ಭಾರತದಲ್ಲಿ ಕರ್ನಾಟಕ ಅತಿಹೆಚ್ಚು ಆನೆಗಳನ್ನು ಹೊಂದಿದ ರಾಜ್ಯ ಎಂದು ಹೆಸರಾಗಿದೆ. ಆದರೆ, ಇಲ್ಲಿ ನಾನಾ ಕಾರಣಗಳಿಂದ ಆನೆಗಳ ಸಾವಿನ ಸಪರಳಿ ತುಂಡಾಗಿಲ್ಲ! ಅಲ್ಲದೇ ಮಾನವ ಮತ್ತು ಆನೆಗಳ ಸಂಘರ್ಷ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಶಾಶ್ವತ ಪರಿಹಾರ ಕಂಡುಕೊಳ್ಳಬೇಕಾದ ಸರ್ಕಾರ ತಾತ್ಕಾಲಿಕ ಶಮನಕ್ಕೆ ಮುಂದಾಗುತ್ತಿದೆ.
––––
ಕಾಡಿನ ಮಧ್ಯದಲ್ಲಿ ಹಾದು ಹೋಗುವ ವಿದ್ಯುತ್ ತಂತಿಗಳು ಬಾನಾಡಿಗಳಿಗೆ ತುಂಬಾ ಅಪಾಯಕಾರಿ. ವೇಗವಾಗಿ ಹಾರುವ ಪಕ್ಷಿಗಳು ನೂರಾರು ಸಂಖ್ಯೆಯಲ್ಲಿ ವಿದ್ಯುತ್ ತಂತಿಗೆ ಸಿಕ್ಕು ಸಾಯುತ್ತಲೇ ಇರುತ್ತವೆ. ಹಾರುವ ಬೆಕ್ಕುಗಳಂತಹ ಸಸ್ತನಿಗಳು ಆಕಸ್ಮಿಕವಾಗಿ ಬಲಿಯಾಗುವ ಸಂಭವವನ್ನು ತಳ್ಳಿಹಾಕುವಂತೆಯೂ ಇಲ್ಲ. ಆದರೆ, ನೆಲವಾಸಿಗಳಾದ ಆನೆ, ಕಾಟಿಗಳು ಇಪ್ಪತ್ತು ಅಡಿ ಎತ್ತರದಲ್ಲಿರುವ ವಿದ್ಯುತ್ ತಂತಿ ತಾಗಿ ಸಾಯುವ ಸಂದರ್ಭ ತೀರಾ ಕಡಿಮೆ. ಕರ್ನಾಟಕದಲ್ಲಿ 2024ರ ಜನವರಿಯಿಂದ ನವೆಂಬರ್ 10ರ ತನಕ ಅರವತ್ತೊಂಬತ್ತು ಆನೆಗಳು ವಿವಿಧ ಕಾರಣಗಳಿಗೆ ಪ್ರಾಣ ಕಳೆದುಕೊಂಡಿವೆ. ಅದರಲ್ಲಿ ಹನ್ನೆರಡು ಆನೆಗಳು ವಿದ್ಯುತ್ ಸ್ಪರ್ಶದಿಂದ ಮೃತಪಟ್ಟರೆ, ಇನ್ನುಳಿದವು ಗುಂಡೇಟು, ಅಪಘಾತ, ಇನ್ನಿತರ ಕಾರಣಗಳಿಗೆ ಜೀವಬಿಟ್ಟಿವೆ.
ನಾಗರಿಕ ಸಮಾಜದ ಆಗುಹೋಗುಗಳು ಒಂದು ಚೌಕಟ್ಟಿನಲ್ಲಿ, ಮಿತಿಯಲ್ಲಿರಬೇಕು ಎಂಬ ಕಾರಣಕ್ಕೆ ಕಾಯ್ದೆ, ಕಾನೂನುಗಳನ್ನು ರೂಪಿಸಲಾಗಿದೆ. ಕಾನೂನು ಪಾಲನೆ ಮಾಡುವುದರಿಂದ ಆರೋಗ್ಯಕರ ಸಮಾಜ ನಿರ್ಮಾಣವಾಗುತ್ತದೆ. ಹಾಗೆಯೇ ನಮ್ಮ ಅರಣ್ಯ ಮತ್ತು ಜೀವಿವೈವಿಧ್ಯ ನೆಲೆಗಳ ರಕ್ಷಣೆಗಾಗಿ ಅರಣ್ಯ ಇಲಾಖೆಯಿದೆ. ಬಹಳಷ್ಟು ಕಾನೂನುಗಳು ಸಂರಕ್ಷಣೆಯ ದೃಷ್ಟಿಯಿಂದ ತುಂಬಾ ಮಹತ್ವ ಪಡೆದಿವೆ. ರಾಜ್ಯದ ಜನರಿಗೆ ನಿರಂತರ ವಿದ್ಯುತ್ ಒದಗಿಸಲು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತಿ (ಕೆಪಿಟಿಸಿಎಲ್) ಮತ್ತದರ ಅಂಗಸಂಸ್ಥೆಗಳು ಕಾರ್ಯ ನಿರ್ವಹಿಸುತ್ತವೆ. ವಿದ್ಯುತ್ ಇಲಾಖೆಯು ಸುಗಮ ನಿರ್ವಹಣೆ ದೃಷ್ಟಿಯಿಂದ ಅನೇಕ ನೀತಿ ನಿಯಮಗಳನ್ನು ಪಾಲಿಸಬೇಕು. ವಿದ್ಯುತ್ ಅವಘಡವಾಗದಂತೆ ಮುನ್ನೆಚ್ಚೆರಿಕೆಯ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ತನ್ನ ನೌಕರರ ಜೊತೆಗೆ ಗ್ರಾಹಕರು ಮತ್ತು ಇತರೆ ಜೀವಿವೈವಿಧ್ಯಗಳಿಗೆ ವಿದ್ಯುತ್ತಿನಿಂದ ಯಾವುದೇ ತರಹದ ಹಾನಿಯಾಗದಂತೆ ನಿಯಮಗಳನ್ನು ಪಾಲಿಸುವುದು ಇಲಾಖೆಗೆ ಕಡ್ಡಾಯವಾಗಿರುತ್ತದೆ. ಸರ್ಕಾರದ ಇಲಾಖೆಗಳು ತಾವೇ ರೂಪಸಿಕೊಂಡ ನೀತಿ ನಿಯಮ ಕಾನೂನುಗಳನ್ನು ನೂರಕ್ಕೆ ನೂರು ಪಾಲನೆ ಮಾಡಿದ ಅಧಿಕೃತ ಉದಾಹರಣೆ ಸಿಗುವುದೇ ಇಲ್ಲ.
ಇತ್ತೀಚಿಗೆ ಹಾಸನ ಜಿಲ್ಲೆಯ ಆಲ್ದೂರು ಸಮೀಪ ಆನೆಯೊಂದು ವಿದ್ಯುತ್ ತಂತಿಗೆ ಸಿಲುಕಿ ಮೃತಪಟ್ಟಿತು. ಕೇಂದ್ರ ವಿದ್ಯುತ್ ನಿಗಮದ ಬಿಗಿ ನಿಯಮಗಳ ಪ್ರಕಾರ ಯಾವುದೇ ವಿದ್ಯುತ್ ಪ್ರಸರಣ ಮಾರ್ಗದ ವಿದ್ಯುತ್ ತಂತಿಗಳು ಇಂತಿಷ್ಟೇ ಎತ್ತರದಲ್ಲಿರಬೇಕು ಎಂದು ನಿಗದಿ ಮಾಡಿದೆ. ನೆಲಮಟ್ಟದಿಂದ ವಿದ್ಯುತ್ ತಂತಿಯು ಕನಿಷ್ಠವೆಂದರೆ 13.2 ಅಡಿ ಎತ್ತರದಲ್ಲಿರಬೇಕು. ಆದರೆ ಘಟನೆ ನಡೆದ ಸ್ಥಳದಲ್ಲಿ ಹಾದು ಹೋದ ವಿದ್ಯುತ್ ತಂತಿ ನೆಲಮಟ್ಟದಿಂದ ಬರೀ ಆರು ಅಡಿ ಎತ್ತರದಲ್ಲಿತ್ತು. ಇದು ಬರೀ ಆನೆಗಳಿಗಲ್ಲದೇ ಮನುಷ್ಯರಿಗೂ ಅಪಾಯವನ್ನುಂಟು ಮಾಡುವ ಸಂಭವವಿದೆ.
ವಿದ್ಯುತ್ ತಗುಲಿ ಕೆಳಗೆ ಬಿದ್ದ ಆನೆಯನ್ನು ರಕ್ಷಿಸುವ ಪ್ರಯತ್ನವನ್ನು ಆನೆಗಳ ಹಿಂಡು ಮಾಡಿದ್ದವು ಎಂಬುದಕ್ಕೆ ಕುರುಹಾಗಿ, ಮೃತ ಆನೆಯ ಹಣೆ ಮತ್ತು ಹಿಂಭಾಗದಲ್ಲಿ ತಿವಿದ ಗಾಯಗಳಿದ್ದವು. ಆನೆ ಸತ್ತಿದ್ದನ್ನು ಖಾತ್ರಿ ಪಡಿಸಿಕೊಂಡ ಹಿಂಡು ಅಲ್ಲಿಂದ ತೆರಳಿತ್ತು ಎಂಬುದನ್ನು ಅಲ್ಲಿನ ಘಟನೋತ್ತರ ಪ್ರತ್ಯಕ್ಷದರ್ಶಿಗಳು ವಿವರಿಸಿದ್ದಾರೆ. ಕಾಡಾನೆಗಳು ತಮ್ಮ ಕುಟುಂಬವನ್ನು ರಕ್ಷಣೆ ಮಾಡಿಕೊಳ್ಳುವಲ್ಲಿ ಮಾನವರಷ್ಟೇ ಕಾಳಜಿ ಹಾಗೂ ಬದ್ಧತೆಯನ್ನು ತೋರುತ್ತವೆ. ಮೂಲತಃ ಸಂಘಜೀವಿಯಾದ ಆನೆಗಳ ಹಿಂಡಿಗೆ ಹೆಣ್ಣಾನೆ ಯಜಮಾನಿಯಾಗಿರುತ್ತದೆ.
ಆನೆತಜ್ಞ ಆಂಟೋನಿ
ಲಾರೆನ್ಸ್ ಆಂಟೋನಿ ಜಗತ್ತು ಕಂಡ ಸರ್ವಶ್ರೇಷ್ಠ ಆನೆತಜ್ಞ. ಆಫ್ರಿಕಾದ ಕಾಡಿನಲ್ಲಿ ಪುಂಡಾಟದಲ್ಲಿ ತೊಡಗಿದ್ದವೆಂದು ಹೇಳಲಾದ ಒಂದು ಆನೆಯ ಹಿಂಡನ್ನು ಕೊಲ್ಲಬೇಕೆಂದು ಅಲ್ಲಿನ ಸ್ಥಳೀಯ ಆಡಳಿತ ಮುಂದಾದಾಗ, ಈತ ಆ ಹಿಂಡನ್ನು ತನ್ನ ಖಾಸಗಿ ಅರಣ್ಯಕ್ಕೆ ಕರೆ ತರುತ್ತಾನೆ. ಅವುಗಳ ಪುಂಡಾಟಿಕೆಯ ಕಾರಣಕ್ಕೆ ಇಡೀ ಹಿಂಡು ನಾಶವಾಗಬಹುದು ಎಂಬುದನ್ನು ಆ ಹಿಂಡಿಗೆ ಅರ್ಥ ಮಾಡಿಸುತ್ತಾನೆ. ‘ಎಲಿಫಂಟ್ ವಿಸ್ಪರರ್’ ಎಂಬ ಪುಸ್ತಕದಲ್ಲಿ ಇಂತಹ ಹಲವು ರೋಚಕ ಘಟನೆಗಳನ್ನು ದಾಖಲಿಸಲಾಗಿದೆ. ಅದರಲ್ಲಿ ಬಹಳ ಮುಖ್ಯವಾದ ಒಂದು ಘಟನೆ ಹೀಗಿದೆ:
ಹಿಂಡಿನ ಹೆಣ್ಣಾನೆಯೊಂದು ಅವಧಿಪೂರ್ವ ಮರಿಯನ್ನು ಈಯುತ್ತದೆ. ಭ್ರೂಣದಲ್ಲಿ ಸಂಪೂರ್ಣ ಬೆಳೆಯದ ಮರಿಯನ್ನು ಕಾಪಾಡಲು ಆ ಹಿಂಡು ಬಹಳ ಶ್ರಮ ಪಡುತ್ತದೆ. ಎಳೆಯ ಮರಿಗೆ ಎದ್ದು ನಿಲ್ಲುವುದಕ್ಕೆ ಆಗುತ್ತಿರಲಿಲ್ಲ. ಲಾರೆನ್ಸ್ ಆಂಟೋನಿಯ ಖಾಸಗಿ ಕಾಡಿನ ಒಂದು ಬಯಲಿನಲ್ಲಿ ಹೆಣ್ಣಾನೆ ಮರಿಯನ್ನು ಈಯ್ದಿತ್ತು. ಆಗ ಘೋರ ಬೇಸಿಗೆ ಕಾಲ. ಮರಿಯನ್ನು ಸೂರ್ಯನ ಬಿಸಿಲಿನಿಂದ ರಕ್ಷಿಸಲು ಇಡೀ ಹಿಂಡು ಒಗ್ಗಟ್ಟಾಗಿ ಮರಿಯ ಮೇಲೆ ಬಿಸಿಲು ಬೀಳುವುದನ್ನು ತಡೆಯುವ ಮನಮಿಡಿಯುವ ಘಟನೆಯಿದು. ಉರಿ ಬಿಸಿಲಿನಲ್ಲಿ ಒಂದು ಎಳೆ ಜೀವವನ್ನು ಉಳಿಸುವ ನಿಟ್ಟಿನಲ್ಲಿ ಆ ಹಿಂಡು ತೋರುವ ಕಾಳಜಿ ಮತ್ತು ಬದ್ಧತೆ ಮನುಷ್ಯನ ಯಾವ ಮೇರು ಕ್ರಮಕ್ಕೂ ಸರಿಸಾಟಿಯಾಗುವುದಿಲ್ಲ. ನಂತರದಲ್ಲಿ ಉಪಾಯದಿಂದ ಲಾರೆನ್ಸ್ ಆ ಮರಿಯನ್ನು ತನ್ನ ಮನೆಗೆ ತಂದು, ಕೃತಕವಾದ ಹಾಲನ್ನುಣಿಸಿ ಬದುಕಿಸುವ ಪ್ರಯತ್ನ ಮಾಡುತ್ತಾನೆ. ಪ್ರಪಂಚಕ್ಕೆ ಹೊಂದಿಕೊಳ್ಳಲಾರದ ಮರಿಯಾನೆ ವಾರಗಳ ಆರೈಕೆಯ ಬಳಿಕವೂ ಅದು ಬದುಕಲಿಲ್ಲ.
2012ರಲ್ಲಿ ಲಾರೆನ್ಸ್ ಆಂಟೋನಿ ಹೃದಯಾಘಾತದಿಂದ ಮೃತ ಪಡುತ್ತಾನೆ. ತಮ್ಮ ಹಿಂಡನ್ನು ಸಾವಿನ ದವಡೆಯಿಂದ ರಕ್ಷಿಸಿದ ಈ ಮೇರು ಮಾನವನ ಅಂತಿಮ ದರ್ಶನಕ್ಕಾಗಿ ಇಡೀ ಹಿಂಡು 12 ತಾಸು ಸಾಗಿ ಅವನ ಮನೆ ಬಳಿಗೆ ಬಂದು ಶೋಕ ವ್ಯಕ್ತಪಡಿಸುತ್ತವೆ. ಎರಡು ದಿನ ಆಹಾರವನ್ನೂ ಸೇವಿಸದೆ ಆ ಜಾಗದಲ್ಲಿ ಬೀಡು ಬಿಟ್ಟಿದ್ದವು. ಅಚ್ಚರಿಯೆಂದರೆ, ಲಾರೆನ್ಸ್ ಆಂಟೋನಿ ತೀರಿಕೊಂಡ ಒಂದು ವರ್ಷಕ್ಕೆ ಸರಿಯಾಗಿ ಮತ್ತೆ ಅವನ ಮನೆ ಹತ್ತಿರ ಬಂದ ವಿವರಗಳ ವಿಡಿಯೊ ಜಾಲತಾಣದಲ್ಲಿ ಲಭ್ಯವಿದೆ. (https://www.facebook.com/share/v/19QLmn2dqw/). ಕಾಡಾನೆಗಳ ಈ ವರ್ತನೆ ವಿಜ್ಞಾನದ ತೆಕ್ಕೆಗೂ ಇನ್ನೂ ಸಿಕ್ಕಿಲ್ಲ.
ಹೆಚ್ಚುತ್ತಿರುವ ಸಂಘರ್ಷ
ಮನುಷ್ಯನ ಊಹೆಗೂ ನಿಲುಕದ ವರ್ತನೆಯನ್ನು ಈ ಬೃಹತ್ ದೇಹಿಗಳು ತೋರುತ್ತವೆ. ಬಹಳ ಬುದ್ಧಿಮತ್ತೆಯನ್ನು ಹೊಂದಿರುವ ಕಾಡಾನೆಗಳು ಕಾರಣವಿಲ್ಲದೇ ಮನುಷ್ಯನಿಗೆ ತೊಂದರೆ ನೀಡುವುದಿಲ್ಲ. ಕರ್ನಾಟಕ ಅತಿಹೆಚ್ಚು ಆನೆಗಳನ್ನು ಹೊಂದಿದ ರಾಜ್ಯ ಎಂಬ ಖ್ಯಾತಿ ಪಡೆದಿದೆ. ಅಂತೆಯೇ, ಮಾನವ-ವನ್ಯಜೀವಿ ಸಂಘರ್ಷವೂ ದಿನೇ ದಿನೇ ಹೆಚ್ಚುತ್ತಿದೆ.
ಈಗೊಂದು ಹತ್ತು ದಿನಗಳ ಹಿಂದೆ ಶಿವಮೊಗ್ಗದ ಶೆಟ್ಟಿಹಳ್ಳಿ ಅಭಯಾರಣ್ಯದಲ್ಲಿ ಹರೆಯದ ಸಲಗ ವಿದ್ಯುತ್ ತಂತಿಗೆ ಸಿಲುಕಿ ಮೃತಪಟ್ಟಿತು. ಶೆಟ್ಟಿಹಳ್ಳಿ ಅಭಯಾರಣ್ಯದ ವ್ಯಾಪ್ತಿಯಲ್ಲಿ ಸುಮಾರು 7-8 ಸಂಖ್ಯೆಯ ಕಾಡಾನೆಯ ಹಿಂಡು ತನ್ನ ನೆಲೆಯನ್ನು ಕಂಡುಕೊಂಡಿದೆ. ಅಭಯಾರಣ್ಯದ ವ್ಯಾಪ್ತಿಯಲ್ಲಿ ಅನೇಕ ಹಳ್ಳಿಗಳೂ ಇವೆ. ಹಳ್ಳಿ ಎಂದರೆ ರೈತಾಪಿ ಕೆಲಸ ತಾನೇ. ಅಲ್ಲೊಬ್ಬ ರೈತ ಜಮೀನಿನಲ್ಲಿ ಜೋಳವನ್ನು ಬೆಳೆದುಕೊಂಡಿದ್ದ. ರೈತರು ಅರಣ್ಯ ಇಲಾಖೆಗೆ ಆನೆಗಳು ಬಂದು ತಮ್ಮ ಬೆಳೆಗಳನ್ನು ಹಾಳು ಮಾಡುತ್ತಿವೆ ಎಂದು ದೂರಿದರು. ಕಾಡಾನೆಗಳ ವರ್ತನೆಗಳ ಕುರಿತಾಗಿ ಹಳ್ಳಿಗರಿಗೆ ಮಾಹಿತಿ ನೀಡುವುದು, ಅವುಗಳ ಪಥ ಏನಾದರೂ ಛಿಧ್ರವಾಗಿದೆಯೇ ಎಂದು ಪತ್ತೆ ಹಚ್ಚುವುದು ಮತ್ತು ಅದಕ್ಕೆ ತಕ್ಕ ಪರಿಹಾರ ಕಂಡುಕೊಳ್ಳುವುದು ಇಂತಹ ಸಾಧ್ಯತೆಗಳನ್ನು ಚಿಂತಿಸಬೇಕಾದ ಅರಣ್ಯ ಇಲಾಖೆ, ಏಕಾಏಕಿ ಕಾಡಾನೆಗಳ ಹಿಂಡನ್ನು ಭದ್ರಾ ಅಭಯಾರಣ್ಯಕ್ಕೆ ಓಡಿಸುವ ತಪ್ಪು ನಿರ್ಧಾರ ಕೈಗೊಂಡಿತು ಹಾಗೂ ಕಾಡಾನೆಗಳ ಹಿಂಡನ್ನು ಓಡಿಸಲು ಪಟಾಕಿ ಸಿಡಿಸಿತು. ಈ ಗಲಾಟೆ ಗೌಜಿನಲ್ಲಿ ಒಂದು ಯುವ ಸಲಗ ಗುಂಪಿನಿಂದ ಬೇರೆಯಾಯಿತು.
ಹಿಂಡಿನಿಂದ ಬೇರೆಯಾದ ಅನನುಭವಿ ಯುವ ಆನೆಯು ಗುಂಪನ್ನು ಸೇರುವ ಪ್ರಯತ್ನದಲ್ಲಿತ್ತು. ಇತ್ತ ರೈತನಿಗೆ ತನ್ನ ಬೆಳೆಯನ್ನು ಆನೆಗಳು ಹಾಳು ಮಾಡುತ್ತವೆ. ಅವುಗಳಿಗೆ ತಕ್ಕ ಶಾಸ್ತಿ ಮಾಡಬೇಕು ಎಂದುಕೊಂಡು ಜಮೀನಿನ ಸುತ್ತಲು ವಿದ್ಯುತ್ ತಂತಿಯನ್ನು ಹರಿಸಿದ್ದ. ಗುಂಪಿನಿಂದ ಬೇರೆಯಾದ ಉದ್ವಿಗ್ನಗೊಂಡ ಯುವ ಆನೆಗೆ ವಿದ್ಯುತ್ ತಂತಿ ತನ್ನ ಪ್ರಾಣಕ್ಕೆ ಎರವಾಗಲಿದೆ ಎಂದು ತಿಳಿದಿರಲಿಲ್ಲ. ವಿದ್ಯುತ್ ತಂತಿ ಸೊಂಡಿಲಿಗೆ ತಾಗುತ್ತಿದ್ದಂತೆಯೇ ಆ ಆನೆ ಧರಾಶಾಯಿಯಾಯಿತು. ಅತ್ತ ವಿದ್ಯುತ್ ತಂತಿ ಹರಿಸಿದ ರೈತನ ಮೇಲೆ ಅರಣ್ಯ ಇಲಾಖೆ ಮೊಕದ್ದಮೆ ಹೂಡಿತು.
ಕಡೆಯದಾಗಿ: ಯಾವುದೇ ವನ್ಯಜೀವಿಗಳಿರಲಿ, ಪ್ರಜ್ಞಾಪೂರ್ವಕವಾಗಿ ಮನುಷ್ಯನಿಗೆ ತೊಂದರೆ ನೀಡುವ ಯಾವ ಇಚ್ಛೆಯೂ ಅವುಗಳಿಗೆ ಇರುವುದಿಲ್ಲ. ನಮ್ಮಗಳ ಜನಸಂಖ್ಯೆ ಹೆಚ್ಚಾದ ಕಾರಣಕ್ಕೆ ವನ್ಯಜೀವಿಗಳ ಆವಾಸಸ್ಥಾನ ಕಡಿಮೆಯಾಗುತ್ತಿದೆ. ಇದರಿಂದಾಗಿ, ನೈಸರ್ಗಿಕ ಸೇವೆ ನೀಡುವ ಜೀವಿವೈವಿಧ್ಯ ಪ್ರಭೇದಗಳ ಸಂಖ್ಯೆಯೂ ಕ್ಷೀಣಿಸುತ್ತಿದೆ. ಪರಿಸರ ನಾಶವಾದರೆ, ಅದರಿಂದ ಈ ಭೂಮಿಗೇನು ನಷ್ಟವಿಲ್ಲ. ಅಂತಿಮವಾಗಿ ಸಂತ್ರಸ್ತನಾಗುವವನು ಮನುಷ್ಯನೇ. ‘ಮನುಷ್ಯನಿಗೆ ಪ್ರಕೃತಿಯ ಅವಶ್ಯಕತೆ ಇದೆಯೇ ಹೊರತು ಪ್ರಕೃತಿಗೆ ಮನುಷ್ಯನ ಅವಶ್ಯಕತೆ ಇಲ್ಲ’ ಎಂದು ಲೇಖಕ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಹೇಳಿರುವ ಮಾತು ಅರ್ಥಪೂರ್ಣ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.