ADVERTISEMENT

Mount Everest: ಎವರೆಸ್ಟ್‌ ಏರಲು ಡ್ರೋನ್‌ಗಳ ಸಾಥ್‌

ಎಂ.ವೆಂಕಟಸ್ವಾಮಿ
Published 30 ಆಗಸ್ಟ್ 2025, 23:51 IST
Last Updated 30 ಆಗಸ್ಟ್ 2025, 23:51 IST
ಎಐ ಚಿತ್ರ
ಎಐ ಚಿತ್ರ   

ಡ್ರೋನ್ ಪೈಲಟ್ ಪಾಂಡೆ, ಮತ್ತವರ ತಂಡ ಎವರೆಸ್ಟ್ ಮೇಲೆ ಶಾಶ್ವತ ಬದಲಾವಣೆಯನ್ನು ತರುವ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಬೇಸ್‌ಕ್ಯಾಂಪ್ ಮತ್ತು ಒಂದನೇ ಕ್ಯಾಂಪ್ ನಡುವೆ ಇರುವ ಐಸ್‌ಪಾಲ್‌ನಲ್ಲಿರುವ ಶೆರ್ಪಾಗಳಿಗೆ ಸಹಾಯ ಮಾಡಲು ಪಾಂಡೆ ಡ್ರೋನ್ ಮೂಲಕ ಏಣಿಗಳು, ಹಗ್ಗಗಳು ಮತ್ತು ಆಮ್ಲಜನಕ ಸಿಲಿಂಡರ್‌ಗಳನ್ನು ಕಳುಹಿಸಿಕೊಡುತ್ತಾರೆ. ಇದು ಮುಂದೆ ಎವರೆಸ್ಟ್ ಏರುವ ಪರ್ವತಾರೋಹಿಗಳು ಮತ್ತು ಶೆರ್ಪಾಗಳನ್ನು ಉಳಿಸುವ ಮುನ್ನೆಚ್ಚರಿಕೆಯ ಕೆಲಸವಾಗಿದೆ.

ಎವರೆಸ್ಟ್ ಏರುವುದರಲ್ಲಿ ಶೆರ್ಪಾಗಳು ಪರಿಣತರು. ಏಳು ದಶಕಗಳಿಂದ ಎವರೆಸ್ಟ್ ಏರುವ ಪರ್ವತಾರೋಹಿಗಳಿಗೆ ಇವರು ಗೈಡ್‌ಗಳಾಗಿ ಸಹಾಯ ಮಾಡುತ್ತಾ ಬಂದಿದ್ದಾರೆ. ಈ ಪ್ರಕ್ರಿಯೆಯಲ್ಲಿ ನೂರಾರು ಪರ್ವತಾರೋಹಿಗಳು ಮತ್ತು ಶೆರ್ಪಾಗಳು ಪ್ರಾಣ ಕಳೆದುಕೊಂಡಿದ್ದಾರೆ. ಸ್ಥಳೀಯ ಡ್ರೋನ್ ಮ್ಯಾಪಿಂಗ್‌ನೊಂದಿಗೆ ಏರ್‌ಲಿಫ್ಟ್ ತಂತ್ರಜ್ಞಾನದ ಜೊತೆಗೆ ಶೆರ್ಪಾಗಳ ದಶಕಗಳ ಪರಿಣತಿಯನ್ನು ಬಳಸಿಕೊಂಡರೆ ವಿಶ್ವದ ಛಾವಣಿಯ ಮೇಲೆ ಸುರಕ್ಷಿತವಾಗಿರಲು ಸಾಧ್ಯವಾಗುತ್ತದೆ ಎಂಬುದಾಗಿ ಪಾಂಡೆ ಆಲೋಚನೆ.

ಬೇಸ್‌ಕ್ಯಾಂಪ್ ಸಮುದ್ರ ಮಟ್ಟದಿಂದ 17,598 ಅಡಿಗಳ ಎತ್ತರದಲ್ಲಿದ್ದರೆ, ಒಂದನೇ ಕ್ಯಾಂಪ್ 19,900 ಅಡಿಗಳ ಎತ್ತರದಲ್ಲಿದೆ. ಇವುಗಳ ನಡುವಿನ ಅಂತರ 1.80 ಮೈಲಿಗಳು. ಇದರ ನಡುವೆ ಪ್ರಯಾಣ ಮಾಡಲು ಶೆರ್ಪಾಗಳು 7-8 ಗಂಟೆಗಳನ್ನು ತೆಗೆದುಕೊಂಡರೆ, ಡ್ರೋನ್ ಕೇವಲ ಏಳು ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಬೇಸ್‌ಕ್ಯಾಂಪ್‌ನಿಂದ ಎವರೆಸ್ಟ್ ಶಿಖರ 20.5 ಕಿಲೋಮೀಟರ್‌ಗಳ (29,031 ಅಡಿಗಳು) ದೂರದಲ್ಲಿದೆ.

ADVERTISEMENT

ಕಳೆದ ಹತ್ತು ವರ್ಷಗಳಿಂದ ಪರ್ವತಾರೋಹಿಗಳಿಗೆ ಮಾರ್ಗದರ್ಶನ ನೀಡುತ್ತಿರುವ ನೇಪಾಳದ ಮಿಂಗ್ಮಾ ಜಿ ಶೆರ್ಪಾ 2023ರಲ್ಲಿ ಹಿಮಪಾತದಲ್ಲಿ ತನ್ನ ಮೂವರು ಸ್ನೇಹಿತರು ಮತ್ತು ಮಾರ್ಗದರ್ಶಕರನ್ನು ಕಳೆದುಕೊಂಡಾಗ ಡ್ರೋನ್ ಬಳಕೆ ಬಗ್ಗೆ ಆಲೋಚಿಸಿದರು. ಮೊದಲು ಎವರೆಸ್ಟ್ ಮಾರ್ಗವನ್ನು ಕಂಡುಹಿಡಿಯಲು (ಹಿಮ ಬೀಳುತ್ತಲೇ ಇದ್ದು ದಾರಿ ಮುಚ್ಚಿಕೊಳ್ಳುತ್ತಲೇ ಇರುತ್ತದೆ) ಅವರು 20 ಬಾರಿ ಪರ್ವತವನ್ನು ಹತ್ತಿ ಇಳಿಯಬೇಕಾಯಿತು ಮತ್ತು ಉಪಕರಣಗಳನ್ನು ತರಲು ಹಿಂದಕ್ಕೆ ಬಂದು ಹೋಗಬೇಕಾಯಿತು. ಚೀನಾದವರು ಇದೇ ಕೆಲಸಕ್ಕೆ ಡ್ರೋನ್‌ಗಳನ್ನು ಬಳಸುತ್ತಾರೆ ಎಂದು ತಿಳಿದ ಮೇಲೆ ನೇಪಾಳದಲ್ಲಿಯೂ ಡ್ರೋನ್‌ಗಳನ್ನು ಯಾಕೆ ಬಳಸಿಕೊಳ್ಳಬಾರದು ಎಂಬುದಾಗಿ ಮಿಂಗ್ಮಾ ಯೋಚಿಸಿದರು. ನೇಪಾಳದಿಂದ ಎವರೆಸ್ಟ್‌ ಏರುವ ದಾರಿ ಇರುವಂತೆ ಚೀನಾದಿಂದಲೂ ದಾರಿಯಿದೆ.

ಶೆರ್ಪಾಗಳು ಪಾಂಡೆಗೆ ಮೊದಲಿಗೆ ತಾವು ಯಾವ ದಿಕ್ಕಿನಲ್ಲಿ ಹೋಗುತ್ತೇವೆ ಎಂದು ತಿಳಿಸುತ್ತಾರೆ. ಪಾಂಡೆ ಡ್ರೋನ್ ಹಾರಿಸಿ ಹಾದಿಯನ್ನು ಮುನ್ನಡೆಸುತ್ತಾರೆ. ನಂತರ ಶೆರ್ಪಾಗಳು ತಮ್ಮ ಕೆಲಸವನ್ನು ಮಾಡುತ್ತಾರೆ. ಅನಿಶ್ಚಿತ ಹಿಮ ಬಂಡೆಗಳಿಗೆ ಅಥವಾ ನ್ಯಾವಿಗೇಟ್ ಮಾಡಲು ಕಷ್ಟಕರವಾದ ಹಿಮ ನದಿಯ ಭಾಗಗಳಿಗೆ ಏರುತ್ತಾರೆ. ಅವರು ಏಣಿಗಳು ಮತ್ತು ಹಗ್ಗಗಳು ಎಲ್ಲಿಗೆ ಬೇಕೆಂದು ವಾಕಿಟಾಕಿ ಮೂಲಕ ತಿಳಿಸುತ್ತಾರೆ. ನಂತರ ಉಪಕರಣಗಳನ್ನು ಡ್ರೋನ್‌ಗಳ ಮೂಲಕ ಹಾರಿಸಲಾಗುತ್ತದೆ. ಇದು ಮುಂದಿನ ಪ್ರತಿವರ್ಷವೂ ಮೇ-ಜೂನ್‌ನಲ್ಲಿ ಎವರೆಸ್ಟ್ ಏರುವ ವಿದೇಶಿ ಪರ್ವತಾರೋಹಿಗಳಿಗೆ ತಯಾರಿ ನಡೆಸುವ ಕೆಲಸವಾಗಿರುತ್ತದೆ. ಇದರ ಜೊತೆಗೆ ಆಮ್ಲಜನಕ ಸಿಲಿಂಡರ್‌ಗಳು ಮತ್ತು ಔಷಧಿಗಳಂತಹ ಜೀವ ಉಳಿಸುವ ಸಾಧನಗಳೂ ಸೇರಿರುತ್ತವೆ. ನೇಪಾಳ ಪ್ರಸ್ತುತ ಕೇವಲ ಎರಡು ಡಿ.ಜೆ.ಐ. ಡ್ರೋನ್‌ಗಳನ್ನು ಹೊಂದಿದ್ದು, ಅವುಗಳಲ್ಲಿ ಒಂದು ಮಾತ್ರ ಕಾರ್ಯನಿರ್ವಹಿಸುತ್ತದೆ. ಎರಡನೆಯದು ಬ್ಯಾಕಪ್‌ಗಾಗಿ ಉಳಿಸಿಕೊಳ್ಳಲಾಗುತ್ತದೆ. ಕೆಲವೊಮ್ಮೆ ಎರಡನ್ನೂ ಬಳಸಿಕೊಳ್ಳಲಾಗುತ್ತದೆ. ಸವಾಲೆಂದರೆ ಒಂದು ಡ್ರೋನ್ ಬೆಲೆ ಸುಮಾರು ₹62 ಲಕ್ಷ . ಉಪಕರಣಗಳನ್ನು ಒದಗಿಸುವುದರ ಜೊತೆಗೆ ರಕ್ಷಣೆಯೂ ಪ್ರಮುಖವಾಗುತ್ತದೆ.

ಬೇಸ್‌ಕ್ಯಾಂಪ್‌ನಲ್ಲಿ ಎಲ್ಲವೂ ದುಬಾರಿ ಎಂಬುದಾಗಿ ಬಿಕ್ರಂ ಹೇಳುತ್ತಾರೆ. ವಿದ್ಯುತ್ ಇಲ್ಲದ ಕಾರಣ ಬ್ಯಾಟರಿಗಳನ್ನು ಚಾರ್ಜ್ ಮಾಡಲು ಬಹಳಷ್ಟು ಇಂಧನ ಬೇಕಾಗುತ್ತದೆ. ಮೊದಲಿಗೆ ಶಿಬಿರಕ್ಕೆ ಹೋಗಲು ಸಾಕಷ್ಟು ಮಾನವಶಕ್ತಿ, ಗುಡಾರಗಳು, ಆಹಾರ ಇನ್ನೂ ಸಾಕಷ್ಟು ಸಲಕರಣೆಗಳು ಬೇಕಾಗುತ್ತವೆ.

ಬಿಕ್ರಂ ಡ್ರೋನ್‌ಗಳ ಬಗ್ಗೆ ಅತೀವ ಪ್ರೀತಿ ಹೊಂದಿದ್ದು, 2015 ರಲ್ಲಿಯೇ ಡಿ.ಐ.ವೈ. ಡ್ರೋನ್‌ ಅನ್ನು ತಯಾರಿಸಿ ಅದೇ ವರ್ಷ ನೇಪಾಳದಲ್ಲಿ ಸಂಭವಿಸಿದ ಭೂಕಂಪದ ಸಂದರ್ಭದಲ್ಲಿ ನೆರವು ನೀಡುವಲ್ಲಿ ಮುಖ್ಯ ಪಾತ್ರವಹಿಸಿದ್ದರು. ಇತ್ತೀಚೆಗೆ ಶೆರ್ಪಾಗಳು ಈ ಅಪಾಯಕಾರಿ ಕೆಲಸ ಬಿಟ್ಟು ವಿದೇಶಗಳಿಗೆ ತೆರಳುತ್ತಿದ್ದಾರೆ. ಶೆರ್ಪಾಗಳ ಪರಿಣತಿ ಸಹಾಯವಿಲ್ಲದೆ ಎವರೆಸ್ಟ್ ಏರಲು ಸಾಧ್ಯವಿಲ್ಲ. ಅನೇಕ ಶೆರ್ಪಾಗಳ ಆದಾಯ ಎವರೆಸ್ಟ್ ಏರುವುದರಿಂದಲೇ ಬರುತ್ತದೆ. ಅದು ಕೂಡ ಕೇವಲ ಒಂದೆರಡು ತಿಂಗಳು ಮಾತ್ರ. ಕ್ಯಾಂಪ್‌ಗಳ ಮಧ್ಯದ ದಾರಿಗಳನ್ನು ಬೇಗನೆ ಸರಿಪಡಿಸದಿದ್ದರೆ ಚಾರಣ ಸುಗಮವಾಗಿ ನಡೆಯುವುದಿಲ್ಲ. ಡ್ರೋನ್‌ಗಳು ಉಪಕರಣಗಳನ್ನು ಮೇಲಕ್ಕೆ ತರುವುದರಿಂದ ಏಣಿಗಳನ್ನು ತರಲು ಹಿಂದಕ್ಕೆ ಹೋಗಬೇಕಾಗಿಲ್ಲ. ಈಗ ಎವರೆಸ್ಟ್ ಏರುವವರಿಗೆ ಡ್ರೋನ್‌ಗಳು ಹೆಚ್ಚಿನ ಸಹಾಯ ಮಾಡುತ್ತಿವೆ.

ತ್ಯಾಜ್ಯ ತರಲು ಪ್ರಯೋಗ

2024ರಲ್ಲಿ ಚೀನಾ ನೇಪಾಳಕ್ಕೆ ಉಡುಗೊರೆ ನೀಡಿದ ಎರಡು ಡ್ರೋನ್‌ಗಳ ಸಹಾಯದಿಂದ ಎವರೆಸ್ಟ್‌ನ ಐದು ಕ್ಯಾಂಪ್‌ಗಳ ಸುತ್ತಮುತ್ತಲೂ ಮತ್ತು ದಾರಿಯಲ್ಲಿ ಬಿದ್ದಿರುವ ತ್ಯಾಜ್ಯವನ್ನು ಏರ್‌ಲಿಫ್ಟ್ ಮೂಲಕ ಕೆಳಕ್ಕೆ ತರಲು ಪ್ರಯೋಗವನ್ನು ಪ್ರಾರಂಭಿಸಲಾಯಿತು. ಬೇಸ್‌ಕ್ಯಾಂಪ್‌ನಿಂದ ಮುಂದಕ್ಕೆ, ಎತ್ತರ ಮತ್ತು ಹೆಪ್ಪುಗಟ್ಟುವ ವಾತಾವರಣದಲ್ಲಿ ಡ್ರೋನ್‌ಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂದು ಮೊದಲಿಗೆ ಖಚಿತಪಡಿಸಿಕೊಳ್ಳಬೇಕಾಗಿತ್ತು. ಇದರಿಂದ ವೈಮಾನಿಕ ಎಂಜಿನಿಯರ್ ಬಿಕ್ರಂ, ಡ್ರೋನ್‌ಗಳ ಚಟುವಟಿಕೆಗಳನ್ನು ಪ್ರಾರಂಭಿಸಿದರು. ಹಿಮ ಬೀಳುವಾಗಿನ ಗೋಚರತೆ ಮತ್ತು ಗಾಳಿಯ ವೇಗವು ಮುಖ್ಯ ಸವಾಲುಗಳು. ನೇಪಾಳ ಮೊದಲ ಏರ್‌ಲಿಫ್ಟ್ ಕ್ಲೀನ್-ಅಪ್ ಡ್ರೈವ್ ಡ್ರೋನ್‌ ಅನ್ನು ಬಳಸಿಕೊಂಡು ಬೇಸ್‌ಕ್ಯಾಂಪ್‌ಗೆ 498 ಕೆ.ಜಿ. ಕಸವನ್ನು ತರಲಾಯಿತು. ಇದಕ್ಕೆ 40 ಹಾರಾಟಗಳನ್ನು ನಡೆಸಲಾಯಿತು. ಡ್ರೋನ್ ಸುಮಾರು 30 ಕೆ.ಜಿ. ತೂಕವನ್ನು ಹೊತ್ತೊಯ್ಯಬಲ್ಲದು. ಆದರೆ ಸುರಕ್ಷತೆಯಿಂದ 20 ಕೆ.ಜಿ. ಮಾತ್ರ ತರಲಾಗುತ್ತಿತ್ತು.

ಸಾಂದರ್ಭಿಕ ಚಿತ್ರ 

ತ್ಯಾಜ್ಯ ತರಲು ಪ್ರಯೋಗ

2024ರಲ್ಲಿ ಚೀನಾ ನೇಪಾಳಕ್ಕೆ ಉಡುಗೊರೆ ನೀಡಿದ ಎರಡು ಡ್ರೋನ್‌ಗಳ ಸಹಾಯದಿಂದ ಎವರೆಸ್ಟ್‌ನ ಐದು ಕ್ಯಾಂಪ್‌ಗಳ ಸುತ್ತಮುತ್ತಲೂ ಮತ್ತು ದಾರಿಯಲ್ಲಿ ಬಿದ್ದಿರುವ ತ್ಯಾಜ್ಯವನ್ನು ಏರ್‌ಲಿಫ್ಟ್ ಮೂಲಕ ಕೆಳಕ್ಕೆ ತರಲು ಪ್ರಯೋಗವನ್ನು ಪ್ರಾರಂಭಿಸಲಾಯಿತು. ಬೇಸ್‌ಕ್ಯಾಂಪ್‌ನಿಂದ ಮುಂದಕ್ಕೆ ಎತ್ತರ ಮತ್ತು ಹೆಪ್ಪುಗಟ್ಟುವ ವಾತಾವರಣದಲ್ಲಿ ಡ್ರೋನ್‌ಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂದು ಮೊದಲಿಗೆ ಖಚಿತಪಡಿಸಿಕೊಳ್ಳಬೇಕಾಗಿತ್ತು. ಇದರಿಂದ ವೈಮಾನಿಕ ಎಂಜಿನಿಯರ್ ಬಿಕ್ರಂ ಡ್ರೋನ್‌ಗಳ ಚಟುವಟಿಕೆಗಳನ್ನು ಪ್ರಾರಂಭಿಸಿದರು. ಹಿಮ ಬೀಳುವಾಗಿನ ಗೋಚರತೆ ಮತ್ತು ಗಾಳಿಯ ವೇಗವು ಮುಖ್ಯ ಸವಾಲುಗಳು. ನೇಪಾಳ ಮೊದಲ ಏರ್‌ಲಿಫ್ಟ್ ಕ್ಲೀನ್-ಅಪ್ ಡ್ರೈವ್ ಡ್ರೋನ್‌ ಅನ್ನು ಬಳಸಿಕೊಂಡು ಬೇಸ್‌ಕ್ಯಾಂಪ್‌ಗೆ 498 ಕೆ.ಜಿ. ಕಸವನ್ನು ತರಲಾಯಿತು. ಇದಕ್ಕೆ 40 ಹಾರಾಟಗಳನ್ನು ನಡೆಸಲಾಯಿತು. ಡ್ರೋನ್ ಸುಮಾರು 30 ಕೆ.ಜಿ. ತೂಕವನ್ನು ಹೊತ್ತೊಯ್ಯಬಲ್ಲದು. ಆದರೆ ಸುರಕ್ಷತೆಯಿಂದ 20 ಕೆ.ಜಿ. ಮಾತ್ರ ತರಲಾಗುತ್ತಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.