ADVERTISEMENT

ಸೊಳ್ಳೆ ಉವಾಚ

ಸುಭಾಸ ಯಾದವಾಡ
Published 10 ಮಾರ್ಚ್ 2018, 19:30 IST
Last Updated 10 ಮಾರ್ಚ್ 2018, 19:30 IST
ಚಿತ್ರ: ಭಾವು ಪತ್ತಾರ್
ಚಿತ್ರ: ಭಾವು ಪತ್ತಾರ್   

ಏ ಗೆಳೆಯಾ
ಎಷ್ಟು ಸೊರಗಿದ್ದೀಯಾ?
ಸಿರಿವಂತರ ಸಂಭ್ರಮಕ್ಕೆ
ಮರುಳಾಗಿ ಆ
ಮನೆಯ ಹೊಕ್ಕವನು ನೀನು.
ಸಿಗಲಿಲ್ಲವೇ ಊಟ?
ಕಣ್ಣಿಗೂ ಕಾಣದಷ್ಟು
ಕುಗ್ಗಿರುವೆಯಲ್ಲ.

ಬಡವರ ಮನೆಯ
ಸೊಳ್ಳೆ ನಾನು.
ಕರೆಯುವವರಿಲ್ಲ
ಬೇಡ ಎನ್ನುವವರೂ ಇಲ್ಲ.
ಗಡದ್ದಾಗಿ ಉಂಡೇ
ಏಳುವುದು ಮೇಲೆ.
ಕೆಲವೊಮ್ಮೆ ಹಾರಲಾಗದಷ್ಟು
ಉಬ್ಬಿರುತ್ತೇನೆ.

ಹೌದು ಗೆಳೆಯಾ
ಹೊಟ್ಟೆಗಿಲ್ಲದ ಸಿರಿಯು
ಎಷ್ಟಿದ್ದರೇನು?
ಸೊಳ್ಳೆ ಪರದೆಯ ಗೋಡೆ
ಬ್ಯಾಟು ಬತ್ತಿಯ ತಡೆ.
ತಪ್ಪಿ ಬಾಯಿ ಇಟ್ಟರೆ
ರಕ್ತವೂ ಕೊಳಕು.

ADVERTISEMENT

ನಿದ್ರೆ ಮಾಡುವುದೇ ಇಲ್ಲ

ಮಾಡಿದರೂ ಅದು ನಿದ್ರೆಯಲ್ಲ
ಮುಟ್ಟುವಾ ಮುನ್ನವೇ ಕೈಯ ಎತ್ತುವರು.
ಬದುಕಿದ್ದೇ ಹೆಚ್ಚು
ಕಚ್ಚುವುದು ಎಲ್ಲಿ?!

ಬಡವರ ಮನೆಯ
ಊಟ ಚಂದ
ಸಿರಿಮನೆಯ
ನೋಟ ಚಂದ
ಎನ್ನುವುದು ಸುಳ್ಳಲ್ಲ ಗೆಳೆಯ.
ನಾನೂ ಬರಲೇ
ನಿನ್ನ ಮನೆಗೆ?

ಬಾ ಗೆಳೆಯ
ನಿನ್ನವರನ್ನೆಲ್ಲ ಕರೆದು ತಾ
ಉಂಡು ಗುಂಡಾಗುವಿರಂತೆ.
ಒಂದು ಮಾತು
ಇಲ್ಲ ತಡೆ ಎಂದು
ಹೆಚ್ಚು ಹೀರಲು ಬೇಡಿ
ಕೊಂಚ ಅಪಾಯ
ಅಲ್ಲಿಯೂ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.