ADVERTISEMENT

ಸಾರಿ ಸಾರ್ಥಕತೆ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2011, 19:30 IST
Last Updated 3 ಸೆಪ್ಟೆಂಬರ್ 2011, 19:30 IST

ಅಜಿತ್ ಗಾಜಿನ ಲೋಟವನ್ನು ಕೆಳಕ್ಕೆ ಬೀಳಿಸಿದ. ಅಮ್ಮ ನೋಡಿದಾಕ್ಷಣ `ಸಾರಿ~ ಅಮ್ಮ ಎಂದು ಹೇಳಿ ಹೊರಟು ಹೋದ. `ಗಾಜಿನ ಚೂರುಗಳನ್ನು ಎತ್ತಿ ನೆಲವನ್ನು ಸ್ವಚ್ಛಗೊಳಿಸು~ ಎಂದು ಅಮ್ಮ ಹೇಳಿದ್ದಕ್ಕೆ ಅವನು ಪ್ರತಿಕ್ರಿಯಿಸಲಿಲ್ಲ.

ಅವನು ಹೀಗೆ ಮಾಡುತ್ತಿರುವುದು ಇದು ಮೊದಲೇನಲ್ಲ. ಏನೇ ತಪ್ಪು ಮಾಡಿದರೂ `ಸಾರಿ~ ಕೇಳಿದಾಕ್ಷಣ ತನ್ನ ಕೆಲಸ ಮುಗಿಯಿತು ಎಂದುಕೊಂಡು ಸುಮ್ಮನಾಗುತ್ತಿದ್ದ.
ಅವನ ಗುಣವನ್ನು ಅಮ್ಮ ಎಷ್ಟೇ ತಿದ್ದಲು ಪ್ರಯತ್ನಿಸಿದರೂ ಅವನು ಸರಿಹೋಗಿರಲಿಲ್ಲ.
 
ಒಂದು ದಿನ ಅವನ ತಾಯಿ ಬೇಕಂತಲೇ ಅವನಿಗೆ ಸುಡುಸುಡುವ ಬಿಸಿ ನೀರನ್ನು ಕುಡಿಯಲು ಕೊಟ್ಟರು. ಅದನ್ನು ಕುಡಿದು ಗಂಟಲು ಸುಟ್ಟಿತು ಎಂದು ಅವನು ಸಿಡುಕಿದ. ಆಗ ಅವನ ತಾಯಿ `ಸಾರಿ ಕಣೋ ಪುಟ್ಟ~ ಎಂದರು.

`ಅಮ್ಮ ನನಗೆ ಗಂಟಲು ತುಂಬಾ ಉರಿಯುತ್ತಿದೆ~ ಎಂದ.
`ಸಾರಿ~ ಎಂದು ಮತ್ತೊಮ್ಮೆ ಉಚ್ಚರಿಸಿದರು.
ಅವನಿಗೆ ಸಿಟ್ಟು ಬಂದು `ಅಮ್ಮ ಸಾರಿ ಎಂದಷ್ಟೇ ಹೇಳಿದರೆ ಸಾಕೆ?~ ಎಂದ.

ಆಗ ಅವರು `ಸಾರಿ ಹೇಳಿ ಸುಮ್ಮನಾಗಬಾರದು. ತಪ್ಪನ್ನು ಸರಿ ಮಾಡಲು ಕೊಂಚ ಪ್ರಯತ್ನಿಸಬೇಕು. ಇನ್ನು ಮುಂದೆ ಆ ತಪ್ಪು ಆಗದಂತೆ ಎಚ್ಚರವಹಿಸಬೇಕು. ಹೌದಲ್ಲ?~ ಎಂದರು.

ಅವನು ಸಮ್ಮನಿದ್ದ.
`ನಿನಗೆ ನೆನಪಿದೆಯೇ? ನೀನು ಹೀಗೆ ತುಂಬಾ ಸಲ `ಸಾರಿ~ ಎಂದಷ್ಟೇ ಹೇಳಿ ತಪ್ಪು ಒಪ್ಪಿಕೊಂಡಿರುವೆ. ಆದರೆ ಎಂದೂ ಆ ತಪ್ಪನ್ನು ಸ್ವಲ್ಪ ಮಟ್ಟಿಗಾದರೂ ಸರಿ ಮಾಡುವ ಪ್ರಯತ್ನ ಮಾಡಿಲ್ಲ. ಸಾರಿ ಎಂಬ ಪದ ಸಾರ್ಥಕವಾಗುವುದೇಆಗ~ ಎಂದರು.
ಅಜಿತನಿಗೆ ತಪ್ಪಿನ ಅರಿವಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.