ಮಾವಿನಕೂರ್ವೆ ಬೀಗ
ಅದೊಂದು ಕಾಲದಲ್ಲಿ ‘ಮಾವಿನಕೂರ್ವೆ ಬೀಗ ಮನೆಗೆ, ಕರಡದ ಹೊದಿಕೆ ಕೊನೆಗೆ’ ಎಂಬ ಮಾತಿತ್ತು. ಉತ್ತರ ಕನ್ನಡ ಜಿಲ್ಲೆಯಲ್ಲಿ ಮನೆಮಾತಾಗಿದ್ದ ಮಾವಿನಕೂರ್ವೆ ಬೀಗದ ಬಗ್ಗೆ ಜನರಿಗೆ ಆಪಾರ ನಂಬಿಕೆ ಇತ್ತು. ಅಡಿಕೆಯ ಕೊನೆಗೆ ಕರಡದಿಂದ ಹೊದಿಕೆ ಮಾಡಿದರೆ ಹೇಗೆ ಅಡಿಕೆಗೆ ಕೊಳೆ ರೋಗ ಬರುವದಿಲ್ಲವೋ ಹಾಗೆ ಮನೆಗೆ ಮಾವಿನಕೂರ್ವೆ ಬೀಗ ಹಾಕಿದರೆ ಬೀಗ ಮುರಿಯಲಾಗದು ಎಂಬ ಗಟ್ಟಿ ನಂಬಿಕೆ. ಅದು ನಿಜವೂ ಆಗಿತ್ತು. ಉತ್ತರ ಕನ್ನಡ ಜಿಲ್ಲೆಯ ಬಹುತೇಕ ಅಂಗಡಿ ಮುಂಗಟ್ಟುಗಳಿಗೆ ಮಾವಿನಕೂರ್ವೆ ಬೀಗಗಳೆ ರಕ್ಷಕರಾಗಿ ಕಾದ ಕಾಲವದು. ಹೆಚ್ಚು ಮಾತಾಡುವವರಿಗೆ ‘ಅವನ ಬಾಯಿಗೆ ಮಾವಿನಕೂರ್ವೆ ಬೀಗ ಜಡೀರಿ’ ಎನ್ನುವ ಮಾತು ಈ ಭಾಗದಲ್ಲಿ ಇನ್ನು ಚಾಲ್ತಿಯಲ್ಲಿದೆ.
ಶತಮಾನಗಳ ಇತಿಹಾಸ ಹೊಂದಿದ ಮಾವಿನಕೂರ್ವೆ ಬೀಗ ತಯಾರಾಗುತ್ತಿದ್ದದ್ದು ಹೊನ್ನಾವರದ ಶರಾವತಿ ನಡುಗಡ್ಡೆಯಲ್ಲಿ ಒಂದಾದ ಮಾವಿನಕೂರ್ವೆಯಲ್ಲಿ. ಹೀಗಾಗಿ ಆ ಬೀಗಕ್ಕೆ ಮಾವಿನಕೂರ್ವೆ ಎನ್ನುವ ಹೆಸರು ಬಂದಿದೆ. ವಿವಿಧ ರೀತಿಯಲ್ಲಿ ತಯಾರಿಸುವ ಶುದ್ಧ ಕಬ್ಬಿಣದ, ಒಂದೇ ವಿನ್ಯಾಸದ ಹಲವು ಆಕಾರದ ಮಾವಿನಕೂರ್ವೆ ಬೀಗಗಳಲ್ಲಿ ಎರಡು ಚಾವಿ ಬೀಗ, ಮೂರು ಚಾವಿ ಬೀಗ ಅತ್ಯಂತ ಜನಪ್ರಿಯವಾಗಿತ್ತು. ನಕಲಿ ಚಾವಿ ಮಾಡಲಾಗದ ಗ್ರಾಮೀಣ ತಂತ್ರಗಾರಿಕೆಯಿಂದ ಕೈ ಕಸುಬಿನಿಂದ ತಯಾರಾಗುತ್ತಿದ್ದ ಮಾವಿನಕೂರ್ವೆ ಬೀಗವೀಗ ಅವಸಾನದ ಅಂಚಿನಲಿದೆ.
ಮಾವಿನಕೂರ್ವೆ ಬೀಗ ತಯಾರಿಕೆಯಲ್ಲಿಯೇ ಜೀವನ ಸವೆಸಿದ ಹೊನ್ನಾವರ ತಾಲ್ಲೂಕಿನ ಮುಗ್ವಾ ಗ್ರಾಮದ ಚೀನಕೋಡಿನ ದಿವಂಗತ ಶಂಕರ ಆಚಾರಿಯವರ ಮಗ ಅರುಣ ಇನ್ನು ಮಾವಿನಕೂರ್ವೆ ಬೀಗ ತಯಾರಿಕೆಯ ಕಸುಬನ್ನು ಬಿಟ್ಟಿಲ್ಲ. ಅವರ ಸೋದರ ಸಂಬಂಧಿ ಮಂಜುನಾಥ ದೇವಪ್ಪಾ ಆಚಾರಿ ಕೂಡ ಈ ಬೀಗ ತಯಾರಿಸುವಲ್ಲಿ ಪರಿಣತರು.
‘ಒಂದು ದೊಡ್ಡ ಮಾವಿನಕೂರ್ವೆ ಬೀಗ ತಯಾರಿಸಬೇಕಾದರೆ ಕನಿಷ್ಠ ಎರಡು ದಿನ ಹಿಡಿಯುತ್ತದೆ. ಅದಕ್ಕೆ ಬೇಕಾಗುವ ಕಚ್ಚಾವಸ್ತು ಬೇಕೆಂದರೆ ಹೊನ್ನಾವರಕ್ಕೆ ಹೋಗಬೇಕು. ಅದಕ್ಕೆ ಗರಿಷ್ಠ ಎಂದರೆ ಒಂಬೈನೂರು ರೂಪಾಯಿಯವರೆಗೆ ಬೆಲೆ ಬರುತ್ತದೆ. ಅದಕ್ಕೆ ಕೆಲವೊಮ್ಮೆ ಗ್ರಾಹಕ ಕಾಯಬೇಕಾಗುತ್ತದೆ. ಕಂಪನಿಗಳ ಬೇರೆ ಬೇರೆ ಬೀಗದ ಭರಾಟೆಯಲ್ಲಿ ಮಾವಿನಕೂರ್ವೆ ಬೀಗಕ್ಕೆ ಬೇಡಿಕೆ ಕಡಿಮೆ ಆಗಿದೆ. ಆದರೂ ಈಗಲೂ ಬೆಂಗಳೂರು, ಮುಂಬೈಗಳಿಂದ ಆರ್ಡರ್ ಬರುತ್ತದೆ. ಇದನ್ನೆ ನಂಬಿಕೊಂಡು ಜೀವನ ಮಾಡುವ ಕಾಲ ಮುಗಿದಿದೆ’ ಎನ್ನುವುದು ಅರುಣ ಆಚಾರಿಯವರ ಅಂಬೋಣ.
ಹಲವು ಶತಮಾನಗಳ ಇತಿಹಾಸ ಹೊಂದಿರುವ ಮಾವಿನಕೂರ್ವೆ ಬೀಗ ತಂತ್ರಜ್ಞಾನ ಇಷ್ಟು ಮುಂದುವರಿದರೂ ಮಾನವನ ಶಕ್ತಿ ಮತ್ತು ಚಾಣಾಕ್ಷತೆಯ ಬಲದಿಂದಲೇ ಇಂದಿಗೂ ತಯಾರಾಗುತ್ತಲೇ ಇದೆ.
‘ಗ್ರಾಮೀಣ ತಂತ್ರಜ್ಞಾನಕ್ಕೆ ಒಂದು ಸವಾಲಾಗಿರುವ ಮಾವಿನಕೂರ್ವೆ ಬೀಗದ ಉಳಿವಿಗೆ ಸರ್ಕಾರ ಚಿಂತನೆ ನಡೆಸಬೇಕಾಗಿದೆ’ ಎನ್ನುತ್ತಾರೆ ಸಾಹಿತಿ ಶ್ರೀಪಾದ ಶೆಟ್ಟಿ.
ಬೀಗ
ಬೀಗ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.