ADVERTISEMENT

ಬಜೆಟ್ ಅರಿವು

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2012, 19:30 IST
Last Updated 21 ಏಪ್ರಿಲ್ 2012, 19:30 IST

ಕೇಂದ್ರ ಬಜೆಟ್ ಎಂದರೇನು?

ಸರ್ಕಾರವು ಪ್ರತಿವರ್ಷ ಆದಾಯ (ತೆರಿಗೆ ಇತರ ಮೂಲಗಳಿಂದ) ಹಾಗೂ ಖರ್ಚಿನ ಬಾಬತ್ತನ್ನು ಯೋಜಿತ ರೀತಿಯಲ್ಲಿ ಅಂದಾಜು ಮಾಡುತ್ತದೆ. ಮನೆಯಲ್ಲಿ ತಂದೆ-ತಾಯಿ ತಮ್ಮ ಆದಾಯಕ್ಕನುಗುಣವಾಗಿ ಸಂಸಾರ ತೂಗಿಸಿಕೊಂಡು ಹೋಗಲು ಮಾಡುವ ಯೋಜನೆಯಂತೆಯೇ ಇದು ದೇಶ ತೂಗಿಸಿಕೊಂಡು ಹೋಗಲು ಮಾಡುವ ಯೋಚನೆ. ಇದೇ ಕೇಂದ್ರ ಬಜೆಟ್.

ಬಜೆಟ್ ಮಂಡಿತವಾಗುವುದು ಯಾವಾಗ?

ADVERTISEMENT

ಸಾಮಾನ್ಯವಾಗಿ ಪ್ರತಿವರ್ಷ ಫೆಬ್ರುವರಿ ಕೊನೆಯ ವಾರದಲ್ಲಿ ಬಜೆಟ್ ಲೋಕಸಭೆಯಲ್ಲಿ ಮಂಡಿತವಾಗುತ್ತದೆ. ಹಣಕಾಸು ಸಚಿವರು ಬಜೆಟ್ಟನ್ನು ಮಂಡಿಸುತ್ತಾರೆ.

ಬಜೆಟ್‌ಗೆ ಅನುಮೋದನೆ ಸಿಗುವುದು ಹೇಗೆ?

ಬಜೆಟ್ಟನ್ನು ಲೋಕಸಭೆಯಲ್ಲಿ ಹಣಕಾಸು ಸಚಿವರು ಮಂಡಿಸಿದ ಮೇಲೆ ಅಲ್ಲಿ ಅದರ ಮೇಲೆ ಚರ್ಚೆ ನಡೆಯುತ್ತದೆ. ಪ್ರತಿ ಸಚಿವಾಲಯವು ತನ್ನ ಅಗತ್ಯಕ್ಕನುಗುಣವಾಗಿ ಹಣ ಮಂಜೂರು ಮಾಡುವಂತೆ ಪ್ರಸ್ತಾವನೆಯನ್ನಿಡುತ್ತದೆ. ಪ್ರತಿ ಕ್ಷೇತ್ರಕ್ಕೆ ನಿಗದಿಯಾಗುವ ಹಣಕ್ಕೆ ಸಮ್ಮತಿ ಪಡೆಯಲಾಗುತ್ತದೆ. ಎಲ್ಲಕ್ಕೂ ಸಮ್ಮತಿ ಸಿಕ್ಕ ನಂತರ ಬಜೆಟ್ ಮಾನ್ಯವಾಗುತ್ತದೆ.

ಬಜೆಟ್‌ನ ಎರಡನೇ ಭಾಗದಲ್ಲಿ ತೆರಿಗೆ ಪ್ರಸ್ತಾಪವಾಗುತ್ತದೆ. ಹಣಕಾಸಿನ ಖರ್ಚು ಹಾಗೂ ತೆರಿಗೆ ಎರಡೂ ಕುರಿತು ಕಾಯ್ದೆಗಳು ಜಾರಿಗೆ ಬರುತ್ತವೆ.

ಇಷ್ಟೆಲ್ಲಾ ಪ್ರಕ್ರಿಯೆಯನ್ನು ಒಟ್ಟಾಗಿ ಬಜೆಟ್ ಅನುಮೋದನೆ ಎಂದು ಕರೆಯುತ್ತಾರೆ. ಪ್ರತಿವರ್ಷ ಏಪ್ರಿಲ್ 1ರಿಂದ ಹೊಸ ಬಜೆಟ್ ಜಾರಿಗೆ ಬರುತ್ತದೆ.

ಭಾರತದ ಮೊದಲ ಬಜೆಟ್ ಮಂಡಿಸಿದ್ದು ಯಾರು?

ಆರ್.ಕೆ. ಷಣ್ಮುಖಂ ಚೆಟ್ಟಿ. 1947, ನವೆಂಬರ್ 26ರಂದು ಅವರು ಮೊದಲ ಬಜೆಟ್ ಮಂಡಿಸಿದರು. ಇದುವರೆಗೆ ಅತಿ ಹೆಚ್ಚು ಬಜೆಟ್ ಮಂಡಿಸಿದ ಅಗ್ಗಳಿಕೆ ಮೊರಾರ್ಜಿ ದೇಸಾಯ್ ಅವರದ್ದು. ಎಂಟು ಸಲ ಅವರು ಪೂರ್ಣಾವಧಿ ಅಥವಾ ಮಧ್ಯಂತರ ಬಜೆಟ್ ಮಂಡಿಸಿದ್ದಾರೆ.

ರೈಲ್ವೆ ಬಜೆಟ್ಟನ್ನು ಪ್ರತ್ಯೇಕವಾಗಿ ಮಂಡಿಸುವುದು ಯಾಕೆ?

ರೈಲ್ವೆ ಇಲಾಖೆಯಿಂದ ಸರ್ಕಾರಕ್ಕೆ ಅತಿ ಹೆಚ್ಚು ಆದಾಯವಿದೆ. ಅಂತೆಯೇ ಅಲ್ಲಿ ಆಗುವ ಖರ್ಚೂ ಅಧಿಕ. ಅದಕ್ಕಾಗಿ ಅದಕ್ಕೇ ಪ್ರತ್ಯೇಕ ಬಜೆಟ್ ರೂಪಿತವಾಗುತ್ತದೆ. ಸಾಮಾನ್ಯ ಬಜೆಟ್‌ಗಿಂತ ಎರಡು ದಿನ ಮುಂಚಿತವಾಗಿ ರೈಲ್ವೆ ಬಜೆಟ್ ಮಂಡಿತವಾಗುತ್ತದೆ. ಸಾಮಾನ್ಯ ಬಜೆಟ್‌ಗೂ ರೈಲ್ವೆ ಬಜೆಟ್‌ನ ಅಂಶಗಳು ತಂತಾವೇ ಸೇರ್ಪಡೆಯಾಗುತ್ತವೆ. ಬ್ರಿಟಿಷ್ ರಾಜ್ ವ್ಯವಸ್ಥೆ ಇದ್ದಾಗಿನಿಂದ ಈ ಪದ್ಧತಿ ರೂಢಿಯಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.