ADVERTISEMENT

ಹಕ್ಕಿಗಳ ಹಾಡಿನ ‘ಚಿಡಿಯಾ ಟಾಪು’

ಆನಂದ ರಾಮತೀರ್ಥ
Published 11 ಜೂನ್ 2016, 19:30 IST
Last Updated 11 ಜೂನ್ 2016, 19:30 IST
ಹಕ್ಕಿಗಳ ಹಾಡಿನ ‘ಚಿಡಿಯಾ ಟಾಪು’
ಹಕ್ಕಿಗಳ ಹಾಡಿನ ‘ಚಿಡಿಯಾ ಟಾಪು’   

ನನ್ನ ಬಹು ದಿನಗಳ ಕನಸಾದ ಅಂಡಮಾನ್ ಪ್ರವಾಸದಲ್ಲಿ ‘ಚಿಡಿಯಾ ಟಾಪು’ವಿನಲ್ಲಿ ಕಳೆದ ಆ ಸಂಜೆ, ನನ್ನ ಜೀವನದ ಅತ್ಯದ್ಭುತ ಸೊಬಗಿನ ಸಂಜೆ ಎಂದೇ ಬಣ್ಣಿಸಬಹುದು.

ಪಕ್ಷಿಗಳ ದ್ವೀಪವೆಂದು ‘ಚಿಡಿಯಾ ಟಾಪು’ ಪ್ರಸಿದ್ಧ. ಈ ಸ್ಥಳ, ದಕ್ಷಿಣ ಅಂಡಮಾನದ ದಕ್ಷಿಣ ತುದಿಯಲ್ಲಿ ಪೋರ್ಟಬ್ಲೇರ್‌ನಿಂದ ಸುಮಾರು 25 ಕಿಲೋ ಮೀಟರ್ ದೂರದಲ್ಲಿದೆ.

ಹಸಿರು ಕಾಡಿನೊಳಗಿಂದ ಸಾಗುವ ಸಣ್ಣ ದಾರಿಯ ಎರಡೂ ಬದಿಯಲ್ಲಿ ಬೆಳೆದ ಎತ್ತರದ ಮರಗಳ ತಂಪು ನೆರಳಿನಲ್ಲಿ ಪ್ರಯಾಣ ಬೆಳೆಸುವುದು ಒಂದು ಹಿತವಾದ ಅನುಭವ.

ಚಿಡಿಯಾ ಟಾಪು ಒಂದು ಪುಟ್ಟ ಸ್ಥಳ. ಹಸಿರು ಮ್ಯಾಂಗ್ರೂ ಪೊದೆಗಳು, ಪ್ರಶಾಂತ ದ್ವೀಪ ಮತ್ತು ಪಕ್ಷಿಗಳ ಕಲರವಗಳಿಂದ ತುಂಬಿದ ಇಲ್ಲಿನ ಕಾಡಿನ ರಮಣೀಯತೆ ಪ್ರವಾಸಿಗರನ್ನು ಮಂತ್ರಮುಗ್ಧಗೊಳಿಸುತ್ತದೆ.

ಇಲ್ಲಿನ ಹಲವು ತೆರನಾದ ಮನಮೋಹಕ ಪಕ್ಷಿಗಳು, ಅಪರೂಪದ ಬೆಳ್ಳಿಚುಕ್ಕಿ ಜಿಂಕೆಗಳು ಮತ್ತು ಸುಂದರ ಆರ್ಕಿಡ್ ಸಸ್ಯಗಳು ನಿಸರ್ಗ ಪ್ರೇಮಿಗಳ ಆಸಕ್ತಿ – ಅಧ್ಯಯನದ ಕೇಂದ್ರವಾಗಿವೆ.

ಸಮುದ್ರದ ದಂಡೆಗುಂಟ ಶುಭ್ರ ನೀರಿನಾಳದಲ್ಲಿ ಹೊಳೆಯುವ ಹವಳದ ದಿಬ್ಬದ ಮೇಲೆ ಗಾಜಿನ ಮುಖಗವಚವನ್ನು ಹಾಕಿಕೊಂಡು ತೇಲುತ್ತ, ಬಹುವರ್ಣದ ಹವಳಗಳ ಸೌಂದರ್ಯವನ್ನು ಸವಿಯುವ ಅವಕಾಶವೂ ಇಲ್ಲಿದೆ.

ಸೂರ್ಯಾಸ್ತ ಚಿಡಿಯಾ ಟಾಪು ಪ್ರದೇಶದ ಮತ್ತೊಂದು ಆಕರ್ಷಣೆ. ದೂರದ ಬೆಟ್ಟಗಳ ಸಾಲಿನಲ್ಲಿ, ಮೋಡಗಳ ಮರೆಯಲ್ಲಿ, ಹೊಂಬಣ್ಣದ ಕಿರಣಗಳಿಂದ ಹೊಳೆಯುತ್ತ, ಸೂರ್ಯ ಸಾಗರದೊಳಗಿಳಿದು ಕಣ್ಮರೆಯಾಗುವ ಕ್ಷಣಗಳನ್ನು ಮಾತು–ಅಕ್ಷರಗಳಲ್ಲಿ ಹಿಡಿದಿಡಲಾಗದು.

ಪ್ರವಾಸಿಗರಿಗೆ ಚಿಡಿಯಾ ಟಾಪು ಬಿಟ್ಟು ಹೊರಡಲು ಮನಸ್ಸೇ ಆಗದು. ಆದರೆ, ಸೂರ್ಯಾಸ್ತದ ನಂತರ ಅಲ್ಲಿ ಯಾರನ್ನೂ ಇರಗೊಡುವುದಿಲ್ಲ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.