ADVERTISEMENT

ಹಿರಿಯ ನಾಗರಿಕರ ಸೀರಿಯಲ್‌ ಸಂತೆ

ಮಂಜುಳಾ ರಾಜ್
Published 16 ಮಾರ್ಚ್ 2019, 20:00 IST
Last Updated 16 ಮಾರ್ಚ್ 2019, 20:00 IST
ಚಿತ್ರ: ಭಾವು ಪತ್ತಾರ್
ಚಿತ್ರ: ಭಾವು ಪತ್ತಾರ್   

ಬೆಳಿಗ್ಗೆ ಆರು ಗಂಟೆಗೆ ಎಚ್ಚರವಾದರೂ ಹಲ್ಲುಜ್ಜಿ ಕೋಣೆಯಿಂದ ಹೊರಗೆ ಬರುವಷ್ಟರಲ್ಲಿ ಗಡಿಯಾರದ ಚಿಕ್ಕ ಮುಳ್ಳು ಏಳರ ಹತ್ತಿರ ಬಂದೇ ಬಿಟ್ಟಿರುತ್ತದೆ. ಇನ್ನು ಅಡುಗೆ ಮನೆಗೆ ಬಂದು ಕಾಫಿ ಫಿಲ್ಟರಿಗೆ ಹಾಕಿ, ಹಾಲು ಕಾಸುವಷ್ಟರಲ್ಲಿ ಎಂಟಾಗಿಯೇ ಬಿಡುತ್ತದೆ. ಕಾಫಿ ಕುಡಿದು ಹೊರಡುವಷ್ಟರಲ್ಲಿ ಎಂಟೂ ಕಾಲು, ಆಗ ತಡಬಡಾಯಿಸಿಕೊಂಡು ಪಕ್ಕದಲ್ಲೇ ಇರುವ ಪಾರ್ಕಿಗೆ ದೌಡಾಯಿಸುವುದಾಗುತ್ತದೆ. ಅಷ್ಟರಲ್ಲಿ ನಮ್ಮ ಗುಂಪಿನ ಒಬ್ಬೊಬ್ಬರೇ ಬಂದು ಸೇರಿರುತ್ತಾರೆ.

ಎಂಟೂವರೆಯಾದ ತಕ್ಷಣ ನಮ್ಮ ಗ್ರೂಪಿನ ಅನಭಿಷಕ್ತ ಲೀಡರ್ ಪದ್ಮ ‘ಟೈಮಿಗೆ ಸರಿಯಾಗಿ ಶುರು ಮಾಡಿ ಬಿಡೋಣ. ಎಲ್ಲರಿಗೂ ಕಾಯುತ್ತಾ ಕುಳಿತರೆ ಹೊತ್ತಾಗಿ ಬಿಡುತ್ತದೆ,.ಅವರೂ ಬಂದು ಸೇರಿಕೊಳ್ಳಲಿ ಬಿಡಿ’ ಎಂದ ತಕ್ಷಣ ನಮ್ಮ ಪ್ರಾರ್ಥನೆ ಪ್ರಾರಂಭ. ಮೊದಲು ಗಾಯತ್ರಿಮಂತ್ರ, ನಂತರ ಗುರುಬ್ರಹ್ಮ ಹೇಳುತ್ತೇವೆ. ಒಬ್ಬೊಬ್ಬರದು ಒಂದೊಂದು ಶ್ರುತಿ. ನಮ್ಮ ವ್ಯಾಯಾಮ ಮೊದಲು ಚಪ್ಪಾಳೆಯಿಂದ ಪ್ರಾರಂಭ.

ಚಪ್ಪಾಳೆ ಹಾಕುವುದರಿಂದ ಶುಗರ್ ಕಡಿಮೆಯಾಗುತ್ತದೆಯಂತೆ, ಬಿ.ಪಿ.ನಿಯಂತ್ರಣದಲ್ಲಿ ಇರುತ್ತದೆಯಂತೆ, ಅದಕ್ಕೇ ಏನೋ ಎಲ್ಲರೂ ಚೆನ್ನಾಗಿ ಚಪ್ಪಾಳೆ ತಟ್ಟುತ್ತಾರೆ. ಎಲ್ಲರೂ ಹಿರಿಯ ನಾಗರಿಕರು, ಎಷ್ಟೇ ಸಿಟ್ಟು ಬಂದರೂ ಮನೆಯಲ್ಲಿ ಯಾರಿಗಾದರೂ ತಟ್ಟಲಾದೀತೇ? ಇಲ್ಲಾದರೂ ಜೋರಾಗಿ ತಟ್ಟಿ ಎಲ್ಲವನ್ನೂ ತೀರಿಸಿ ಕೊಳ್ಳುವುದಾಗುತ್ತದೆ. ಒಟ್ಟಾರೆ ದೇಹದ ಎಲ್ಲ ಭಾಗಗಳಿಗೂ ವ್ಯಾಯಾಮವಾಗುತ್ತದೆ. ಇದಕ್ಕಿಂತ ಹೆಚ್ಚಾಗಿ ಬಗ್ಗುವುದು, ಕುಣಿಯುವುದು ನಮಗಂತೂ ಆಗುವುದಿಲ್ಲ. ವ್ಯಾಯಾಮದ ನಂತರ ಒಂದೆರಡು ನಿಮಿಷ ಮಾತನಾಡಿ ಎಲ್ಲರೂ ಮನೆಗೆ ಹೊರಡುತ್ತೇವೆ. ಆದರೂ, ಬೆಳಗಿನ ಆ ಸಮಯ ಎಲ್ಲರಿಗೂ ಆನಂದ ಕೊಡುತ್ತದೆ. ನಾವೊಂದು ಐದಾರು ಜನ ನಿಯಮಿತವಾಗಿ ಹೋಗುತ್ತೇವೆ. ಆಗಾಗ ವ್ಯಾಯಾಮ ಮುಗಿಸಿ ಹತ್ತಿರದ ಹೋಟೆಲಿಗೆ ಹೋಗಿ ಮಸಾಲೆ ದೋಸೆ ತಿಂದು ಬರುವುದಾಗುತ್ತದೆ. ಏನೇ ಅನ್ನಿ ಈ ಬೆಳಗಿನ ಕಾರ್ಯಕ್ರಮಕ್ಕಾಗಿ ಎಲ್ಲರೂ ಕಾತುರದಿಂದ ಕಾಯುತ್ತಿರುತ್ತೇವೆ ಎಂದರೆ ತಪ್ಪಾಗಲಾರದು.

ADVERTISEMENT

ನಂತರ ಸಂಜೆ ಐದಾದರೆ ಇದೇ ಪುನರಾವರ್ತನೆ. ಎಲ್ಲರೂ ಒಂದಷ್ಟು ಸುತ್ತು ವಾಕಿಂಗ್ ಮುಗಿಸಿ ಮತ್ತೆ ಕುಳಿತುಕೊಳ್ಳುವುದಾಗುತ್ತದೆ ಹರಟೆಗೆ. ಹೆಣ್ಣುಮಕ್ಕಳದೇ ಒಂದು ಗುಂಪಾದರೆ ಗಂಡಸರದು ಮತ್ತೊಂದು ಗುಂಪು. ನಿರಂತರ ಮಾತು. ಪ್ರಪಂಚದ ಎಲ್ಲ ಮಾತು ಕಥೆಗಳು ಬಂದು ಹೋಗುತ್ತವೆ. ಇದರ ಜೊತೆ ಪ್ರತಿ ದಿನ ಒಂದೈದು ನಿಮಿಷವಾದರೂ ಈಗಿನ ಮಕ್ಕಳು ಮಾಡುವ ಖರ್ಚು, ಅವರಿಗೆ ಹಣದ ಬಗ್ಗೆ ಇರುವ ಉದಾಸೀನತೆ, ಅದಕ್ಕೆ ಬೆಲೆ ನೀಡದಿರುವುದು, ಎಲ್ಲವೂ ಇಣುಕಿರುತ್ತದೆ.

‘ಮೊನ್ನೆ ಹೋಟೆಲಿಗೆ ಹೋಗಿದ್ವಿ. ನನ್ನ ಮಗ ನೂರು ರೂಪಾಯಿ ಟಿಪ್ಸ್ ಕೊಟ್ಟ. ಇವರಿಗೆ ದುಡ್ಡಿಗೆ ಬೆಲೆಯೇ ಇಲ್ಲ’. ‘ಈಗಿನ ಮಕ್ಕಳಿಗೆ ಹುಟ್ಟುಹಬ್ಬ ಮಾಡುವುದನ್ನು ನೋಡಬೇಕು. ಅಷ್ಟೊಂದು ಖರ್ಚು ಮಾಡುವುದಲ್ಲದೆ ಆ ಮಕ್ಕಳಿಗೆ ರಿಟರ್ನ್ ಗಿಫ್ಟ್ ಬೇರೆ ಕೊಡಬೇಕು. ನಮಗೆ ನಮ್ಮ ಹುಟ್ಟಿದ ಹಬ್ಬ ಯಾವಾಗಂತಾ ಗೊತ್ತಿರುತ್ತಲೇ ಇರಲಿಲ್ಲ’. ‘ಈಗ ಯಾವ ಫಾರಿನ್ ಟೂರ್ ಹೋದರೂ ಮಕ್ಕಳನ್ನು ಕರೆದುಕೊಂಡು ಹೋಗುತ್ತಾರೆ. ಯಾವ ಸಿನಿಮಾಗೆ ಹೋದರೂ ಸರಿ, ಮಕ್ಕಳಿಗೆ ಬೇಕಾಗಿರುವುದಕ್ಕೆ ಹೋಗುತ್ತಾರೆ. ಇವರಿಗೆ ಲಕ್ಷ ಲಕ್ಷ ಸಂಬಳ ಬರುತ್ತದಲ್ಲಾ, ನಮಗೆ ಅಷ್ಟೊಂದು ದುಡ್ಡು ಎಲ್ಲಿಂದ ಬರಬೇಕು. ನಾವು ಟೂರ್ ಹೋಗುವುದೇ ಕಷ್ಟವಾಗಿತ್ತು. ಇನ್ನು ಮಕ್ಕಳು, ಮರಿಗಳನ್ನು ಕರೆದುಕೊಂಡು ಹೋಗುವುದಾದರೂ ಹೇಗೆ? ಏನೇ ಅನ್ನಿ ಈಗಿನ ಮಕ್ಕಳಿಗೆ ಹಣಕ್ಕೆ ಬೆಲೆಯೇ ಇಲ್ಲ.

‘ನನ್ನ ಮೊಮ್ಮಗಳಿಗೆ ಮನೆ ತುಂಬಾ ಗೊಂಬೆಗಳು ಆಟದ ಸಾಮಾನುಗಳು. ನಾವೇನಾದರೂ ತೆಗೆದುಕೊಂಡು ಹೋದರೆ ‘ಇದಾ, ನನ್ನ ಹತ್ತಿರ ಇದೆ’ ಎಂದು ಮೂಗು ಮುರಿಯುತ್ತಾಳೆ. ಈ ಮಕ್ಕಳನ್ನು ತೃಪ್ತಿಪಡಿಸಲು ಸಾಧ್ಯವೇ ಇಲ್ಲ. ನಮಗೆ ಒಂದು ಚಿಕ್ಕ ಆಟದ ಸಾಮಾನು ಅಥವಾ ಗೊಂಬೆ ಕೊಟ್ಟರೆ ಎಷ್ಟು ಸಂತೋಷವೆನಿಸುತ್ತಿತ್ತು. ಅದನ್ನು ಜೋಪಾನವಾಗಿ ವರ್ಷಾನುಗಟ್ಟಲೆ ಇಟ್ಟುಕೊಳ್ಳುತ್ತಿದ್ದೆವು. ಅದು ನಮ್ಮ ನಂತರ ನಮ್ಮ ತಮ್ಮ, ತಂಗಿಯರಿಗೆ ಆಗುತ್ತಿತ್ತು. ಬಟ್ಟೆಗಳಿಂದ ಹಿಡಿದು ಎಲ್ಲವೂ ನಂತರ ಹುಟ್ಟುವ ಮಕ್ಕಳಿಗೆ ಉಪಯೋಗವಾಗುತ್ತಿತ್ತು. ಈಗ ಅದೆಲ್ಲಾ ನಡೆಯೋಲ್ಲ...’ ಈ ರೀತಿ ಇವರ ಮಾತುಗಳಲ್ಲಿ ಸಕಲವೂ ತುಂಬಿ ತುಳುಕುತ್ತಿರುತ್ತದೆ. ತಮ್ಮ ಮನದ ಭಾವನೆಗಳೆಲ್ಲಾ ಹಗುರ ಮಾಡಿಕೊಂಡು ಹೆಂಗಸರು ಸರಗಳ್ಳರ ಹೆದರಿಕೆಯಿಂದ ತಮ್ಮ ಸೆರಗು ಹೊದ್ದುಕೊಂಡು ಹೊರಡುತ್ತಾರೆ.

ನಂತರ ಮನೆಯಲ್ಲಿ ಸೀರಿಯಲ್‌ಗಳ ಸರಣಿ. ಸಂಜೆ ಏಳಕ್ಕೆ ಪ್ರಾರಂಭವಾದದ್ದು ಊಟದ ಹೊತ್ತಿನ ತನಕ ಒಂಬತ್ತರವರೆಗೆ ನಡೆಯುತ್ತದೆ. ಆಮೇಲೆ ಮನಸ್ಸಿಲ್ಲದ ಮನಸ್ಸಿನಲ್ಲಿ ಬೇಗ ಬೇಗ ಊಟ ಮಾಡಿ ‘ಮಗಳು ಜಾನಕಿ’ಯನ್ನು ನೋಡಿದ ನಂತರವೇ ನಿದ್ದೆಗೆ ಜಾರುವುದು.

ಈ ಸೀರಿಯಲ್ಲಿನ ಪಾತ್ರಗಳು ಎಷ್ಟು ಹತ್ತಿರವಾಗಿ ಬಿಡುತ್ತಾವೆಂದರೆ ಇವರುಗಳ ನಡುವೆ ಒಂದು ಬಂಧವೇ ಏರ್ಪಡುತ್ತದೆ. ಆ ಸಮಯದಲ್ಲಿ ಮನೆಗೆ ಯಾರಾದರೂ ಬಂದರೂ ಅವರನ್ನು ಮಾತನಾಡಿಸಲು ಬೇಸರ. ಸದಾ ಸೀರಿಯಲ್‌ಗಳನ್ನು ನೋಡುತ್ತಿರುತ್ತಾರೆ ಎಂದು ಎಲ್ಲರೂ ಮುಗು ಮುರಿಯುವವರೇ. ಆದರೆ, ಇವು ಮನೆಯಿಂದ ಹೊರ ಹೋಗಲಾಗದ ಹಿರಿಯ ನಾಗರಿಕರಿಗೆ ಸಮಯ ಕಳೆಯುವ ಸಂಜೀವಿನಿ. ಎಲ್ಲರಿಗೂ ತಮ್ಮ ಮನದ ಮಾತುಗಳನ್ನು ತಮ್ಮ ಸಮ ವಯಸ್ಕರೊಡನೆ ಹಂಚಿಕೊಂಡಾಗ ಅವರ ಮನ ಹಗುರಾಗುತ್ತದೆ. ಮನೆಯಲ್ಲಿರುವ ಮಿಕ್ಕವರೆಲ್ಲರೂ ತಮ್ಮ ತಮ್ಮ ಕೆಲಸಗಳಲ್ಲಿ ಬಿಜಿಯೋ ಬಿಜಿ. ಅಕಸ್ಮಾತ್ ಪುರುಸೊತ್ತಿದ್ದರೂ ಇವರ ಮಾತುಗಳನ್ನು ಕೇಳಲು ಯಾರಿಗೆ ಆಸಕ್ತಿ? ಒಂದು ಮಾತು ಹೇಳಿದರೆ, ಹೇಳಿದ್ದನ್ನೇ ಮತ್ತೆ ಮತ್ತೆ ಹೇಳ್ತೀಯಲ್ಲ. ಸ್ವಲ್ಪ ಸುಮ್ಮನಿರಬಾರದಾ ಎನ್ನುವ ಮಾತು. ಬಾಯಿ ಬಿಚ್ಚಿದರೆ ಬಾಯಿಗೆ ಕಡಿವಾಣ ಹಾಕಿಬಿಡ್ತಾರೆ. ಇವರುಗಳಿಗೋ ಮಾತನಾಡುವ ಚಪಲ. ಅವರು ತಾನೇ ಏನು ಮಾಡಬೇಕು. ಸೀರಿಯಲ್‌ಗಳನ್ನು ನೋಡಿ ಮನರಂಜಿಸಿಕೊಳ್ಳುತ್ತಾರೆ. ಎಲ್ಲರೊಡನೆ ಮಾತನಾಡಿ ತಮ್ಮ ಮನಸ್ಸನ್ನು ಹಗುರ ಮಾಡಿಕೊಳ್ಳುತ್ತಾರೆ.
ಆಗಾಗ ಈ ಹಿರಿಯರ ಗುಂಪು ರಂಗಶಂಕರಕ್ಕೆ ತೆರಳುತ್ತದೆ. ಯುಗಾದಿಯ ವಿಶೇಷ ಕಾರ್ಯಕ್ರಮವನ್ನು ದಿನಪೂರ್ತಿ ಇದ್ದು ನೋಡಿ ಬರುವುದಾಗುತ್ತದೆ. ಮತ್ತೊಂದಷ್ಟು ಜನರು ಆಗಾಗ ಅನೇಕ ಸಾಹಿತ್ಯ ಕಾರ್ಯಕ್ರಮಗಳು, ಎಲ್ಲದಕ್ಕೂ ಕುರ್ಚಿಗಳನ್ನು ಭರ್ತಿ ಮಾಡುವವರು ನಮ್ಮ ಈ ಹಿರಿಯ ನಾಗರಿಕರೇ.

ನಮ್ಮ ದೇಶದಲ್ಲಿರಲಿ, ನಾವು ಮಗನ ಮನೆಗೆ ಅಮೆರಿಕಗೆ ಹೋದಾಗ ಅಲ್ಲಿ ನಮ್ಮ ಭಾರತೀಯರು ಒಂದು ನಗೆಕೂಟವನ್ನೇ ನಡೆಸುತ್ತಿದ್ದರು. ಐದರಿಂದ ಆರು ಗಂಟೆಯ ತನಕ ಒಂದಷ್ಟು ಹಗುರ ವ್ಯಾಯಾಮಗಳು, ವಾರದ ಐದು ದಿನಗಳು ದೇವರ ತಲೆಯ ಮೇಲೆ ಹೂ ತಪ್ಪಿದರೂ ನಾವು ಲಾಫ್ಟರ್ ಕ್ಲಬ್‌ಗೆ ಹೋಗುವುದನ್ನು ಬಿಡುತ್ತಿರಲಿಲ್ಲ. ಅಲ್ಲಿ ಮಗನ ಮನೆಯ ಎದುರಿನಲ್ಲಿಯೇ ಇದ್ದ ಪಾರ್ಕಿಗೆ ದಿನಕ್ಕೆರಡು ಬಾರಿ ನಮ್ಮ ಭೇಟಿ. ಅಲ್ಲೂ ಅಷ್ಟೇ, ಎಲ್ಲರೂ ಮಾತಿಗಾಗಿ ತವಕಿಸುತ್ತಿದ್ದರು. ಯಾರು ಸಿಕ್ಕಿದರೂ ಆತ್ಮೀಯವಾಗಿ ಒಂದಷ್ಟು ದೀರ್ಘವಾಗಿಯೇ ಸಂಭಾಷಣೆ ನಡೆಸುತ್ತಿದ್ದರು.

ದೇಶವಾಗಲೀ, ವಿದೇಶವಾಗಲೀ ಐದೂವರೆಯಿಂದ ಏಳರವರೆಗೆ ಹಿರಿಯ ನಾಗರಿಕರು ಬೇಸರ ದುಗುಡಗಳನ್ನೆಲ್ಲಾ ಮರೆತು ಬಿಟ್ಟು ಚಿಕ್ಕಮಕ್ಕಳಂತೆ ನಕ್ಕು ನಲಿಯುತ್ತಾರೆ. ಅಷ್ಟು ಹೊತ್ತು ಭಾರತಿಗೆ ಮನೆಯಲ್ಲಿ ಕಿರಿಕಿರಿ ಮಾಡುವ 90ವರ್ಷದ ಅತ್ತೆ, ಆಸೆಯಿಂದ ಮದುವೆ ಮಾಡಿದ, ಮುದ್ದಾದ ದುಡಿಯುವ ಮಗನನ್ನು ಬಿಟ್ಟು ಹೊರಟ ಸೊಸೆ ಯಾರ ನೆನಪೂ ಬರುವುದಿಲ್ಲ. ಕಮಲಾಗೆ ದೂರದಲ್ಲಿದ್ದರೂ ಆಗಾಗ ಮನಸ್ಸಿಗೆ ನೋವು ಕೊಡುವ ಮಕ್ಕಳು, ಕಾಡುವ ಕಾಲುನೋವು ಎಲ್ಲಾ ಮರೆತಂತಿರುತ್ತದೆ. ನಂದಿನಿ ಕಿರುಕುಳ ಕೊಡುವ ಭಾವ ಅವನೊಂದಿಗೆ ದನಿಗೂಡಿಸುವ ಅತ್ತೆಯನ್ನು ಮರೆತೇ ಬಿಟ್ಟಿರುತ್ತಾಳೆ.

ಸುಮನಾ ಬಾಯಿ ಬಿಡುವುದೇ ಕಷ್ಟ. ಮಾತೇ ಕಡಿಮೆ, ದೂರದ ಅಮೆರಿಕದಲ್ಲಿರುವ ಮಗ, ಸೊಸೆ, ಮದುವೆಯಾಗಿ ಅತ್ತೆಯ ಮನೆಯಲ್ಲಿರುವ ಮಗಳ ಮಧ್ಯದಲ್ಲಿನ ಒಂಟಿತನ ಮರೆತು ಎಲ್ಲರಿಗಿಂತ ಹೆಚ್ಚಿನ ಸುತ್ತು ಹಾಕುತ್ತಾಳೆ. ಇವರೆಲ್ಲರನ್ನೂ ಗಮನಿಸುತ್ತಾ ಮಗನಿಗೆ ಮಕ್ಕಳ್ಯಾವಾಗ ಆಗುತ್ತೆ, ಅಷ್ಟು ಹೊತ್ತಿಗೆ ಎತ್ತಿಕೊಳ್ಳಲು ನನಗೆ ಶಕ್ತಿ ಇರುತ್ತಾ, ಈಗಿನ ಮಕ್ಕಳಿಗೆ ಹೇಳುವವರಾದರೂ ಯಾರು ಎನ್ನುವ ಚಿಂತೆಯನ್ನೇ ಮರೆತು ಮಂಡಿ ನೋಯುವ ತನಕ ನಡೆದು ಎಲ್ಲರನ್ನೂ ಚುಡಾಯಿಸುತ್ತಾ ನಗೆಬುಗ್ಗೆಯನ್ನು ಹಾರಿಸುತ್ತಾಳೆ ಗೀತಾ.

ಎಲ್ಲರ ನೋವು ನಲಿವಿಗೆ ಸಾಕ್ಷಿಯೆನ್ನುವಂತೆ ಅವರ ಗೆಳೆತನಕ್ಕೆ ನಾಂದಿ ಹಾಡಿದ ಆ ಕಲ್ಲು ಬೆಂಚು ಮನದಲ್ಲೇ ನಸು ನಗು ಬೀರುತ್ತದೆ. ಇಲ್ಲೇನೂ ಹೆಚ್ಚು, ಎಲ್ಲರ ಮನೆಯ ಕತೆಯೂ ಇದೇ ಅಲ್ಲವೆ? ಎಂದು ಕಾಗೆ ಕಾವ್... ಕಾವ್... ಎನ್ನುತ್ತಾ ವ್ಯಂಗ್ಯವಾಗಿ ಇವರೆಡೆಗೇ ಬರುತ್ತದೆ. ಹೊತ್ತಾಯಿತು, ಸೊಳ್ಳೆ ಕಚ್ಚುತ್ತೆ ಹೋಗೋಣಾ, ಕರೆಂಟ್ ಹೋದರೆ ಕಷ್ಟ ಎಂದು ಮತ್ತೆ ಬರುವ ನಾಳೆಯ ಸಂಜೆಯನ್ನೇ ಕಾಯುತ್ತಾ ದಾಪುಗಾಲು ಹಾಕುತ್ತಾರೆ. ಇವರ ವಾಯುವಿಹಾರದಿಂದ ಬೊಜ್ಜು ಕರಗದಿದ್ದರೂ ಮನದ ಬೇಸರಗಳಂತೂ ತತ್‌ಕ್ಷಣಕ್ಕಾದರೂ ದೂರಾಗಿ ರಾತ್ರಿ ಸುಖನಿದ್ರೆಯಂತೂ ಖಂಡಿತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.