`ಬರ್ಡ್ ರೇಸಿಂಗ್~ (ಹಕ್ಕಿ ಪತ್ತೆ ಸ್ಪರ್ಧೆ) ಇತ್ತೀಚೆಗೆ ತುಂಬಾ ಜನಪ್ರಿಯವಾಗಿದೆ. ಅತಿ ಕಡಿಮೆ ಕಾಲಾವಧಿಯಲ್ಲಿ ಹೆಚ್ಚು ಬಗೆಯ ಹಕ್ಕಿಗಳನ್ನು ಪತ್ತೆಮಾಡಿ, ಅವುಗಳ ಹೆಸರನ್ನು ಯಾರು ದಾಖಲಿಸುತ್ತಾರೋ ಅವರಿಗೆ ಈ ಸ್ಪರ್ಧೆಯಲ್ಲಿ ಬಹುಮಾನ. ಈ ಹವ್ಯಾಸ ಪ್ರಾರಂಭಿಸುವವರು ಹಾಗೂ ಅನುಭವಿಗಳು ಒಟ್ಟಾಗಿ ಇಂಥ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಾರೆ.
ಅವರು ತಂತಮ್ಮಲ್ಲೇ ಗುಂಪುಗಳನ್ನು ಮಾಡಿಕೊಳ್ಳುತ್ತಾರೆ. ಪ್ರತಿ ಗುಂಪಿಗೂ ಒಬ್ಬ ನಾಯಕನಿರುತ್ತಾನೆ. ಆತ ಸಾಕಷ್ಟು ಪಳಗಿದ `ಬರ್ಡ್ ವಾಚರ್~ (ಹಕ್ಕಿ ವೀಕ್ಷಕ). ಅವನ ಬಳಿ ಹಕ್ಕಿಗಳ ಪ್ರಭೇದದ ದೊಡ್ಡ ಪಟ್ಟಿ ಇರುತ್ತದೆ. ಒಂದಿಡೀ ದಿನ ಸ್ಪರ್ಧೆ ನಡೆಯುತ್ತದೆ.
ದಿನದ ಕೊನೆಯಲ್ಲಿ ಕುಳಿತು ಎಲ್ಲರೂ ತಂತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಾರೆ.
ಪ್ರತಿವರ್ಷ ನವೆಂಬರ್ ಹಾಗೂ ಫೆಬ್ರುವರಿ ಅವಧಿಯಲ್ಲಿ ಭಾರತದ ವಿವಿಧ ನಗರಗಳಲ್ಲಿ ಹಕ್ಕಿ ಪತ್ತೆ ಸ್ಪರ್ಧೆ ನಡೆಯುತ್ತದೆ. ನವೆಂಬರ್ 26, 2006ರಂದು ಹೈದರಾಬಾದ್‌ನಲ್ಲಿ ಈ ಸ್ಪರ್ಧೆ ಪ್ರಾರಂಭವಾಯಿತು. ಆಮೇಲೆ ಚೆನ್ನೈ, ಅಹಮದಾಬಾದ್, ಪುಣೆ ಹಾಗೂ ಮುಂಬೈನಲ್ಲೂ ಸ್ಪರ್ಧೆ ಶುರುವಾಯಿತು.
ಜನಸಾಂದ್ರತೆ ಹೆಚ್ಚಾಗಿರುವ ಮುಂಬೈನಲ್ಲೂ 300 ಬಗೆಯ ಹಕ್ಕಿಗಳಿವೆ ಎಂದು ಹಕ್ಕಿ ಪತ್ತೆ ಹವ್ಯಾಸಿಗರು ಕಂಡುಕೊಂಡರು. ಕಪ್ಪು ಮತ್ತು ಬಿಳಿ ಬಣ್ಣದ ಸ್ಟಾರ್ಕ್‌ಗಳು, ಚುರುಕು ಕಿವಿಯ ಗೂಬೆ, `ನಾರ್ತನ್ ಹೌಸ್ ಮಾರ್ಟಿನ್~ ಮೊದಲಾದ ಬಗೆಯ ಹಕ್ಕಿಗಳು ಮುಂಬೈನಲ್ಲಿವೆ. ಹಕ್ಕಿಗಳ ಬಣ್ಣ, ಅವು ಹಾರುವ ರೀತಿ, ಹುಡುಕಿಕೊಂಡು ಹೋಗುವ ಆಹಾರವನ್ನು ಆಧರಿಸಿ ಅವು ಯಾವ ಪ್ರಭೇದಕ್ಕೆ ಸೇರಿದವು ಎಂಬುದನ್ನು ಪತ್ತೆಹಚ್ಚುತ್ತಾರೆ.
ಮರಕುಟುಕ ಮರದ ಟೊಂಗೆಗಳ ಮೇಲೆ ಕೂತುಕೊಂಡು ಕೀಟಗಳಿಗೆ ಹೊಂಚುಹಾಕುತ್ತದೆ. `ಫ್ಲೈಕ್ಯಾಚರ್ಸ್~ ಸೂಕ್ತ ಸ್ಥಳದಲ್ಲಿ ಕುಳಿತು, ಹಾರುವ ಕೀಟಗಳನ್ನು ಕಂಡೊಡನೆ ಹಾರಿ ಅವುಗಳನ್ನು ನಾಲಗೆಯಿಂದ ಹಿಡಿದು, ಮತ್ತೆ ತಾವಿದ್ದ ಜಾಗವನ್ನೇ ತಲುಪುತ್ತವೆ. ಭೂಮಿಯ ಮೇಲೆ ಹೆಚ್ಚು ಹೊತ್ತು ಕಳೆಯುವ `ಫಿಂಚಸ್~, ಉದುರುವ ಬೀಜಗಳನ್ನೇ ಆಹಾರ ಮಾಡಿಕೊಂಡಿವೆ. ಪುಕ್ಕವನ್ನು ನಿಲ್ಲಿಸುವ ರೀತಿಯಿಂದಲೂ ಕೆಲವು ಹಕ್ಕಿಗಳ ಪ್ರಭೇದ ಪತ್ತೆ ಮಾಡಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.