ADVERTISEMENT

ಬಾಗಿಲಿಗೆ ಬಂದ ಗುರು!

ಶಿರೀಶ ಜೋಷಿ
Published 8 ಅಕ್ಟೋಬರ್ 2011, 19:30 IST
Last Updated 8 ಅಕ್ಟೋಬರ್ 2011, 19:30 IST
ಬಾಗಿಲಿಗೆ ಬಂದ ಗುರು!
ಬಾಗಿಲಿಗೆ ಬಂದ ಗುರು!   

ಸಂಗೀತ ಲೋಕದಲ್ಲಿ ಗುರುವಿಗೆ ಅತ್ಯಂತ ಮಹತ್ವದ ಸ್ಥಾನ. ಅನೇಕ ಕಲಾವಿದರು ತಮ್ಮ ಹಾಡುಗಾರಿಕೆ ಪ್ರಾರಂಭಿಸುವಾಗ ಗುರುಗಳನ್ನು ಮನದಲ್ಲಿಯೇ ಸ್ಮರಿಸಿಕೊಂಡು, ಅವರಿಗೆ ಕೈಮುಗಿದು ಹಾಡುವುದನ್ನು ಕಾಣುತ್ತೇವೆ.
 
ಶಿಷ್ಯನ ಬೈಠಕ್ ನಡೆದ ಸಭಾಂಗಣದಲ್ಲಿ ಗುರುಗಳಾದವರು ಹಾಜರಿದ್ದರಂತೂ ವೇದಿಕೆಯಿಂದ ಎದ್ದುಬಂದು, ಅವರ ಪಾದಗಳಿಗೆ ನಮಸ್ಕರಿಸಿ, ಹಾಡುಗಾರಿಕೆಯನ್ನು ಪ್ರಾರಂಭಿಸಿದವರ ಅನೇಕ ಉದಾಹರಣೆಗಳಿವೆ.

`ಗುರುಪೌರ್ಣಮಿ~ ಎಂದೇ ಪ್ರಸಿದ್ಧವಾದ ಆಷಾಢ ಮಾಸದ ಪೌರ್ಣಮಿಯಂದು ಸಂಗೀತಗಾರರು ತಮ್ಮ ಗುರುಗಳ ಮನೆಗೆ ತೆರಳಿ, ಕಾಣಿಕೆಯನ್ನಿತ್ತು, ಗೌರವ ಸಮರ್ಪಿಸುತ್ತಾರೆ. ಇತ್ತೀಚೆಗೆ ಕೆಲವರು ಸಾರ್ವಜನಿಕವಾಗಿ ಗುರುಪೌರ್ಣಮಿ ಆಚರಿಸುತ್ತಿದ್ದಾರೆ.

ಗುರುಗಳ ಒಲುಮೆಯೇ ಸಂಗೀತ ಸಾಕ್ಷಾತ್ಕಾರಕ್ಕೆ ನಾಂದಿ ಎಂಬ ಶಿಷ್ಯನ ಭಾವವನ್ನು ಶೋಷಿಸುವ ಗುರುಗಳಿಗೂ ನಮ್ಮಲ್ಲಿ ಕೊರತೆಯಿಲ್ಲ. ಆದರೆ ನಿಜವಾದ ಗುರು ತನ್ನ ಸಂಗೀತ ಪರಂಪರೆಯನ್ನು ಸಮರ್ಥವಾಗಿ ಮುಂದುವರಿಸುವುದೇ ತನಗೆ ಸಲ್ಲುವ ನಿಜವಾದ ಗುರುಕಾಣಿಕೆ ಎಂದು ಭಾವಿಸಿದ ಮಾದರಿಗಳು ಸಾಕಷ್ಟಿವೆ.

ಸಂಗೀತದ ವಿದ್ಯಾರ್ಥಿಗೆ ಸರಿಯಾದ ಗುರು ಸಿಗುವುದು ಎಷ್ಟು ದುಸ್ತರವೋ, ಅಷ್ಟೇ ದುಸ್ತರ ಸರಿಯಾದ ಶಿಷ್ಯ ಗುರುವಿಗೆ ದೊರೆಯುವುದು. ಸಮರ್ಥ ಗುರು ಬೇಕೆಂದು ಅಲೆದ ಸಂಗೀತ ವಿದ್ಯಾರ್ಥಿಗಳು ಸಾವಿರಾರು.

ತಾನು ನೀಡುವುದನ್ನೆಲ್ಲ ಗ್ರಹಿಸುವ ಕ್ಷಮತೆಯುಳ್ಳ ಶಿಷ್ಯ ಬೇಕೆಂದು ಗುರು ಶಿಷ್ಯನನ್ನೇ ಅರಸಿಕೊಂಡು ಹೋದ ಪ್ರಸಂಗಗಳೂ ಅಪರೂಪಕ್ಕೆಂಬಂತೆ ದಾಖಲಾಗಿವೆ. ಅಂಥದೊಂದು ರಸನಿಮಿಷ ಇಲ್ಲಿದೆ.

ಹಿಂದೂಸ್ತಾನಿ ಸಂಗೀತ ಕ್ಷೇತ್ರದಲ್ಲಿ ಮೋಗುಬಾಯಿ ಕುರ್ಡಿಕರರ ಹೆಸರು ಪ್ರಮುಖವಾದುದು. ಈಗಿನ ಪ್ರಖ್ಯಾತ ಗಾಯಕಿ ಕಿಶೋರಿ ಆಮೋಣಕರರ ತಾಯಿ ಈ ಮೋಗುಬಾಯಿ. ಈಕೆ ಕೆಲವು ಕಾಲ ಬೆಳಗಾವಿಯಲ್ಲಿ ವಾಸವಾಗಿದ್ದರು.
 
ಜೀವನದಲ್ಲಿ ಸಾಕಷ್ಟು ಅವಮಾನಗಳನ್ನು ನುಂಗಿಕೊಂಡು ಸಂಗೀತದ ಸಾಧನೆ ಮಾಡಿದ ಮಹಾನ್ ಗಾಯಕಿ ಈಕೆ. ಜೈಪುರ ಅತ್ರ್‌ಲಿ ಘರಾಣೆಯ ಪ್ರಮುಖ ಗಾಯಕರ ಪಂಕ್ತಿಯಲ್ಲಿ ಈಕೆಯ ಹೆಸರನ್ನು ಸ್ಮರಿಸಲಾಗುತ್ತದೆ.

ಆಗ ಮೋಗುಬಾಯಿ ಕೊಲ್ಹಾಪುರದಲ್ಲಿದ್ದರು. ಕೊಲ್ಹಾಪುರ ಅಲ್ಲಾದಿಯಾಖಾನರು ನೆಲೆಸಿದ ಊರು. ಅ ದಿನಗಳಲ್ಲಿ ನಾಟ್ಯ ಸಂಗೀತ ಬಹು ಜನಪ್ರಿಯವಾದ ಗಾಯನ ಪ್ರಕಾರವಾಗಿತ್ತು. ಬಾಲಗಂಧರ್ವರಂಥ ನಟರು ಜನರ ಮೇಲೆ ತಮ್ಮ ಗಾಯನಾಭಿನಯಗಳಿಂದ ಸಾಕಷ್ಟು ಪ್ರಭಾವ ಬೀರಿದ್ದರು.
 
ಹೀಗಾಗಿ ಪಡ್ಡೆ ಹುಡುಗರಾದಿಯಾದಿ ಮುದುಕರವರೆಗೂ ಎಲ್ಲರೂ ರಂಗಗೀತೆಗಳನ್ನು ಹಾಡುವಲ್ಲಿ ವಿಶೇಷ ಆಸಕ್ತಿಯನ್ನೂ ಆನಂದವನ್ನೂ ಹೊಂದುತ್ತಿದ್ದರು. ಮೋಗುಬಾಯಿ ಕುರ್ಡಿಕರರೂ ಇದಕ್ಕೆ ಹೊರತಾಗಿರಲಿಲ್ಲ.

ಒಂದು ದಿನ ಮೋಗುಬಾಯಿ ಕುರ್ಡಿಕರ ತಮ್ಮ ಮನೆಯಲ್ಲಿ ಮೃಚ್ಛಕಟಿಕ ನಾಟಕದ `ಚಲ ಗ ಗಡೆ ಮಾಡಿವರೀ..~ ಹಾಡನ್ನು ಮನೆಯ ಮೊಗಸಾಲೆಯಲ್ಲಿ ಹಾಡುತ್ತಾ ಮೈಮರೆತಿದ್ದರು. ಆ ಹಾಡು ಎಷ್ಟು ಪರಿಣಾಮಕಾರಿಯಾಗಿತ್ತೆಂದರೆ, ಅದೇ ದಾರಿಯಲ್ಲಿ ಹೋಗುತ್ತಿದ್ದ ಗಾಯನ ಮಹರ್ಷಿ ಅಲ್ಲಾದಿಯಾಖಾನರನ್ನು ತಡೆದು ನಿಲ್ಲಿಸಿತು! ಗಾಯನದ ಸೊಗಸುಗಾರಿಕೆಗೆ ಮಾರುಹೋದ ಅಲ್ಲಾದಿಯಾಖಾನರು ನೇರವಾಗಿ ಮೋಗುಬಾಯಿಯ ಮನೆಯನ್ನೇ ಪ್ರವೇಶಿಸಿದರು.

ಹಾಡು ಮುಗಿಯಿತು. ಮೋಗುಬಾಯಿ ಕಣ್ಣು ಬಿಟ್ಟಾಗ ಎದುರಿಗೆ ಗಾಯನ ಮಹರ್ಷಿ!
`ನಿನ್ನ ಹಾಡು ಸೊಗಸಾಗಿತ್ತು ತಾಯಿ. ನಿನ್ನ ಸಂಗೀತಕ್ಕೆ ನಾನು ಮಾರು ಹೋಗಿದ್ದೇನೆ!~ ಎಂದರು ಅಲ್ಲಾದಿಯಾ.

ಮೋಗುಬಾಯಿ ವಿನಯದಿಂದ ಅಲ್ಲಾದಿಯಾಖಾನರ ಮಾತುಗಳನ್ನು ಮಹಾಪ್ರಸಾದವೆಂದು ಸ್ವೀಕರಿಸಿದರು. ಖಾನಸಾಹೇಬರು ಮತ್ತೆ ಹೇಳಿದರು-
`ನಿನಗೆ ಸಂಗೀತ ಕಲಿಸಬೇಕೆಂದು ಆಸೆಯಾಗುತ್ತಿದೆ. ನನ್ನ ಬಳಿ ಸಂಗೀತ ಕಲಿಯುತ್ತೀಯಾ?~

ಮೋಗುಬಾಯಿಗೆ ಸ್ವರ್ಗಕ್ಕೆ ಮೂರೇಗೇಣು! ಅಲ್ಲಾದಿಯಾಖಾನರಂಥ ಮಹಾನ್ ಗಾಯಕರು ತಾವಾಗಿಯೇ ಬಂದು `ನನ್ನ ಬಳಿ ಸಂಗೀತ ಕಲಿಯುತ್ತೀಯಾ?~ ಎಂದು ಕೇಳಿದರೆ ಇಲ್ಲವೆನ್ನಲಾದೀತೆ?

ಅನೇಕರು ದುಂಬಾಲು ಬಿದ್ದರೂ ಕಲಿಸಲು ಒಪ್ಪದ ಅಲ್ಲಾದಿಯಾಖಾನರು ತಾವಾಗಿಯೇ ಶಿಷ್ಯತ್ವವನ್ನು ನೀಡಲು ಬಂದರೆ ಬಿಡುವರುಂಟೆ?
ಮೋಗುಬಾಯಿ ಅಲ್ಲಾದಿಯಾಖಾನರ ಶಿಷ್ಯತ್ವವನ್ನು ಸ್ವೀಕರಿಸಿದರು. ಅಖಂಡ ಇಪ್ಪತ್ತಾರು ವರ್ಷ ಶಿಷ್ಯವೃತ್ತಿಯನ್ನು ಕೈಗೊಂಡು ಪ್ರಬುದ್ಧ ಗಾಯಕಿಯಾಗಿ ರೂಪುಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.