ADVERTISEMENT

ಸೂರ್ಯನ ಕೊಂಬು

​ಪ್ರಜಾವಾಣಿ ವಾರ್ತೆ
Published 8 ಜುಲೈ 2017, 19:30 IST
Last Updated 8 ಜುಲೈ 2017, 19:30 IST
ಸೂರ್ಯನ ಕೊಂಬು
ಸೂರ್ಯನ ಕೊಂಬು   

–ಕನಕರಾಜ್ ಆರನಕಟ್ಟೆ

ಡಿಪಸ್: ಈಗ ಉಳಿದಿದ್ದೇನು? ರೂಪು? ರಾಗ? ಮನಸ್ಸು ಪುಲಕಿಸುವ ಆದರ? ಯಾವುದುಳಿದಿದೆ ಈಗ? ಇಲ್ಲ, ಇಲ್ಲ ಸ್ನೇಹಿತರೆ, ದಾರಿ ತೋರಿಸಿ...

- ಪಿ.ಲಂಕೇಶ್ ಅನುವಾದಿಸಿದ ಸೊಫೊಕ್ಲಿಸ್‌ನ ಈಡಿಪಸ್ ನಾಟಕದಿಂದ.

ADVERTISEMENT

ಅಂತಹ ಕನಸು ತನಗೆ ಬೀಳಲು ಕಾರಣವೇನು ಎಂಬುದು ತಿಳಿಯದೆ ಬೆಳಗ್ಗಿನಿಂದ ಒಂದೇ ಸಮನೆ ಗಲಿಬಿಲಿಗೊಳ್ಳುತ್ತಿದ್ದ ಸಯೀದ್ ಸರಸರನೆ ಹುಲ್ಲ ಕೊಯ್ದು ಒಂಟೆಗಳೆದುರು ಚೆಲ್ಲಿ ಉಸ್ಸೆಂದು ನಿಂತ. ಆ ಬಿಸಿಯಾದ ನಿಡು ಉಸಿರಿನೊಳಗೂ ಆ ಕನಸು ಪಟಕ್ಕನೆ ಕತ್ತ ತೂರಿಸಿ ಚಂಗನೆ ಮಾಯವಾಯ್ತು. ಆ ವದಾಹಿನ್ ಒಂಟೆ ಕಳೆದ ವರ್ಷ ಇಥಿಯೋಪಿಯನೊಬ್ಬನ ತಲೆಯ ಕಟಕಟ ಕಡಿದು, ಅಗಿದು ತಿಂದಂತೆ ಈ ಕನಸು ತನ್ನ ಮಿದುಳನ್ನು ತಿಂದುಬಿಡುವುದೇನೊ ಎಂಬ ವಿಚಿತ್ರ ಭಯ ತಲೆಯೊಳಗೆ ಮೂಡಿ ಅವನ ಮೈಯನ್ನು ಗಡಗಡ ನಡುಗಿಸಿತು. ದೂರದಲ್ಲಿ ಕಫೀಲ್ ಸೌದಿ ಬರುತ್ತಿರುವುದು ಕಾಣಿಸಿತು. ಮುಳುಗುತ್ತಿರುವ ಸೂರ್ಯನ ಬೆಳಕಿನಲ್ಲಿ ಆತನ ಟೊಯೊಟ ಲ್ಯಾಂಡ್ ಕ್ರೂಸರ್ ತೇಲುತ್ತಾ ಬರುತ್ತಿದೆ. ಪ್ರತಿ ಸಂಜೆಯೂ ಜೆಜ಼ಾನ್‌ಗೆ ಹೋಗುವುದು ವಾಡಿಕೆ; ವಾಡಿಕೆ ಎನ್ನುವುದಕ್ಕಿಂತ ಅದೊಂದು ಕರ್ತವ್ಯ! ಈ ಯುದ್ಧದ ಸಂದರ್ಭದಲ್ಲೂ ಹೋಗಬೇಕೆ? ಈ ಪ್ರದೇಶ ತನ್ನ ದೇಶಕ್ಕೂ ಈ ದೇಶಕ್ಕೂ ನಡುವಿನ ಗಡಿ ಪ್ರದೇಶ... ತನ್ನ ದೇಶದಲ್ಲಿ ಯುದ್ಧ ದಿನದಿನಕ್ಕೆ ಹೆಚ್ಚಾಗುತ್ತಲೇ ಇದೆ... ಯಾವ ನಿಮಿಷ ಏನು ಸಂಭವಿಸುವುದೆನ್ನುವುದ ಹೇಳಲು ಸಾಧ್ಯವಿಲ್ಲ. ಆದರೂ ತಾನು ಹೋಗಲೇಬೇಕು... ಛೆ! ತಾನು ದೇಶಕ್ಕೆ ಬರಲೇಬಾರದಾಗಿತ್ತು... ತಾನು ಇಷ್ಟಪಟ್ಟು ಸೇರಿದ ಕೆಲಸ ಕಾಲ ಜರುಗಿದಂತೆ ಬೇಸರ ತರುತ್ತಿದೆ, ತಂದೆಯ ಒತ್ತಾಯಕ್ಕೆ ಇಲ್ಲಿಗೆ ಬಂದದ್ದಾಯ್ತು. ಉಫ್! ... ಆ ಕನಸಿಗೂ ತನ್ನ ಜೀವನಕ್ಕೂ ಏನಾದರೂ ಸಂಬಂಧಗಳಿವೆಯೇ!?

ಕಫೀಲ್ ಜೊತೆ ಹೋಗುತ್ತಿರುವಾಗಲೂ ಸಯೀದ್ ಆ ಕನಸನ್ನು ಹಾದಿಯ ತುಂಬಾ ಚೆಲ್ಲಿಕೊಳ್ಳುತ್ತಾ ಬರುತ್ತಿದ್ದ. ಇಳಿಯುವ ಜಾಗ ಬಂದದ್ದೇ ತಲೆ ಕೊಡವಿ ಶುಕ್ರಾನ್ ಎನ್ನುತ್ತಾ ಇಳಿದ. ಕಫೀಲ್ ತನ್ನ ಮಾಮೂಲಿ ಸಭ್ಯ ನಡವಳಿಕೆಗಳಿಗೆ ತುಸು ಭಂಗ ಬಾರದಂತೆ ಆತನ ನೋಡಿ ನಕ್ಕು ಅಲ್ ಖದ್ಮಾ? ಕೇಳಿದ. ಸಯೀದ್ ಸಲ್ಯೂಟ್ ಹೊಡೆಯುವಂತೆ ಬಲಗೈಯ ಹಣೆಗೆ ಮುಟ್ಟಿ ಶುಕ್ಕ್ ರಾನ್ ಎಂದು ಗಟ್ಟಿ ಧ್ವನಿಯಲ್ಲಿ ಹೇಳಿ ಕಫೀಲ್‌ನ ಕಳುಹಿಸಿ ಸುತ್ತಲೂ ನೋಡಿದ. ತುಟಿಯರಳಿಸಿ ನಗುವ ಸೂಸಿ ಈಜಿಪ್ಷಿಯನ್ ಬೂಫಿಯಾದ ಕಡೆ ಹೆಜ್ಜೆ ಎಣಿಸಿದ.

ಈಜಿಪ್ಷಿಯನ್ ತಾಮಯ ತಿನ್ನುತ್ತಾ, ಛಾಯ್ ಕುಡಿಯುತ್ತಾ ಅಲ್ಲಿ ಕೂತಿದ್ದವರ ಗಮನಿಸಿದ. ಅಲ್ಲಿ ಯಾರೊಬ್ಬರೂ ತನ್ನ ದೇಶದವರು ಇಲ್ಲ! ಮಸ್ರಿ, ಸುಡಾನಿ, ಹಿಂದಿ...! ಯಾ ಅಲ್ಲಾಹ್ ಎನ್ನುತ್ತಾ ದುಡ್ಡು ಕೊಟ್ಟು ಹೊರಬಂದ. ಕಿವಿ ನಿಮಿರಿತು, ಕ್ಷಣಾರ್ಧದಲ್ಲೇ ಜುಮ್ಮೆಂದಿತು; ತನ್ನ ದೇಶದವರ ಧ್ವನಿ ಅವನ ಮೈಯನ್ನು ವಸ್ತುಶಃ ಅಲ್ಲಾಡಿಸಿ ಎದೆ ಬಡಿತವ ತುಸು ಹೆಚ್ಚಿಸಿತು! ಸನಿಹದ ಪಾರ್ಕ್‌ನಲಿದ್ದ ಅವರ ಕೂಡಿಕೊಂಡ. ಆ ಪಾರ್ಕ್‌ನಲ್ಲಿದ್ದವರೆಲ್ಲರೂ ಅಜ್ನಬಿಗಳೇ! ಗುಂಪುಗುಂಪಾಗಿ ಕೂತು ಉಸಿರ ಎಳೆಯುತ್ತಾ ಕಣ್ಣುಗಳಲ್ಲಿ ಒಬ್ಬರನ್ನೊಬ್ಬರು ಅಪ್ಪಿಕೊಳ್ಳುತ್ತಿದ್ದರು. ಸಯೀದ್ ತನ್ನ ನೋಟವ ಅತ್ತಿತ್ತ ಹರಿಯಬಿಡುತ್ತಾ, ಅಲ್ಲಿ ಕೂತಿದ್ದ ಇತರರನ್ನೂ ಗಮನಿಸಿ ಮತ್ತೆ ಕಣ್ಣುಗಳ ವಾಪಸ್ ತಂದ. ಸುತ್ತಲೂ ಕೂತಿರುವ ತನ್ನ ದೇಶದವರ ಮಾತುಗಳ ಮಿದುಳಿನೊಳಗೆ ಬರೆದುಕೊಳ್ಳುತ್ತಿದ್ದ. ಈ ನಡುವೆ ರಾತ್ರಿಯ ಆ ಹಾಳಾದ ಕನಸೂ ಆಗಾಗ ಇಣುಕಿ ಅವನ ಕೆರಳಿಸುತ್ತಿತ್ತು. ಆ ಕನಸಿನ ಜರಿ ಮಿದುಳಿನೊಳಗೆ ಸಂಚರಿಸುತ್ತಿದ್ದಂತೆ ತುಸು ಬೆವರಿ ಯಾವುದೊ ಅವ್ಯಕ್ತ ಭಯ ಅವನ ಮುತ್ತಿಕೊಳ್ಳುತ್ತಿತ್ತು. ಎಷ್ಟು ನಿಯಂತ್ರಿಸಿದರೂ ಅದು ಕುಳುಕ್ ಎಂದು ಮಿದುಳಿನಿಂದ ಎದ್ದು ಅವನ ಮೈಯೊಳಗೆ ಸಂಚರಿಸುತ್ತಿತ್ತು. ಹಲ್ಲ ಬಿಗಿಯಾಗಿ ಕಡಿಯುತ್ತಾ ಮಿದುಳನ್ನು ಹೆಬ್ಬೆರಳಿನಿಂದ ತಿವಿದ. ಅವರುಗಳು ಮಾತನಾಡುವುದ ಕೇಳಿಸಿಕೊಳ್ಳಲೇಬೇಕು!

ಯುದ್ಧ ಮುಗಿದದ್ದೇ ಊರಿಗೆ ಹೋಗಬೇಕು! ನನ್ನ ಮಗಳು ಹುಟ್ಟುವ ಎರಡು ತಿಂಗಳ ಹಿಂದೆ ಇಲ್ಲಿಗೆ ಬಂದಿದ್ದು! ನನ್ ಮಗಳಿಗೆ ಈಗ ಆರು ವರ್ಷ!... ಬೇಗ ಅವಳ ನೋಡುತ್ತೇನೆ, ಅನ್ಸುತ್ತೆ... ಇನ್ಷೆ ಅಲ್ಲಾಹ್... ಯುದ್ಧ ಮುಗಿದ ತಕ್ಷಣವೇ ನೀನು ನಿನ್ನ ಮುದ್ದಾದ ಮಗುವ ನೋಡಬಹುದು. ಆದರೆ ನನಗಾ ಅವಕಾಶವನ್ನು ಇನ್ನೂ ಅಲ್ಲಾಹ್ ದಯಪಾಲಿಸಿಲ್ಲ...

ಸಯೀದ್ ರೋಮಾಂಚನಗೊಳ್ಳುತ್ತಾ ತನ್ನ ಮೈಯನ್ನೆಲ್ಲ ಕಿವಿಯಾಗಿಸಿಕೊಂಡ. ಅಲ್ಲಿದ್ದ ಇಬ್ಬರು ಮಾತನಾಡುತ್ತಿದ್ದುದ ಸಯೀದ್ ತನ್ನ ಮಿದುಳಿನೊಳಗೆ ಟಂಕಿಸುತ್ತಿದ್ದ:

ಈ ವರ್ಷಕ್ಕೆ ಇಪ್ಪತ್ತೆರಡು ವರ್ಷಗಳಾದವು ನಾ ನಮ್ ದೇಶಕ್ಕೆ ಹೋಗಿ...ಈಗಿನ ನಿಮ್ ಅಧ್ಯಕ್ಷ ಅವತ್ತು ರಕ್ಷಣಾ ಸಚಿವ. ನಮ್ಮನ್ನು ರಕ್ಷಿಸುವ, ಸಹಾಯ ಮಾಡುವ ಸುಳ್ಳುಗಳ ಹೇಳುತ್ತಾ ದೇಶವ ಕೊಳ್ಳೆ ಹೊಡೆಯುತ್ತಿರುವ ಅವನನ್ನು ಈ ಹದೀಸ್‌ಗಳು ಕೊಲ್ಲಬೇಕು... ಬೀದಿಬೀದಿಗಳಲ್ಲಿ ಅವನ ಅಟ್ಟಾಡಿಸಿ ಕೊಲ್ಲಬೇಕು... ಲಿಬಿಯಾದಲ್ಲಿ ಗಡಾಫಿಯ ಕೊಲ್ಲಲಿಲ್ಲವೆ ಹಾಗೆ... ಸರ್ವವ ಬಲ್ಲ ಅಲ್ಲಾಹುವಿನಿಂದ ಎಲ್ಲವಕ್ಕೂ ಉತ್ತರ ಸಿಗುತ್ತದೆ... ಇಪ್ಪತ್ತು ವರ್ಷ, ಬರೋಬ್ಬರಿ ಇಪ್ಪತ್ತು ವರ್ಷ... ದೇಶದೊಳಕ್ಕೆ ಕಾಲಿಡದಂತೆ ಮಾಡಿಬಿಟ್ಟ ನಿಮ್ಮ ಈಗಿನ ಅಧ್ಯಕ್ಷ...

ಮಾತನಾಡುತ್ತಿರುವ ವ್ಯಕ್ತಿಯ ಕಣ್ಣುಗಳ ಸಯೀದ್ ಸೂಕ್ಷ್ಮವಾಗಿ ನೋಡಿದ. ಬಾಚಲು ಹವಣಿಸುತ್ತಿರುವ ತನ್ನ ನಾಲಗೆಗೆ ಲಂಗರು ಬಡಿದು ಅವನು ಕಣ್ಣ ಕಿವಿಯಾಗಿಸಿಕೊಂಡ. ಇಡೀ ದೇಹವೇ ಕಿವಿಯೊಳಗಿನ ತಮಟೆಯಾದವು. ಆ ತಮಟೆ ಹರಿದುಹೋಗದಂತೆ ನೋಡಿಕೊಳ್ಳುವ ಉದ್ವೇಗ ಇನ್ನೊಂದು ಕಡೆ. ಇವುಗಳ ನಡುವೆ ಅವನ ಮನಸ್ಸನ್ನು ಆಗಾಗ ಎಳೆದಾಡುವ ಆ ಹಾಳು ಕನಸಿನ ನೆನಪು... ಎದೆ ಬಡಿತ ಇಡೀ ದೇಹಕ್ಕೇ ಕೇಳಿಸುತ್ತಿದೆ. ಮಾತನಾಡುತ್ತಿರುವವನ ಹಿಂಬಾಲಿಸಲಾಗುತ್ತಿಲ್ಲ... ಆತ ಹೇಳುತ್ತಿರುವುದೇನು?... ಕಿವಿ, ಕಿವಿ... ಮೈಯೆಲ್ಲಾ ಕಿವಿಯಾಗಬೇಕು...

ಅದು 1992ರ ಡಿಸೆಂಬರ್, ಚಳಿಗಾಲದ ಆರಂಭ. ನಮ್ಮ ಸನಾದ ಏರ್‌ಪೋರ್ಟಿಗೆ ಟ್ಯಾಕ್ಸಿಯಲಿ ಹೋಗುತ್ತಿದ್ದೆ. ನನ್ನ ಸಂಬಂಧಿಯೊಬ್ಬನ ಟ್ಯಾಕ್ಸಿ ಅದು. ನನ್ನ ಜೊತೆ ಇನ್ನೂ ಮೂವರನ್ನು ಹತ್ತಿಸಿಕೊಂಡಿದ್ದ. ಅವರೂ ನನ್ನಂತೆಯೇ ಬದುಕ ಅರಸಿ ಈ ದೇಶಕ್ಕೆ ಬರುವವರಿದ್ದರು. ಅವರೂ ನಮ್ಮಂತೆಯೇ ಕಡುಬಡವರು. ಈ ದೇಶದಲ್ಲಾದರೂ ತಮ್ಮ ಬದುಕು ಅರಳೀತು ಎಂಬ ಅದಮ್ಯ ಆಸೆಯಲ್ಲಿ ಹೊರಟವರು. ಎಲ್ಲರ ಮುಖದಲ್ಲಿ ಖುಷಿ, ಹೆಮ್ಮೆ, ಕನಸುಗಳಿದ್ದವು. ಈಗಲೂ ಇರುವಂತೆ...

ಸಯೀದ್‌ನ ತುಟಿ ಬಲಕ್ಕೆಳೆದು ಕಿಸಕ್ಕೆಂದಿತು. ಇಪ್ಪತ್ತು ವರ್ಷ ನೀನು ದುಡಿದು ಕಟ್ಟೆ ಹಾಕಿದ್ದು ಏನೂಂತ ನಿನ್ನ ನೋಡುದ್ರೆ ಗೊತ್ತಾಗುತ್ತೆ... ಹೇಳಪ್ಪ ಹೇಳು, ಮುಂದೆ ಹೇಳು... ಸಯೀದ್ ಚಣಚಣಕ್ಕೂ ಅರಳುತ್ತಿದ್ದ. ಅವತ್ತು ಟ್ಯಾಕ್ಸಿಯಲ್ಲಿ ಏರ್‌ಪೋರ್ಟಿಗೆ ಬರುತ್ತಿದ್ದಾಗ ನನಗೆ ಯಾಕೊ ಕೋಪ ಉಕ್ಕುಕ್ಕಿ ಬರುತ್ತಿತ್ತು. ನಾನು ವೆಕೆಷನ್‌ಗೆ ಹೋಗಿದ್ದೆ, ಉಳಿದವರು ಹೊಸಬರು, ಮೊದಲ ಬಾರಿಗೆ ಬರುತ್ತಿದ್ದಾರೆ. ಅವರ ನೋಡುತ್ತಿದ್ದಂತೆಲ್ಲ ನನ್ನ ಮೈ ಉರಿಯುತ್ತಿತ್ತು. ಅಸಲಿಗೆ ಅವರು ಯಾರು ಎನ್ನುವುದೇ ನನಗೆ ಗೊತ್ತಿರಲಿಲ್ಲ. ಹುಟ್ಟಿದ ದೇಶವ ತೊರೆದು ಮತ್ತೊಂದು ದೇಶದಲಿ ದುಡಿಯುವಾಗಿನ ಕಷ್ಟ, ನೋವು, ಅವಮಾನಗಳ ಪದಗಳಲಿ ಕಟ್ಟಿ ಹೇಳುತ್ತಿದ್ದೆ. ಆ ಭರದಲ್ಲಿ ನಮ್ಮ ದೇಶದ ಅಧ್ಯಕ್ಷ, ಅವನ ತಮ್ಮ ಅಂದ್ರೆ ಇಂದಿನ ಅಧ್ಯಕ್ಷ ಎಲ್ಲರನ್ನೂ ಬಾಯಿಗೆ ಬಂದಂತೆ ಬೈದು ಬಿಸಾಕಿದೆ. ಅಷ್ಟಕ್ಕೇ ಸುಮ್ಮನಾಗಿದ್ದರೆ ಚೆನ್ನಾಗಿರುತ್ತಿತ್ತೇನೊ... ನಾ ಮುಂದುವರಿದು, ಈ ಸೈತಾನ್‌ಗಳ ಮುಗಿಸಿಹಾಕಲು ಆ ಸರ್ವಶಕ್ತ ಕೆಲವರನ್ನು ಕಳುಹಿಸಿದ್ದಾನೆ, ನಾನು ಅವರಲ್ಲೊಬ್ಬ ಎಂದು ಸುಮ್ಮನೆ ಹಾಗೆ ಮಾತಿನ ಭರದಲ್ಲಿ ಹೇಳಿಬಿಟ್ಟೆ. ಅಂದು ವಿಮಾನ ಹತ್ತುವಾಗ ಹಾಗೆ ತಾನು ಮಾತನಾಡಬಾರದಿತ್ತು ಎನಿಸಿತ್ತು. ಮೈಯೆಲ್ಲ ನಡುಕ... ಈ ಮೂವರಲ್ಲಿ ಯಾವನಾದರೂ ಪೊಲೀಸರಿಗೆ ತಿಳಿಸಿಬಿಟ್ಟರೆ... ಎನ್ನುವ ಆತಂಕ... ಅವರಿಂದ ತಪ್ಪಿಸಿಕೊಳ್ಳುತ್ತಾ ನಡೆಯುತ್ತಿದ್ದೆ. ಇಲ್ಲಿಗೆ ಬಂದ ಮೂರು ತಿಂಗಳಿಗೆ ನನ್ನ ಮನೆಯಿಂದ ಸುದ್ದಿ ಬಂತು, ದೇಶಕ್ಕೆ ವಾಪಸ್ ಹೋಗುವಾಗ ತನ್ನನ್ನು ಬಂಧಿಸುತ್ತಾರಂತೆ... ಆ ಸುದ್ದಿಯ ಸತ್ಯಾಸತ್ಯತೆಯ ಅರಿತುಕೊಳ್ಳಲು ಗೆಳೆಯನಿಗೆ ಹೇಳಿದೆ, ಅವನು ವಿಚಾರಿಸಿ ನಿಜ ಎಂದ. ದೇಶವಿರೋಧಿಗಳ ಮೊದಲ ಪಟ್ಟಿಯಲ್ಲಿ ತನ್ನ ಹೆಸರು ಇರುವುದು ಖಚಿತವಾಯ್ತು. ನಾ ಅಕ್ಷರಶಃ ಉಡುಗಿ ಹೋದೆ. ನಾನು ಅಧಿಕಾರಸ್ಥರ ವಿರುದ್ಧ ಮಾತಾಡಿದ್ದು ನಿಜವಾದರೂ ಅವರ ವಿರುದ್ಧ ನಿಲ್ಲುವ ಉಮೇದು ನನ್ನಲ್ಲಿರಲಿಲ್ಲ. ನನ್ನ ಹೆಸರು ಯಾವುದ್ಯಾವುದೊ ಸಂಘಟನೆಗಳ ಜೊತೆ ತಳುಕು ಹಾಕಿಕೊಂಡಿತು. ನನ್ನ ಹುಡುಕಿಕೊಂಡು ಈ ದೇಶದೊಳಕ್ಕೆ ಬರಲು ಅಂತರರಾಷ್ಟ್ರೀಯ ಕಾನೂನಿನಲ್ಲಿ ಅವಕಾಶವಿಲ್ಲದಿರುವುದರಿಂದ ನಾ ಬಚಾವಾದೆ. ಆದರೆ ಬಂಧಿಸಿಯಾರೆಂಬ ಭಯದಲ್ಲಿ ನಾ ಇಪ್ಪತ್ತೆರಡು ವರ್ಷಗಳಿಂದ ನಮ್ ದೇಶಕ್ಕೆ ಹೋಗದೆ ಇಲ್ಲೇ ಇದ್ದೇನೆ.

ಅವರಿಗೆ ಹೆದರಿ ಇಲ್ಲೇ ನೆಲೆಸಿದ್ದೇನೆ ಎಂದುಕೊಂಡಿರಾ? ಉಹ್ಞೂ... ಜೈಲಿಗೆ ಹೋಗಲೊ ಅಥವ ಸಾಯಲೊ ನಾ ಹೆದರಿಲ್ಲ... ಬಂಧನಕ್ಕೊಳಗಾದರೆ ನನ್ನ ಕುಟುಂಬಕ್ಕೆ ದುಡಿಯುವರ್‍ಯಾರೂ ಇರುವುದಿಲ್ಲ... ಆ ಭಯ ಅಷ್ಟೆ... ಬೇರೆ ಇನ್ನೇನೂ ಇಲ್ಲ... ಇದು ನನ್ನ ದಿನವೂ ಬಾಧಿಸುತ್ತದೆ. ನನ್ನಾ ಮಾತುಗಳ ಪೊಲೀಸರಿಗೆ ತಿಳಿಸಿದವರ್‍ಯಾರು ಎನ್ನುವುದ ಕೇಳಿದರೆ ನೀವು ಆಶ್ಚರ್ಯಪಡುತ್ತೀರಿ... ಆ ಟ್ಯಾಕ್ಸಿಯವನು, ಅಷ್ಟಕ್ಕೂ ಆತ ನನ್ನ ಸಂಬಂಧಿ, ವಾಲದ್ ಅಮ್ಮಿ. ಇದಕ್ಕೇನು ಹೇಳುವಿರಿ? ಈ ಯುದ್ಧ ಮುಗಿಯಲಿ, ಆಮೇಲಿದೆ ಅವನಿಗೆ... ಹೇಗಿದ್ದರೂ ಯುದ್ಧದಲಿ ನಿಮ್ಮ ಅಧ್ಯಕ್ಷ ಸೋಲಲಿದ್ದಾನೆ... ಪೊಲೀಸ್ ವ್ಯವಸ್ಥೆ ಬದಲಾಗಿದ್ದೇ ನಾ ದೇಶಕ್ಕೆ ಬರುತ್ತೇನೆ... ಅಧ್ಯಕ್ಷ ಸೋಲುವುದು ಕಠಿಣ ಎನ್ನುವಿರಾ? ನೋಡುತ್ತಿರಿ... ಅವನ ರುಂಡವ ಜನ ಚೆಂಡಾಡುವ ದಿನ ದೂರ ಇಲ್ಲ. ಜನ ಹಸಿವಿನಿಂದ ಸಾಯುತ್ತಿದ್ದರೆ ಇವನು ತೈಲವ ಕಳ್ಳತನದಲಿ ಮಾರುತ್ತಿದ್ದಾನೆ. ಅವನ ಕುಟುಂಬ ಮಾತ್ರ ದುಡ್ಡು ಮಾಡಿಕೊಳ್ಳುತ್ತಲಿದೆ. ನನ್ನ ನಿಮ್ಮಂತಹ ಸಾಮಾನ್ಯರು ಮಾತ್ರ ಒಂದು ಹೊತ್ತಿನ ಊಟಕ್ಕೂ ಕಷ್ಟಪಡುತ್ತಿದ್ದೇವೆ. ನೀವೇ ನೋಡುತ್ತಿದ್ದೀರಲ್ಲ, ನಮ್ಮ ದೇಶದಿಂದ ಈ ದೇಶದೊಳಕ್ಕೆ ಎಷ್ಟು ಜನ ಕಳ್ಳತನದಲಿ ಬರುತ್ತಿದ್ದಾರೆಂದು... ವೀಸಾಕ್ಕೆ ಕೊಡಲೂ ಅವರ ಬಳಿ ದುಡ್ಡಿಲ್ಲ... ನಾವೆಲ್ಲರೂ ಬಂಡುಕೋರರ ಜೊತೆ ಸೇರಿಕೊಳ್ಳಬೇಕು, ಅಧ್ಯಕ್ಷನ ಆಟಗಳಿಗೆ ಕೊನೆ ಹಾಡಬೇಕು, ಏನಂತೀರಿ?...

ಆತನ ಕಣ್ಣುಗಳು ಬೆಂಕಿಯುಂಡೆಯಂತೆ ಕುಣಿಯುತ್ತಿರುವುದ ಸಯೀದ್ ಗಮನಿಸಿದ. ಹೈವಾ...ಹಖೀತ್ ಹಖೀತ್ ಎನ್ನುತ್ತಾ ಸಯೀದ್ ಎದ್ದ. ಜೇಬಿನೊಳಗೆ ಜೀವಂತ ಹೆಣವಾಗಿದ್ದ ಮೊಬೈಲ್ ಉದ್ರೇಕಗೊಂಡು ನಿಗಿತುಕೊಂಡಿತು. ಕಡಿಯುತ್ತಿದ್ದ ಕೈಗಳು ಮೊಬೈಲನ್ನು ಅದುಮುತ್ತಾ ನೀಳಗೊಳ್ಳುತ್ತಿತ್ತು. ಸಯೀದ್‌ನ ಕಣ್ಣುಗಳು ಫಳಫಳ ಹೊಳೆಯುತ್ತಿದ್ದವು, ಗಂಟಲೊಳಗೆ ಕುಡುಗೋಲೊಂದು ಶಬ್ದಗಳ ಕೊಯ್ಯುತ್ತಾ ಸಿವುಡು ಕಟ್ಟುತ್ತಿದ್ದವು. ಮೈ ಯಾಕೊ ಬೆವರುತ್ತಿತ್ತು... ಆ ಕನಸಿನಿಂದಾಗಿಯೇ ಇರಬೇಕು... ಹಾಳಾದ ಕನಸು...

ಸಯೀದ್ ಅವರುಗಳ ನೋಡಿ ‘ಯಾಲ್ಲ ರಜ್ಜಾಲ್...’ ಎನ್ನುತ್ತಾ ತನಗೆ ಸಮಯವಾಯ್ತೆಂದು ಹೇಳಿ ಸರಸರನೆ ಹೆಜ್ಜೆಯಿಟ್ಟ. ಅವನ ಮಿದುಳ ತುಂಬಾ ಕೇಳಿಸಿಕೊಂಡ ಮಾತುಗಳೇ ತುಂಬಿದ್ದವು. ಆ ವ್ಯಕ್ತಿಯ ಮಾತಿನ ಭರದಲ್ಲಿದ್ದ ವೇಗವನ್ನು ಸಯೀದ್ ಮತ್ತೆ ಮತ್ತೆ ಮನಸ್ಸಿನೊಳಗೆ ಅಚ್ಚೊತ್ತಿಕೊಳ್ಳುತ್ತಾ ಸಯೀದ್ ಅರಳುತ್ತಿದ್ದ. ಹ್ಯಾಪಿ ಮಥಾಮ್‌ನಲ್ಲಿ ತನ್ನ ಬಹು ಇಷ್ಟದ ಬ್ರೋಸ್ಟ್ ಚಿಕನ್ ತಿಂದು ಕುಬುಸ್‌ಗಳ ಎಕ್ಸ್‌ಟ್ರಾ ಪಡೆದು ಹೊರಬಂದ. ಕಾಲುಗಳು ಕುಪ್ಪಳಿಸುತ್ತಿದ್ದವು, ಟ್ಯಾಕ್ಸಿ ಹಿಡಿದು ರೂಮಿಗೆ ಹೋದ. ಹೋದವನೆ ಬಾಗಿಲಿಗೆ ಚಿಲಕ ಹಾಕಿ, ಕಿಟಕಿಗಳ ಭದ್ರವಾಗಿ ಮುಚ್ಚಿ ಕುಣಿಯುತ್ತಿದ್ದ ಮೊಬೈಲನ್ನು ತೆಗೆದ. ಒಂದೇ ಉಸಿರಲ್ಲಿ ಹೇಳಬೇಕೆಂದಿದ್ದುದ ಹೇಳಿ ಮುಗಿಸಿ ನಿಟ್ಟುಸಿರಿಟ್ಟು ಒಂದೇ ಸಮನೆ ಕುಣಿದ. ಮೈಯೆಲ್ಲಾ ಹೂವಿನ ಕುಂಡಗಳು ಮೂಡುತ್ತಿದ್ದಂತೆ ಅವುಗಳಿಂದ ಸುವಾಸನೆ ಹರಡುತ್ತಿದ್ದಂತೆ ಭಾಸವಾಗಿ ಪುಲಕಗೊಂಡ. ನಾಳೆಯ ತನ್ನ ದೇಶದ ದಿನಪತ್ರಿಕೆಗಳ ಊಹಿಸಿಕೊಂಡು ಮತ್ತಷ್ಟು ಪುಟಿಯುತ್ತಿದ್ದ. ‘ಮಾಷೆ ಅಲ್ಲಾಹ್! ಎಂತ ಅವಕಾಶ ನೀಡಿದೆ, ಸರ್ವಶಕ್ತನೆ! ಯಾ ರಬ್ಬೀಲ್ ಅಲ್ ಅಮೀನ್!’

ಅವನಿಗೆ ನಿದ್ರೆಯೇ ಬರುತ್ತಿಲ್ಲ... ಖುಷಿಯೋ ಖುಷಿ... ಅವನ ಜೀವಿತದ ಮಹಾನ್ ಖುಷಿಯ ಗಳಿಗೆ ಅದು... ಅದ ನೆನೆನೆನೆದು ಪುಲಕಗೊಳ್ಳುತ್ತಲೇ ಇದ್ದಾನೆ. ನನ್ನ ಜೀವನ ಸಾರ್ಥಕವಾಯ್ತು. ಎಂಥಹ ದೇಶವಿರೋಧಿಯ ತಾನಿಂದು ಹಿಡಿದುಹಾಕಿದೆ... ಇಪ್ಪತ್ತು ವರ್ಷದಿಂದ ದೇಶದೆದುರು ಸಂಚು ಹೂಡುತ್ತಿದ್ದವನ ನಿಮಿಷಾರ್ಧದಲ್ಲೇ ಹಿಡಿದು ಹಾಕಿದೆ... ತಿನ್ನುವ ಅನ್ನಕ್ಕೆ ಋಣ ತೋರಿಸಿದ ಮೊದಲ ಪ್ರಸಂಗ! ವಾಹ್...! ಮಾಷೆ ಅಲ್ಲಾಹ್... ಮಾಷೆ ಅಲ್ಲಾಹ್... ಅವನಂತಹ ಹರಾಮಿಯ ನಮ್ಮ ಪೊಲೀಸರು ಬೇಗ ಹಿಡಿದು ಜೈಲಿಗೆ ತಳ್ಳಬೇಕು... ಹುಟ್ಟಿದ ದೇಶಕ್ಕೆ ಎರಡು ಬಗೆಯುವ ಇಂತಹ ಹರಾಮಿಗಳನ್ನೆಲ್ಲ ಒಟ್ಟುಗೂಡಿಸಿ ಬಹರ್ ಅಲ್ ಮೈಯ್ಯತ್‌ಗೆ ತಳ್ಳಬೇಕು... ಮುಳುಗಲೂ ಆಗದೆ ತಪ್ಪಿಸಿಕೊಳ್ಳಲೂ ಆಗದೆ ಅವರುಗಳು ಆ ಮೃತ ಸಾಗರದ ಮಧ್ಯದಲಿ ತೇಲಬೇಕು...

ಅರೆ, ನನ್ನ ಕನಸಲ್ಲಿ ಅದೇ ಮೃತ ಸಾಗರವಲ್ಲವೇ ಬಂದದ್ದು... ನಾನೂ ನನ್ನ ಹೆಂಡತಿ ಮಕ್ಕಳು, ಕುರುಡು ತಂದೆ, ಎಲ್ಲರೂ ಅದೇ ಸಾಗರದ ಆಳದಲಿ ಉಸಿರಾಡಲೂ ಆಗದೆ ಸಾಯಲೂ ಆಗದೆ ತೊಳಲಾಡುತ್ತಿದ್ದೆವಲ್ಲ ಆ ಕನಸಲ್ಲಿ... ಅದೆಂತಹ ಭಯಂಕರ ಕನಸು! ನನ್ನ ಮಕ್ಕಳು ಹಸಿವು ಹಸಿವು ಎಂದು ಕೂಗುತ್ತಿದ್ದರು, ನನ್ನ ತಂದೆ ವಿಕಾರವಾಗಿ ಕೂಗುತ್ತಿದ್ದ, ಹೆಂಡತಿ ಒಂದೇ ಸಮನೆ ಅಳುತ್ತಿದ್ದಳು... ಛೆ... ಅದು ಕನಸಷ್ಟೆ... ತಾನ್ಯಾಕೆ ಆ ಕನಸಿಗೆ ನಿನ್ನೆಯಿಂದ ಹೆದರುತ್ತಿದ್ದೇನೆ... ಅದು ಕೇವಲ ಕನಸು ಅಷ್ಟೆ... ಎಂದಿಗೂ ಅದು ಸಂಭವಿಸಲು ಸಾಧ್ಯವಿಲ್ಲ... ಅಧ್ಯಕ್ಷರ ಪರಮ ಅನುಯಾಯಿಯಾದ ತಾನು ಆ ಮೃತ ಸಾಗರದಲಿ ತೇಲುವುದೆ? ಛೆ... ಇದೇನು ಮಕ್ಕಳಂತೆ... ಒಂದು ಯಕಶ್ಚಿತ್ ಕನಸಿಗೆ ಹೀಗೆ ಹೆದರುವುದೆ? ಕಣ್ಣ ಮುಚ್ಚಲು ಪ್ರಯತ್ನಿಸಿದ.

ನೀರವ ಮೌನ. ಮರುಭೂಮಿಯಿಂದ ಸುಂಯ್ಯೆಂದು ಬೀಸುತ್ತಿದ್ದ ಗಾಳಿ ಮೌನಕ್ಕೆ ಮತ್ತಷ್ಟು ಮೆರುಗೇರಿಸುತ್ತಿತ್ತು. ಸಯೀದ್ ಎದ್ದು ಹೊರಬಂದ, ಮೆದುಗಾಳಿಯ ತಣ್ಣನೆಯ ಸ್ಪರ್ಶಕ್ಕೆ ಕಣ್ಣ ಮುಚ್ಚಿದ. ಗಾಳಿಯ ಹಿತ ವಾಸನೆಯ ಹೀರುತ್ತಿದ್ದ ಅವನ ಮೂಗಿನೊಳಗೆ ಮರಳಿನ ಕಣಗಳು ತೂರಿ ಅವನ ಕಣ್ಣ ತೆರೆಸಿದವು. ಸಿಹಿಯಾದ ಗಾಳಿ ಈಗ ನೋಡನೋಡುತ್ತಿದ್ದಂತೆ ದೂರದಿಂದ ಮರಳ ರಾಶಿಯ ಹೊತ್ತು ತರುತ್ತಿದೆ... ಮರಳ ದಿನ್ನೆಗಳೇ ಎದ್ದು ಬರುವಂತೆ ಕಾಣಿಸುತ್ತಿದೆ. ಆ ಕತ್ತಲಲ್ಲೂ ಮರಳರಾಶಿ ಸ್ಪಷ್ಟವಾಗಿ ಕಾಣಿಸುತ್ತಿತ್ತು. ಅಲ್ಲಲ್ಲಿ ಸಿಡಿಯುತ್ತಾ, ಆಕಾಶವ ಮುಟ್ಟುವಂತೆ ಚಿಮ್ಮುತ್ತಾ ಮರಳು ಇವನ ಕಡೆ ಬರುತ್ತಿತ್ತು. ಇದು ಒಬಾರ್ - ಮರಳಗಾಳಿ- ಏಳುವ ಕಾಲ, ಹಾಗಾಗಿಯೇ ಇಷ್ಟು ರಕ್ಕಸವಾಗಿ ಬೀಸುತ್ತಿದೆ ಎನ್ನುತ್ತಾ ಒಳಗೆ ಹೋಗಲು ತಿರುಗಿದ. ಮೇಲೆ ನೋಡಿದ, ಏನೊ ಹಾರುತ್ತಾ ಬರುತ್ತಿತ್ತು, ಬೆಳಕ ಸೂಸುತ್ತಾ, ಏನೊ ಒಂದನ್ನು ಅದು ಅಲ್ಲಲ್ಲಿ ಉದುರಿಸಿ ರೊಯ್ಯೆಂದು ಹೋಗುತ್ತಿತ್ತು... ಏನೆಂದು ನೋಡುವುದರೊಳಗೆ ಅವನು ನಿಂತಿದ್ದ ಜಾಗ ಒಮ್ಮೆಗೇ ಸ್ಫೋಟಿಸಿತು.

ಸಯೀದ್ ಗಾಳಿಯಲ್ಲಿ ಹಾರುತ್ತಿದ್ದ. ಸುತ್ತಲೂ ಮರಳ ರಾಶಿ, ಕಣ್ಣು ಕಿವಿಗಳೊಳಗೆಲ್ಲ ಮರಳು ತೂರಿಕೊಳ್ಳುತ್ತಿತ್ತು... ಪ್ರಯಾಸಪಟ್ಟು ನೋಡಿದ, ಇದೇನು! ಗಾಳಿಯಲ್ಲಿ ತಾನು ತೇಲುತ್ತಿದ್ದೇನೆ, ಸುತ್ತಲೂ ಮರಳಹಾಸು, ಮೃತಸಾಗರದ ಅಲೆಗಳಂತೆ ಸುತ್ತಲೂ ಮರಳ ಅಲೆಗಳು! ಆಕಾಶದಲ್ಲೀಗ ಹತ್ತಾರು ವಿಮಾನಗಳು ಹಾರುತ್ತಾ ಬರುತ್ತಿರುವುದ ನೋಡಿದ ಸಯೀದ್ ಕೂಗಿಕೊಂಡ:

ನಾನು ದಸೂಸ್* ... ನಂಬಿಕಸ್ತ ದಸೂಸ್, ಅಧ್ಯಕ್ಷರ ದಸೂಸ್... ನನ್ನ ಮೇಲ್ಯಾಕೆ ಬಾಂಬ್ ಹಾಕುತ್ತಿದ್ದೀರಿ...?

ಮರಳು ಆಕಾಶಕ್ಕೆ ಜಿಗಿಯುತ್ತಿತ್ತು. ಮರಳ ಸುಳಿಯಲಿ ಅವನು ಗರಗರ ತಿರುಗುತ್ತಾ ಮೇಲ್ ಮೇಲಕ್ಕೆ ಹೋಗುತ್ತಿದ್ದ.

***

* ದಸೂಸ್- (ಅರೆಬಿಕ್ ಪದ): ಸರ್ಕಾರದ ಗೂಢಚಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.