ADVERTISEMENT

ಕಲಾತ್ಮಕ ಕೆರೆ ತೂಬುಗಳು

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2025, 23:35 IST
Last Updated 13 ಸೆಪ್ಟೆಂಬರ್ 2025, 23:35 IST
ಇಕ್ಕೇರಿ ಕೆರೆ ಗೇಟು
ಇಕ್ಕೇರಿ ಕೆರೆ ಗೇಟು   

ರಾಜ್ಯದ ಹಲವಾರು ಪುರಾತನ ಕೆರೆಗಳಲ್ಲಿ, ಆ ಕಾಲದಲ್ಲೇ ನಿರ್ಮಾಣಗೊಂಡ ವ್ಯವಸ್ಥಿತವಾದ ಶಿಲಾಗೇಟುಗಳು ಕಾಣಿಸುತ್ತವೆ. ಇವುಗಳನ್ನು ಸ್ಥಳೀಯವಾಗಿ ಕೆರೆತೂಬು ಎನ್ನುತ್ತಾರೆ. ಉದಾಹರಣೆಗೆ, ಶಿರಸಿಯಿಂದ ಹುಬ್ಬಳ್ಳಿಗೆ ಹೋಗುವ ರಸ್ತೆಯಲ್ಲಿ, ನಗರದಿಂದ ಕೇವಲ ಆರು ಕಿಲೋಮೀಟರ್‌ ದೂರದಲ್ಲಿರುವ ಇಸಳೂರಿನ ಪುರಾತನ ‘ಧರ್ಮಾ’ ಕೆರೆಯಲ್ಲಿ ರಾಜರ ಕಾಲದ ಶಿಲಾಗೇಟು ಇದೆ.

ಕೆರೆಯಿಂದ ಕಾಲುವೆ ಮೂಲಕ ಹೊರಗೆ ಹರಿದು ಹೋಗುವ ನೀರನ್ನು ನಿಯಂತ್ರಿಸುವ ಸಲುವಾಗಿ ಆ ಕಾಲದಲ್ಲಿ ವ್ಯವಸ್ಥಿತವಾಗಿ ನಿರ್ಮಿಸುತ್ತಿದ್ದ ಗೇಟುಗಳಿವು. ಇವನ್ನು ಅಲ್ಲಿಯ ಜನರು ‘ಒನಕೆ ತೂಬು’ ಎಂದೂ ಕರೆಯುತ್ತಾರೆ. ದೊಡ್ಡ ಒನಕೆ ಗಾತ್ರದ, ನೇರವಾದ ಮರದಕಂಬವೊಂದನ್ನು ಶಿಲಾಕಂಬದ ರಂಧ್ರದೊಳಗೆ ಹಾಕಿದರೆ ಕೆರೆಯಿಂದ ಹೊರ ಹೋಗುವ ನೀರನ್ನು ತಡೆದು ನಿಲ್ಲಿಸಬಹುದು. ಅದೇ ಒನಕೆಯನ್ನು ರಂಧ್ರದಿಂದ ಹೊರತೆಗೆದಾಗ ಕೆರೆಯಲ್ಲಿನ ನೀರು ಕಾಲುವೆ ಮೂಲಕ ಕೆಳಭಾಗದ ಗದ್ದೆ ತೋಟಗಳಿಗೆ ಹರಿಯುತ್ತದೆ. ಇಸಳೂರಿನ ಕೆರೆಯಲ್ಲಿ ರಾಜರ ಕಾಲದಲ್ಲೇ ಮಾಡಲಾದ ಈ ನೀರಾವರಿ ವ್ಯವಸ್ಥೆ ಇದೆ. ವರ್ಷದ ಎಲ್ಲಾ ಕಾಲದಲ್ಲೂ ಸಮೃದ್ಧ ನೀರನ್ನು ಹೊಂದಿರುವ ಈ ಕೆರೆ, ಕೆಳಭಾಗದಲ್ಲಿನ ನೂರಾರು ಎಕರೆ ಕೃಷಿ ಜಮೀನಿಗೆ ನೀರು ಒದಗಿಸುತ್ತದೆ.

ಇದೇ ರೀತಿ, ಶಿರಸಿ ತಾಲ್ಲೂಕಿನ ಸೋದೆ ಭಾಗದಲ್ಲಿ ‘ಮುಂಡಿಗೆ ಕೆರೆ’ ಇದೆ. ಸೋದೆ ಅರಸರ ಕಾಲದಲ್ಲಿ ನಿರ್ಮಾಣಗೊಂಡ ಈ ಕೆರೆಯು ಈಗ ಬೆಳ್ಳಕ್ಕಿಗಳ ಪಕ್ಷಿಧಾಮವಾಗಿ ಪ್ರಸಿದ್ಧಿಯಾಗಿದೆ. ಈ ಕೆರೆಯ ಒಂದು ದಂಡೆಯ ಅಂಚಿನಲ್ಲಿ ಶಿಲಾಗೇಟು ಇದೆ. ಸುಮಾರು ಹನ್ನೊಂದು ಅಡಿ ಎತ್ತರದ ಈ ಶಿಲಾಕಂಬಕ್ಕೆ ನೀರು ಹೊರಗೆ ಹೋಗಲು ರಂಧ್ರವಿದೆ. ಸಾಗರ ತಾಲ್ಲೂಕಿನ ಐತಿಹಾಸಿಕ ಸ್ಥಳ ಇಕ್ಕೇರಿ. ಹಲವು ಪ್ರಾಚೀನ ಶಿಲಾದೇಗುಲಗಳ ಈ ಪ್ರದೇಶದಲ್ಲಿ ಅಂದಿನ ರಾಜರುಗಳಿಂದ ನಿರ್ಮಾಣಗೊಂಡ ಹಲವಾರು ನೀರಾವರಿ ಕೆರೆಗಳಿದ್ದು, ಈಗಲೂ ಹೆಚ್ಚಿನ ಕೆರೆಗಳು ಸುಸ್ಥಿಯಲ್ಲಿದ್ದು, ಗಮನ ಸೆಳೆಯುತ್ತವೆ.

ADVERTISEMENT

ವಿಶೇಷವೆಂದರೆ, ನೂರಾರು ವರ್ಷಗಳ ಹಿಂದೆ ನಿರ್ಮಾಣಗೊಂಡ ಇಲ್ಲಿನ ವಿಶಾಲ ಕೆರೆಗಳಲ್ಲಿ, ನೀರನ್ನು ಸಂಗ್ರಹಿಸಿ, ಮಳೆಗಾಲದಲ್ಲಿ ಹೆಚ್ಚಾಗುವ ನೀರನ್ನು ಹೊರಕ್ಕೆ ಬಿಡುವ ಮತ್ತು ಬೇಸಿಗೆಯಲ್ಲಿ ನೀರನ್ನು ಹಿಡಿದಿಡುವ ಮೂಲಕ ಕೆರೆಯನ್ನು ಸುರಕ್ಷಿತವಾಗಿಡುವ ಅಂದಿನ ವಿಶಿಷ್ಠ ತಂತ್ರಜ್ಞಾನದ ‘ಶಿಲಾ ಬಾಗಿಲು’ ಅಥವಾ ಸ್ಥಳೀಯವಾಗಿ ಕರೆಯುವ ‘ಕೆರೆ ತೂಬು’ ಕಲಾತ್ಮಕವಾಗಿದ್ದು, ಈಗಲೂ ಸುಸ್ಥಿತಿಯಲ್ಲಿವೆ.

ಅಂದಿನ ರಾಜರ ನೀರಾವರಿ ಕೆರೆಗಳ ಬಗೆಗಿನ ಕಾಳಜಿ, ಗೇಟು ನಿರ್ಮಾಣದಲ್ಲಿನ ಕಲೆ ಕೌಶಲ್ಯ ಮೆಚ್ಚುವಂತಿದೆ. ನೂರಿನ್ನೂರು ವರ್ಷ ಕಳೆದರೂ ಅಂದಿನ ಕಲ್ಲಿನ ಗೇಟುಗಳು ನೀರಲ್ಲಿ ಭದ್ರವಾಗಿದ್ದು, ಈಗಲೂ ತನ್ನ ಕಾರ್ಯ ನಿರ್ವಹಿಸಲು ಸಮರ್ಥವಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.