ADVERTISEMENT

ವಲಸೆ ಹಕ್ಕಿಗಳ ಹಾಡುಪಾಡು

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2025, 23:30 IST
Last Updated 8 ಫೆಬ್ರುವರಿ 2025, 23:30 IST
ಬ್ಲೂಟೈಲ್ಡ್‌ ಬೀ ಈಟರ್‌
ಬ್ಲೂಟೈಲ್ಡ್‌ ಬೀ ಈಟರ್‌   

ಋತುಗಳಿಗೆ ತಕ್ಕಂತೆ ಭೂಮಿಯ ಮೇಲ್ಮೈ ಮತ್ತು ವಾತಾವರಣ ಬದಲಾಗುತ್ತದೆ. ಆ ಬದಲಾವಣೆಗೆ ಹೊಂದಿಕೊಳ್ಳುವ ಅಗತ್ಯ ಹಕ್ಕಿಗಳಿಗೆ ಇರುತ್ತದೆ. ಒಂದು ವೇಳೆ ಹೊಂದಿಕೊಳ್ಳುವುದು ಅಸಾಧ್ಯವಾದಾಗ ಅವು ವಲಸೆ ಹೋಗುತ್ತವೆ. ಈ ಮಹಾ ವಲಸೆ ಆಹಾರಕ್ಕಾಗಿ, ಆಶ್ರಯಕ್ಕಾಗಿ ಅಥವಾ ಸಂತಾನಾಭಿವೃದ್ಧಿಗಾಗಿ ನಡೆಯುತ್ತದೆ. ಅದು ಅವುಗಳ ಅಳಿವು–ಉಳಿವಿನ ಸಮಯ ಕೂಡ ಹೌದು. ಈ ಅನಿವಾರ್ಯ ದೀರ್ಘ ಪಯಣಕ್ಕೆ ಹಲವು ದಿನಗಳ ಮತ್ತು ತಿಂಗಳುಗಳ ಪೂರ್ವ ತಯಾರಿ ನಡೆಯುತ್ತದೆ. ಅದು ಪೂರ್ವ ನಿರ್ಧರಿತ ಕೂಡ. ಈ ತಯಾರಿ ಪ್ರಕ್ರಿಯೆಯಲ್ಲಿ ಚಯಾಪಚಯದಲ್ಲಿ ಬದಲಾವಣೆ, ಶಕ್ತಿಯನ್ನು ಕೊಬ್ಬಿನರೂಪದಲ್ಲಿ ಶೇಖರಿಸುವುದರ ಮುಖಾಂತರ ಹಿಡಿದಿಡುವುದು, ಇರುಳು ಪ್ರಯಾಣದ ಸಮಯದಲ್ಲಿ ನಿದ್ರೆಯನ್ನು ನಿಯಂತ್ರಿಸುವುದು, ಗರಿಗಳನ್ನು ಕಾಪಾಡಿಕೊಳ್ಳುವುದು...

ಒಟ್ಟು ಎರಡು ಸಾವಿರ ಪ್ರಭೇದದ ಹಕ್ಕಿಗಳಿವೆ. ಆರ್ಕ್ಟಿಕ್‌ ಟೆರ್ನ್ ಪಕ್ಷಿ ಆರ್ಕ್ಟಿಕ್‌ ಖಂಡದಿಂದ ಅಂಟಾರ್ಕ್ಟಿಕ್ ಖಂಡದ ಅತ್ಯಂತ ದೂರದ ವಲಸೆಗೆ ಹೆಸರುವಾಸಿ. ಮಾಂಕ್ಸ ಶಿಯರ್‌ವಾಟರ್‌ ಪಕ್ಷಿ 14 ಸಾವಿರ ಕಿಲೋಮೀಟರ್‌ ದೂರಕ್ಕೆ ವಲಸೆ ಹೋಗುತ್ತದೆ. ವಲಸೆಗೆ ತಯಾರಾಗಲು ದೀರ್ಘಕಾಲದ ದಿನ, ಆಹಾರದ ಲಭ್ಯತೆ ಮತ್ತು ಚಳಿಯ ವಾತಾವರಣ ಇತ್ಯಾದಿಗಳು ಕಾರಣ. ವಲಸೆ ಸಮಯದಲ್ಲಿ ಸೌರಮಂಡಲದ ಸಂಕೇತಗಳನ್ನು, ಸೂರ್ಯ, ಚಂದ್ರ, ಭೂಮಿಯ ಆಯಸ್ಕಾಂತೀಯ ಗುಣ ಮತ್ತು ಮನಸಿನ ನಕ್ಷೆಯನ್ನು ಆಧಾರವಾಗಿ ಇಟ್ಟುಕೊಂಡು ವಲಸೆ ಹೋಗುತ್ತವೆ.

ಹಕ್ಕಿಗಳು ಸ್ವಚ್ಛಂದವಾಗಿರಲು ಮನುಷ್ಯನ ಸ್ವಾರ್ಥ, ಬೇಟೆ, ವಾತಾವರಣ ಬದಲಾವಣೆ, ನಗರೀಕರಣ ತಡೆಯೊಡ್ಡಿವೆ. ದುರಾಸೆಗೆ ಕಾಡುಗಳನ್ನೆಲ್ಲ ನಗರ, ಪಟ್ಟಣಗಳ ರೂಪದಲ್ಲಿ ಬೆಂಗಾಡುಗಳಾಗಿ ಪರಿವರ್ತನೆಯಾಗುತ್ತಿದೆ. ಅದನ್ನೇ ಮನುಷ್ಯ ತನ್ನ ಅಭಿವೃದ್ಧಿ, ನಾಗರಿಕತೆಯೆಂದು ಸಂಭ್ರಮಿಸುತ್ತಿರುವುದು ದುರಂತ ಮತ್ತು ಅವಿವೇಕ.

ADVERTISEMENT

ನಾನು ಚಿಕ್ಕವನಿದ್ದಾಗ ಗುಬ್ಬಿಗಳು, ಕಾಗೆಗಳು ಅಧಿಕ ಸಂಖ್ಯೆಯಲ್ಲಿ ಕಾಣುತ್ತಿದ್ದವು. ಮೂರು ದಶಕಗಳಲ್ಲಿ ಗುಬ್ಬಿ ಮತ್ತು ಕಾಗೆಗಳ ಸಂಖ್ಯೆಯೂ ಕ್ಷೀಣಿಸಿದೆ. ಬದಲಾಗಿ ಬೆಳ್ಳಕ್ಕಿಗಳು (ಈಗ್ರೆಟ್ಸ್), ಮೈನಾ, ಲ್ಯಾಪ್‌ವಿಂಗ್‌ಗಳು, ನವಿಲುಗಳು, ಗ್ರೀನ್ ಬೀ ಈಟರ್‌ಗಳ ಸಂಖ್ಯೆ ಗಮನಾರ್ಹವಾಗಿ ಏರಿಕೆಯಾಗಿದೆ. ಇದು ಬದಲಾಗುತ್ತಿರುವ ವಾತಾವರಣದ ಕುರುಹು ಮತ್ತು ಏರಿಕೆಯಾಗಿರುವ ಹಕ್ಕಿಗಳ ಹೊಂದಿಕೊಳ್ಳುವಿಕೆಯ ಗುಣ ಕಾರಣ. ಗ್ರೇ ಹೆರಾನ್, ಈಗ್ರೆಟ್ಸ್, ಬಾರ್ ಹೆಡೆಡ್ ಗೀಸ್, ಪೆಂಟೆಡ್ ಸ್ಟಾರ್ಕ್‌, ಐಬಿಸ್‌ಗಳು, ಸ್ಪಾಟ್ ಬಿಲ್ಲ್‌ಡ್‌ ಪೆಲಿಕಾನ್‌ಗಳು, ಸೈಬೆರಿಯಾ ಮತ್ತು ಇತರ ಪ್ರದೇಶಗಳಿಂದ ಕರ್ನಾಟಕವನ್ನೊಳಗೊಂಡಂತೆ ಭಾರತಕ್ಕೆ ವಲಸೆ ಬರುತ್ತವೆ.

ರಂಗನತಿಟ್ಟು ಪಕ್ಷಿಧಾಮದಲ್ಲಿ ಸೈಬೀರಿಯನ್‌ ಕ್ರೇನ್ಸ್‌

ಪಕ್ಷಿಗಳು ಮುಖ್ಯವಾಗಿ ಪರಾಗಸ್ಪರ್ಶ, ಕೀಟಗಳನ್ನು ನಿಯಂತ್ರಿಸಲು ಮತ್ತು ಆಹಾರ ಸರಪಳಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಒಬ್ಸರ್ವರ್‌ ರಿಸರ್ಚ್‌ ಫೌಂಡೇಶನ್ 2023ರ ಸ್ಟೇಟ್ ಆಫ್ ಇಂಡಿಯನ್ ಬರ್ಡ್ಸ್‌ ವರದಿ ಪ್ರಕಾರ ಭೌತಿಕ ಮೂಲ ಸೌಕರ್ಯಗಳು, ವಾತಾವರಣ ಬದಲಾವಣೆ, ಮಣ್ಣಿನ ಸವಕಳಿ ಕಾರಣಗಳಿಂದ 942 ಜಾತಿಯ ಪಕ್ಷಿಗಳಲ್ಲಿ 142 ಜಾತಿಯ ಪಕ್ಷಿಗಳ ಸಂಖ್ಯೆ ಕ್ಷೀಣಗೊಳ್ಳುತ್ತಿದೆ. ಅದರಲ್ಲಿ ಮುಖ್ಯವಾಗಿರುವುದು ಗ್ರೇಟ್ ಇಂಡಿಯನ್ ಬಸ್ಟರ್ಡ್(ಹೆಬ್ಬಕ) ಮತ್ತು ವೈಟ್ ಬೇಲ್ಲಿಡ್ ಹೆರಾನ್. ಮತ್ತೊಂದೆಡೆ 28 ಜಾತಿಯ ಪಕ್ಷಿಗಳ ಸಂಖ್ಯೆ ಅಧಿಕಗೊಂಡಿವೆ. ಅದರಲ್ಲಿ ಇಂಡಿಯನ್ ಪಿಫೌಲ್, ನವಿಲು, ಪಾರಿವಾಳ, ಕೋಗಿಲೆ, ಈಗ್ರೆಟ್ಸ್, ಗ್ರೀನ್ ಬೀ ಈರ‍್ಸ್.

ಅಕ್ಟೋಬರ್‌ನಿಂದ ಫೆಬ್ರುವರಿ ಕೊನೆ ವಾರದವರೆಗೆ ಪಕ್ಷಿಗಳು ಸೈಬೀರಿಯಾದಿಂದ ತಮ್ಮ ಅಗತ್ಯಗಳನ್ನು ಪೂರೈಸಲು ವಲಸೆ ಹೋಗುತ್ತವೆ. ಸೈಬೀರಿಯಾ ಎಂಬ ಭೌಗೋಳಿಕ ಪ್ರದೇಶವು ರಷ್ಯಾದ ಬಹುಪಾಲು ಪ್ರದೇಶ. ಉತ್ತರದ ಖಜಕಿಸ್ಥಾನವನ್ನು ಒಳಗೊಂಡಂತೆ, ಪಶ್ಚಿಮಕ್ಕೆ ಉತ್ತರ ಏಷ್ಯಾ ಮತ್ತು ಉರ್ಲ ಪರ್ವತಗಳು, ಪೂರ್ವಕ್ಕೆ ಪೆಸಿಫಿಕ್‌ ಸಾಗರ, ದಕ್ಷಿಣದ ಆರ್ಕ್ಟಿಕ್‌ ಸಾಗರದಿಂದ ಉತ್ತರ ಮತ್ತು ಮಧ್ಯಭಾಗದ ಖಜಕಿಸ್ಥಾನ ಪರ್ವತ ಶ್ರೇಣಿಗಳು, ಮಂಗೊಲಿಯಾ ಮತ್ತು ಚೀನಾ ದೇಶದ ಗಡಿ ಪ್ರದೇಶಗಳು ಒಟ್ಟಾರೆ 13,488,500 ಚದರ ಕಿಲೋಮೀಟರ್‌. ಸೈಬೀರಿಯಾ ಹೆಸರು ‘ತತಾರ’ ಎಂಬ ಹೆಸರಿನಿಂದ ಪಡೆಯಲಾಗಿದೆ. ‘ಸೈಬೀರಿಯಾ’ ಎಂದರೆ ಮಲಗಿರುವ ಭೂಮಿ. ಇದು ತನ್ನ ದೀರ್ಘಕಾಲದ ಹಿಮರಹಿತ ಚಳಿಗಾಲಕ್ಕೆ ಕುಖ್ಯಾತಿ ಪಡೆದಿದೆ. ಸಾಕಾ ಪ್ರದೇಶದಲ್ಲಿ –68 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಇದುವರೆಗೆ ದಾಖಲಾದ ಅತ್ಯಂತ ಕಡಿಮೆ ಉಷ್ಣಾಂಶ. ಪೂರ್ವಕ್ಕೆ ಅತ್ಯಂತ ಕ್ರೂರವಾಗಿರುತ್ತದೆ. ಬಹುಪಾಲು ಹಸಿರು, ಪೂರ್ವ ಮತ್ತು ಪಶ್ಚಿಮಕ್ಕೆ ಹರಡಿಕೊಂಡಿದೆ. ಟಂಡ್ರಾ ಪ್ರದೇಶ ಉತ್ತರಕ್ಕೆ ಚಾಚಿಕೊಂಡಿದೆ. ಜೌಗು ಕಾಡುಗಳು, ತೈಗಾ ಪ್ರದೇಶಗಳು ಬಹುತೇಕ ಈಶಾನ್ಯ ಪ್ರದೇಶಕ್ಕೆ ಹೊಂದಿಕೊಡಿವೆ. ಇಲ್ಲಿ ಕಲ್ಲಿದ್ದಲು, ಪೆಟ್ರೋಲ್, ನೈಸರ್ಗಿಕ ಅನಿಲಗಳು, ವಜ್ರ, ಕಬ್ಬಿಣದ ಅದಿರು ಮತ್ತು ಚಿನ್ನ ಹೇರಳವಾಗಿ ಸಿಗುತ್ತವೆ. ಇನ್ನು ನೈಸರ್ಗಿಕವಾಗಿ ಸಂಪದ್ಭರಿತವಾದ ಪ್ರದೇಶವಾದರೂ ಚಳಿಗಾಲದಲ್ಲಿ ಮಾತ್ರ ಪಕ್ಷಿಗಳಿಗೆ ಅಕ್ಷರಶಃ ಹಿಮರಹಿತ ಚಳಿಯ ಬೆಂಗಾಡು ಮಾತ್ರ.

ಪಕ್ಷಿಗಳಿಂದ ಮನುಷ್ಯ ಹಾರಾಡಲು ರೆಕ್ಕೆ ಇರುವ ವಿಮಾನವನ್ನು ಕಂಡುಹಿಡಿದಿದ್ದಾನೆ. ಮಾನವನ ಎಷ್ಟೋ ಆವಿಷ್ಕಾರಗಳಿಗೆ ಸ್ಫೂರ್ತಿ ಮತ್ತು ಸಾಕ್ಷಿ ಇವುಗಳು. ಪಕ್ಷಿಗಳ ತೀಕ್ಷ್ಣನೋಟ, ಸಮೂಹವಾಗಿ ಹಾರಾಡುವಾಗ ಯಾವುದೇ ದೋಷಗಳಿಲ್ಲದ, ಅಪಘಾತಗಳಾಗದೆ ಸಾಧಿಸುವ ಸಮನ್ವಯತೆ ಮತ್ತು ಸಮೂಹ ನಾಯಕತ್ವದ ಗುಣಗಳು, ವಲಸೆಗೆ ತಯಾರಾಗುವ ಆತ್ಮವಿಶ್ವಾಸ, ಅನಿರೀಕ್ಷಿತವಾಗಿ ಬದಲಾಗುವ ವಾತಾವರಣಕ್ಕೆ ಹೊಂದಿಕೊಳ್ಳುವ ಪರಿ ಅದ್ಭುತ. ಹಮ್ಮಿಂಗ್‌ ಪಕ್ಷಿ ಆಕಾಶದಲ್ಲಿ ಅಲುಗಾಡದೆ ನಿಲ್ಲುವ ಪರಿ ಹೆಲಿಕಾಪ್ಟರ್‌ ನಾಂದಿಯ ಯೋಚನೆ. ಜಪಾನ್‌ ದೇಶದ ಬುಲೆಟ್ ರೈಲುಗಳ ಮುಂಭಾಗದ ವಿನ್ಯಾಸಕ್ಕೂ ಹಕ್ಕಿಗಳ ಕೊಕ್ಕಿನ ವಿನ್ಯಾಸವೇ ಸ್ಫೂರ್ತಿಯಾಗಿದೆ. ಹಕ್ಕಿಗಳು ನೀರಿನಲ್ಲಿ ಮುಳುಗಿ ನೀರನ್ನು ಕಲಕದೆ ಮೇಲೆ ಬರುವ ರೀತಿಯ ತಂತ್ರಜ್ಞಾನ ಇದರಲ್ಲಿ ಅಡಗಿದೆ. ಭೂಮಿಯ ಮೇಲಿರುವ, ನೀರಿನೊಳಗಿನ ಪ್ರಾಣಿ, ಮೀನುಗಳನ್ನು ಹಿಡಿಯಲು ಹದ್ದು ತನ್ನ ವೇಗವನ್ನು ಕಡಿಮೆ ಮಾಡದೇ ಚಲನೆಯಲ್ಲಿಯೇ ಶಿಕಾರಿ ಮಾಡುತ್ತದೆ. ಇದರಿಂದ ಶಕ್ತಿಯ ನಾಶವಾಗುವುದಿಲ್ಲ. ಹೀಗೆ ಅನೇಕ ವಿಷಯಗಳನ್ನು ಪಕ್ಷಿಗಳಿಂದ ಎರವಲು ಪಡೆಯುವ ಮನುಷ್ಯ, ಈ ಭೂಮಂಡಲದ ಸಕಲ ಜೀವರಾಶಿಗಳೂ ಒಂದೇ ಎಂದು ತಿಳಿದು ಸಮಷ್ಟಿ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕಿದೆ.

ಫ್ಲೆಮಿಂಗೋ ಹಕ್ಕಿಗಳ ವಲಸೆ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.