ADVERTISEMENT

ಮೊದಲ ಓದು

ಸಂದೀಪ ನಾಯಕ
Published 26 ಮೇ 2012, 19:30 IST
Last Updated 26 ಮೇ 2012, 19:30 IST
ಮೊದಲ ಓದು
ಮೊದಲ ಓದು   

ಕಣ್ಣಕಾಡು
ಲೇ: ಕೆ.ಇ.ರಾಧಾಕೃಷ್ಣ
ಪು: 184; ಬೆ: ರೂ. 350
ಪ್ರ: ಪ್ರೊವೋಕ್ ಇಂಡಿಯಾ, ನಂ 909 ಬಿ, 6ನೇ ಮುಖ್ಯ ರಸ್ತೆ, ವೆಸ್ಟ್ ಆಫ್ ಕಾರ್ಡ್ ರಸ್ತೆ, ಮಹಾಲಕ್ಷ್ಮಿಪುರಂ, ಬೆಂಗಳೂರು - 560 086.
ನಿವೃತ್ತ ಪ್ರಾಧ್ಯಾಪಕರೂ ಕವಿಗಳೂ ಆಗಿರುವ ಕೆ.ಇ. ರಾಧಾಕೃಷ್ಣ `ಕಣ್ಣಕಾಡು~ ಎಂಬ ಕಾವ್ಯ ಪ್ರಬಂಧವನ್ನು ಪ್ರಕಟಿಸಿದ್ದಾರೆ. ಇದು ಹೆಣ್ಣು- ಗಂಡಿನ ಸಂಕೀರ್ಣ ಸ್ವರೂಪವನ್ನು, ಸಂಬಂಧವನ್ನು ಅದರ ಹಲವು ಸ್ತರಗಳಲ್ಲಿ ತೋರುವ ನೀಳ್ಗವನವಾಗಿದೆ. ಇದು ಸೃಷ್ಟಿಕ್ರಿಯೆಯ ನಿಗೂಢತೆಯನ್ನು ಅರಿಯಲು ಯತ್ನಿಸುವ ಚಿಂತನೆಯ ಕಾವ್ಯವೂ ಆಗಿದೆ.
`ಹಸಿದ ಭೂಮಿಗೆ ಸಾಕು ಒಂದು ಬಿಂದೇ ನೀರು

ಭುವಿಗೆ ನೀತಿಯೆ? ಬೇಕು ಒಬ್ಬ ಯಜಮಾನ~
(ಹಸಿದ ಭೂಮಿಗೆ ... ಪುಟ 75)
ಎಂದು ಬರೆಯುವ ಕವಿ ರಾಧಾಕೃಷ್ಣ ಅವರದು ಕಾವ್ಯ ಕಸುಬಿನಲ್ಲಿ ನುರಿತ ಕರ್ಮಿಯ ಕೆಲಸವಲ್ಲ. ಅವರದು ಕಾವ್ಯ ವಿದ್ಯಾರ್ಥಿಯೊಬ್ಬ ತನ್ನ ಅನುಭವವನ್ನು ತನ್ನದೇ ಮಾತುಗಳಲ್ಲಿ ಹೇಳುವ ರೀತಿಯದು. ಈ ಕಾವ್ಯದಲ್ಲಿ 11 ಭಾಗಗಳಿವೆ. ಅವೆಲ್ಲವೂ ಕೆಲವು ಕಾಡುವ ಸಾಲುಗಳನ್ನು ಹೊಂದಿವೆ. 

`ಕಾಡಿನ ಕೆಲವು ಭಾಗಗಳನ್ನು ನೋಡಬಹುದೇ ಹೊರತು ಕಾಡಿಗೆ ಕಾಡನ್ನೇ ಒಟ್ಟಿಗೆ ಒಂದೇ ಸಲ ನೋಡಲಾಗದೆಂಬ ತಥ್ಯವು ಕಣ್ಣಕಾಡಿನ ಮನೋಭೂಗೋಲವನ್ನು ನಿರ್ದೇಶಿಸಿದೆ. ಆದ್ದರಿಂದ ಇಲ್ಲಿ ಬರುವ ಚಿಂತನೆ ಸಾರಾಸಗಟಾದುದಲ್ಲ. ಅದು ಸಾಂದರ್ಭಿಕವಾಗಿ ನಿತ್ಯದ, ನಿಜದ ಸೋಂಕನ್ನು ಹೊಂದಿದೆ. ಆದ್ದರಿಂದ ದೈವಿಕತೆಯನ್ನು, ಪುರಾಣವನ್ನು, ಧಾರ್ಮಿಕತೆಯನ್ನು ಮಾನವೀಕರಿಸುತ್ತದೆ~ ಎಂದು ಕವಿ ಎಚ್.ಎಸ್. ಶಿವಪ್ರಕಾಶ್ ಮುನ್ನುಡಿಯಲ್ಲಿ ಬರೆದ ಮಾತುಗಳು ಈ ಪುಸ್ತಕವನ್ನು ವರ್ಣಿಸಿವೆ.

ಇದು ಮುದ್ರಣಗೊಂಡಿರುವ ಬಗ್ಗೆ ಒಂದು ಮಾತನ್ನು ಹೇಳಬೇಕು. ಈ ಪುಸ್ತಕವನ್ನು ಐದು ಮುನ್ನುಡಿಗಳು, ನಾಡಿನ ಐದಾರು ಖ್ಯಾತ ಕಲಾವಿದರ ಚಿತ್ರಗಳೊಂದಿಗೆ ಅದ್ದೂರಿಯಾಗಿ ಬಣ್ಣದಲ್ಲಿ ಅಚ್ಚು ಮಾಡಲಾಗಿದೆ. ಆದ್ದರಿಂದ, ಪುಸ್ತಕದ ಬೆಲೆ ಕೊಂಚ ಹೆಚ್ಚಾಗಿ ಸಾಮಾನ್ಯ ಓದುಗರ ಕೈಗೆ ನಿಲುಕದಂತಿದೆ.
 

ಎಂ.ಎಫ್.ಹುಸೇನ್
ಲೇ: ಎನ್.ಮರಿಶಾಮಾಚಾರ್
ಪು: 80; ಬೆ: ರೂ 70
ಪ್ರ: ನುಡಿ ಪುಸ್ತಕ, ನಂ. 27, 21ನೇ ಮುಖ್ಯ ರಸ್ತೆ, ಬಿ.ಡಿ.ಎ ಕಾಂಪ್ಲೆಕ್ಸ್ ಎದುರು, ಬನಶಂಕರಿ 2ನೇ ಹಂತ, ಬೆಂಗಳೂರು- 560 070.

ಸಮಕಾಲೀನ ಭಾರತೀಯ ಚಿತ್ರಕಾರರಲ್ಲಿ ಎಂ.ಎಫ್.ಹುಸೇನ್ ಬಹುಮುಖ್ಯ ಹೆಸರು. ಭಾರತೀಯ ದೇವತೆಗಳನ್ನು ಚಿತ್ರಿಸಿದ ಬಗೆಯಿಂದಾಗಿ ಅವರನ್ನು ವಿವಾದಗಳಲ್ಲಿ ಸಿಲುಕಿಸಲಾಯಿತು. ಇದರಿಂದಾಗಿ ಅವರ ಕಲೆಯ ಕುರಿತಂತೆ ಕೆಲವರು ಗಮನ ಹರಿಸುವುದು ಕೊಂಚ ಕಡಿಮೆಯಾಯಿತು. ಆದರೆ, ಅವರ ಕಲೆ ನಿಜ ಅರ್ಥದಲ್ಲಿ ಅರ್ಥಪೂರ್ಣವಾಗುತ್ತಾ ಬೆಳೆಯುತ್ತಾ ಹೋಯಿತು.

ಇಂಥ ವಿಶಿಷ್ಟ - ಪ್ರತಿಭಾವಂತ ಕಲಾವಿದನ ಬಗ್ಗೆ, ಅವರ ಕಲೆಯ ಬಗ್ಗೆ ಕಲಾವಿದರಾದ ಎನ್. ಮರಿಶಾಮಾಚಾರ್ ಈ ಪುಸ್ತಕದಲ್ಲಿ ಬರೆದಿದ್ದಾರೆ. ಕೆಲವರಿಗೆ ವಿಕ್ಷಿಪ್ತ ಎಂದು ಅನ್ನಿಸಬಹುದಾದ ಹುಸೇನ್‌ರ ವ್ಯಕ್ತಿತ್ವ, ಅವರ ಕಲಾ ಪ್ರಯಾಣವನ್ನು ಅರಿತುಕೊಳ್ಳಲು ಮಾಡಿದ ಪ್ರಯತ್ನದ ಅಂಗವಾಗಿಯೇ ಈ ಬರಹ ಮೂಡಿದೆ.

ಹುಸೇನ್ ವ್ಯಕ್ತಿತ್ವ ಅವರ ರೇಖೆಗಳಂತೆಯೇ ಬಾಗು ಬಳಕು, ಅನನ್ಯ ಕಾಂತಿಯನ್ನು ಸೂಸುವಂಥದಾಗಿತ್ತು ಎನ್ನುವುದು ಮರಿಶಾಮಾಚಾರ್ ಅವರ ಸರಳ ಬರವಣಿಗೆಯನ್ನು ಓದಿದರೆ ಗೊತ್ತಾಗುತ್ತದೆ.

ಹುಸೇನ್‌ರ ಕೆಲವು ಚಿತ್ರಗಳನ್ನು, ಲೇಖಕರೇ ಮಾಡಿದ ಒಂದು ಸಂದರ್ಶನವನ್ನು ಇಲ್ಲಿ ಕೊಡಲಾಗಿದೆ. ಇವೆಲ್ಲವೂ ಸಿನಿಮಾ ನಿರ್ದೇಶಕ ಹಾಗೂ ಕಲಾವಿದ ಹುಸೇನ್‌ರ ವ್ಯಕ್ತಿತ್ವವನ್ನು ಸ್ಫುಟವಾಗಿ ಚಿತ್ರಿಸುತ್ತವೆ. ಅವರನ್ನು ಅರ್ಥ ಮಾಡಿಕೊಳ್ಳಲು ಅನುವು ಮಾಡಿಕೊಡುವಂತಿವೆ.

ನೆನಪಿನಂಗಳದಿಂದ ...
ಲೇ: ಎಚ್.ಎಸ್. ಪಾರ್ವತಿ
ಪು: 352; ಬೆ: ರೂ. 220
ಪ್ರ: ಸಮರ್ಥ ಪ್ರಕಾಶನ, ನಂ. 538, 1ನೇ ಅಡ್ಡ ರಸ್ತೆ, 1ನೇ ಹಂತ, 4ನೇ ಬ್ಲಾಕ್, ಎಚ್.ಬಿ.ಆರ್ ಲೇಔಟ್, ಬೆಂಗಳೂರು- 560 043.

ಹಿರಿಯ ಲೇಖಕಿ ಎಚ್.ಎಸ್. ಪಾರ್ವತಿ ಅವರು ತಾವು ಕಂಡ ಹಾಗೂ ಕನ್ನಡಕ್ಕಾಗಿ ಕೆಲಸ ಮಾಡಿದ ವ್ಯಕ್ತಿಗಳ ಕುರಿತಂತೆ `ನೆನಪಿನಂಗಳದಿಂದ...~ ಕೃತಿಯಲ್ಲಿ ಬರೆದಿದ್ದಾರೆ.
ಲೇಖಕರಾದ ಮಾಸ್ತಿ, ಜಿ. ವೆಂಕಟಸುಬ್ಬಯ್ಯ, ಎಲ್. ಗುಂಡಪ್ಪ, ಎಲ್.ಎಸ್. ಶೇಷಗಿರಿರಾಯರು, ಬಾಗಲೋಡಿ ದೇವರಾಯ, ಹಾ.ಮಾ.ನಾಯಕರು ಹೀಗೆ ಸಾಹಿತಿಗಳ ಕುರಿತಂತೆಯೇ ಹೆಚ್ಚಿನ ವ್ಯಕ್ತಿಚಿತ್ರಗಳು ಇಲ್ಲಿವೆ.

ಜೊತೆಗೆ ಇವರೆಲ್ಲರ ಸಾಹಿತ್ಯದ ಹಾಗೂ ಪಾರದರ್ಶಕ ವ್ಯಕ್ತಿತ್ವದ ಪರಿಚಯವೂ ನಮಗೆ ಆಗದೇ ಇರುವುದಿಲ್ಲ. ಲೇಖಕರನ್ನು ಹೊರತು ಪಡಿಸಿದರೆ ಸಂಗೀತ ವಿದೂಷಿ ಜಿ. ಚೆನ್ನಮ್ಮ , ಗಾಯಕ ಎಸ್.ಜಿ. ರಘುರಾಮ್, ಸೂತ್ರದ ಬೊಂಬೆಯಾಟದ ಎ.ಎಲ್. ಶ್ರೀನಿವಾಸ ಮೂರ್ತಿ, ಶಿಲ್ಪಿ ಅಶ್ವತ್ಥಮ್ಮ ಆಚಾರ್ಯ ಹೀಗೆ ಲೇಖಕಿಯ ನೆನಪಿನಂಗಳದಿಂದ ಎದ್ದು ಬಂದ ವ್ಯಕ್ತಿಗಳ ಸಂಖ್ಯೆ ಬಹಳ.

ಇವರಲ್ಲಿ ಅನೇಕರು ಈಗಿಲ್ಲ. ಕೆಲವು ವ್ಯಕ್ತಿ ಚಿತ್ರಗಳಂತೂ ವ್ಯಕ್ತಿಗಳ ಸಾಧನೆ, ಅವರ ಬದುಕಿನ ವಿವರಗಳನ್ನು ನೀಡುವುದರಲ್ಲೇ ಮುಗಿಯುತ್ತವೆ ಅಥವಾ ಅಲ್ಲೇ ನಿಲ್ಲುತ್ತವೆ. ಆ ವ್ಯಕ್ತಿಗಳ ರಕ್ತ ಮಾಂಸಗಳಿಂದ ಕೂಡಿದ ವ್ಯಕ್ತಿತ್ವದ ಸ್ಪರ್ಶವನ್ನು ಇಲ್ಲಿನ ಬರಹಗಳಿಗೆ ನೀಡಿದ್ದರೆ ಅವು ಓದುಗರ ಪ್ರೀತಿಗೆ ಇನ್ನಷ್ಟು ಆಪ್ತವಾಗುತ್ತಿದ್ದವು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT