ADVERTISEMENT

ಹೆಸರಿನಷ್ಟೇ ನಾಜೂಕು ಪೂತರೇಕು

ಎಸ್.ರಶ್ಮಿ
Published 8 ಜುಲೈ 2017, 19:30 IST
Last Updated 8 ಜುಲೈ 2017, 19:30 IST
ಹೆಸರಿನಷ್ಟೇ ನಾಜೂಕು ಪೂತರೇಕು
ಹೆಸರಿನಷ್ಟೇ ನಾಜೂಕು ಪೂತರೇಕು   

ತಿಳಿ ಹಿಟ್ಟಿನ ದೋಸೆ ಅಚ್ಚುಕಟ್ಟಾಗಿ ಸುರುಳಿ ಸುತ್ತಿಟ್ಟಂತೆ ಕಾಣುತ್ತದೆ. ಕೈಗೆತ್ತಿಕೊಂಡಾಗಲೂ ಅಷ್ಟೆ! ಸುರುಳಿ ದೋಸೆಯನ್ನು ಹಿಡಿದಂತೆ. ಬಾಯೊಳಗಿಟ್ಟರೆ... ಅರರೆ.. ಏನಿದು... ತಿಳಿ ತೆಳುವಿನ ಕಾಗದದಂತಿರುವ ಈ ದೋಸೆಯ ಪೊರೆ ಬಾಯೊಳಗೆ ಕರಗಿ ಹೋಗುತ್ತದೆ. ಉಳಿಸುವುದೇನು?

ಒಂದಷ್ಟು ತುಪ್ಪ, ಬೆಲ್ಲದ ಮಿಶ್ರಣ. ಬಾಯ್ತುಂಬ ಹರಡಿಕೊಳ್ಳುವ ಆ ತುಪ್ಪಕ್ಕೆ ಲಾಲಾರಸ ಹೆಚ್ಚಿಸುವ ಮಾಂತ್ರಿಕ ಶಕ್ತಿ ಇದ್ದಂತೆ. ಆ ತುತ್ತು ಕರಗುವ ಮುನ್ನ ಮತ್ತೊಂದಕ್ಕೆ ಹಾತೊರೆಯುತ್ತದೆ ಮನ.
ಇದು ಪೂತರೇಕು. ಪೂತರೇಕುಲು ಎಂದು ಬಹುವಚನದಲ್ಲಿ ಕರೆಯುತ್ತಾರೆ. ಪೂತವೆಂದರೆ ಹೂರಣ. ರೇಕು ಎಂದರೆ ತೆಳುಹಾಳೆಯಂಥದ್ದು ಎಂದರ್ಥವಾಗುತ್ತದೆ. ಆಂಧ್ರದ ಗೋದಾವರಿ ಜಿಲ್ಲೆಯ ವಿಶೇಷ ಖಾದ್ಯವಿದು. ಅತ್ರೇಯಪುರಂ ಎನ್ನುವ ಊರಿನ ಈ ಖಾದ್ಯ ವಿಶ್ವಪ್ರಸಿದ್ಧ.

ಗೋದಾವರಿ ತಟದಲ್ಲಿರುವ ಗ್ರಾಮದಲ್ಲಿ ಅನೇಕರಿಗೆ ಉದ್ಯೋಗ ಒದಗಿಸಿಕೊಟ್ಟಿದೆ. ಉದ್ಯಮಿಗಳಾಗಿದ್ದಾರೆ. ಅತಿ ಶ್ರಮ ಕೇಳುವ ಈ ತಿನಿಸು ಅತಿಶೀಘ್ರದಲ್ಲಿಯೇ ಕರಗಿ ಹೋಗುತ್ತದೆ. ಜಯಂ ಎನ್ನುವ ಅಕ್ಕಿಯನ್ನು ನೆನೆಸಿಟ್ಟು, ನುಣ್ಣಗೆ ರುಬ್ಬಿಕೊಳ್ಳುತ್ತಾರೆ. ಮಡಕೆಯನ್ನು ತಲೆ ಕೆಳಗಾಗಿಸಿ ಇಟ್ಟು ಸೌದೆಯೊಡ್ಡುತ್ತಾರೆ. ಸೌದೆಯ ಕಾವು, ಹಿತವಾಗಿ ಮಡಕೆಯ ತಳವನ್ನು ಕಾಯಿಸಿದಾಗ ತೆಳು ಹಿಟ್ಟಿನಲ್ಲಿ ಅಂಗವಸ್ತ್ರದಂಥ ವಸ್ತ್ರವನ್ನು ನೆನೆಸಿ ಈ ಮಡಕೆಯ ತಳ ಭಾಗಕ್ಕೆ ಸೋಕಿಸಿ ತೆಗೆಯುತ್ತಾರೆ.

ADVERTISEMENT

ಅಕ್ಕಿ ಗಂಜಿಯ ಎಳೆಕೆನೆಯಂತೆ ಈ ತೆಳು ದೋಸೆ ಸಿದ್ಧವಾಗುವುದೇ ಹೀಗೆ.

ಒಂದಷ್ಟು ಕುರುಕುರು ಎನ್ನುವ ಈ ದೋಸೆಗಳನ್ನು ಗರಿಗರಿಯಾಗಿಸಿದ ನಂತರ, ಅವನ್ನು ಮಿದುವಾಗಿಸುವ ಪ್ರಕ್ರಿಯೆ ಆರಂಭವಾಗುತ್ತದೆ. ಆಗತಾನೇ ಜನಿಸಿದ ಶಿಶುವಿನ ಮೈ ಒರೆಸುವಂತೆ ಬಟ್ಟೆ ಹಾಲೊಳಗದ್ದಿ, ನಿಧಾನವಾಗಿ ಈ ದೋಸೆಗಳನ್ನು ತೀಡುತ್ತಾರೆ. ಅವು ಮೃದುವಾದಾಗ ಅವುಗಳ ಮೇಲೆ ಬೆಲ್ಲದ ಹುಡಿ ಹಾಕಿ, ತುಪ್ಪ ಸುರಿದು, ಸುರುಳಿ ಸುತ್ತಿದರೆ ಸಾಂಪ್ರದಾಯಿಕ ಪೂತರೇಕು ಸಿದ್ಧ.

ಈಗ ಅದಕ್ಕೆ ಬೆಲ್ಲ ಬೇಡವೆಂದವರಿಗಾಗಿಯೇ ಸಕ್ಕರೆ ಪುಡಿ ಮಾಡಿ, ತುಪ್ಪದೊಂದಿಗೆ ಒಣಕೊಬ್ಬರಿಯ ಮಿಶ್ರಣವನ್ನೂ ಸೇರಿಸಿ ಮಾಡಿದರು. ಅದನ್ನು ಇನ್ನಷ್ಟು ಸಿರಿವಂತಿಕೆಯ ಸ್ಪರ್ಶ ಕೊಡಲು ಬದಾಮಿ, ಗೋಡಂಬಿ, ಪಿಸ್ತಾ ಚೂರುಗಳನ್ನು ಸೇರಿಸಿದರು.

ಆಗ ಬಾಯೊಳಗಿಟ್ಟರೆ ಕರಗುವ ರೇಕು, ಬಾಯ್ತುಂಬ ಹರಡುವ ಸವಿ, ಇದೆರಡೂ ಬೇಗ ಮಾಯವಾಗದಂತೆ, ಆಗಾಗ ಹಲ್ಲುಗಳ ನಡುವೆ ಸಿಗುವ ಒಣಹಣ್ಣುಗಳು. ಮಧುಮೇಹಿಗಳಿಗೆ ಈ ತಿನಿಸು ಒಳ್ಳೆಯದಲ್ಲ. ಆದರೆ ಮಧುಮೇಹಿಗಳಿಗೆಂದೇ ಕೃತಕ ಸಿಹಿ ಬಳಸಿ ಮಾಡಿರುವ ಪೂತರೇಕುಗಳೂ ಲಭ್ಯ.

ಇದಲ್ಲದೆ, ಸಮಕಾಲೀನ ಸ್ಪರ್ಶ ನೀಡಲು ಚಾಕಲೇಟ್‌ ಪುಡಿ, ಹಾರ್ಲಿಕ್ಸ್‌, ಬೋರ್ನ್‌ವಿಟಾ ಮುಂತಾದವುಗಳನ್ನು ಸಹ ಬಳಸಿ ಮಾಡಲಾಯಿತು. ಎಷ್ಟು ದಿನಗಳಾದರೂ ಹಾಳಾಗದ ಈ ತಿಂಡಿ ಪ್ರೀತಿಸೂಚಕವೂ ಹೌದು.

ಬಸಿರು, ಬಾಣಂತನ ಏನೇ ಇರಲಿ, ಪೂತರೇಕುಲು ಇರದೇ ಯಾವ ಸಂಪ್ರದಾಯಗಳೂ ಅಲ್ಲಿ ಪೂರ್ಣವಾಗುವುದಿಲ್ಲ. ಪ್ರೀತಿಯ ಸವಿಗೆ ಕಾಳಜಿಯ ಪರದೆ ಹೊದ್ದು ಬರುವ ಈ ಸಿಹಿ ಮಮಕಾರದ ದ್ಯೋತಕವಾಗಿದೆ. ಸವಿಯಲೇ ಬೇಕೆನಿಸಿದರೆ ಸಮೀಪದ ಜಿ.ಪುಲ್ಲಾರೆಡ್ಡಿ ಸ್ವೀಟ್ಸ್‌, ಅಮರಾವತಿ ಸ್ವೀಟ್ಸ್‌ ಮಳಿಗೆಗಳಲ್ಲಿ ಲಭ್ಯ. ಆನ್‌ಲೈನ್‌ ಸೇವೆಯೂ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.