ADVERTISEMENT

ಕರ್ನಾಟಕ ಗಾಂಧಿ ಸ್ಮಾರಕ ನಿಧಿಗೆ ಅಮೃತ ಸಂಭ್ರಮ

ಎನ್.ಆರ್.ವಿಶುಕುಮಾರ್
Published 1 ಫೆಬ್ರುವರಿ 2025, 23:55 IST
Last Updated 1 ಫೆಬ್ರುವರಿ 2025, 23:55 IST
<div class="paragraphs"><p>ಗಾಂಧಿ ಭವನದ ಆವರಣದಲ್ಲಿ ಸತ್ಯಾಗ್ರಹದ ನೆನಪು</p></div>

ಗಾಂಧಿ ಭವನದ ಆವರಣದಲ್ಲಿ ಸತ್ಯಾಗ್ರಹದ ನೆನಪು

   

ಜನವರಿ 30,1948. ಭಾರತದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹತ್ಯೆಯಾದ ಕರಾಳ ದಿನ. ಹತ್ಯೆಯ ನಂತರ ಅವರ ವಿಚಾರಗಳನ್ನು ಮುಂದಿನ ಪೀಳಿಗೆಗೆ ತಲುಪಿಸಲು ರಾಷ್ಟ್ರಮಟ್ಟದಲ್ಲಿ ಅಂದಿನ ರಾಷ್ಟ್ರಪತಿ ಬಾಬು ರಾಜೇಂದ್ರ ಪ್ರಸಾದ್ ಅವರ ನೇತೃತ್ವದಲ್ಲಿ ಪ್ರಧಾನಿ ಜವಾಹರಲಾಲ್ ನೆಹರು ಆದಿಯಾಗಿ ದೇಶದ 21 ಗಣ್ಯರ ನೇತೃತ್ವದಲ್ಲಿ ‘ಗಾಂಧಿ ಸ್ಮಾರಕ ನಿಧಿ’ಯನ್ನು ಸ್ಥಾಪಿಸಲಾಯಿತು. ಈ ನಿಧಿಗೆ ದೇಶಾದ್ಯಂತ ಜನಸಾಮಾನ್ಯರು ₹10,95,29,106 ಗಳ ಕೊಡುಗೆ ನೀಡಿದರು. ಈ ನಿಧಿಗೆ ರಾಜ್ಯದಿಂದ ₹36,42,430 ಗಳನ್ನು ಸಂಗ್ರಹಿಸಿ ನೀಡಲಾಯಿತು.

ಈ ನಿಧಿಯ ಸಹಾಯದಿಂದ ದೇಶದಾದ್ಯಂತ ಆಯಾ ರಾಜ್ಯ, ಪ್ರಾಂತ್ಯಗಳ ಹೆಸರಿನಲ್ಲಿ ‘ಗಾಂಧಿ ಸ್ಮಾರಕ ನಿಧಿ’ಗಳನ್ನು ಸ್ಥಾಪಿಸಲಾಗಿದೆ. ಹೀಗೆ 1948 ರ ಆಸುಪಾಸಿನಲ್ಲಿ ಅಂದಿನ ಮೈಸೂರು ಪ್ರಾಂತ್ಯದಲ್ಲಿ ‘ಗಾಂಧಿ ಸ್ಮಾರಕ ನಿಧಿ’ ಆರಂಭವಾಯಿತು. 1948 ರಿಂದ 1956 ರವರೆಗೆ ಅಂದಿನ ಮೈಸೂರು ಪ್ರಾಂತ್ಯದಲ್ಲಿ ಎರಡು ಗಾಂಧಿ ಸ್ಮಾರಕ ನಿಧಿ ಘಟಕಗಳು ಕಾರ್ಯನಿರ್ವಹಿಸುತ್ತಿದ್ದವು. ಬೆಂಗಳೂರು ನಗರ ಕೇಂದ್ರಿತವಾಗಿ ಹಳೇ ಮೈಸೂರು ಪ್ರಾಂತ್ಯದಲ್ಲಿ ಒಂದು, ಹುಬ್ಬಳ್ಳಿ ನಗರ ಕೇಂದ್ರಿತವಾಗಿ ಉತ್ತರ ಕರ್ನಾಟಕ ಪ್ರಾಂತ್ಯದಲ್ಲಿ ಮತ್ತೊಂದು–ಹೀಗೆ ಎರಡು ಗಾಂಧಿ ಸ್ಮಾರಕ ನಿಧಿ ಘಟಕಗಳು ಇದ್ದವು.

ADVERTISEMENT

1957 ರಲ್ಲಿ ವಿಶಾಲ ಮೈಸೂರು ರಾಜ್ಯ ರಚನೆಯಾದಾಗ ಬೆಂಗಳೂರು ಮತ್ತು ಹುಬ್ಬಳ್ಳಿಯಲ್ಲಿದ್ದ ಗಾಂಧಿ ಸ್ಮಾರಕ ನಿಧಿಗಳು ಒಗ್ಗೂಡಿ ಮೈಸೂರು ರಾಜ್ಯ ಮಂಡಳಿ ರಚನೆಯಾಯಿತು. ಅಂದಿನ ಬಾಂಬೆ ವಿಧಾನಸಭೆಯ ಮಾಜಿ ಸ್ಪೀಕರ್, ಧಾರವಾಡ ಭಾಗದ ಸ್ವಾತಂತ್ರ‍್ಯ ಹೋರಾಟಗಾರರಾಗಿದ್ದ ಆರ್.ಎಸ್.ಹುಕ್ಕೇರಿಕರ್ ಅವರನ್ನು ಮೈಸೂರು ರಾಜ್ಯ ಮಂಡಳಿಯ ಅಧ್ಯಕ್ಷರನ್ನಾಗಿ ಕೇಂದ್ರ ಗಾಂಧಿ ಸ್ಮಾರಕ ನಿಧಿ ನೇಮಕ ಮಾಡಿತು. 1963 ರಲ್ಲಿ ಟೇಕೂರು ಸುಬ್ರಮಣ್ಯ, 1975 ರಲ್ಲಿ ಕಡಿದಾಳ್ ಮಂಜಪ್ಪ, 1985 ರಲ್ಲಿ ಹೋ. ಶ್ರೀನಿವಾಸಯ್ಯ, 2017 ರಿಂದ ವೂಡೇ ಪಿ. ಕೃಷ್ಣ ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷರಾಗಿದ್ದಾರೆ.

ಮಹಾತ್ಮ ಗಾಂಧೀಜಿ ಆಶಯ ಮತ್ತು ವಿಚಾರವನ್ನು ಜನರಿಗೆ ತಲುಪಿಸುವ ಕಾರ್ಯದಲ್ಲಿ ನಿಧಿಯ ಹಿಂದಿನ ಎಲ್ಲಾ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಸಮರ್ಥವಾಗಿ ಕೆಲಸ ಮಾಡಿದ್ದಾರೆ. ಅವರ ಪರಿಶ್ರಮದಿಂದಾಗಿ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ದೇಶದಲ್ಲೇ ಮಾದರಿಯಾಗಿದೆ. ಇತ್ತೀಚಿನ ವರ್ಷಗಳಲ್ಲಿ ಕರ್ನಾ ಟಕ ಗಾಂಧಿ ಸ್ಮಾರಕ ನಿಧಿಯು ರಾಷ್ಟ್ರೀಯ ಸೇವಾ ಯೋಜನೆಯ ಜೊತೆಗೂಡಿ ಗಾಂಧೀಜಿ ವಿಚಾರಧಾರೆಯನ್ನು ಕಾಲೇಜು ವಿದ್ಯಾರ್ಥಿಗಳಿಗೆ ತಲುಪಿಸುವ ಮಹತ್ವದ ಹೆಜ್ಜೆಯನ್ನು ಇಟ್ಟಿದೆ. ಪ್ರತೀ ವರ್ಷ ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಏಳು ದಿನ ಎಂಟು ಎನ್‌ಎಸ್‌ಎಸ್ ಶಿಬಿರಗಳನ್ನು ಮತ್ತು ವಿಶ್ವವಿದ್ಯಾಲಯ ಮಟ್ಟದಲ್ಲಿ ಒಂದು ದಿನದ 30 ಶಿಬಿರಗಳನ್ನು ಸಂಘಟಿಸುತ್ತಿದೆ. ಜೊತೆಗೆ ಎನ್‌ಎಸ್‌ಎಸ್ ಅಧಿಕಾರಿಗಳಿಗಾಗಿ ಹಲವಾರು ತರಬೇತಿ ಕಾರ್ಯಗಾರಗಳನ್ನು ಆಯೋಜಿಸುತ್ತಿದೆ. ಈ ಶಿಬಿರಗಳಲ್ಲಿ ವಿದ್ಯಾರ್ಥಿಗಳು ಗಾಂಧಿ ವಿಚಾರಗಳ ಬಗ್ಗೆ ಆಸಕ್ತಿ ತಳೆದು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗುತ್ತಿದ್ದಾರೆ. ಇದು ಗಾಂಧಿ ಭವನದ ಯಶಸ್ಸಿನ ಹಾದಿಯ ಪಯಣ.

ಡಿಜಿಟಲ್‌ಗೆ ತೆರೆದುಕೊಂಡ ನಿಧಿ

ಇಂದಿನ ಡಿಜಿಟಲ್ ಯುಗದಲ್ಲಿ ಗಾಂಧಿ ವಿಚಾರ ಸಾಹಿತ್ಯವನ್ನು ಡಿಜಿಟಲ್ ವೇದಿಕೆಗಳ ಮೂಲಕ ಜನ ಸಮುದಾಯಕ್ಕೆ ತಲುಪಿಸಲು ಸ್ಮಾರಕ ನಿಧಿ ಕಾರ್ಯನಿರತವಾಗಿದ್ದು ಮಹತ್ತರ ಸಾಧನೆ ಮಾಡಿದೆ. ಗಾಂಧೀಜಿಗೆ ಸಂಬಂಧಿಸಿದಂತೆ ಮುಕ್ತ ಸಾರ್ವಜನಿಕ ವೇದಿಕೆಯಲ್ಲಿ ಲಭ್ಯವಿರುವ ಗಾಂಧಿ ವಿಚಾರ ಸಾಹಿತ್ಯದ ಸುಮಾರು 1,500ಕ್ಕೂ ಹೆಚ್ಚು ಪ್ರಮುಖ ಕೃತಿಗಳನ್ನು ಹಾಗೂ ಧ್ವನಿ ಮತ್ತು ದೃಶ್ಯ ಸಂಗ್ರಹಗಳನ್ನು ‘ಗಾಂಧಿ ಭವನ ಡಿಜಿಟಲ್ ಆರ್ಕೈವ್‌’ ಹೆಸರಿನಲ್ಲಿ ಸಂಗ್ರಹಿಸಿ ಸರ್ವೆಂಟ್ಸ್‌ ಆಫ್ ನಾಲೆಡ್ಜ್ ಸಹಯೋಗದೊಡನೆ ಇಂಟರ್‌ನೆಟ್ ಆರ್ಕೈವ್‌ ಜಾಲತಾಣದಲ್ಲಿ ಇಡಲಾಗಿದೆ. ಈ ಡಿಜಿಟಲ್ ಸಂಗ್ರಹದ ಡ್ರೈವ್ ನ್ನು ದೇಶಾದ್ಯಂತ ಇರುವ ಗಾಂಧಿ ಸ್ಮಾರಕ ನಿಧಿಗಳಿಗೆ ಮತ್ತು ಸಬರಮತಿ ಗಾಂಧಿ ಆಶ್ರಮಕ್ಕೆ ಕೊಡುಗೆಯಾಗಿ ನೀಡಲಾಗಿದೆ. ಈ ಡ್ರೈವ್ ನ ಮೂಲಕ ಇಂಟರ್‌ನೆಟ್ ಸೌಲಭ್ಯವಿಲ್ಲದೇ ಆ ಸಂಸ್ಥೆಗಳು ಗಾಂಧಿ ವಿಚಾರ ಸಾಹಿತ್ಯವನ್ನು ಸುಲಭವಾಗಿ ಓದಿಕೊಳ್ಳಬಹುದಾಗಿದೆ ಮತ್ತು ಆಡಿಯೊ, ವಿಡಿಯೊಗಳನ್ನು ಕೇಳಲು, ನೋಡಲು ಸಾಧ್ಯ.

ಸ್ಮಾರಕ ನಿಧಿಯು ನವದೆಹಲಿಯಲ್ಲಿರುವ ತನ್ನ ಮಾತೃಸಂಸ್ಥೆ ಗಾಂಧಿ ಸ್ಮಾರಕ ನಿಧಿಗೆ 75 ವರ್ಷಗಳು ತುಂಬಿದ ಸಂದರ್ಭದಲ್ಲಿ ಎರಡು ದಿನಗಳ ಅಂತರ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಕಳೆದ ವರ್ಷ ಬೆಂಗಳೂರಿನಲ್ಲಿ ಸಂಘಟಿಸಿ ಮಾತೃಸಂಸ್ಥೆ ಹಾಗೂ ಇತರೆ ಗಾಂಧಿ ಸ್ಮಾರಕ ನಿಧಿಗಳ ಮೆಚ್ಚುಗೆ ಗಳಿಸಿದೆ.

ಈ ನಿಧಿಯ ಇಷ್ಟೆಲ್ಲ ಸಾಧನೆಗಳಿಗೆ ರಾಜ್ಯ ಸರ್ಕಾರ ಒತ್ತಾಸೆಯಾಗಿ ನಿಂತಿದೆ. ನಿಧಿಯ ಕಟ್ಟಡ ನಿರ್ಮಾಣಕ್ಕಾಗಿ ಬೆಂಗಳೂರಿನ ಕೇಂದ್ರ ಸ್ಥಳವಾದ ಕುಮಾರ ಪಾರ್ಕ್‌ನಲ್ಲಿ ವಿಶಾಲವಾದ ನಿವೇಶನವನ್ನು ಸರ್ಕಾರ 60 ರ ದಶಕದಲ್ಲಿಯೇ ನೀಡಿದೆ.

ಗಾಂಧಿ ಸ್ಮಾರಕ ನಿಧಿಯು ಸರ್ಕಾರಕ್ಕೆ ಸಲ್ಲಿಸಿದ ಹಲವಾರು ಯೋಜನೆಗಳು ಕಾರ್ಯರೂಪಕ್ಕೆ ಬಂದಿವೆ. ತಲಾ ₹ 3 ಕೋಟಿ ವೆಚ್ಚದಲ್ಲಿ ‘ಜಿಲ್ಲೆಗೊಂದು ಗಾಂಧಿ ಭವನ’ ನಿರ್ಮಿಸುವ ಯೋಜನೆಯಡಿಯಲ್ಲಿ 12 ಜಿಲ್ಲೆಗಳಲ್ಲಿ ಗಾಂಧಿ ಭವನ ನಿರ್ಮಾಣಗೊಂಡಿವೆ.

ನಿಧಿಯ 75 ನೇ ವರ್ಷಾಚರಣೆಯ ಸಂದರ್ಭ ಮತ್ತು ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವದ ಅಂಗವಾಗಿ ಸರ್ಕಾರವೇ ಆಚರಿಸುತ್ತಿರುವ ‘ಗಾಂಧಿ ಭಾರತ’ ಕಾರ್ಯಕ್ರಮದ ಅಡಿಯಲ್ಲಿ ‘ಜಿಲ್ಲೆಗೊಂದು ಗಾಂಧಿ ಭವನ’ ಯೋಜನೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಬೇಕು. ಇದು ಗಾಂಧೀಜಿ ಅವರನ್ನು ಬಹುಕಾಲ ಜೀವಂತವಾಗಿ ಇಟ್ಟುಕೊಳ್ಳಲು ನೆರವಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.