ADVERTISEMENT

ಲೈಫು ಇಷ್ಟೇನೇ!

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2012, 19:30 IST
Last Updated 13 ಅಕ್ಟೋಬರ್ 2012, 19:30 IST

ಕಥೆ

ಅದೊಂದು ಕೇಂದ್ರ ಸರ್ಕಾರದ ವಿಜ್ಞಾನಿಗಳ ಕಾಲೊನಿ. ಸುಮಾರು ಎರಡು ಸಾವಿರ ಸಂಸಾರಗಳಿದ್ದ ವಸತಿ ಸಮುಚ್ಚಯ. ಅವರವರ ಗ್ರೇಡಿಗೆ ತಕ್ಕಂತೆ ಅಪಾರ್ಟ್‌ಮೆಂಟ್ ಕಟ್ಟಡಗಳು. ಎಲ್ಲೆಲ್ಲೂ ಹಸಿರು, ತರಹೇವಾರಿ ಮರಗಳು, ಕೆಂಪು ಕಾಲುದಾರಿಗಳು, ಕಪ್ಪು ಟಾರು ರೋಡುಗಳು. ಅಲ್ಲೇ ಎಲ್ಲಾ ರೀತಿಯ ಅನುಕೂಲ. ಮಕ್ಕಳಿಗೆ ಸ್ಕೂಲುಗಳು, ಬ್ಯಾಂಕು, ಆಸ್ಪತ್ರೆ, ಟೆನ್ನಿಸ್, ಬ್ಯಾಡ್ಮಿಂಟನ್, ಬಾಸ್ಕೆಟ್‌ಬಾಲ್ ಕೋರ್ಟುಗಳು.

ತರಕಾರಿ, ದಿನನಿತ್ಯದ ಅಕ್ಕಿ ಬೇಳೆ ಸೋಪು ಸಕ್ಕರೆ ಹೂವು ಹಣ್ಣುಗಳ ಅಂಗಡಿಗಳಿರುವ ಮಾರುಕಟ್ಟೆ. ಸರ್ಕಾರ  ಈ ವಿಜ್ಞಾನಕೇಂದ್ರದಲ್ಲಿ ಎಲ್ಲಾ ಸ್ತರಗಳಲ್ಲಿ ಕೆಲಸ ಮಾಡುವವರಿಗೂ ಯಾವರೀತಿಯ ಭೇದಗಳಿಲ್ಲದೆ ಅನುಕೂಲಗಳನ್ನು ಕಲ್ಪಿಸಿಕೊಟ್ಟಿತ್ತು. ಆಸ್ಪತ್ರೆಯಲ್ಲಿ ಕೆಲಸ ಮಾಡುವ ನರ್ಸಿನಿಂದ ಹಿಡಿದು ಗ್ರೂಪ್ ಡೈರೆಕ್ಟರ್‌ವರೆಗೆ ಎಲ್ಲರೂ ಅಲ್ಲೇ ವಾಸಿಸುತ್ತಿದ್ದರು.

ಮನೆಗಳ ಸೈಜು ಮಾತ್ರ ಅವರ ಸ್ಥಾನಕ್ಕೆ ತಕ್ಕಂತೆ ಬೇರೆಬೇರೆ- ಪುಟ್ಟ ಒನ್ ರೂಮ್ ಕಿಚನ್‌ನಿಂದ ಹಿಡಿದು ವಿಶಾಲವಾದ, ಮುಂಬೈಯಲ್ಲಿ ಕಾಣುವುದೇ ಅಪರೂಪವಾದ ಮೂರು ಬೆಡ್ರೂಮ್ ಹಾಲ್ ಕಿಚನ್ ಹೊಂದಿದ್ದ ಗುಂಪು ಗುಂಪು ಕಟ್ಟಡಗಳಿದ್ದವು.

ಇದರಲ್ಲಿ ಚಚ್ಚೌಕಾಕಾರದಲ್ಲಿ ಕಟ್ಟಿದ್ದ ನಾಲ್ಕು ಕಟ್ಟಡಗಳ ಸಮುಚ್ಚಯ “ಬುದ್ಧ ವಿಹಾರ”. ಈ ನಾಲ್ಕು ಕಟ್ಟಡಗಳ ನಡುವಿನ ಪ್ರಾಂಗಣದಲ್ಲಿ ಒಂದು ಬ್ಯಾಡ್ಮಿಂಟನ್ ಕೋರ್ಟು, ಒಂದು ಬಾಸ್ಕೆಟ್‌ಬಾಲ್ ಕೋರ್ಟು ಇದ್ದುವು. ಬಾಸ್ಕೆಟ್‌ಬಾಲ್ ಕೋರ್ಟಿನಲ್ಲಿ ಸಂಜೆ, ಬ್ಯಾಡ್ಮಿಂಟನ್ ಕೋರ್ಟಿನಲ್ಲಿ ಬೆಳ್ಳಂಬೆಳಿಗ್ಗೆ ಸುತ್ತಮುತ್ತಲಿನ ಮನೆಗಳವರು ಆಟಕ್ಕೆ ಬರುತ್ತಿದ್ದರು.

ಅಲ್ಲಿ ಏಳೂವರೆಯ ಹೊತ್ತಿಗೆ ಗಾಳಿ ಜೋರಾಗಿ, ಶಟಲ್ ಗೊತ್ತುಗುರಿಯಿಲ್ಲದೆ ಹಾರುತ್ತಿದ್ದುದರಿಂದ, ಎಲ್ಲರೂ ಸರಿಯಾಗಿ ಆರು ಗಂಟೆಗೆ ಬಂದು ಒಂದಷ್ಟು ಗೇಮುಗಳಾಡಿ ಏಳೂವರೆಗೆ ಸರಿಯಾಗಿ ನೆಟ್ ಕಳಚಿ ಬೆವರೊರೆಸಿಕೊಂಡು ಪಕ್ಕದಲ್ಲೇ ಇದ್ದ ಕಲ್ಲು ಬೆಂಚುಗಳ ಮೆಲೆ  ಕೆಲ ನಿಮಿಷಗಳು ವಿರಮಿಸಿ ಅಫೀಸಿಗೆ ಹೋಗುವ ತಯಾರಿಯ ಮೊದಲ ಹಂತವೆಂಬಂತೆ ಮನೆ ಕಡೆ ಹೆಜ್ಜೆ ಹಾಕುತ್ತಿದ್ದರು.

ಇಲ್ಲಿ ಎಲ್ಲಾ ಶಿಸ್ತಿನಿಂದಲೇ ನಡೆಯುತ್ತಿತ್ತು. ಅವರವರು ಬಂದ ಸರತಿಯ ಪ್ರಕಾರ ಅವರಿಗೆ ಆಟಕ್ಕೆ ಚಾನ್ಸ್ ಸಿಗುತ್ತಿತ್ತು. ನೆಟ್, ಶಟಲ್ ಬಾಕ್ಸ್‌ಗಳನ್ನು ಕೂಡ ಪ್ರತಿ ತಿಂಗಳು ಒಬ್ಬೊಬ್ಬರ ಮನೆಯಲ್ಲಿ ಇಟ್ಟುಕೊಳ್ಳಬೇಕಾಗುತ್ತಿತ್ತು. ಸುಮಾರು ಹನ್ನೆರಡು ಜನರಿದ್ದ ಈ ಗುಂಪಿನಲ್ಲಿ ಹತ್ತು ಗಂಡಸರು, ಇಬ್ಬರು ಹೆಂಗಸರು. ಅದರಲ್ಲಿ ತುಂಬಾ ಚೆನ್ನಾಗಿ ಆಡುತ್ತಿದ್ದ ದೇಶಪಾಂಡೆ (ಅವಳನ್ನು ಎಲ್ಲರೂ ದೇಶಪಾಂಡೆಯೆಂದೇ ಕರೆಯುತ್ತಿದ್ದರು.

ಅವಳ ಹೆಸರು ಆರತಿಯೆಂದು ಗೊತ್ತಿದ್ದುದು ಅವಳ ಕಲೀಗ್‌ಗಳಿಗೆ ಮಾತ್ರ). ಆಡಳಿತ ವಿಭಾಗದಲ್ಲಿ ಕ್ಲರ್ಕ್ ಆಗಿದ್ದಳು. ಅವಳಿಗೋ ಕೈ ತುಂಬಾ ಸಂಬಳ, ಮದುವೆಯಾಗಿರದಿದ್ದರಿಂದ ಗಂಡ, ಮಕ್ಕಳ ಯೋಚನೆಯೂ ಇರಲಿಲ್ಲ. ಡಯಾಬಿಟೀಸ್ ಹತೋಟಿಯಲ್ಲಿಡಲು ಬರುತ್ತೇನೆಂದು ಹೇಳುತ್ತಿದ್ದ ಗೃಹಿಣಿ ಸುಂದರಿ ವಾರಕ್ಕೆರಡು ಬಾರಿ ಬಂದರೆ ಹೆಚ್ಚು.

ತಪ್ಪದೆ ಬರುತ್ತಿದ್ದವರಲ್ಲಿ ಹತ್ತು ವರ್ಷಗಳಿಂದಲೂ ಪ್ರಮೋಷನ್ ಸಿಗದೆ ಖಿನ್ನನಾಗಿರುವುದನ್ನು ತೋರಿಸಿಕೊಳ್ಳದೆ ಇಲ್ಲಿ ಬಂದು ಯಾವಾಗಲೂ `ಔಟ್~, `ಇನ್~ಗಳ ಬಗ್ಗೆ ಜಗಳ್ಳಾಡುತ್ತಿದ್ದ  ಫುಡ್ ಟೆಕ್ನಾಲಜಿ ಕುಟ್ಟಿ. ಬಹಳ ಕಿಡ್ನಿ ತೊಂದರೆಯಿದ್ದರೂ ತಾನು ಫಿಟ್ ಆಗಿದ್ದೇನೆಂದು ಹೇಳುತ್ತಾ ಕೇವಲ ಒಂದು ಗೇಮ್ ಆಡಿ ನಂತರ ಕಲ್ಲು ಬೆಂಚಿನ ಮೇಲೆ ಕೂತು ಎಲ್ಲರ ಸ್ಟೈಲ್ ಎಲ್ಲೆಲ್ಲಿ ತಪ್ಪು ಎಂದು ಟೀಕಿಸುತ್ತಿದ್ದ ಚಲಪತಿ.
 
ಮನೆಗಾಗಿ ವಿಪರೀತ ಸಾಲ ಮಾಡಿ `ಯೇ ಲೋನ್ ಭರನೆ ಮೆ ಮೇರಾ ಚಡ್ಡಿ ನಿಕಲಗಯಾ ಹೈ ಯಾರ್~ ಎಂದು ಜೋಕು ಮಾಡುತ್ತಾ ಜಗಜೀತ್ ಸಿಂಗ್ ಗಜಲ್ ಗುನುಗುನಿಸುತ್ತಲೇ ಶಾಟುಗಳನ್ನು ಹೊಡೆಯುತ್ತಿದ್ದ ಕಡ್ಡಿ ಕಾಷ್ಠದಂತಿದ್ದ ಬುರ್ಡೆ. ಪ್ರತಿ ಶನಿವಾರ ಮಾತ್ರ ಆಟಕ್ಕೆ ರಜಾ ಹಾಕಿ ತಪ್ಪದೆ ಬೈಕುಲ್ಲಾ ಮಾರುಕಟ್ಟೆಗೆ ಹೋಗಿ ಹೋಲ್‌ಸೇಲ್ ರೇಟಿನಲ್ಲಿ ತರಕಾರಿ ತರುತ್ತಿದ್ದ ಪ್ರಕಾಶ್ ನಂಬಿಯಾರ್.

ಎಂದೂ ಒಂದು ಮಾತೂ ಆಡದೆ ಮೌನವಾಗಿ ಬಂದು ಮೌನವಾಗಿ ಹೊರಟು ಹೋಗುತ್ತಿದ್ದ ಏಕೈಕ ಡೌನ್ ಸಿಂಡ್ರೋಮ್ ಮಗನ ತಂದೆ ವರ್ಮಾ.

ಇವರೆಲ್ಲಾ ದಿನಾ ತಪ್ಪದೆ ಇಲ್ಲಿ ಸೇರಿ ಮೈಮರೆತು ಒಳ್ಳೆಯ ಶಾಟುಗಳನ್ನು ಹೊಡೆದಾಗ ಖುಷಿಯಾಗಿ, ತಪ್ಪಿ ಸರ್ವಿಸ್ ನೆಟ್ಟಿಗೆ ಬಡಿದಾಗ ಖಿನ್ನರಾಗಿ, ಮಧ್ಯೆ ಮಧ್ಯೆ ಲೈನ್ ಡಿಸಿಷನ್ಗಳ ಬಗ್ಗೆ, ಪಾಯಿಂಟ್ ಎಣಿಕೆಗಳ ಬಗ್ಗೆ ಚಕಮಕಿ ನಡೆಸಿ ಆ ಕ್ಷಣದಲ್ಲಿ ತಮ್ಮ ಆಫೀಸ್ ರಾಜಕೀಯ, ಕಿಡ್ನಿ ತೊಂದರೆ, ಮನೆಯಲ್ಲಿ ಮಂಕಾಗೆ ಕೂತಿರುವ ಡೌನ್ ಸಿಂಡ್ರೋಮ್ ಮಗ, ತಲೆ ಮೇಲೆ ಕತ್ತಿಯಂತೆ ತೂಗುತ್ತಿದ್ದ ಲಕ್ಷಾಂತರ ಸಾಲ, ತಲೆ ಕೆಟ್ಟು ಹಗಲೂ ರಾತ್ರಿ ಬಡಬಡಿಸುತ್ತಲೇ ಇರುವ ವೃದ್ಧೆ ತಾಯಿ, ರಿಟೈರ್‌ಮೆಂಟ್ ಆದಮೇಲೆ ಎದುರಾಗಬಹುದಾದ ಒಂಟಿತನದ ಭಯ. ಈ ಎಲ್ಲಾ ನೋವುಗಳನ್ನು ಹಿಂದೆ ಹಾಕಿ ಮಕ್ಕಳಾಗುತ್ತಿದ್ದರು.

ಇದೆಲ್ಲಾ ನಡೆಯುತ್ತಿದ್ದಾಗ ಪ್ರತಿದಿನ ತಪ್ಪದೆ ಒಂದು ಕುತೂಹಲಕಾರಿ ಘಟನೆ ನಡೆಯುತ್ತಿತ್ತು. ಬ್ಯಾಡ್ಮಿಂಟನ್ ಕೋರ್ಟ್ ಪಕ್ಕದ ಬಿಲ್ಡಿಂಗಿನ ಫಸ್ಟ್ ಫ್ಲೋರಿನಲ್ಲಿದ್ದ ಮಿಸೆಸ್ ಬುರ್ಡೆ 7.20ರ ಲೋಕಲ್ ಹತ್ತಲು ತಯಾರಾಗಿ ಹೊರಗೆ ಬರುತ್ತಿದ್ದಳು. ವೀಟಿ ಸ್ಟೇಶನ್ನಿನ ಹತ್ತಿರವಿದ್ದ ಬೃಹತ್ ಮುಂಬಯಿ ಮಹಾನಗರ ಪಾಲಿಕೆಯಲ್ಲಿ ಕ್ಲರ್ಕ್ ಆಗಿದ್ದ ಅವಳಿಗೆ ತುಂಬಾ ಇನ್‌ಫ್ಲೂಯೆನ್ಸ್ ಇದೆಯೆಂದು ಜನ ಮಾತಾಡಿಕೊಳ್ಳುತ್ತಿದ್ದರು.

ಅವಳ ಧಡೂತಿ ದೇಹಕ್ಕೆ ಸುತ್ತಿದ ನೈಲಾನ್ ಸೀರೆ, ಮುಖದ ತುಂಬಾ ಮೆತ್ತಿಕೊಂಡಿರುತ್ತಿದ್ದ ಗುಲಾಬಿ ಬಣ್ಣದ ಪೌಡರು, ಕೆಂಪು ಲಿಪ್‌ಸ್ಟಿಕ್, ಅಂದಿನ ಸೀರೆಯ ಬಣ್ಣಕ್ಕೆ ಹೊಂದುವಂತೆ ಹಣೆಯ ಮೇಲೆ ಅವಳಿಡುತ್ತಿದ್ದ ಸ್ಟಿಕರ್ ಬಿಂದಿ, ಅವಳು ಹಚ್ಚಿರುತ್ತಿದ್ದ ಫಾರಿನ್ ಸುಗಂಧ ಅವಳ ಬರವನ್ನು ಕೆಲವು ಸೆಕೆಂಡುಗಳ ಮೊದಲೇ ಸಾರುತ್ತಿತ್ತು. ಕೋರ್ಟಿನಲ್ಲಿರುತ್ತಿದ್ದ ಅವಳ ಗಂಡ ಕಡ್ಡಿ ಕಾಷ್ಠ ಬುರ್ಡೆ ಅವಳು ಕಣ್ಣಿಗೆ ಬೀಳುತ್ತಿದ್ದಂತೆಯೇ ಗೇಮ್ ಮಧ್ಯದಲ್ಲಿದ್ದರೂ  ಅಲ್ಲೇ ರಾಕೆಟ್ ಎಸೆದು ಓಡುತ್ತಿದ್ದ.

ಅವಳು ಇವನತ್ತ ಓರೆನೋಟ ಬೀಸಿ ಸೆರಗು ಸರಿ ಮಾಡಿಕೊಳ್ಳುತ್ತಾ ನಿಲ್ಲುತ್ತಿದ್ದಳು. ಆಗ ಅವನು ಬೇಗಬೇಗ ಅಲ್ಲೇ ನಿಂತಿರುತ್ತಿದ್ದ ತನ್ನ ಖಟಾರ ಸ್ಕೂಟರನ್ನು ಸ್ಟಾರ್ಟ್ ಮಾಡಲು ಕಿಕ್ ಮಾಡಲು ಶುರು ಮಾಡುತ್ತಿದ್ದ. ಒಂದು.. ಎರಡು ಮೂರು ನಾಲ್ಕು ಐದು... ಅದು ಮಾತು ಕೇಳಿದರೆ ತಾನೇ?! ಸುತ್ತಮುತ್ತಾ ತನ್ನನ್ನು ಯಾರಾದರೂ ಗಮನಿಸುತ್ತಿದ್ದಾರೆಯೇ ಎಂದು ಕಡೆಗಣ್ಣಿನಿಂದ ನೋಡುತ್ತಲೇ ಮತ್ತೆ ಕಿಕಿಂಗ್  ಮುಂದುವರಿಸುತ್ತಿದ್ದ.
 
ಆರು.. ಏಳು.. ಎಂಟು... ಅಷ್ಟು ಹೊತ್ತಿಗೆ ಅವಳಿಗೆ ಚಡಪಡಿಕೆ ಶುರುವಾಗಿ ತನ್ನ ಹ್ಯಾಂಡ್‌ಬ್ಯಾಗನ್ನು ಎಡಗೈಯಿಂದ ಬಲಗೈಯಿಗೆ ಬದಲಾಯಿಸಿ, ಮುಂಗುರುಳು ಸವರಿಕೊಳ್ಳುತ್ತಿದ್ದಳು. ಒಂಬತ್ತು.. ಹತ್ತು.. ಹನ್ನೊಂದು... ಅವನು ಕಿಕ್ ಮಾಡುವುದನ್ನು ಮುಂದುವರಿಸಿದಂತೆ ಇದ್ದಕ್ಕಿದ್ದಂತೆ `ಢಮಾರ್!!!~ ಎಂದು ಅದು ಬ್ಯಾಕ್ ಫಯರ್ ಆದ ಶಬ್ದಕ್ಕೆ ಆಟಗಾರರೆಲ್ಲಾ ಬೆಚ್ಚಿಬಿದ್ದು, ಮರದ ಮೇಲೆ ಕೂತಿದ್ದ ಕಾಗೆಗಳು `ಕಾಕಾಕಾಕಾ~ ಎಂದು ಕೂಗುತ್ತಾ ಹಾರಿ ಹೋಗುತ್ತಿದ್ದುವು.

ಆ ಕ್ಷಣದಲ್ಲಿ ಸುತ್ತಮುತ್ತಲಿದ್ದವರೆಲ್ಲಾ ಬಿದ್ದು ಬಿದ್ದು ನಗುತ್ತಿದ್ದರು. ಆಗ ಅವಳು ಕೋಪ, ಅವಮಾನದಿಂದ ಕೆಳದನಿಯಲ್ಲಿ ಹಲ್ಲು ಕಚ್ಚಿ ಕೆಳದನಿಯಲ್ಲಿ ಬೈದುಕೊಳ್ಳುತ್ತಾ, ದೊಪ್ಪನೆ ಕಾಲಪ್ಪಳಿಸಿ ಸರಸರನೆ ಸ್ಟೇಶನ್ ದಾರಿಯತ್ತ ಹೆಜ್ಜೆ ಹಾಕಲು ಶುರು ಮಾಡುತ್ತಿದ್ದಳು. ಆದರೆ ಕೊಂಚವೂ ಇದರಿಂದ ವಿಚಲಿತನಾಗದ ಬುರ್ಡೆ ಮತ್ತೆ ಒಂದು ಎರಡು ಮೂರು ಎಂದು ಕಿಕ್ ಮಾಡುವುದನ್ನು ನಿರ್ಲಿಪ್ತನಾಗಿ ಮುಂದುವರಿಸಿದಂತೆ ಕೊನೆಗೆ ಆ ಖಟಾರಾಗೆ ಅಯ್ಯ್ ಎನ್ನಿಸಿ ಭುರ‌್ರನೆ ಸ್ಟಾರ್ಟ್ ಆಗುತ್ತಿತ್ತು.

ಆಗ ಅವನು ವೇಗವಾಗಿ ಹೊರಟು ದಾರಿಯಲ್ಲಿ ಹೆಂಡತಿಯನ್ನು ಹತ್ತಿಸಿಕೊಂಡು ಸ್ಟೇಶನ್ ತಲುಪಿಸಿಯೇ ಬರುತ್ತಿದ್ದ. ದಿನ, ಪ್ರತಿದಿನ.

ಅಷ್ಟು ಹೊತ್ತಿಗೆ ವಾಚ್ ನೋಡಿಕೊಂಡು ಮನೆಗೆ ಹೊರಡುವ ಟೈಮಾಯಿತೆಂಬುದನ್ನು ಗ್ರಹಿಸಿದ ಆಟಗಾರರು ನೆಟ್ ಬಿಚ್ಚಿ ಮನೆಗೆ ಹೊರಡುತ್ತಿದ್ದರು..

ವಿಚಿತ್ರವೆಂದರೆ, ದಿನಾ ತಪ್ಪದೆ ನಡೆಯುತ್ತಿದ್ದ ಈ ಪ್ರಕರಣ, ಒಂದು ರೀತಿ ಎಲ್ಲವೂ ಸರಿಯಾಗಿದೆ ಎಂಬ ವಿಚಿತ್ರ ಸಮಾಧಾನವನ್ನು ಅಲ್ಲಿನವರ ಮನಸ್ಸಿನಲ್ಲಿ ತುಂಬುತ್ತಿತ್ತು. ಎಂದಾದರೂ ಮಿಸೆಸ್ ಬುರ್ಡೆ ಆಫೀಸಿಗೆ ರಜಾ ಹಾಕಿ ಮನೆಯಲ್ಲಿದ್ದು ಈ ನಾಟಕ ನಡೆಯದಿದ್ದರೆ, ಆಟ ಮುಗಿಸಿ ಹಿಂದಿರುಗುವಾಗ ಅವರಿಗೆಲ್ಲಾ ಏನೋ ಕಳೆದುಕೊಂಡಂತೆ ಅನ್ನಿಸಿ, ಅರಿವಿಲ್ಲದೆಯೇ ಖಾಲಿ ಖಾಲಿ ಭಾವ ಮನ ತುಂಬಿ ಭಾರವಾಗುತ್ತಿತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT