ADVERTISEMENT

ಭಲೇ ಭಲೇ ಉಂಬಳೆ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2010, 11:45 IST
Last Updated 20 ಡಿಸೆಂಬರ್ 2010, 11:45 IST
ಭಲೇ ಭಲೇ ಉಂಬಳೆ
ಭಲೇ ಭಲೇ ಉಂಬಳೆ   


ಕೊಡಗು ಜಿಲ್ಲೆಯ ಮಡಿಕೇರಿ ಎಂದೊಡನೆ ಅಬ್ಬಿಫಾಲ್ಸ್ ಕಣ್ಮುಂದೆ ಮೂಡುತ್ತದೆ. ಅಷ್ಟೇ ಸುಂದರವಾದ ಇನ್ನೊಂದು ಜಲಪಾತ ಮಡಿಕೇರಿ ತಾಲೂಕಿನ ಚೆಂಬು ಗ್ರಾಮದ ಉಂಬಳೆಯಲ್ಲಿದೆ. ಇದೊಂದು ಅಜ್ಞಾತ ಜಲಪಾತ. ದಟ್ಟ ಅರಣ್ಯದ ಮಧ್ಯೆ ಇದೆ.ಅದೆಷ್ಟು ದಟ್ಟವೆಂದರೆ, ದಾರಿ ಮಧ್ಯೆ ಕಾಡಾನೆಗಳೇ ಎದುರಾದರೂ ಆಶ್ಚರ್ಯವಿಲ್ಲ. ಚಾರಣ ಪ್ರಿಯರಿಗೆ, ಸಾಹಸಿಗರಿಗೆ ಹೇಳಿ ಮಾಡಿಸಿದ ಜಾಗವಿದು.

ಮಡಿಕೇರಿಯಿಂದ ಮಂಗಳೂರಿಗೆ ಹೋಗುವ ಹೆದ್ದಾರಿಯಲ್ಲಿ 28 ಕಿ.ಮೀ. ಕ್ರಮಿಸಿದಾಗ ಕಲ್ಲುಗುಂಡಿ ಎಂಬ ಪುಟ್ಟ ಊರು ಸಿಗುತ್ತದೆ.ಇಲ್ಲಿಂದ 11 ಕಿ.ಮೀ. ದೂರದಲ್ಲಿ ಉಂಬಳೆ ಜಲಪಾತವಿದೆ. ಬಸ್ ಸೌಕರ್ಯವಿಲ್ಲ. ಕಾರು ಪ್ರಯಾಣವೂ ಈ ಮಾರ್ಗದಲ್ಲಿ ಕಷ್ಟ.ಕಲ್ಲುಗುಂಡಿಯಿಂದ ಜೀಪು ಮಾಡಿಕೊಂಡು ಹೋಗಬೇಕಾಗುತ್ತದೆ. ಪ್ರಯಾಣದುದ್ದಕ್ಕೂ ಕಂಡು ಬರುವ ಗಗನಚುಂಬಿ ಮರಗಳು, ಸುಂದರ ಪರ್ವತ ಶ್ರೇಣಿಗಳು, ಅಲ್ಲಲ್ಲಿ ಝರಿ-ತೊರೆಗಳು.

ಉಂಬಳೆ ಸದಾಶಿವ ಭಟ್ಟರ ಮನೆ ಪಕ್ಕ ವಾಹನ ನಿಲ್ಲಿಸಿ, ಅಲ್ಲಿಂದ ಕಾಲ್ನಡಿಗೆಯಲ್ಲಿ ಸಾಗಬೇಕು. ಕಾಲುದಾರಿಯಲ್ಲಿ ಜೀರುಂಡೆಗಳ ಸಂಗೀತ ಆಲಿಸುತ್ತಾ ಸುಮಾರು ಒಂದು ಕಿ.ಮೀ. ನಡೆದಾಗ ಎದುರಿಗೆ ಭವ್ಯ ಜಲಪಾತ! ನೂರು ಅಡಿ ಎತ್ತರದಿಂದ, ವಿಶಾಲ ಬಂಡೆಯ ಮೇಲಿನಿಂದ ಭೋರ್ಗರೆಯುತ್ತಾ ಎರಡು ಕವಲಾಗಿ ಧುಮುಕಿ ಹರಿಯುವ ಉಂಬಳೆ ಜಲಪಾತ ನೋಡಿದ ಯಾರಾದರೂ ‘ಭಲೇ ಭಲೇ’ ಎಂದು ಉದ್ಘರಿಸಬೇಕು.

ಎತ್ತರವಾದ ಬೆಟ್ಟ, ದುರ್ಗಮ ಹಾದಿಯನ್ನು ಕ್ರಮಿಸುವಾಗ ಆಯಾಸವಾದರೂ ಈ ಮನೋಹರ ಜಲಪಾತ ಎಲ್ಲ ದಣಿವನ್ನೂ ಮರೆಸುತ್ತದೆ. ಜಲಪಾತದ ಸೌಂದರ್ಯವನ್ನು ಹತ್ತಿರದಿಂದ,  ಕೆಳಗಿನಿಂದ, ಮೇಲೇರಿ- ನಾನಾ ಕೋನಗಳಿಂದ ಸವಿಯಬಹುದು.

ತಂಪಾದ ಜಲರಾಶಿಯಲ್ಲಿ ಜಳಕ ಮಾಡಬಹುದು. ಸಾಹಸ ಪ್ರವೃತ್ತಿಯುಳ್ಳವರು ಜಲಪಾತದ ನೆತ್ತಿಯವರೆಗೆ ಹತ್ತಬಹುದು. ಸ್ವಲ್ಪ ಹೆಜ್ಜೆ ಜಾರಿದರೂ ಆಳವಾದ ಕಮರಿಗೆ ಬೀಳುವ ಸಾಧ್ಯತೆಯಿದೆ. ಈ ಜಲಪಾತದಲ್ಲಿ ಆನೆಯೊಂದು ಕಾಲುಜಾರಿ ಬಿದ್ದು ಸತ್ತಿತ್ತು. ಜಿಗಣೆಗಳ ಕಾಟವೂ ಇಲ್ಲಿದೆ. ಉಂಬಳೆ ಜಲಪಾತದ ಸುತ್ತಮುತ್ತ ಹೋಟೆಲ್ ಇಲ್ಲ. ಹಾಗಾಗಿ ಬುತ್ತಿ ತೆಗೆದುಕೊಂಡು ಹೋಗದಿದ್ದರೆ ಕಷ್ಟ ಕಟ್ಟಿಟ್ಟ ಬುತ್ತಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.