ADVERTISEMENT

ಮಿನುಗು ಮಿಂಚು:ಗಗನಚುಂಬಿ ಸಾಧನೆ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2012, 19:30 IST
Last Updated 17 ನವೆಂಬರ್ 2012, 19:30 IST

ಗಗನ್ ನಾರಂಗ್ ಹುಟ್ಟಿದ್ದು ಯಾವಾಗ, ಎಲ್ಲಿ?
ಚೆನ್ನೈನಲ್ಲಿ, 1983, ಮೇ 6ರಂದು.

ಗಗನ್ ಮೊದಲು ಸಾಧನೆ ಮಾಡಿದ್ದು ಯಾವಾಗ?
2003ರಲ್ಲಿ ಹೈದರಾಬಾದ್‌ನಲ್ಲಿ ನಡೆದ ಆಫ್ರೋ-ಏಷ್ಯನ್ ಗೇಮ್ಸನಲ್ಲಿ ಚಿನ್ನದ ಪದಕ ಗೆದ್ದಾಗ.

ಅಂತರರಾಷ್ಟ್ರೀಯ ಗೌರವ ಅವರಿಗೆ ಮೊದಲು ಸಂದದ್ದು ಯಾವಾಗ?

2006ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸನ ಶೂಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಅವರು ನಾಲ್ಕು ಚಿನ್ನದ ಪದಕಗಳನ್ನು ಗೆದ್ದಾಗ ಅಂತರರಾಷ್ಟ್ರೀಯ ಗೌರವ ಮೊದಲು ಸಂದಿತು.

ಯಾವ ಟೂರ್ನಿಯಲ್ಲಿ ಅವರು ಬರಾಕ್ ಒಬಾಮಾ ಅವರಿಂದ ಸ್ಫೂರ್ತಿ ಪಡೆದಿದ್ದರು?
2008ರಲ್ಲಿ ನಡೆದ ಐಎಸ್‌ಎಸ್‌ಎಫ್ ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರಿಯಾದ ಥಾಮಸ್ ಫ್ರಾಂಕ್ಲಿನ್ ದಾಖಲೆಯನ್ನು ಮುರಿದು ಚಿನ್ನದ ಪದಕ ಗೆದ್ದಾಗ ಅವರು ಒಬಾಮಾ ಅವರಿಂದ ಸ್ಫೂರ್ತಿ ಪಡೆದಿದ್ದರು. ಇವರು ಟೂರ್ನಿ ಗೆದ್ದ ದಿನವೇ ಅಮೆರಿಕದ ಅಧ್ಯಕ್ಷ ಸ್ಥಾನಕ್ಕೆ ಒಬಾಮಾ ಆಯ್ಕೆಯಾಗಿದ್ದರು. ಅವರ ವಿಜಯವೇ ತಮಗೂ ಸ್ಫೂರ್ತಿಯಾಗಿತ್ತು ಎಂದು ಗಗನ್ ಹೇಳಿಕೊಂಡಿದ್ದರು.

2010ರಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸನಲ್ಲಿ ಅವರ ಪ್ರದರ್ಶನ ಹೇಗಿತ್ತು?
10 ಮೀಟರ್ ಏರ್ ರೈಫಲ್ ವೈಯಕ್ತಿಕ ಸ್ಪರ್ಧೆಯ ಅರ್ಹತಾ ಸುತ್ತಿನಲ್ಲಿ ಅವರು 600 ಪಾಯಿಂಟ್ ಗಳಿಸಿದರು. ಫೈನಲ್‌ನಲ್ಲಿ 703.6 ಪಾಯಿಂಟ್‌ಗಳೊಂದಿಗೆ ತಮ್ಮ ವೈಯಕ್ತಿಕ ದಾಖಲೆಯನ್ನು ಉತ್ತಮಪಡಿಸಿಕೊಂಡರು. ಭಾರತದ ಪರವಾಗಿ ಆ ಟೂರ್ನಿಯಲ್ಲಿ ಅತಿ ಹೆಚ್ಚು ಚಿನ್ನದ ಪದಕ ಗೆದ್ದ ಗೌರವವೂ ಅವರದ್ದಾಯಿತು.

2012ರ ಲಂಡನ್ ಒಲಿಂಪಿಕ್‌ನಲ್ಲಿ ಅವರ ಸಾಧನೆ ಏನು?
ಪುರುಷರ ವಿಭಾಗದ 10 ಮೀ. ಏರ್ ರೈಫಲ್ ಸ್ಪರ್ಧೆಯಲ್ಲಿ ಭಾರತಕ್ಕೆ ಕಂಚಿನ ಪದಕ ಗೆದ್ದುಕೊಟ್ಟ ಸಾಧನೆಯನ್ನು ಅವರು ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.