ADVERTISEMENT

ಬಣ್ಣ ಬಯಲು ಮಾಡಿತು

ಸತ್ಯಬೋಧ, ಬೆಂಗಳೂರು
Published 19 ಮೇ 2018, 19:30 IST
Last Updated 19 ಮೇ 2018, 19:30 IST
ಬಣ್ಣ ಬಯಲು ಮಾಡಿತು
ಬಣ್ಣ ಬಯಲು ಮಾಡಿತು   

ಒಂದು ದಟ್ಟ ಅರಣ್ಯ ಅದು. ಮಟ ಮಟ ಮಧ್ಯಾಹ್ನ ಕೂಡ ನೆಲದ ಮೇಲೆ ಸೂರ್ಯನ ಕಿರಣಗಳು ಬೀಳದಷ್ಟು ದಟ್ಟವಾಗಿ ಮರಗಳ ಕೊಂಬೆಗಳು ಹರಡಿದ್ದವು. ಬಳ್ಳಿಗಳು ಗವಿಯ ಆಕಾರದಲ್ಲಿ ಬೆಳೆದು ನಿಂತಿದ್ದವು. ಹುಲಿ, ಸಿಂಹ, ಕರಡಿ, ನರಿ, ಜಿಂಕೆ, ಹಾವು, ಮುಂಗುಸಿ, ಬೆಕ್ಕು, ಮೊಲ... ಹೀಗೆ ಇನ್ನೂ ಅನೇಕ ಜೀವಿಗಳು ಈ ಕಾಡಿನಲ್ಲಿ ಇದ್ದವು.

ಆದರೆ, ಎಲ್ಲಿಯೂ ಭೀಕರ ವಾತಾವರಣ ಇದ್ದಿರಲಿಲ್ಲ. ಒಂದು ಪ್ರಾಣಿ ಮತ್ತೊಂದು ಪ್ರಾಣಿಗೆ ತೊಂದರೆ ಕೊಡುತ್ತಿರಲಿಲ್ಲ. ಪ್ರಾಣಿಗಳಿಗೆ ನಗಲು ಬಾರದಿದ್ದರೂ ಕೂಗಿ ಅಥವಾ ಬುಸುಗುಟ್ಟಿ ತಮ್ಮ ಸಂತಸ ಹಂಚಿಕೊಳ್ಳುತ್ತಿದ್ದವು.

ಆ ಮೃಗಗಳ ನಡುವೆ ಒಂದು ಕರಡಿ ಇತ್ತು. ಅದು ತನ್ನ ಪಾಡಿಗೆ ತಾನು ಹಲಸಿನ ಹಣ್ಣು ತಿಂದು ಜೀವಿಸುತ್ತಿತ್ತು. ಮರದಲ್ಲಿ ಜೇನು ಗೂಡುಗಳು ನೇತಾಡುತ್ತಿದ್ದವು. ಆದರೆ ಯಾವುದೇ ಪ್ರಾಣಿಗೂ ಜೇನು ಗೂಡಿಗೆ ಮೂತಿ ಇಟ್ಟು ಜೇನುತುಪ್ಪ ಸವಿಯುವ ಶಕ್ತಿ ಇರಲಿಲ್ಲ. ಏಕೆಂದರೆ ಅಂತಹ ಕಾರ್ಯಕ್ಕೆ ಮುಂದಾದರೆ ಜೇನು ಹುಳುಗಳು ಕ್ಷಣಮಾತ್ರದಲ್ಲಿ ಆ ಪ್ರಾಣಿಯನ್ನು ಮುತ್ತಿ ಕಚ್ಚಿ, ಕಚ್ಚಿ ಓಡಿಸುತ್ತಿದ್ದವು.

ADVERTISEMENT

ಒಂದು ಸಲ ಕರಡಿಗೆ ಜೇನುಗೂಡನ್ನು ಕಂಡು, ಜೇನುತುಪ್ಪ ಹೀರುವ ಆಸೆ ಆಯಿತು. ಅದು ಜೇನುಗೂಡಿಗೆ ಮೂತಿ ಇಡುತ್ತಲೇ ಜೇನು ಹುಳುಗಳು ಮುತ್ತಿದವು. ಆದರೆ ಕರಡಿಯ ಮೈತುಂಬ ಕೂದಲು ಇದ್ದುದರಿಂದ ಹುಳಗಳಿಗೆ ಕಚ್ಚಲು ಸಾಧ್ಯವಾಗಲಿಲ್ಲ. ‘ಕುಡಿದುಕೊಂಡು ಹೋಗಲಿ’ ಎಂದು ಅವು ಸುಮ್ಮನಾದವು.

ಕರಡಿ ಪ್ರತಿ ದಿನ ಬೆಳಿಗ್ಗೆ ಜೇನುಗೂಡಿಗೆ ಮೂತಿ ಇಟ್ಟು ಜೇನುತುಪ್ಪ ಕುಡಿದೇ ತನ್ನ ದಿನ ಆರಂಭಿಸುತ್ತಿತ್ತು. ಒಂದು ಸಲ ಅದಕ್ಕೆ ಒಂದು ತೆಂಗಿನ ಚಿಪ್ಪು ಸಿಕ್ಕಿತು. ಅದನ್ನು ನೋಡಿ ಕರಡಿ, ‘ಇದರಲ್ಲಿ ಜೇನುತುಪ್ಪ ತುಂಬಿ ಇಟ್ಟುಕೊಂಡು ಬೆಳಿಗ್ಗೆ ಕುಡಿಯಬಹುದು. ಪ್ರತಿದಿನ ಬೆಳಿಗ್ಗೆ ಮರ ಹತ್ತಿ, ಜೇನುಗೂಡಿಗೆ ಬಾಯಿ ಹಾಕುವುದು ಏಕೆ’ ಎಂದು ಆಲೋಚಿಸಿ, ಹಾಗೇ ಮಾಡತೊಡಗಿತು.

ಇದೇ ರೀತಿ ನಡೆಯುತ್ತಿತ್ತು ಕರಡಿಯ ದಿನಚರಿ. ಆದರೆ, ಒಂದು ದಿನ ಬೆಳಿಗ್ಗೆ ಎದ್ದ ಕರಡಿ ಜೇನು ಕುಡಿಯೋಣ ಎಂದು ತೆಂಗಿನ ಚಿಪ್ಪು ನೋಡಿತು. ಆಗ ಅದರಲ್ಲಿ ಜೇನು ಇರಲೇ ಇಲ್ಲ. ‘ಹೋ ನಿನ್ನೆ ರಾತ್ರಿ ಜೇನು ತುಂಬಿಡಲು ಮರೆತುಬಿಟ್ಟೆ’ ಎಂದುಕೊಂಡಿತು. ಆದರೆ ಮತ್ತೆ ಮಾರನೆಯ ದಿನವೂ ಚಿಪ್ಪು ಖಾಲಿ ಆಗಿತ್ತು. ತನ್ನ ಸ್ನೇಹಿತ ನರಿಯಲ್ಲಿ ತನ್ನ ಕಷ್ಟ ಹೇಳಿಕೊಂಡಿತು ಕರಡಿ.

ನರಿ ಗಹಗಹಿಸಿ ನಕ್ಕು, ‘ಲೋ ನೀನು ರಾತ್ರಿ ನಿದ್ದೆಯಲ್ಲಿ ಎದ್ದು ಜೇನು ಕುಡಿದಿದ್ದೀಯ’ ಎಂದಿತು. ‘ಹಾಗಾ? ಇರಬಹುದು’ ಎಂದು ಕರಡಿ ಒಪ್ಪಿಕೊಂಡಿತು. ಆದರೆ ನರಿ ಹೇಳಿದ್ದು ಸತ್ಯವೇ ಎಂಬುದನ್ನು ಖಚಿತ ಮಾಡಿಕೊಳ್ಳಲು ಕರಡಿ ಆ ರಾತ್ರಿ ತನ್ನ ಬಾಯಿತುಂಬ ಸೊಪ್ಪು ತುಂಬಿಕೊಂಡು ಮಲಗಿತ್ತು. ಬೆಳಿಗ್ಗೆ ಎದ್ದು ನೋಡಿದಾಗ ಬಾಯಿಯಲ್ಲಿದ್ದ ಸೊಪ್ಪು ಹಾಗೇ ಇತ್ತು. ಆದರೆ, ಚಿಪ್ಪಿನಲ್ಲಿ ಮಾತ್ರ ಜೇನಿನ ಒಂದು ಹನಿಯೂ ಇರಲಿಲ್ಲ!

‘ಇದನ್ನು ಯಾವುದೋ ಪ್ರಾಣಿ ಕುಡಿಯುತ್ತಿದೆ. ಏನು ಮಾಡುವುದು ಈಗ? ನನಗೋ ವಿಪರೀತ ನಿದ್ದೆ. ಜೇನನ್ನು ಕದ್ದು ಕುಡಿಯುತ್ತಿರುವವರು ಯಾರು ಎಂಬುದನ್ನು ಕಂಡುಹಿಡಿಯುವುದು ಹೇಗೆ?’ ಎಂದು ಕರಡಿ ಚಿಂತೆಗೀಡಾಯಿತು. ಆಗ ಒಂದು ನವಿಲು ಕುಣಿಯುತ್ತ ಕುಣಿಯುತ್ತ ಅಲ್ಲಿಗೆ ಬಂತು. ಕುಂದಿಹೋಗಿದ್ದ ಕರಡಿಯ ಮುಖ ನೋಡಿ ಅದು, ‘ಇದೇನು ಕರಡಿಯಣ್ಣ? ಏನಾಯ್ತು ನಿನಗೆ?’ ಎಂದು ಪ್ರೀತಿಯಿಂದ ಕೇಳಿತು.

ಕರಡಿ ಅತ್ಯಂತ ದುಃಖದಿಂದ, ‘ದಿನವೂ ಚಿಪ್ಪಿನಲ್ಲಿ ಶೇಖರಿಸಿ ಇಟ್ಟ ಜೇನು ಮಾಯವಾಗುತ್ತಿದೆ’ ಎಂದು ಹೇಳಿತು. ನವಿಲಿಗೆ ಬಣ್ಣ ಬಣ್ಣದ ಗರಿಗಳ ಜೊತೆಗೆ ಚುರುಕಾದ ಬುದ್ಧಿಯೂ ಇತ್ತು. ಸ್ವಲ್ಪ ಹೊತ್ತು ಯೋಚಿಸಿ ಅದು ಕರಡಿಯ ಕಿವಿಯಲ್ಲಿ ಒಂದು ಗುಟ್ಟು ಹೇಳಿತು. ಕರಡಿ ಸಂತೋಷದಿಂದ ‘ಹಾಗೇ ಮಾಡುವೆ’ ಎಂದಿತು. ಮತ್ತೆ ಆ ದಿನ ಚಿಪ್ಪಿನಲ್ಲಿ ಜೇನು ಸಂಗ್ರಹಿಸಿ ನವಿಲು ಹೇಳಿದಂತೆ ಮಾಡಿತು. ಮಾರನೆಯ ದಿನವೂ ಜೇನು ಖಾಲಿ. ಈಗ ಇದನ್ನು ಯಾರು ಕುಡಿದರು ಎಂದು ಪತ್ತೆಹಚ್ಚಲು ಹೊರಟಿತು.

ಮಾರನೆ ದಿನ ಒಂದು ವಿಚಿತ್ರ ನಡೆದಿತ್ತು. ಕೆಲವು ಪ್ರಾಣಿಗಳ ನಡುವೆ ಒಂದು ಕೋತಿ ಬಂದು ಸೇರಿಕೊಳ್ಳುತ್ತಲೇ ಎಲ್ಲ ಅದನ್ನು ನೋಡಿ ಕೇಕೆಹಾಕಿ ನಗತೊಡಗಿದವು. ಆ ನಗು ಕೇಳಿ ಕರಡಿಯೂ ಬಂದಿತು. ಏಕೆ ನಗುತ್ತೀರಿ ಎಂದು ಕೇಳಿತು. ‘ಅದೋ ನೋಡು, ಆ ಕೋತಿಯ ಮೂತಿ’ ಎಂದು ತೋರಿಸಿದವು ಆ ಪ್ರಾಣಿಗಳು. ಆ ಕೋತಿಯ ಮೂತಿ ಕೆಂಪಾಗಿತ್ತು.

ಅದರ ಮೂತಿಯೇ ಹಾಗಾ ಅಥವಾ ಇನ್ನೇನಾದರೂ ಇರಬಹುದೇ ಎಂದು ಕರಡಿ ಹೋಗಿ ಅದರ ಮೂತಿ ಮುಟ್ಟಲು ಕರಡಿಯ ಕೈಗೂ ಆ ಕಪಿಯ ಮೂತಿಯ ಕೆಂಪು ಹತ್ತಿಕೊಂಡಿತು. ಆಗ, ಇದೇ ಕೋತಿ ತನ್ನ ಗೂಡಿಗೆ ನುಗ್ಗಿ ಚಿಪ್ಪಿನಲ್ಲಿರುವ ಜೇನು ಕುಡಿದಿದೆ ಎಂಬುದು ಕರಡಿಗೆ ಗೊತ್ತಾಯಿತು. ‘ನಿನ್ನೆ ನಾನು ಜೇನಿನಲ್ಲಿ ಕೆಂಪು ಬಣ್ಣ ಸೇರಿಸಿದ್ದೆ’ ಎಂದು ಕರಡಿ ಗುಟ್ಟು ಬಯಲು ಮಾಡಿದಾಗ ಕೋತಿ ಒಪ್ಪಿಕೊಳ್ಳಲೇ ಬೇಕಾಯಿತು. ತಪ್ಪಿಗೆ ಕ್ಷಮೆ ಕೇಳಿ ಇನ್ನು ಮೇಲೆ ಈ ರೀತಿ ಮಾಡುವುದಿಲ್ಲ ಎಂದು ಹೇಳಿತು. ನವಿಲಿನ ಜಾಣತನದಿಂದಾಗಿ ಕೋತಿಯ ಬಣ್ಣ ಬಯಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.