ADVERTISEMENT

ಬೆರಗುಬೆಡಗಿನ ಬ್ರಹ್ಮಕುಂಡ

​ಪ್ರಜಾವಾಣಿ ವಾರ್ತೆ
Published 22 ಜನವರಿ 2011, 12:45 IST
Last Updated 22 ಜನವರಿ 2011, 12:45 IST
ಬೆರಗುಬೆಡಗಿನ ಬ್ರಹ್ಮಕುಂಡ
ಬೆರಗುಬೆಡಗಿನ ಬ್ರಹ್ಮಕುಂಡ   

ಹಂಪಿಯ ಪುಷ್ಕರಣಿಯನ್ನು ನೆನಪಿಸುವ ಕೊಳವೊಂದು ಗುಜರಾತ್‌ನಲ್ಲಿದೆ. ಅದರ ಹೆಸರು ಬ್ರಹ್ಮಕುಂಡ. ಗುಜರಾತ್‌ನ ಭಾವನಗರ ಜಿಲ್ಲೆಯ ಸಿಹೋರ್ ನಗರದ ಪ್ರಮುಖ ಆಕರ್ಷಣೆ ಈ ಪುಷ್ಕರಣಿ.ಈ ಊರಿಗೆ ಐತಿಹಾಸಿಕ ಮತ್ತು ಪೌರಾಣಿಕ ಹಿನ್ನೆಲೆ ಇದೆ. ಭಾವನಗರದಿಂದ 22 ಕಿ.ಮೀ ಹಾಗೂ ಅಹಮದಾಬಾದ್‌ನಿಂದ 200 ಕಿ.ಮೀ ದೂರದಲ್ಲಿರುವ ಈ ಊರು ಬೆಟ್ಟಗುಡ್ಡಗಳಿಂದ ಆವೃತವಾಗಿದೆ. ಪ್ರಾಕೃತಿಕವಾಗಿ ಶ್ರೀಮಂತವಾಗಿರುವ ಈ ಜಾಗ ಸಹ್ಯಾದ್ರಿ ಶ್ರೇಣಿಯಲ್ಲಿ ಸಿಗುತ್ತದೆ.

ಐತಿಹಾಸಿಕವಾಗಿ ವಿವಿಧ ರಾಜಮನೆತನಗಳಿಂದ ಆಳಿಸಿಕೊಂಡಿರುವ ಸಿಹೋರ್ ಇಂದು ಸಣ್ಣ ನಗರ ಎನಿಸಿಕೊಂಡಿದೆ. ಒಂದು ಕಾಲದಲ್ಲಿ ಗೋಹಿಲ್ ರಜಪೂತರ ರಾಜಧಾನಿಯಾಗಿದ್ದ ಸಿಹೋರ್‌ನಲ್ಲಿ ಇರುವ ಈ ಬ್ರಹ್ಮಕುಂಡವನ್ನು 12ನೇ ಶತಮಾನದಲ್ಲಿ ರಾಜಾ ಸಿದ್‌ರಾಜ್ ಜೈಸಿಂಹ ನಿರ್ಮಿಸಿದನು. ಈ ಬ್ರಹ್ಮಕುಂಡದ ಅಂದ ಒಂದೊಂದು ಕೋನದಿಂದ ಒಂದೊಂದು ರೀತಿ ಕಾಣುತ್ತದೆ.  ಈ ಬ್ರಹ್ಮಕುಂಡದ ವಿನ್ಯಾಸವನ್ನು ಸೆರೆಹಿಡಿಯುವ ಸವಾಲನ್ನು ಸ್ವೀಕರಿಸಿರುವ ಹಲವು ಛಾಯಾಗ್ರಾಹಕರು ಅದರ ವಿವಿಧ ಕೋನಗಳ ಅಂದಕ್ಕೆ ಮನಸೋತಿದ್ದಾರೆ.

ಈ ಕುಂಡದಲ್ಲಿ ಪ್ರತಿಯೊಂದು ಮೆಟ್ಟಿಲುಗಳಿಗೂ ದೇವತೆಗಳ ವಿಗ್ರಹ ಕೆತ್ತಿ, ಅವುಗಳಿಗೆ ಗೂಡುಗಳನ್ನು ನಿರ್ಮಿಸಲಾಗಿದೆ. ಕುಂಡದ ಸುತ್ತ ಮಂಟಪ ಇದೆ. ಮಂಟಪದ ಮೇಲ್ಭಾಗದಲ್ಲಿ ಗೊಮ್ಮಟಗಳಿವೆ. ಸಮೀಪದಲ್ಲಿಯೇ 17ನೇ ಶತಮಾನದಲ್ಲಿ ಕಟ್ಟಲಾದ ವಿಜಯ ವಿಲಾಸ ಅರಮನೆ ಇದೆ. ಅದು ಅಪೂರ್ವ ಮರದ ಕೆತ್ತನೆಗಳು ಮತ್ತು ಚಿತ್ರಕಲೆಗಳಿಂದ ಗಮನ ಸೆಳೆಯುತ್ತದೆ.

ಜೊತೆಗೆ ಒಂಬತ್ತು ಶಿವನ ದೇವಾಲಯಗಳು, ಗೌತಮೇಶ್ವರ ಸರೋವರ, ಸಿಹೋರ್ ಕೋಟೆಯಷ್ಟೇ ಅಲ್ಲದೇ ಸಾಕಷ್ಟು ಪೌರಾಣಿಕ ದೇವಾಲಯಗಳು ಈ ಊರಿನಲ್ಲಿವೆ.ಅಂದಹಾಗೆ ನಮ್ಮ ಹಂಪಿಯ ಪುಷ್ಕರಣಿ ಕೂಡ ಈ ಬ್ರಹ್ಮಕುಂಡದ ವಿನ್ಯಾಸದಂತೆಯೇ ಕಂಡರೂ ಪ್ರತೀ ಮೆಟ್ಟಿಲುಗಳಿಗೂ ದೇವತೆಗಳ ಗೂಡು ಅದರಲ್ಲಿ ಇಲ್ಲ. ಅದೇ ಇವೆರಡರ ನಡುವೆ ಇರುವ ವ್ಯತ್ಯಾಸ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.