ADVERTISEMENT

ಮಿನುಗು ಮಿಂಚು: ಕಾಲ್ಚೆಂಡಿನಾಟದ ಜಗಜ್ಜಾಣ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2012, 19:30 IST
Last Updated 3 ಮಾರ್ಚ್ 2012, 19:30 IST

ಲಿಯೊನೆಲ್ ಮೆಸ್ಸಿ ಹುಟ್ಟಿದ್ದು ಯಾವಾಗ, ಎಲ್ಲಿ?
ಅರ್ಜೆಂಟಿನಾದ ಸ್ಯಾಂಟಾ ಫೆ ಎಂಬಲ್ಲಿನ ರೊಸಾರಿಯಾ ಊರಿನಲ್ಲಿ ಜೂನ್ 24, 1987ರಲ್ಲಿ ಮೆಸ್ಸಿ ಹುಟ್ಟಿದ್ದು.

ಅವರು ಯಾವ ಕ್ಲಬ್ ಪರವಾಗಿ ಆಡುತ್ತಾರೆ?
ಸ್ಪೇನ್‌ನ ಬಾರ್ಸೆಲೋನಾ ಫುಟ್‌ಬಾಲ್ ಕ್ಲಬ್ ಪರವಾಗಿ ಆಡುತ್ತಾರೆ. ತಮ್ಮ 13ನೇ ವಯಸ್ಸಿನಲ್ಲಿ ಅವರು ಈ ಕ್ಲಬ್ ಸೇರಿದ್ದು. 2004ರಲ್ಲಿ ನಡೆದ ಲೀಗ್ ಪಂದ್ಯದಲ್ಲಿ ಗೋಲ್ ಗಳಿಸುವ ಮೂಲಕ ಕ್ಲಬ್ ಪರವಾಗಿ ಗೋಲ್ ಹೊಡೆದ ಅತಿ ಕಿರಿಯ ಎಂಬ ಗೌರವಕ್ಕೆ ಪಾತ್ರರಾದರು. ಆಗ ಅವರ ವಯಸ್ಸು 17. ತಂಡದ ಸಹ ಆಟಗಾರ ಬೊಜಾನ್ ಕ್ರಿಕ್ ಹೆಸರಲ್ಲಿದ್ದ ದಾಖಲೆಯನ್ನು ಅವರು ಮುರಿದದ್ದು.

ಅವರನ್ನು ಡಿಯಾಗೊ ಮರಡೋನಾಗೆ ಹೋಲಿಸುವುದೇಕೆ?
ತಮ್ಮ ಓರಗೆಯ ಫುಟ್‌ಬಾಲ್ ಆಟಗಾರರಲ್ಲಿ ಮೆಸ್ಸಿ ಶ್ರೇಷ್ಠ ಎನಿಸಿಕೊಂಡಿದ್ದಾರೆ. ಅವರ ಆಟದ ಶೈಲಿ, ಸಾಮರ್ಥ್ಯವನ್ನು ನೋಡಿ ಖುದ್ದು ಮರಡೋನಾ ತಮ್ಮ ಫುಟ್‌ಬಾಲ್ ಉತ್ತರಾಧಿಕಾರಿ ಎಂದು ಹೇಳಿದ್ದರು. ಐದು ಅಡಿ ಏಳು ಇಂಚು ಎತ್ತರದ ಮೆಸ್ಸಿ ಎಡಗಾಲಿನಲ್ಲಿ ಚೆಂಡನ್ನು ಒದೆಯುತ್ತಾರೆ.
 
ಮೈದಾನದಲ್ಲಿ ಅವರ ವೇಗ ಹಾಗೂ ಚೆಂಡಿನ ದಿಕ್ಕನ್ನು ಬದಲಿಸುವ ಚಾಣಾಕ್ಷತೆ ಎದುರಾಳಿಗಳನ್ನು ಚಕಿತಗೊಳಿಸುವಂತಿದೆ. 2008-09ರ ಫುಟ್‌ಬಾಲ್ ಋತುವಿನಲ್ಲಿ ಅವರು 38 ಗೋಲ್‌ಗಳನ್ನು ಗಳಿಸಿದ್ದರು. 2009-10ರಲ್ಲಿ ಈ ಸಂಖ್ಯೆ 47ಕ್ಕೇರಿತು.

2010-11ರಲ್ಲಿ 53 ಗೋಲುಗಳು ಅವರ ಖಾತೆ ಸೇರಿದವು. ವರ್ಷದಿಂದ ವರ್ಷಕ್ಕೆ ಅವರ ಆಟದ ತಂತ್ರ ಮಾಗುತ್ತಿದೆ ಎಂಬುದಕ್ಕೆ ಇದೇ ಸಾಕ್ಷಿ.

2010-11ರ ಯುಇಎಫ್‌ಎ ಚಾಂಪಿಯನ್ಸ್ ಲೀಗ್‌ನಲ್ಲಿ ಅವರ ಪ್ರದರ್ಶನ ಹೇಗಿತ್ತು?
ಟೂರ್ನಿಯಲ್ಲಿ ಬಾರ್ಸೆಲೋನಾ ಪರವಾಗಿ ಅವರು 2 ಗೋಲುಗಳನ್ನು ಗಳಿಸಿದರು. ಮೇ 28, 2011ರಲ್ಲಿ ಮ್ಯಾಂಚೆಸ್ಟರ್ ತಂಡದ ವಿರುದ್ಧ ನಡೆದ ಫೈನಲ್ಸ್‌ನಲ್ಲಿ ನಿರ್ಣಾಯಕ ಗೋಲ್ ಗಳಿಸಿ, ತಂಡಕ್ಕೆ ಗೆಲುವು ತಂದಿತ್ತದ್ದು ಅವರೇ. ಆ ಫೈನಲ್ಸ್‌ನಲ್ಲಿ ಪಂದ್ಯ ಪುರುಷೋತ್ತಮ ಗೌರವ ಕೂಡ ಅವರದ್ದಾಯಿತು.

ಅವರಿಗೆ ಯಾವ ಯಾವ ಪ್ರಶಸ್ತಿಗಳು ಬಂದಿವೆ?
23 ವರ್ಷದ ಮೆಸ್ಸಿಗೆ ಅಸಂಖ್ಯ ಪ್ರಶಸ್ತಿಗಳು ಸಂದಿವೆ. 2010ರಲ್ಲಿ ಫಿಫಾ ನೀಡಿದ ವರ್ಷದ ಶ್ರೇಷ್ಠ ಆಟಗಾರ ಪ್ರಶಸ್ತಿ ಅದರಲ್ಲಿ ಮುಖ್ಯವಾದದ್ದು. ಐದು `ಲಾ ಲಿಗಾ~ ಹಾಗೂ ಮೂರು ಚಾಂಪಿಯನ್ಸ್ ಲೀಗ್ ಪ್ರಶಸ್ತಿಗಳು ಮೆಸ್ಸಿ ಖಾತೆಗೆ ಜಮೆಯಾಗಿವೆ. 2008ರ ಒಲಿಂಪಿಕ್‌ನಲ್ಲಿ ಅರ್ಜೆಂಟಿನಾ ತಂಡದ ಪರವಾಗಿ ಆಡಿ ಚಿನ್ನದ ಪದಕಕ್ಕೂ ಕೊರಳೊಡ್ಡಿದ್ದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.