ADVERTISEMENT

ಸ್ತಬ್ಧ ಸೇತುವೆ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2012, 19:30 IST
Last Updated 4 ಫೆಬ್ರುವರಿ 2012, 19:30 IST
ಸ್ತಬ್ಧ ಸೇತುವೆ
ಸ್ತಬ್ಧ ಸೇತುವೆ   

ಅಂತೂ ಸೇತುವೆಯೊಂದು ಇದೆಯಲ್ಲಾ ದಾರಿಗೆ
ಇದು ದಾರಿಯೇ ಆಗಿದ್ದಲ್ಲಿ
ಸೇತುವೆಯ ಈ ಬದಿ ನಮ್ಮ ಎದೆಗೇ ತಾಗಿಕೊಂಡಿರಬಹುದು
ಈಚೆ ನಿಂತ ಎಲ್ಲರಿಗನಿಸುವಂತೆ
ಅದು ಎದೆಯೇ ಆಗಿದ್ದಲ್ಲಿ

ಇರಲಿಕ್ಕಿಲ್ಲ ಆಗಿರಲಿಕ್ಕಿಲ್ಲ ಯಾವುದೂ
ಓಡುವ ಕಾಲುಗಳನ್ನು ಹಿಡಿದೆಳೆದಂತೆ ಅವನ ಸ್ವಪ್ನ ಕುಹಕ
ಬರುವ ಆಗಂತುಕರು ಕರೆವರೋ ಕೊಲುವರೋ
ಯಾರಿಲ್ಲದ ಊರಲ್ಲಿ
ಇದು ಊರೇ ಆಗಿದ್ದಲ್ಲಿ

ಏನು ಕಂಡಿರಬಹುದು ಭೀತ ಕಣ್ಣುಗಳಲ್ಲಿ
ಹಿಂತಿರುಗಿ ನೋಡುವುದೇ ಅವನಿಗೆ ಬೆನ್ನುಹಾಕಿ?
ಅಥವಾ ನೋಡುತ್ತಿರಬಹುದೇ ಅವನು ನೋಡಬಾರದ್ದನ್ನು
ನಮ್ಮ ಎದೆಯ ಪರದೆಯಲ್ಲಿ ಕಣ್ಣ ಕಟ್ಟಿನಲ್ಲಿ
ಅವು ನಮ್ಮವೇ ಆಗಿದ್ದಲ್ಲಿ

ADVERTISEMENT

ಯಾವ ಮೋಡ ಎಲ್ಲಿಯಾದರೂ ಹೋಗಲಿ
ಯಾರ ದೋಣಿ ಎಲ್ಲಿಯಾದರೂ ತೇಲಲಿ
ಈಗಿರುವುದು ಇಷ್ಟೇ
ಆ ಇಬ್ಬರು ಈ ಒಬ್ಬನು ಮತ್ತು ನಾವೆಲ್ಲರು
ಅಥವಾ ನಾನೊಬ್ಬನು ಎಂಬ ಒಬ್ಬೇ ಒಬ್ಬನು

ನನ್ನ ಎದೆ ಮುಟ್ಟಿದ ಸೇತುವೆಗೆ ಜಿಗಿದು
ದಾಟಿ ಬಿಡಬೇಕು ಅವನನ್ನು ಅವರನ್ನು
ಏನಿರುವುದೋ ಆ ತುದಿಯಲ್ಲಿ
ಅವನು ಹೇಳ ಹೊರಟಿರುವುದೇ ಆ ತುದಿಯ ಕಥೆಯನ್ನು?
ಎಲ್ಲರೂ ಹೀಗೆಯೇ ಇಳಿದುಬಿಟ್ಟಿದ್ದಾರೆ ಸೇತುವೆಗೆ
ಎಲ್ಲರಿಂದ ಎಲ್ಲರೂ ತಪ್ಪಿಸಿಕೊಳ್ಳುವಂತೆ
ಕಥೆಯನ್ನು ಕೇಳದೆಯೂ ಕಥೆಯ ಪಾತ್ರಗಳಂತೆ
ಅದು ಕಥೆಯೇ ಆಗಿದ್ದಲ್ಲಿ

ಇರಲಿಕ್ಕಿಲ್ಲ ಏನೂ ಆಗಲಿಕ್ಕಿಲ್ಲ ಏನೂ
ಇಲ್ಲದಂಥ ಉಸಿರ ಬಾಳ ಸದ್ದಿನಲ್ಲಿ
ಚೀರುವವರು ಚೀರುತ್ತಲೇ ಹೋಗಿ
ಅಟ್ಟುವವರು ಅಟ್ಟಿಸಿಕೊಂಡೇ ಹೋಗಿ
ಉಳಿದಿಲ್ಲವೇ ಲೋಕ
ತನ್ನ ಮೀರಿದ ತನ್ನ ಚರಿತ್ರೆಯ ಹೊತ್ತು

ಆದರೂ ಅವನೊಡನೆ ಕೊಂಚ ನಿಂತು
ಅವನು ತಿರುಗಿದತ್ತ ತಿರುಗಿ ನೋಡಬಹುದಲ್ಲಾ ಒಮ್ಮೆ
ಇನ್ನು ನೋಡಲಾರದ್ದು ಏನೂ ಉಳಿದಿಲ್ಲದ ಧೈರ್ಯದಲಿ
ಕಣ್ಣು ಮುಚ್ಚಿ ಮೆಲ್ಲ ತೆರೆದರೆ
ಅರೇ...
*
ಸ್ತಬ್ಧವಾಗುವುದು ಎಂದರೆ ಹೀಗೆ
ಸಾಧ್ಯವಾದ ಚಿತ್ರದಲ್ಲಿ
ಸಾಧ್ಯವಾಗದ ಚಿತ್ತದಲ್ಲಿ

ದಾಟಿಸುವ ಸೇತುವೆಯೊಂದು ನಿಂತಿದೆಯಲ್ಲಾ
ಕೆಳಗೆ ದಾಟುವ ನೀರ ನೋಡಿಕೊಂಡು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.