ADVERTISEMENT

ಮಲ್ಲಕ್ಕನ ಕಣ್ಣೀರಿನ ಪಯಣ

ಸುರೇಶ ನೇರ್ಲಿಗೆ
Published 2 ಜೂನ್ 2018, 19:30 IST
Last Updated 2 ಜೂನ್ 2018, 19:30 IST
ಚಿತ್ರ: ಶಿಲ್ಪಾ ಕಬ್ಬಿಣಕಂತಿ
ಚಿತ್ರ: ಶಿಲ್ಪಾ ಕಬ್ಬಿಣಕಂತಿ   

ಮೊನ್ನೆ ಹಾಗೇ ಸುಮ್ಮನೆ ಏಕಾಂತದಲ್ಲಿ ಕುಳಿತಿದ್ದಾಗ ಇಪ್ಪತ್ತು ವರ್ಷಗಳಿಗೂ ಹಿಂದಿನ ಆ ಘಟನೆಯ ನೆನಪನ್ನು ನನ್ನ ಸ್ಮೃತಿಪಟಲದಿಂದ ಹೊರತೆಗೆದೆ. ಅದನ್ನು ಯಥಾವತ್ತಾಗಿ ತಮ್ಮೊಟ್ಟಿಗೆ ಹಂಚಿಕೊಳ್ಳಲು ಬಯಸುತ್ತೇನೆ. ಬೇವಿನಹಳ್ಳಿ ಅರಸೀಕೆರೆ ತಾಲೂಕಿನ ಬಾಣಾವರ ಸಮೀಪದ ಪುಟ್ಟ ಹಳ್ಳಿ. ನನ್ನ ಅಕ್ಕನ ಊರಾಗಿದ್ದರಿಂದ ಬೇಸಿಗೆ ರಜೆಗೆ ಹೋಗಿದ್ದೆ. ನಾನಾಗ ಮೂರನೆಯ ಇಯತ್ತೆಯಲ್ಲಿದ್ದ ಅಸ್ಪಷ್ಟ ನೆನಪು. ಟಿ.ವಿ. ಮತ್ತಿತರೆ ಆಧುನಿಕ ಮಾಧ್ಯಮಗಳು ಈಗಿನಷ್ಟು ಸಲೀಸಾಗಿ ನಮ್ಮೊಳಗೆ ಇನ್ನೂ ಇಳಿದಿರಲಿಲ್ಲವಾದ್ದರಿಂದಲೇ ಜಾನಪದ ಕಲೆ ಆಗಿನ ಬದುಕಿನಲ್ಲಿ ಜಾರುತ್ತಿರುವ ರೈಲಿನ ಕೊನೆಯ ಬೋಗಿಗಳಂತೆ ಸಾಗುತ್ತಿತ್ತು.

ನನ್ನ ಅಕ್ಕನ ಗೆಳತಿಯರಲ್ಲಿ ಮಲ್ಲಕ್ಕ ತುಂಬಾ ವಿಶೇಷ ವ್ಯಕ್ತಿತ್ವದವರು ಮತ್ತು ಅಕ್ಕನಿಗೆ ಆಪ್ತರಾಗಿದ್ದರು. ಬೇರೆಯವರ ಕಷ್ಟಗಳಿಗೆ ತನ್ನ ಕಷ್ಟವೆಂಬಂತೆ ಕಣ್ಣೀರು ಸುರಿಸುತ್ತಿದ್ದರು. ಅಂದಿನ ದುಡಿಮೆ ಅಂದಿಗೆ ಎಂಬಷ್ಟು ಬಡವರಾದರೂ ಅವರ ಸಂತೋಷದ ಜಾಡಿನಲ್ಲಿ ಬಡತನಕ್ಕೆ ಜಾಗ ಕೊಟ್ಟಿರಲಿಲ್ಲ. ಬಾಣಾವರದ ಚಿತ್ರಮಂದಿರದಲ್ಲಿ ‘ತವರಿನ ತೇರು’ ಸಿನಿಮಾ ಬಂದಿದೆ, ಭಾರೀ ಕಷ್ಟದ ಸಿನಿಮಾ ಎಂಬ ವಿಚಾರವನ್ನು ಮಲ್ಲಕ್ಕನಿಗೆ ಯಾರೋ ನೋಡಿ ಬಂದವರು ಹೇಳಿದ್ದರು. ಶ್ರುತಿಯ ಅಭಿಮಾನಿಯಾದ ಮಲ್ಲಕ್ಕನಿಗೆ ಸಿನಿಮಾ ನೋಡಲೇಬೇಕೆಂಬ ಆಸೆಯಾಗಿ ನನ್ನ ಅಕ್ಕ ಮತ್ತಿತರ ಇಬ್ಬರು ಗೆಳತಿಯರೊಂದಿಗೆ ತಯಾರಾದಾಗ ಅಲ್ಲೇ ಇದ್ದ ನನ್ನನ್ನೂ ಕರೆದುಕೊಂಡು ಹೋದರು.

ನಾನೂ ಸೇರಿದಂತೆ ಐವರು ಗಾಂಧಿ ಕ್ಲಾಸಿಗೆ ಕುಳಿತೆವು. ಅದಾಗಲೇ ಎಲ್ಲರಿಗೂ ಭಾರೀ ಕಷ್ಚದ ಪಿಕ್ಚರಂತೆ, ಶ್ರುತಿಗೆ ಭಾರೀ ಕಷ್ಟವಂತೆ ಅನ್ನೋದನ್ನು ಮಲ್ಲಕ್ಕ ನಮಗೆ ಹೇಳಿದ್ದರು. ಚಿತ್ರ ಪರದೆಗೆ ಹತ್ತಿರದಲ್ಲೇ ನಮ್ಮ ಗುಂಪು ಕುಳಿತಿತ್ತು. ಮಲ್ಲಕ್ಕನ ಮಾತು ಕೇಳಿದ ನನಗೂ ಕುತೂಹಲ ಎಂತಹ ಕಷ್ಟವಿರಬಹುದೆಂದು. ಸಿನಿಮಾ ನೋಡುವಾಗ ನಾನು ಮಲ್ಲಕ್ಕನ ಮುಖವನ್ನೊಮ್ಮೆ, ಸಿನಿಮಾ ಒಮ್ಮೆ ನೋಡುತ್ತಿದ್ದೆ. ಆದರೆ ಮಲ್ಲಕ್ಕ ನನ್ನನ್ನು ಬಿಡಿ, ಅಲ್ಲಿ ಸುತ್ತಮುತ್ತ ಇದ್ದ ಯಾರನ್ನೂ ಗಮನಿಸುವ ಸ್ಥಿತಿಯಲ್ಲಿರಲಿಲ್ಲ. ಹೀಗೇ ನೋಡನೋಡುತ್ತಿದ್ದಂತೆಯೇ ಚಿತ್ರದಲ್ಲಿ ಶ್ರುತಿಯ ತಾಯಿ ಸತ್ತಿದ್ದಾರೆ, ಮೂವರು ಮಕ್ಕಳು ಅಳುತ್ತಿರುವ ದೃಶ್ಯ! ಮಲ್ಲಕ್ಕ ಆ ಮಕ್ಕಳಲ್ಲಿ ತಾನೂ ಒಬ್ಬಳೇನೋ ಅನ್ನುವಷ್ಟು ಅಳುತ್ತಿದ್ದರು. ಆಗ ಪ್ರಾರಂಭವಾದ ಮಲ್ಲಕ್ಕನ ಅಳು ಮತ್ತೆ ನಿಲ್ಲಲೂ ಇಲ್ಲ, ಕಡಿಮೆಯೂ ಆಗಲಿಲ್ಲ. ಚಿತ್ರದಲ್ಲಿ ಯಾರಿಗೇ ಕಷ್ಟವಾದರೂ ಅದು ತನ್ನದೇ ಕಷ್ಟವೆಂಬಂತೆ ಹಣೆ ಹಣೆ ಚಚ್ಚಿಕೊಳ್ಳುತ್ತಾ ಅಳುವ ಮಲ್ಲಕ್ಕನನ್ನು ನೋಡುವುದೇ ನನಗೆ ಖುಷಿಯೆನಿಸುತ್ತಿತ್ತು.

ADVERTISEMENT

ಸಿನಿಮಾ ಪ್ರಾರಂಭವಾಗಿ ಒಂದು ಗಂಟೆಯಾಗಿತ್ತೇನೊ ಶ್ರುತಿ ತನ್ನ ತಂಗಿಯ ಮದುವೆಗಾಗಿ ಕಷ್ಟಪಡುತ್ತಿದ್ದರೆ ಮಲ್ಲಕ್ಕ ಶ್ರುತಿಯ ಸ್ಥಿತಿಯನ್ನು ನೋಡಿ ಗೋಳಿಡುತ್ತಿದ್ದರು. ಇನ್ನು ಮದುವೆಯಾದ ತಂಗಿ ಅಕ್ಕನನ್ನು ಬಿಟ್ಟು ಗಂಡನ ಮನೆಗೆ ಹೊರಡುವಾಗ ಮತ್ತು ವರದಕ್ಷಿಣೆಯ ಬಾಕಿಗಾಗಿ ತಂಗಿ ತವರಿಗೆ ಬಂದಾಗ ಮಲ್ಲಕ್ಕನ ದುಃಖಕ್ಕೆ ಪಾರವೇ ಇರಲಿಲ್ಲ. ಅದಾಗಲೇ ಒಂದು ಗಂಟೆಯಿಂದ ಒಂದೇ ಸಮನೇ ಅಳುತ್ತಿದ್ದ ಮಲ್ಲಕ್ಕ ಸೋತುಹೋಗಿದ್ದರು ಪಾಪ. ತೆರೆಯ ಮೇಲೆ ಶ್ರುತಿಯ ತಂಗಿ ಬೆಂಕಿಯಲ್ಲಿ ಉರಿಯುತ್ತಿದ್ದರೆ ಮಲ್ಲಕ್ಕ ಮೇಣದಂತೆ ಕರಗುತ್ತಿದ್ದರು.

ಈ ನಡುವೆ ಅವರ ಕನ್ನಡಕವೂ ಬಿದ್ದು ಒಡೆದುಹೋಗಿತ್ತು. ಎಲೆ ಅಡಿಕೆ ಚೀಲವೂ ಕಂಡವರ ಪಾಲಾಗಿತ್ತು. ಇಷ್ಟಕ್ಕೆ ಮುಗೀತು ಅಂದ್ಕೋಬೇಡಿ, ಚಿತ್ರದಲ್ಲಿ ಶ್ರುತಿಯ ಶೀಲದ ಬಗ್ಗೆ ಜನ ಕೆಟ್ಟದಾಗಿ ಮಾತನಾಡುವಾಗ ದುಃಖದ ಪರಾಕಾಷ್ಠೆ ಮುಟ್ಟಿದ್ದರು ನಮ್ಮ ಮಲ್ಲಕ್ಕ. ಮಲ್ಲಕ್ಕನ ಮುಂದಾಳತ್ವದಲ್ಲಿ ಹೋಗಿದ್ದ ಅಕ್ಕಂದಿರಿಗೆ ಭಾರೀ ಆಘಾತ ಕಾದಿತ್ತು. ಏನೆಂದರೆ ಇಷ್ಟು ಹೊತ್ತು ಅಳುತ್ತಿದ್ದ ಮಲ್ಲಕ್ಕ ಇದ್ದಕ್ಕಿದ್ದಂತೆ ಪ್ರಜ್ಞಾಹೀನ ಸ್ಥಿತಿ ತಲುಪಿದ್ದರು! ಇನ್ನೂ ಅರ್ಧತಾಸು ನೋಡಬೇಕಿದ್ದ ಸಿನಿಮಾ ಇದ್ದರೂ ಮಲ್ಲಕ್ಕನನ್ನು ಸಂತೈಸಲು ಸಾಕು ಸಾಕಾಗಿತ್ತು. ಕೊನೆಗೆ ಎರಡೂ ಕಡೆ ಭುಜದ ಮೇಲೆ ಬಸ್ ನಿಲ್ದಾಣಕ್ಕೆ ಕರೆತಂದಿದ್ದು ಕೇಳಿದವರಿಗೆಲ್ಲಾ ಅದರ ವಿವರಣೆ ನೀಡಿದ್ದು ಸದಾ ಸ್ಮರಣೀಯ ಅಷ್ಟಲ್ಲದೆ ಇದ್ದ ಹಣವನ್ನೂ ಚೀಲದ ಸಮೇತ ತವರಿನ ತೇರಿಗೆ ಎಸೆದು ಬಂದದ್ದು ಮರೆಯಲಾಗದ ನೆನಪು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.