ADVERTISEMENT

ಸತ್ತ ನದಿಯಲ್ಲಿಯ ಮೀನು

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2012, 19:30 IST
Last Updated 11 ಆಗಸ್ಟ್ 2012, 19:30 IST

ರವಿವಾರದ ಬೆಳಗು. ನಿದ್ದೆಯಿಂದ ಎಚ್ಚೆತ್ತ ರಾಜನ್ ಗೋಡೆಯ ಮೇಲಿನ ಗಡಿಯಾರದತ್ತ ಕಣ್ಣು ಓಡಿಸಿದ. ಒಂಬತ್ತೂವರೆ ಗಂಟೆಯಾಗಿತ್ತು. ತನ್ನ ತಲೆಯನ್ನು ಕೈಯಿಂದ ಒಮ್ಮೆ ಸವರಿಕೊಂಡನು, ತಲೆಯ ಮೇಲ್ಭಾಗದ ಮಧ್ಯದಲ್ಲಿ ಕೂದಲೇ ಇರಲಿಲ್ಲ. ಬಂಜರು ಭೂಮಿಯಂತಾಗಿತ್ತು ಅದು.

ಯಾಕಾಗಬಾರದು? ಗುಮಾಸ್ತನಿಂದ ಸೂಪರಿಂಟೆಂಡೆಂಟ್ ಆಗುವ ತನಕ ವಯಸ್ಸು ನಿಂತಲ್ಲೇ ನಿಲ್ಲಬೇಕೇ? ಸೀಮಾ ತನ್ನ ಸಲುವಾಗಿ ಇಟ್ಟಿದ್ದ ನಿಂಬು ಚಹಾವನ್ನು ಸ್ವಲ್ಪ ಸ್ವಲ್ಪವಾಗಿ ಗುಟುಕರಿಸಿ ವೆರಾಂಡಾದತ್ತ ಧಾವಿಸಿದ. ಸಿಗರೇಟೊಂದನ್ನು ಹಚ್ಚಿ ಲಗುಬಗೆಯಿಂದ ಅಲ್ಲಿಯ ಆರಾಮ ಕುರ್ಚಿಯ ಮೇಲೆ ಕುಕ್ಕರಿಸಿದ.

ಕೂಡುತ್ತಿದ್ದಂತೆಯೇ, ಅವನ ಶರೀರದ ಬೇರೆ ಬೇರೆ ಭಾಗದಲ್ಲಿ ಕೇಂದ್ರೀಕೃತವಾಗಿದ್ದ ಬೊಜ್ಜು ಅಲುಗಾಡಿ ಕೆಲಕಾಲ ಭೂಕಂಪದ ನಂತರ ಏಳುವಂತೆ ಕಂಪನಗಳೆದ್ದವು. ದಣಿದವನಂತೆ ದೀರ್ಘ ನಿಟ್ಟುಸಿರು ಬಿಟ್ಟ. ಹೌದು, ವಾಸನೆಯ ಆಭಾಸ ಇನ್ನೂ ಆಗುತ್ತಿತ್ತು. ನಿಜವೇ. ಏನೇ ಆದರೂ ಅದು ಮಿಲಿಟರಿ ಬ್ರ್ಯಾಂಡ್, ಅದರಲ್ಲೂ ನಿನ್ನೆ ರಾತ್ರಿ ಕುಡಿದಿದ್ದು ಕೊಂಚ ಹೆಚ್ಚೇ ಆಗಿತ್ತೇನೋ.

ಮೊದಮೊದಲು ಇದನ್ನು ಸೀಮಾಳಿಂದ ಬಚ್ಚಿಡಲು ಒಂದು ಪೆಗ್ ತೆಗೆದುಕೊಂಡ ನಂತರ ಮಸಾಲಾ ಪಾನ್ ಅಗಿಯುತ್ತಿದ್ದ. ಆದರೀಗ ಬಾಟಲಿಗಳು ಬೆಡ್‌ರೂಮಿನ ಟೇಬಲ್ ಮೇಲೆ ಇಡೀ ರಾತ್ರಿ ಎಚ್ಚರವಾಗಿಯೇ ಕುಳಿತಿರುತ್ತಿದ್ದವು. ಸೀಮಾ ಅದ್ಯಾವಾಗಲೋ ನೋ ಆಬ್ಜೆಕ್ಷನ್ ಸರ್ಟಿಫಿಕೇಟನ್ನು ಕೊಟ್ಟಾಗಿತ್ತು. ಇತ್ತೀಚೆಗೆ ಅವಳ ವರ್ತನೆಯೇ ಬೇರೆಯಾಗಿದೆ. 

ಸಿಗರೇಟನ್ನು ದೀರ್ಘವಾಗಿ ಎಳೆದು ಎದುರಿಗೆ ನೋಟ ಬೀರಿದ. ಬಿಸಿಲು ಏರುತ್ತಿತ್ತು. ನೈಟ್‌ಕ್ಲಕ್ಲಬ್ಬಿನ ನರ್ತಕಿ ಧರಿಸಿದ ದುಪಟ್ಟಾದಂತೆ ಕೆರೆಯ ನೀರಿನಲ್ಲಿ ಅಲೆಗಳು ಏಳುತ್ತ ಹೊಳೆಯುತ್ತಿದ್ದವು. ಕೆರೆ ಎಂದರೆ ಅದು ನಿಜವಾದ ಅರ್ಥದಲ್ಲಿ ಕೆರೆಯಲ್ಲ. ರುಕ್ಮಿಣಿ ನದಿಯು ತನ್ನ ದಿಕ್ಕು ಬದಲಾಯಿಸಿದ್ದರಿಂದ ಮತ್ತು ಅದರ ಎರಡೂ ತುದಿಗಳು ಮುಚ್ಚಿ ಹೋದ ಕಾರಣ ಆದ ಕೆರೆಯದು.

ವರ್ಷವಿಡೀ ನೀರಿನ ಕೊರತೆ ಇರಲಿಲ್ಲ. ಆದರೆ ಅದರಲ್ಲಿ ಒಳಹರಿವು ಇರಲಿಲ್ಲ, ಮಳೆಗಾಲದಲ್ಲೂ. ಮಡುಗಟ್ಟಿದ ನದಿಯಾಗಿತ್ತದು, ಮೃತ ನದಿ. ಮೇಲ್ನೋಟಕ್ಕೇನೋ ಪರಿಶುದ್ಧ ನೀರಿನಂತೆ ಸ್ವಚ್ಛವಾಗಿ ಕಂಡರೂ, ಒಂದು ಒಂದೂವರೆ ಫೂಟಿನ ಕೆಳಗೆ ಪಾಚಿಗಳ ಸಾಮ್ರೋಜ್ಯವೇ ಅಡಗಿತ್ತೆನ್ನುವದನ್ನು ಊಹಿಸಲೂ ಸಾಧ್ಯವಾಗದು.

ಕೆರೆಯ ಎರಡೂ ಬದಿಯಲ್ಲಿ ಸಾಲು ಸಾಲು ಮನೆಗಳು, ಆಫೀಸುಗಳು, ಅಂಗಡಿಗಳು ತುಂಬಿದ್ದವು. ಕೆಲವೇ ವರ್ಷಗಳ ಹಿಂದೆ ಅದೊಂದು ಚಿಕ್ಕ ಗ್ರಾಮವಾಗಿತ್ತು ಎನ್ನುವದು ಬಹಳ ಹಳೆಯ ಕಥೆಯಾಗಿರಲಿಲ್ಲ. ಕೆಲವು ಸರಕಾರೀ ಆಫೀಸುಗಳು ಮತ್ತು ಫ್ಯಾಕ್ಟರಿಗಳು ಬಂದಕೂಡಲೇ ಅದು ಚಿಕ್ಕ ನಗರವಾಗಿ ಬದಲಾಯಿತು. ಕೆಲಕಾಲದ ಹಿಂದೆ ಅದು ಗ್ರಾಮವಾಗಿತ್ತೆನ್ನುವ ಚಿಹ್ನೆಗಳು ಇನ್ನೂ ಕಾಣಸಿಗುತ್ತಿದ್ದವು. ಉದಾಹರಣೆಗೆ, ದಡದಿಂದ ಸ್ವಲ್ಪವೇ ದೂರದಲ್ಲಿದ್ದ ದೊಡ್ಡ ಬಸರೀ ಗಿಡದ ಕೆಳಗೆ ಮೀನು ಹಿಡಿಯಲು ಕುಳಿತಿದ್ದ ಮನುಷ್ಯ.
 
ಎಮ್ಮೆಯಂತೆ ಕಪ್ಪಗೆ ಇದ್ದನವನು. ಅವನ ಕೈಕಾಲುಗಳು ತುಂಬಾ ಗಟ್ಟಿಯಾಗಿದ್ದವು. ತನ್ನ ಗಾಳಕ್ಕೆ ಯಾವಾಗಲೂ ಎರೆಹುಳು ಅಥವಾ ಚಿಕ್ಕ ಹುಳಗಳನ್ನು ಸಿಗಿಸಿರುತ್ತಿದ್ದ, ಅದರಲ್ಲೂ ಅವನ್ನು ಮನೆಯಲ್ಲಿಯೇ ತಯಾರಿಸಿದ ಮದ್ಯದಲ್ಲಿ ಮುಳುಗಿಸಿರುತ್ತಿದ್ದ. ದೊಡ್ಡ ದೊಡ್ಡ ಮೀನುಗಳನ್ನು ಅವನು ಅದ್ಹೇಗೆ ಹಿಡಿಯುತ್ತಿದ್ದ ಎನ್ನುವದನ್ನು ಊಹಿಸುವುದೇ ಒಂದು ರೋಚಕ ಸಂಗತಿಯಾಗುತ್ತಿತ್ತು.
 
ಅದೇ ಗಿಡದ ಕೆಳಗೆ ಕುಳಿತಿದ್ದ ಒಬ್ಬ ಯುವಕ ಅವನನ್ನು ಏನೋ ಪ್ರಶ್ನಿಸುತ್ತಿದ್ದ. ಬಹುಶಃ ಅವನು ತೀರ ಇತ್ತೀಚೆಗೆ ಇಲ್ಲಿಗೆ ವರ್ಗವಾಗಿ ಬಂದವನಿರಬೇಕು. ಸಿಗರೇಟಿನ ಹೊಗೆಯನ್ನು ಸೇವಿಸಿ ಆನಂದಿಸುತ್ತ ರಾಜನ್ ಅವರ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದ.
`ನಿಮ್ಮ ಗಾಳಕ್ಕೆ ಯಾವ ಹುಳವನ್ನೂ ಸಿಗಿಸಿಲ್ಲವೆಂದು ಅನಿಸ್ತದೆ. ಆದರೂ ಮೀನುಗಳು ಗಾಳಕ್ಕೆ ಬೀಳುತ್ತವೆಯೇ?~

`ಗಾಳಕ್ಕೆ ಬೀಳುವದಂತೂ ನಿಜ. ದೊಡ್ಡ ಮೀನುಗಳಿಗೆ ಆಹಾರ ಸಿಗುತ್ತದೆ ಮತ್ತು ಅವು ಬಹಳ ಆಳಕ್ಕೆ ಇಳಿದು ಹೋಗುತ್ತವೆ. ಈ ಕೆರೆಯಂತೂ ಪಾಚಿಯಿಂದ ತುಂಬಿ ಹೋಗಿದೆ. ಯಾರಾದರೂ ಇದರಲ್ಲಿ ಬಿದ್ದು ಸತ್ತರೆ, ಅವರ ಹೆಣಗಳನ್ನು ಹುಡುಕುವುದೂ ಕಷ್ಟ. ಕೆಲವೊಮ್ಮೆ ಪದರುಗಟ್ಟಿದ ಪಾಚಿಗಳನ್ನು ಸರಿಸಿ ಅವು ಮೇಲೆ ಬಂದು ತೇಲುತ್ತವೆ. ಆದರೆ ಈ ಕೆರೆಯಲ್ಲಿ ಹರಿವು ಇದ್ದ ದಿನಗಳಲ್ಲಿ...~
`ಕೆರೆಯಲ್ಲಿ ಹರಿವು! ಹಾಗೆಂದರೇನು?~ 

2
ಈಗಿನ ದಿನಗಳಲ್ಲಿ ಈ ನದಿ ಸತ್ತಂತಾಗಿದೆ. ಮೊದಲಿಗೆ, ಈ ರುಕ್ಮಿಣಿ ನದಿಯು ಇಲ್ಲಿ ವಕ್ರವಾಗಿ ಹರಿಯುತ್ತಿತ್ತು. ಎರಡೂ ಬದಿಯ ನದಿಯ ತುದಿಗಳು ಬಹಳ ಚಿಕ್ಕವಾದವು. ಆಗ ಕೆಲ ಸರಕಾರೀ ನೌಕರರು ಮತ್ತು ಕೆಲವು ದುಷ್ಟರು ಎರಡೂ ತುದಿಗಳಲ್ಲಿ ಕಲ್ಲುಗಳ ಒಡ್ಡನ್ನು ಕಟ್ಟಿ ನದಿಯ ಪ್ರವಾಹವನ್ನೇ ನಿಲ್ಲಿಸಿದರು.

ಹಾಗಾದರೆ, ಇದೆಲ್ಲ ಬಹಳ ಹಿಂದೆ ಆಗಿರಲಿಕ್ಕಿಲ್ಲ.
ಹೌದು. ಇದಾಗಿ ಐವತ್ತು ವರ್ಷಗಳೂ ಗತಿಸಿಲ್ಲ. ಸ್ವಚ್ಛ ನೀರು ಹರಿಯುತ್ತಿದ್ದಾಗ ಬೆಳ್ಳಿ ಮೀನುಗಳು ನೃತ್ಯ ಮಾಡುತ್ತಿದ್ದವು. ಪಾಚಿ ಕಾಣಲೂ ಸಿಗುತ್ತಿರಲಿಲ್ಲ.
ಈಗ ಕೂಡ ಇದನ್ನು ಸ್ವಚ್ಛ ಮಾಡಬಹುದಲ್ಲ?

`ಸ್ವಚ್ಛ ಮಾಡುವುದೇ?~- ಮೀನಿಗಾಗಿ ಗಾಳ ಹಾಕುತ್ತಿದ್ದವನು ತನ್ನ ದೊಡ್ಡ ಮತ್ತು ದುಂಡನೆಯ ಕಣ್ಣುಗಳಿಂದ ಅವನನ್ನು ನಿಟ್ಟಿಸಿ ನೋಡಿದ. ಏರಿದ ಧ್ವನಿಯಲ್ಲಿ ಹೇಳಿದ, `ಹಾಗಾದರೆ ಸ್ವಚ್ಛ ಮಾಡು! ನೀನು ಮತ್ತು ನಿನ್ನಂತಹ ಯುವಕರು ಎದ್ದೇಳಬೇಕು, ಕೆಲಸ ಮಾಡಬೇಕು. ನಿಮ್ಮಿಂದ ಸಾಧ್ಯವಾದರೆ ರುಕ್ಮಿಣಿ ಸರಾಗವಾಗಿ ಹರಿದು ಹೋಗುವಂತೆ ಮಾಡಬೇಕು~.

ಸಿಗರೇಟಿನ ಬೂದಿಯನ್ನು ಕೊಡವುತ್ತ ರಾಜನ್ ಹೇಳಿದ- `ಯುವಕರೇ, ಮುಂದೆ ಬನ್ನಿ~.
ನಿಜ, ಇಪ್ಪತ್ತೈದು ವರ್ಷಗಳ ಹಿಂದೆಯೂ ವಿದ್ಯಾರ್ಥಿ ಮುಖಂಡ ರಾಜನ್ ಇದೇ ಮಾತನ್ನು ತನ್ನ ಭಾಷಣಗಳಲ್ಲಿ ಪದೇ ಪದೇ ಹೇಳುತ್ತಿದ್ದ. ಅದರ ನಿಜವಾದ ಅರ್ಥ ಈಗ ತಿಳಿಯಿತು, ಗಾಳ ಹಾಕುತ್ತಿದ್ದ ಮನುಷ್ಯ ತತ್ವಜ್ಞಾನಿಯಂತೆ ಮಾತನಾಡುತ್ತಿದ್ದ.

ವಿದ್ಯಾರ್ಥಿ ಮುಖಂಡ ರಾಜನ್ ಮತ್ತೊಮ್ಮೆ ತನ್ನ ಮನದಲ್ಲೇ ಭಾಷಣ ಬಿಗಿಯಲು ಪ್ರಾರಂಭಿಸಿದ- ಪಾಚಿಯನ್ನು ಕಿತ್ತೆಸೆಯಿರಿ. ಎಲ್ಲ ರೀತಿಯ ಪಾಚಿಯನ್ನು. ಕೆರೆಗಳಲ್ಲಿ, ಕೊಳಚೆ ನಾಲೆಗಳಲ್ಲಿ ಸಿಗುವ ಪಾಚಿಯನ್ನು. ಮನೆಯ ಬೇಲಿಗಂಟಿ ನೇತಾಡುತ್ತಿರುವ ಪಾಚಿಯನ್ನು- ಎಲ್ಲವನ್ನೂ ಕಿತ್ತೆಸೆಯಿರಿ. ಅರಳೆಯ ಜೊಂಡಿನಂತೆ ನನ್ನ ಕಣ್‌ರೆಪ್ಪೆಯಿಂದ ನೇತಾಡುತ್ತಿರುವ ಪಾಚಿಯನ್ನೂ... ...

ಉತ್ತೇಜಿತನಾದವನಂತೆ ಹೊರಳಿದ ರಾಜನ್ ಸಿಗರೇಟನ್ನು ಹೊಸಕಿದ.
`ರೀ, ಕೇಳಿಸ್ತಿದೆಯಾ? ಎದ್ದೇಳಿ, ಮುಖ ತೊಳೆದುಕೊಳ್ಳಿ. ಈಗಾಗಲೇ ಹತ್ತು ಗಂಟೆಯಾಗಿದೆ~. ವೆರಾಂಡಾದಲ್ಲಿ ಸುಳಿಯುತ್ತ ಸೀಮಾ ಹೇಳಿದಳು.

ಹ್ಞು! ರಾಜನ್ ಇನ್ನೂ ತನ್ನ ಆರಾಮ ಕುರ್ಚಿಯಲ್ಲೇ ಕುಳಿತಿದ್ದ. ಕೆಲ ಸಮಯದ ನಂತರ, ಸೀಮಾ ಹೇಳಿದಳು, `ಹೇಗೂ ಇವತ್ತು ರಜೆ. ನಿಮ್ಮ ಮಗನಿಗೆ ಸ್ವಲ್ಪ ಆರಾಮವಾಗಿ ಏನಾದರೂ ತಿಳಿಸಿಕೊಡಬಹುದಲ್ಲ? ಅಷ್ಟಾಗಿಯೂ...~

`ಯಾಕೆ, ಅವನಿಗೆ ಮನೆಪಾಠ ಹೇಳಿ ಕೊಡುವವನು ಬರುತ್ತಿಲ್ಲವೇ?~
`ಅವರ ವಿಷಯವೇ ಬೇರೆ. ಆದರೆ, ನೀವೇ ವಿನೂನಿಗೆ ಪಾಠಗಳನ್ನು ತಿಳಿಸಿ ಹೇಳಿದರೆ ಅವನಿಗೆ ತುಂಬಾ ಖುಷಿಯಾಗ್ತದೆ~.

`ಹೌದೇ?~. ರಾಜನ್ ಈಗ ನೇರವಾಗಿ ಕುಳಿತ. ಸೀಮಾಳತ್ತ ನೋಡಿದರೆ, ಅವಳ ಹಿಂದೆ ಹೊಸ್ತಿಲ ಹತ್ತಿರ ಅವನ ಹತ್ತು ವರ್ಷದ ಮಗ ವಿನಯ ಕೈಯಲ್ಲೊಂದು ಪುಸ್ತಕ ಹಿಡಿದು ನಿಂತು ತನ್ನನ್ನೇ ದಿಟ್ಟಿಸಿ ನೋಡುತ್ತಿದ್ದ. ಐದನೆಯ ಕ್ಲಾಸಿನಲ್ಲಿದ್ದನವ. ಅದೇ ಬಿರಿಯುತ್ತಿರುವ ಹೂವಿನಂತೆ ಹೊಳೆಯುತ್ತಿರುವ ಅವನ ಎರಡೂ ಕಣ್ಣುಗಳಿಂದ ಆಶೆ ಇಣುಕುತ್ತಿತ್ತು. ನಿಜವಾಗಿಯೂ ಅವನು ಜಾಣನೇ. ಅವನಿಗೆ ಓದುವ ಮತ್ತು ತಿಳಿದುಕೊಳ್ಳುವ ಚಟ.

3
ಸರಿಯಾದ ಮಾರ್ಗದರ್ಶನ ದೊರೆತರೆ ಅವನು ಏನಾದರೂ ಆಗಬಹುದು. ಆದರೆ ತಂದೆಯೇ ಅವನಿಗೆ ಯಾವಾಗಲೂ ಸಿಗುತ್ತಿರಲಿಲ್ಲ. ನಿಜ ಹೇಳಬೇಕೆಂದರೆ, ರಾಜನ್ ಸ್ವತಃ ಅವನನ್ನು ತನ್ನ ಸಮೀಪ ಬರಲು ಬಿಡುತ್ತಿರಲಿಲ್ಲ. ತನ್ನ ಕೆಟ್ಟ ಚಟದ ನೆರಳು ಕೂಡ ಈ ಚಿಕ್ಕ ದೇವತೆಯ ಮೇಲೆ ಬೀಳಬಾರದು, ಇದೇ ಅವನ ವಿಚಾರವಾಗಿತ್ತು.
 
ಕುಡುಕರು ತಮ್ಮ ಮಕ್ಕಳನ್ನು ಪ್ರೀತಿಸಲಾರರೆಂದು ಸೀಮಾ ಹೇಳುತ್ತಿದ್ದಳಲ್ಲವೇ! ಹುಚ್ಚಿ ಅವಳು, ಅವಳಿಗೇನೂ ತಿಳಿಯುವುದಿಲ್ಲ! ನಸುನಕ್ಕ ರಾಜನ್ ವಿನೂನಿಗೆ ತನ್ನತ್ತ ಬರಲು ಸನ್ನೆ ಮಾಡಿದ. ಅವನು ಓಡಿ ಬಂದು, ಅವನ ತೊಡೆಯ ಮೇಲೆ ಕುಳಿತ. 
`ನಿನಗೆ ಯಾವುದರಲ್ಲಿ ತೊಂದರೆಯಿದೆ? ಗಣಿತದಲ್ಲಿ ತಾನೇ?~
`ಗಣಿತದಲ್ಲಿ ಅಲ್ಲ, ತೊಂದರೆ ಇರೋದು ನೀತಿಯಲ್ಲಿ~.

`ನೀತಿ? ಅಂದರೆ, ನೀತಿಪಾಠದಲ್ಲಿ! ಓಹ್... ರಾಜನ್ ಮೂಗರಳಿಸಿ ಬಾಯಿಯನ್ನು ಸ್ವಲ್ಪ ತೆರೆದು ಸೀಮಾಳತ್ತ ನಿಗೂಢವಾಗಿ ನೋಡಿದ. ವಿನೂನ ತಲೆಗೂದಲು ತನ್ನ ಗದ್ದಕ್ಕೆ ತಗುಲಿದಾಗ ಅವನು ಎಚ್ಚರಗೊಂಡಂತಾದ.

`ಓಹ್ ವಿನೂ, ನಿನ್ನಮ್ಮನ ಹತ್ತಿರ ಹೋಗು. ಅವಳೇ ನಿನಗೆ ಇಂಥವನ್ನೆಲ್ಲ ತಿಳಿಸಿಕೊಡುತ್ತಾಳೆ~.
`ಆಗುವದಿಲ್ಲ, ನನ್ನಿಂದಾಗದು ಈ ಕೆಲಸ!~- ಸೀಮಾ ತನ್ನ ಮುಖವನ್ನು ಬದಿಗೆ ತಿರುವಿ ಹೆಚ್ಚೂಕಡಿಮೆ ಚೀರಿ ಹೇಳಿದಳು.

`ಯಾಕಾಗುವದಿಲ್ಲ? ನಿನ್ನ ಪದವಿಯಲ್ಲಿ ಬೋಧನಾಶಾಸ್ತ್ರವನ್ನೂ ತೆಗೆದುಕೊಂಡಿದ್ದೆಯಲ್ಲ? ಅಷ್ಟಾಗಿಯೂ ನೀನು ನೌಕರಿ ಸೇರುವ ಮುನ್ನ ಒಂದು ಪ್ರೈವೇಟ್ ಸ್ಕೂಲಿನಲ್ಲಿ ಕಲಿಸಿದ್ದೆ ಕೂಡ. ಈಗ ನಿನಗೆ ಅದರ ನೆನಪು ಹಾರಿಹೋಗಿರಬೇಕು. ಆದರೂ ಸ್ವಲ್ಪ ಪ್ರಯತ್ನಿಸಿದರೆ...~
ರಾಜನ್ ತನ್ನ ಮಾತು ಮುಗಿಸುವ ಮುನ್ನವೇ ಸೀಮಾ ಅವನತ್ತ ಹೊರಳಿ ತೀಕ್ಷ್ಣ ನೋಟ ಬೀರಿದಳು.

`ಆಯ್ತು ವಿನು. ಚಿಂತಿಸಬೇಡ...~ ತೊದಲಿದ ರಾಜನ್. ನಿನಗಾಗಿ ಸಾಹಿತ್ಯ, ನೀತಿಪಾಠ ಇತ್ಯಾದಿ ವಿಷಯಗಳನ್ನೂ ಕಲಿಸುವಂತಹ ಬೇರೊಬ್ಬ ಮನೆಪಾಠದ ಶಿಕ್ಷಕನನ್ನು ಗೊತ್ತುಪಡಿಸುತ್ತೇನೆ. ಸರಿಯಾ? ಈಗ ನೀನು ಹೋಗಿ ಆಡಿಕೋ~. ಬಾಡಿದ ಮುಖದೊಂದಿಗೆ ವಿನೂ ಮತ್ತೊಂದು ರೂಮಿಗೆ ಹೊರಟುಹೋದ.
 
ಅವನು ಕಾಣೆಯಾದ ನಂತರ ರಾಜನ್ ಸಿಟ್ಟಿನಿಂದ ಸೀಮಾಳಿಗೆ ನುಡಿದ, `ನೀನು ಹುಚ್ಚಳಾಗಿರುವೆಯಾ ಹೇಗೆ? ನಾನು, ಅದರಲ್ಲೂ ನನ್ನಂತವನು, ನೀತಿಪಾಠ ಹೇಳಿಕೊಡಬೇಕೇ? ನನ್ನ ಮಗನೆದುರು ನನ್ನ ಅಪಮಾನವಾಗಲಿ ಎಂದು ಬಯಸುತ್ತೀಯಾ?~
`ನೀವೇಕೆ ಕಲಿಸಬಾರದು? ನೀವೂ ಗ್ರಾಜ್ಯುಯೇಟ್ ಅಲ್ಲವೇ?~

`ಸ್ವಲ್ಪ ವಿಚಾರ ಮಾಡಿ ಮಾತನಾಡು. ಈ ಲಂಚಕೋರ, ಕುಡುಕ ಮತ್ತು ವ್ಯಕ್ತಿತ್ವವಿಲ್ಲದ ತಂದೆಯಲ್ಲಿ ನೈತಿಕತೆಯ ಕಿಂಚಿತ್ ಅಂಶವಾದರೂ ಉಳಿದಿದೆಯೇ? ಬೇರೆಯವರಿಗೆ ನೀತಿಪಾಠ ಕಲಿಸುವ ಮಟ್ಟದಲ್ಲಿ ನಾನು ಉಳಿದುಕೊಂಡಿದ್ದೇನಾ? ಇಡೀ ಇಪ್ಪತ್ತೈದು ವರ್ಷ ಲಂಚ ತೆಗೆದುಕೊಳ್ಳದೇ ಒಂದು ಫೈಲನ್ನೂ ಮುಟ್ಟಲಿಲ್ಲ, ಮನೆಯಿಂದ ಆಫೀಸಿಗೆ ಹೋಗುವಾಗ,

ಆಫೀಸಿನಿಂದ ಮನೆಗೆ ಬರುವಾಗ ಕನಿಷ್ಠ ನೂರು ಸುಳ್ಳುಗಳನ್ನಾದರೂ ಹೇಳುವ ಇಂತಹ ತಂದೆ ತನ್ನ ಮಗನಿಗೆ ಸುಳ್ಳು ಹೇಳಬೇಡ ಎಂದು ನೀತಿ ಹೇಳಿಕೊಡಬಹುದೇ? ಸೀಮಾ, ಹೀಗೆ ಅನ್ಯಾಯ ಮಾಡಬೇಡ. ಇದು ಮಹಾ ಪಾಪ. ಅದರಲ್ಲೂ ಮಹಾತ್ಮಾ ಗಾಂಧಿ, ವಿವೇಕಾನಂದ, ಇತ್ಯಾದಿ, ಇತ್ಯಾದಿ... ಓಹ್, ನನ್ನ ತಲೆ ತಿರುಗುತ್ತದೆ~.

`ಸಾಕು, ಸಾಕು. ಚೀರಬೇಡಿ. ಇದೆಲ್ಲ ನನಗೆ ಹೇಳುವದಕ್ಕಿಂತ, ಅವನು ಕೇಳಿದ್ದರ ಅರ್ಥವನ್ನು ಸೀದಾ ಸೀದಾ ಹೇಳಿ ಕೊಟ್ಟಿದ್ದರೆ ಸಾಕಾಗಿತ್ತು~. 
ನಾನದನ್ನು ಮಾಡಬಲ್ಲವನಾಗಿದ್ದೆ. ಅದು ಸಾಧ್ಯವಿತ್ತು, ಆದರೆ ಇಪ್ಪತ್ತೈದು ವರ್ಷಗಳ ಹಿಂದೆ. ಈಗೇಕೆ ನೀವು ಹೇಳಲಾರಿರಿ ಎಂದು ನನಗೆ ಚೆನ್ನಾಗಿ ಗೊತ್ತು.

4
`ಈಗ ನನಗನ್ನಿಸುತ್ತಿದೆ- ಬೇರೆಯವರಿಗೆ ಸಾವಿರ ಸುಳ್ಳು ಹೇಳಬಹುದು, ಆದರೆ ತನಗೆ ತಾನೇ ಸುಳ್ಳು ಹೇಳಲಾಗದು~. ಒಂದಾನೊಂದು ಕಾಲದ ಆದರ್ಶ ವಿದ್ಯಾರ್ಥಿ ಮುಖಂಡ ರಾಜನ್‌ನೀಗ ಹೃದಯದಾಳದಲ್ಲಿ ಕುಗ್ಗಿಹೋಗಿದ್ದ. `ಅಕಸ್ಮಾತ್ ನಾನೇನಾದರೂ ಇವೆಲ್ಲ ಕಥೆಗಳಲ್ಲಿರುವ ನೀತಿನಿಷ್ಠೆಗಳು ಒಳ್ಳೆಯ ಜೀವನ ನಡೆಯಿಸಲು ಎಂದು ನನ್ನ ಮಗನಿಗೆ ಹೇಳಿಕೊಟ್ಟರೆ ನನಗೆ ನನ್ನ ಮೇಲೆಯೇ ಹೇಸಿಕೆ ಬರಲಾರದೇ, ಮತ್ತು ಅವನು ನಾನು ಹೇಳಿದ್ದನ್ನೆಲ್ಲ ಸಂತೋಷದಿಂದ ಒಪ್ಪಿಕೊಳ್ಳುತ್ತಾನಾ? ಏನೇ ಆದರೂ, ನನ್ನ ಈ ಚಿಕ್ಕ ಮಗನ ಬಗ್ಗೆ ನನಗೆ ಗೌರವವಿದೆ~.
`ನನಗೂ~ ಸೀಮಾ ಮಾರ್ನುಡಿದಳು.

`ಅದಕ್ಕಾಗಿಯೇ ನಾನು ಹೇಳುವದು, ನನ್ನ ಮಗನಿಗೆ ಇಂತಹದ್ದು ಕಲಿಸಿಕೊಡು ಎಂದು ಮತ್ತೊಮ್ಮೆ ಹೇಳಬೇಡ. ಜರೂರು ಇದ್ದರೆ, ಇನ್ನೂ ಹಲವಾರು ಶಿಕ್ಷಕರನ್ನು ನೇಮಿಸುತ್ತೇನೆ~. ಇದಿಷ್ಟು ಖಂಡಿತ ಎಂಬಂತೆ ಹೇಳಿ ತನ್ನ ಬೊಜ್ಜು ಮೈಯನ್ನೆತ್ತಿಕೊಂಡು ಬಚ್ಚಲು ಮನೆಗೆ ನಡೆದ.

ಬಚ್ಚಲುಮನೆಯ ಏಕಾಂತ ಮತ್ತು ಶಾಂತ ವಾತಾವರಣದಲ್ಲಿ ರಾಜನ್‌ನಿಗೆ ಹಳೆಯ ನೆನಪುಗಳೆಲ್ಲವೂ ಬರತೊಡಗಿದವು. ಏಕಾಂತವೆಂದರೆ ನೆನಪುಗಳ ಖಾಯಂ ವಿಳಾಸವಿದ್ದಂತೆ, ವಾಸಸ್ಥಳದ ವಿಳಾಸ. ಕನ್ನಡಿಯಲ್ಲಿ ತನ್ನ ಪ್ರತಿಬಿಂಬವನ್ನು ನೋಡಿಕೊಳ್ಳುತ್ತ ಹಲ್ಲುಜ್ಜುತ್ತಿರುವಾಗ ರಾಜನ್‌ನಿಗೆ ಎಲ್ಲವೂ ನೆನಪಿಗೆ ಬರತೊಡಗಿತು.

ತಾನೇನಿದ್ದೆ, ಈಗ ಏನಾಗಿದ್ದೇನೆ ಎನ್ನುವುದು ಹೊಳೆಯತೊಡಗಿತು. ಜೀವನದಲ್ಲಿ ಬಗೆಬಗೆಯ ಮುಖವಾಡಗಳನ್ನು ಧರಿಸಿದ್ದು ನೆನಪಾಗಿ ವೇದನೆಯಾಯಿತು. ಹಳ್ಳಿಯಲ್ಲಿಯ ಬಾಲ್ಯದ ನೆನಪುಗಳು ಓಡೋಡಿ ಬಂದವು.

ಹೊಲದಿಂದ ಹೊಲಕ್ಕೆ, ಆ ರಸ್ತೆಯಿಂದ ಈ ರಸ್ತೆಗೆ ಕುಣಿಯುತ್ತ ಕುಪ್ಪಳಿಸುತ್ತ ಹೋಗಿ ದನಕರುಗಳ ಒಣಗಿದ ಬೆರಣೆಯನ್ನು ಹುಡುಕಾಡಿದ್ದು, ಬಗಲಲ್ಲಿ ಪಾಟಿಪುಸ್ತಕ ಹಿಡಿದು, ಜೇಬಿನಲ್ಲಿಟ್ಟಿದ್ದ ಹುರಿದ ಶೇಂಗಾ ಬೀಜಗಳನ್ನು ತಿನ್ನುತ್ತ ಶಾಲೆಗೆ ಓಡುತ್ತಾ ಹೋಗಿದ್ದು, ಎಲ್ಲವೂ ನೆನಪಿಗೆ ಬಂದಿತು.
 
ಜಾಣನಾದ್ದರಿಂದ ಶಾಲೆಯಲ್ಲಿ ಎಲ್ಲರ ಪ್ರೀತಿಗೆ ಪಾತ್ರನಾಗಿದ್ದೆ. ಕಾಲೇಜಿನ ದಿನಗಳ ವಿದ್ಯಾರ್ಥಿ ಸಂಘಟನೆ, ವಿವಿಧ ಚಳವಳಿಗಳು, ಜೈಲು ಶಿಕ್ಷೆ, ಪರೀಕ್ಷೆಗಳನ್ನು ಬಹಿಷ್ಕರಿಸಿದ್ದು, ರಸ್ತಾ ರೋಕೋ, ಎಲ್ಲವೂ ನೆನಪಾದವು.
 
ಸೀಮಾಳೊಂದಿಗೆ ಮೊದಲ ಭೇಟಿ, ತಮ್ಮ ಅನಿರ್ಬಂಧಿತ ಪ್ರೇಮಕಥೆ, ಆದಷ್ಟು ತೀವ್ರವಾಗಿ ಮದುವೆಯಾಗಬೇಕೆಂಬ ಹಂಬಲ, ಇವೆಲ್ಲವೂ ನೆನಪುಗಳ ಸರಣಿಯಲ್ಲಿ ಮೂಡಿದವು. ಮದುವೆಯಾಗುವ ತನಕ ಎಲ್ಲವೂ ಸರಿಯಾಗೇ ಇತ್ತು, ಕಣ್ಣುಗಳ ಮುಂದೆ ಆದರ್ಶಗಳು ತೇಲುತ್ತಿದ್ದವು.

ಮದುವೆಯಂತೂ ಆಯಿತು, ಆದರೆ ನೌಕರಿಯದೇನು? ನೌಕರಿಯ ಬೇಟೆಯಲ್ಲಿ ಭ್ರಷ್ಟಾಚಾರವೆಂಬ ಜೇಡರ ಬಲೆಯಲ್ಲಿ ಬಿದ್ದದ್ದೇ ತಡ, ಆದರ್ಶಗಳೆಲ್ಲವೂ ನುಚ್ಚುನೂರಾದವು.

ನೌಕರಿ ಗಳಿಸಲು ಇದ್ದ ಒಂದೇ ಒಂದು ಹೊಲವನ್ನು ಮಾರಾಟ ಮಾಡಬೇಕಾದ ಪರಿಸ್ಥಿತಿ ಎದುರಾಯಿತು. ಸಿಕ್ಕಾಪಟ್ಟೆ ಗಳಿಸಲು ಮತ್ತು ಅಂಧಾದುಂಧಿಯಾಗಿ ಹಣ ಖರ್ಚು ಮಾಡಲು ಮನೆಯಲ್ಲಿದ್ದ ಕಿತ್ತು ತಿನ್ನುವ ಬಡತನವೇ ಕಾರಣವಾಯಿತು.

ಇದೇ ಹೊತ್ತಿನಲ್ಲಿ ಮಗ ಮತ್ತು ಮಗಳು ಹುಟ್ಟಿದರು. ಹಳ್ಳಿಯಲ್ಲಿದ್ದ ಗುಡಿಸಲಿನ ಬದಲಿಗೆ ಒಳ್ಳೆಯ ಕಾಂಕ್ರೀಟಿನ ಮನೆ ಎದ್ದಿತು. ನಿಧಾನವಾಗಿ ಹೊಲಮನೆಗಳು ಮತ್ತಿತರ ಆಸ್ತಿಗಳು ಬೆಳೆಯುತ್ತಲೇ ಸಾಗಿದವು.

ಟೀವಿ, ಫ್ರಿಜ್ಜು, ಕಾರು, ನೌಕರಿಯಲ್ಲಿ ಬಡ್ತಿ ಮತ್ತು ಸೀಮಾಳಿಗಾಗಿ ಸರಕಾರೀ ಕೆಲಸ, ಇವೆಲ್ಲವುಗಳನ್ನೂ ಒಂದೊಂದಾಗಿ ಸಂಪಾದಿಸುವದರಲ್ಲಿ ರಾಜನ್ ಸಫಲನಾದ. ಇವೆಲ್ಲ ಬಂದಂತೆ ಮನೆಯ ವಾತಾವರಣವೇ ಬದಲಿಸಿತು, ಆದರೆ ಕೌಟುಂಬಿಕ ಸಂತೋಷ ಬರಡಾಗತೊಡಗಿತು.

ಸೀಮಾಳಿಗೆ ಸಂಧಿವಾತ, ರಾಜನ್‌ನಿಗೆ ಹೃದಯಸಂಬಂಧಿ ರೋಗಗಳು ಪ್ರಾರಂಭವಾದವು. ಮಕ್ಕಳೂ ನೆಮ್ಮದಿ ಕೊಡಲಿಲ್ಲ. ಅವರಿಗೆ ಅಪ್ಪನ ಹಣವನ್ನು ದುಂದು ಮಾಡುವದೇ ಒಂದು ಕೆಲಸವಾಗಿತ್ತು. ಬೈಕುಗಳ ಮೇಲೆ ಓಡಾಟ, ಯಾವಾಗಲೂ ಕಿವಿಯಲ್ಲಿ ಮೊಬೈಲು.
 
ಆದರೆ ತಮ್ಮ ತಂದೆ ಯಾರು, ಯಾವ ಇಲಾಖೆಯಲ್ಲಿ ಕೆಲಸ ಮಾಡುತ್ತಾನೆ ಎನ್ನುವದನ್ನು ಹೇಳಲೂ ನಾಚಿಕೆ, ಅವರ ಆತ್ಮಗೌರವ ಕಾಡುತ್ತಿತ್ತು. ಯಾರಾದರೂ ಇವನ್ನು ಕೇಳಿ ನಗಬಹುದೆಂಬ ಭಾವನೆ ಅವರಿಗೆ. ಹಿರಿಯ ಮಗ ಜಾಣನೇನೋ ನಿಜ, ಆದರೆ ಅಡ್ಡಹಾದಿಯ ಪಥಿಕನಾಗಿದ್ದ.
 
ಶರಾಬು, ಗಾಂಜಾ ಮತ್ತು ಮತ್ತೇರಿಸುವ ಮಾದಕವಸ್ತುಗಳು, ಇವು ಎಲ್ಲವೂ ಅವನ ಯೌವನದಲ್ಲಿ ಕಾಲಿರಿಸಿದ್ದವು. ಮಗಳೂ ಕಡಿಮೆಯಿರಲಿಲ್ಲ, ತಮ್ಮ ಮನೆತನದ ಮರ್ಯಾದೆಗೆ ಕುಂದು ತರುವ ಘಟನೆಯೊಂದರಲ್ಲಿ ಅವಳು ಹೆಸರಾಗಿದ್ದಳು. ಹೇಗೋ ಏನೋ ಅವಳನ್ನು ಹಳ್ಳಿಯಲ್ಲಿ ಉಳಿಸುವ ತನ್ನ ಪ್ರಯತ್ನದಲ್ಲಿ ರಾಜನ್ ಸಫಲನಾಗಿದ್ದ.
 
ಹಳ್ಳಿಯ ಪಂಚಾಯತಿಗೆ ಧನ ಸಹಾಯ, ಊರಿನಲ್ಲಿ ಜರುಗುವ ಸಾಂಸ್ಕೃತಿಕ ಸಮಾವೇಶ, ಹಬ್ಬಹುಣ್ಣಿಮೆಗಳು, ಪೂಜೆಗಳು, ಜಾತ್ರೆಗಳು, ಇವುಗಳಿಗೆಲ್ಲ ಸಾವಿರ, ಎರಡು ಸಾವಿರ ನೀಡಿ, ಜನರ ದೃಷ್ಟಿಯಲ್ಲಿ ತನ್ನ ಸ್ಥಾನವನ್ನು ಹೆಚ್ಚಿಸಿಕೊಳ್ಳುವದು ಅವನಿಗೆ ಸಾಧ್ಯವಾಗಿತ್ತು. ಹೀಗಾಗಿ ಯಾರೂ ಅವನ ವಿರುದ್ಧ ಸೊಲ್ಲೆತ್ತುತ್ತಿರಲಿಲ್ಲ. ಅವನ ಸ್ಥಾನದಲ್ಲಿ ಬೇರೆ ಯಾರಾದರೂ ಇದ್ದರೆ, ಇದೆಲ್ಲ ಸಾಧ್ಯವಾಗುತ್ತಿತ್ತೇ? ಇಲ್ಲ.
 
ಆದರೆ, ಇದಕ್ಕೆಲ್ಲ ದೊಡ್ಡ ಮೊತ್ತಗಳನ್ನು ನೀಡಿ ಜನರ ಗುಸುಗುಸು ತಡೆಯಬೇಕಾಗಿತ್ತು. ಸಮಾಜದೊಂದಿಗೆ ಉತ್ತಮ ಸಂಬಂಧವನ್ನು ಗಳಿಸಿಕೊಂಡಿದ್ದರಿಂದಲೇ ಮಕ್ಕಳ ಮದುವೆಯನ್ನು ಮಾಡಿದ್ದನವನು. ಅದಲ್ಲದೇ, ನಿವೃತ್ತಿಯ ನಂತರ ತನಗೂ ಸಮಾಜದಲ್ಲಿ ಉತ್ತಮ ಸ್ಥಾನ ಕಾಯ್ದಿರಿಸಬೇಕಲ್ಲವೇ? ಮೇಲಾಗಿ ನಿವೃತ್ತಿಯ ದಿನಗಳು ಬಹಳ ದೂರವಿರಲಿಲ್ಲ.

ಇವೆಲ್ಲಕ್ಕೂ ಮಿಗಿಲಾಗಿ, ತನ್ನ ಚಿಕ್ಕ ಮಗ ವಿನೂ ಅಭ್ಯಾಸ ಮಾಡುವುದರಲ್ಲಿ ಮತ್ತು ಬುದ್ಧಿಮತ್ತೆಯಲ್ಲಿ ಅಣ್ಣನನ್ನೂ ಮೀರಿಸಿದ್ದ. ಅವನು ದೊಡ್ಡವನಾದಾಗ ಅಣ್ಣನಂತೆಯೇ ಅಡ್ಡಹಾದಿ ಹಿಡಿದರೆ ಹೇಗೆ ಎನ್ನುವದು ರಾಜನ್‌ನ ಮನಸ್ಸಿನಲ್ಲಿ ಪದೇ ಪದೇ ಮೂಡಿಬರುತ್ತಿತ್ತು.
 
ಇದೆಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಕ್ಕಿಕೊಂಡಿರುವೆ ನಾನು? ಮಗನ ಮೇಲೆ ನಿಯಂತ್ರಣವಿಲ್ಲದ ತಂದೆ! ಅವನೇನಾದರೂ ಮುಖಕ್ಕೆ ರಾಚುವಂತಹ ಪ್ರಶ್ನೆಗಳನ್ನು ಕೇಳಲು ಪ್ರಾರಂಭಿಸಿದರೆ ಏನು ಮಾಡುವುದು? ಇಡೀ ಪೀಳಿಗೆಯೇ ಕೆಟ್ಟು ಹೋಗಿದೆ. ಭ್ರಷ್ಟಾಚಾರದ ಭದ್ರಬಾಹುಗಳಿಂದ ಸ್ವಾತಂತ್ರ್ಯ ಪಡೆಯಲು ಸಾಧ್ಯವೇ? ಇದನ್ನು ತೊಲಗಿಸಬಲ್ಲ ಸೂಪರ್‌ಮ್ಯಾನ್ ಎಲ್ಲಿಯಾದರೂ ಇದ್ದಾನೆಯೇ? ಇಲ್ಲ, ಅಂತಹವನೆಲ್ಲೂ ಸಿಗಲಾರ.

ಪ್ರತಿಯೊಬ್ಬನೂ ಭ್ರಷ್ಟಾಚಾರಿಯೇ! ಭ್ರಷ್ಟಾಚಾರದ ಕಬಂಧಬಾಹುಗಳನ್ನು ಪ್ರತಿ ಸಮಾಜದ ಕಣಕಣದಲ್ಲೂ ಕಾಣಬಹುದಾಗಿದೆ! ಅಷ್ಟೇ ಏಕೆ, ಉಸಿರಾಡಲು ಶುದ್ಧ ಗಾಳಿಯೂ ಸಿಗದಂತಾಗಿದೆ! ನಿಟ್ಟುಸಿರು ಬಿಡುತ್ತ ರಾಜನ್ ಬಚ್ಚಲುಮನೆಯಿಂದ ಹೊರಗೆ ಬಂದ.

ಕಾಟಿನ ಮಗ್ಗುಲಲ್ಲಿಯ ಟೇಬಲ್ ಮೇಲಿರಿಸಿದ್ದ ಚಹಾವನ್ನು ಗುಟುಕರಿಸಲಾರಂಭಿಸಿದ. ಮನಸ್ಸಿನ ಕಹಿಯೆಲ್ಲವೂ ಮರೆಯಾಗಿ ಲಕ್ಷ್ಯವೀಗ ಚಹಾದತ್ತ ಸರಿಯಿತು. ವಿನೂ ಎಲ್ಲಿದ್ದಾನೆ? ಇದೇ ಈಗ ಬಾಡಿದ ಮುಖದೊಂದಿಗೆ ರೂಮಿನಲ್ಲಿ ಕುಳಿತಿದ್ದನಲ್ಲ?
`ವಿನೂ, ವಿನೂ!~ ಕೂಗಿದ. ಸೀಮಾ ರೂಮಿನಿಂದ ಹೊರಗೆ ಬಂದಳು.

`ಎಲ್ಲಿ ಹೋದನವನು? ಇಲ್ಲಿಯೇ ಇದ್ದನಲ್ಲ? ಯಾವ ಕಡೆ ಹೋಗಿದ್ದಾನೆ ಅವ? ಕೆರೆಯ ಕಡೆಗೆ ಏನಾದರೂ ಹೋಗಿದ್ದಾನಾ? ಸೀಮಾ, ಇತ್ತೀಚೆಗೆ ನೀನು ಅವನ ಬಗ್ಗೆ ಸರಿಯಾದ ಕಾಳಜಿ ವಹಿಸುತ್ತಿಲ್ಲ!~- ಗಾಬರಿಯಿಂದ ಚಹಾದ ಕಪ್ಪನ್ನು ಅತ್ತ ಸರಿಸಿ, ಸೀಮಾಳ ಕೈ ಹಿಡಿದು ಮನೆಯ ಮುಂದಿನ ಗೇಟನ್ನು ದಾಟಿದ.

`ಮಮ್ಮೀ, ಓ ಮಮ್ಮೀ! ಓ ಪಪ್ಪಾ!~ ಕೆರೆಯ ಬದಿಯಿಂದ ವಿನೂನ ಧ್ವನಿ ಕೇಳಿಸುತ್ತಿತ್ತು. `ಬೇಗ ಬನ್ನಿ, ನೀವೇ ನೋಡಿ!~ 

`ಏನದು? ಯಾಕೆ, ಏನಾಗಿದೆ ಅಲ್ಲಿ?~. ಸೀಮಾ ರಾಜನ್‌ನಿಂದ ಕೈ ಬಿಡಿಸಿಕೊಂಡು ಓಡುತ್ತಾ ಮುಂದೆ ಹೋದಳು. ಅವಳ ಹಿಂದೆಯೇ ಏದುಸಿರು ಬಿಡುತ್ತ ರಾಜನ್ ಓಡಿದ.
`ಅಲ್ನೋಡಿ, ನೀರಿನಿಂದ ಒಂದು ದೊಡ್ಡ ಮೀನು ಹೊರಗೆ ಬಂದಿದೆ! ಅಬ್ಬಾ!~ ವಿನೂ ಚಪ್ಪಾಳೆ ಬಾರಿಸುತ್ತ ಕುಣಿಯುತ್ತ ತನಗಾಗಿರುವ ಸಂತೋಷವನ್ನು ತೋರ್ಪಡಿಸುತ್ತಿದ್ದ. ಅವನು ಹೇಳಿದ್ದು ನಿಜವೇ ಆಗಿತ್ತು.
 
ಆಶ್ಚರ್ಯಚಕಿತರಾದ ರಾಜನ್ ಮತ್ತು ಸೀಮಾರಿಗೆ ದೊಡ್ಡ ಮೀನೊಂದು ನೀರಿನ ಮೇಲ್ಭಾಗಕ್ಕೆ ಬಂದು ಉಸಿರು ತೆಗೆದುಕೊಳ್ಳುವುದು ಕಂಡಿತು. ವೇಗವಾಗಿ ನೀರಿನಲ್ಲಿ ಈಜುತ್ತ ಅದು ತನ್ನ ಬಾಲವನ್ನು ಅತ್ತಿಂದಿತ್ತ ಅಲ್ಲಾಡಿಸುತ್ತ ಅದಕ್ಕೆ ಅಂಟಿಕೊಂಡಿರುವ ಪಾಚಿಯನ್ನು ಕಿತ್ತೆಸೆಯುತ್ತಿತ್ತು. ಅದರ ಬೆಳ್ಳಿಯ ಮೈತುಂಬ ಹರಡಿರುವ ಪಾಚಿಯ ಕಪ್ಪು ಕಲೆಗಳನ್ನು ಕಾಣಬಹುದಾಗಿತ್ತು.

`ತುಂಬ ದೊಡ್ಡದಾಗಿದೆ. ಅಂತೂ ಅದಕ್ಕೆ ಹೊರಗೆ ಬರಲು ಸಾಧ್ಯವಾಯಿತು. ಇಷ್ಟು ದಪ್ಪ ಪದರಿನ ಪಾಚಿಯನ್ನು ಬದಿಗೆ ಸರಿಸಿ ಬರಲು ಸಾಧ್ಯವಾಯಿತು ಅದಕ್ಕೆ!~ ರಾಜನ್ ಗುಣಗುಣಿಸಿದ. ಗಾಳವನ್ನು ಹಿಡಿದಿದ್ದ ಆ ಕಪ್ಪು ಮನುಷ್ಯ ತನ್ನ ಗಾಳದ ತುದಿಯನ್ನು ಆ ಮೀನಿನ ಬಾಯಿಯ ಮುಂದೆ ಇರಿಸುವುದರಲ್ಲಿ ಸಫಲನಾದ.
 
ಮೀನು ಅದರತ್ತ ಲಕ್ಷ್ಯ ನೀಡಲಿಲ್ಲ. ಪಾಚಿಯನ್ನು ಸರಿಸಿ ಮೇಲೆ ಬಂದದ್ದಕ್ಕೆ ಖುಷಿಯಾದಂತೆ ಅದು ಒಮ್ಮೆ ನೀರಿನ ಮೇಲೆ ಜಿಗಿಯುತ್ತಿತ್ತು, ಮತ್ತೊಮ್ಮೆ ನೀರಿನಲ್ಲಿ ಮುಳುಗುತ್ತಿತ್ತು ಮತ್ತು ಕೆಲವೊಮ್ಮೆ ವೃತ್ತಾಕಾರದಲ್ಲಿ ಈಜುತ್ತಿತ್ತು. ಅದಕ್ಕೆ ಪಾಚಿಯಿಂದ ಸ್ವಾತಂತ್ರ್ಯ ದೊರೆತಂತಾಗಿತ್ತು.

5
ಒಮ್ಮಿಂದೊಮ್ಮೆಲೇ, ತನ್ನ ಬಾಲವನ್ನು ಜೋರಾಗಿ ಅಲ್ಲಾಡಿಸುತ್ತ, ಸತ್ತು ಹೋಗಿದ್ದ ನದಿಯಲ್ಲಿ ತಾತ್ಪೂರ್ತಿಕ ಹರಿವೊಂದನ್ನು ತಂದು ಬಲು ದೂರ ಈಜಾಡುತ್ತ ಹೊರಟು ಹೋಯಿತು.

`ಅಬ್ಬಾ!~ ತುಂಬಾ ಉತ್ಸುಕನಾಗಿ ರಾಜನ್ ಉದ್ಘರಿಸಿದ. ಒಂದು ಕ್ಷಣ ಆ ಬೆಳ್ಳಿ ಮೀನು ಸೃಷ್ಟಿಸಿದ ತಾತ್ಪೂರ್ತಿಕ ಹರಿವನ್ನು ಗಮನಿಸುತ್ತ, ವಿನೂನಿಗೆ ಹೇಳಿದ, `ಬಾ ವಿನೂ! ಏನೋ ತಿಳಿಸಿಕೊಡು ಎಂದು ಹೇಳುತ್ತಿದ್ದೆಯಲ್ಲಾ, ಬಾ ಹೋಗೋಣ! ನಾನು ತಿಳಿಸಿಕೊಡುತ್ತೇನೆ. ಬಾ~. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT