. ಆರೋಪಿ ಸ್ಥಾನದಲ್ಲಿ ನಿಂತ ಪರಿಣಾಮವಾಗಿ ಖಿನ್ನತೆಗೆ ಒಳಗಾಗಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ಸಂದರ್ಭಗಳೂ ಇವೆ... ಇವೆಲ್ಲವನ್ನೂ ನಾನು ನೋಡಿದ್ದೇನೆ.

ಪಾಲಕರು ವಿಚ್ಛೇದನ ಪಡೆದ ನಂತರ, ಮಕ್ಕಳನ್ನು ನೋಡಿಕೊಳ್ಳುವ ಹಕ್ಕುಗಳು ಯಾರಿಗೆ ಎಂಬ ಪ್ರಶ್ನೆ ಬಂದಾಗಲೆಲ್ಲ, ಗೆಲುವು ಮಹಿಳೆಯರದ್ದೇ ಆಗಿರುತ್ತದೆ. ಅಂದರೆ, ವಿಚ್ಛೇದನದ ನಂತರ ಮಕ್ಕಳನ್ನು ತಾಯಿಯ ಪಾಲಿಗೆ ಬಿಟ್ಟುಕೊಡುವುದು ಅಘೋಷಿತ ಕಾನೂನು ಆಗಿದೆ. ತಂದೆಯಾದವ ತನ್ನ ಮಗುವನ್ನು ಆಗಾಗ ಹೋಗಿ ನೋಡಿಕೊಂಡು ಬರುವ ಅವಕಾಶವನ್ನು ಮಾತ್ರ ಉಳಿಸಿಕೊಳ್ಳುತ್ತಾನೆ. ತಾಯಿಯಿಂದ ಮಗುವನ್ನು ಬೇರ್ಪಡಿಸಲು ಯಾರಿಂದಲೂ ಆಗದು ಎಂದು ಹೇಳಲಾಗುತ್ತದೆಯಾದರೂ, ತಂದೆ ಹಾಗೂ ಮಗುವಿನ ನಡುವೆ ಇರುವ ಬಾಂಧವ್ಯದ ಕುರಿತು ಏನೂ ಹೇಳುವುದಿಲ್ಲ. ಹೀಗೆ ತಂದೆಯಿಂದ ದೂರವಾಗಿ ಬೆಳೆಯುವ ಮಗು ಮುಂದೊಂದು ದಿನ ತನ್ನ ತಂದೆಯ ವಿರುದ್ಧವೇ ದ್ವೇಷದ ಮನಃಸ್ಥಿತಿ ಬೆಳೆಸಿಕೊಳ್ಳುವ ಸಾಧ್ಯತೆಯೂ ಇದೆ.

ತಮ್ಮದೇ ಮಗುವಿಗಾಗಿ ನ್ಯಾಯಾಲಯಗಳಲ್ಲಿ ಹೋರಾಟ ನಡೆಸುತ್ತಿರುವ ಸಾವಿರಾರು ಅಪ್ಪಂದಿರನ್ನು ನಾನು ಕಂಡಿದ್ದೇನೆ. ತಮ್ಮದೇ ಮಗುವಿನಿಂದ ದೂರ ಇರುವ ಪಾಲಕರ ನೋವು ನನಗೆ ಗೊತ್ತು. ಹಾಗಾಗಿ, ಇಂಥ ನೋವು ಉಣ್ಣುತ್ತಿರುವ ಒಂದಿಷ್ಟು ತಂದೆಯರ ಮಾಹಿತಿ ಕಲೆಹಾಕಿ ನಾನು ‘ಕ್ರಿಸ್ಪ್‌’ ಸಂಘಟನೆ ಆರಂಭಿಸಿದೆ. ವಿಚ್ಛೇದನ ಪಡೆದ ದಂಪತಿಯ ಮಕ್ಕಳು ಅಪ್ಪ ಹಾಗೂ ಅಮ್ಮನ ಪ್ರೀತಿಯನ್ನು ಅನುಭವಿಸುವಂತೆ ಆಗಬೇಕು ಎಂಬುದೇ ನಮ್ಮ ಉದ್ದೇಶ.

ಅಂದಹಾಗೆ, ವಿಚ್ಛೇದನ ಆಗುವುದು ಪತಿ– ಪತ್ನಿಯ ನಡುವೆ. ಪಾಲಕರು ಮತ್ತು ಮಕ್ಕಳ ನಡುವೆ ಅಲ್ಲ! ಮಕ್ಕಳ ಪ್ರೀತಿಯನ್ನು ಕಳೆದುಕೊಂಡ ಸಾವಿರಾರು ಜನರಿಗೆ ನಾನು ವೈಯಕ್ತಿಕವಾಗಿ ಕೌನ್ಸೆಲಿಂಗ್ ಕೂಡ ನಡೆಸಿದ್ದೇನೆ. ವಿಚ್ಛೇದಿತರ ಮಕ್ಕಳನ್ನು ಅಪ್ಪ– ಅಮ್ಮ ಇಬ್ಬರೂ ನೋಡಿಕೊಳ್ಳಬೇಕು ಎಂಬ ನಮ್ಮ ಆಗ್ರಹಕ್ಕೆ ಮಹಿಳೆಯರಿಂದಲೂ ಬೆಂಬಲ ವ್ಯಕ್ತವಾಗಿದೆ. ನಾವು ಮಹಿಳೆಯರ ವಿರೋಧಿಗಳಲ್ಲ, ಪುರುಷರ ಪರ ಇರುವವರೂ ಅಲ್ಲ. ಆದರೆ, ನಮ್ಮ ಕುಟುಂಬ ವ್ಯವಸ್ಥೆ ಚೆನ್ನಾಗಿರಬೇಕು, ನಮ್ಮ ಮಕ್ಕಳ ಭವಿಷ್ಯ
ಚೆನ್ನಾಗಿರಬೇಕು.

ಕುಟುಂಬ ವ್ಯವಸ್ಥೆಗೆ ಪೂರಕವಾಗಿ...

* ಕಾನೂನುಗಳು ಲಿಂಗ ನಿರಪೇಕ್ಷ ಆಗಬೇಕು.

* ಸ್ವೀಡನ್‌ ಮತ್ತು ಡೆನ್ಮಾರ್ಕ್‌ನಲ್ಲಿ ಆಗಿರುವಂತೆಯೇ, ವಿಚ್ಛೇದಿತರ ಮಕ್ಕಳನ್ನು ಅಪ್ಪ– ಅಮ್ಮ ಇಬ್ಬರೂ ನೋಡಿಕೊಳ್ಳುವಂತೆ ಆಗಬೇಕು.

* ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯ ಅಡಿ ದೂರು ದಾಖಲಿಸುವ ಅವಕಾಶ ಮಹಿಳೆಯರಿಗೆ ಇರುವಂತೆಯೇ ಪುರುಷರಿಗೂ ಇರಬೇಕು.

* ವಯಸ್ಸಾದವರನ್ನು ನಿಂದಿಸುವುದನ್ನು ಗಂಭೀರವಾಗಿ ಪರಿಗಣಿಸಬೇಕು. ಅತ್ತೆಯರ ಮೇಲೆ ದೌರ್ಜನ್ಯ ನಡೆಸುವ ಸೊಸೆಯಂದಿರ ಮೇಲೆ ಕೂಡ ಕಾನೂನು ಕ್ರಮ ಜರುಗಿಸಲು ಅವಕಾಶ ಕಲ್ಪಿಸಬೇಕು.

* ಅತ್ಯಾಚಾರಕ್ಕೆ ಸಂಬಂಧಿಸಿದ ಕಾನೂನುಗಳು ಲಿಂಗ ನಿರಪೇಕ್ಷ ಆಗಬೇಕು. ಯುವಕರು ಹಾಗೂ ಪುರುಷರು ಕೂಡ ಮಹಿಳೆಯರಿಂದ ಕಿರುಕುಳಕ್ಕೆ ಒಳಗಾಗುತ್ತಿದ್ದಾರೆ. ಆದರೆ ಅವರಿಗೆ ತಮ್ಮ ಸಂಕಟ ಹೇಳಿಕೊಳ್ಳಲು ದಾರಿ ಇಲ್ಲ.

* ಮಹಿಳೆಯರಿಗೆ ರಾಷ್ಟ್ರಮಟ್ಟದಲ್ಲಿ ಆಯೋಗ ಇರುವಂತೆಯೇ, ಪುರುಷರಿಗೆ ಕೂಡ ರಾಷ್ಟ್ರಮಟ್ಟದಲ್ಲಿ ಆಯೋಗ ಇರಬೇಕು. ಈ ಆಯೋಗವು ಪುರುಷರ ಸಮಸ್ಯೆಗಳ ಬಗ್ಗೆ ಗಮನ ನೀಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.