ADVERTISEMENT

ಒಂದು ಪಾದಯಾತ್ರೆ... ಹತ್ತಾರು ಜೀವನ ಪಾಠ

ಕೆ.ನರಸಿಂಹ ಮೂರ್ತಿ
Published 15 ಫೆಬ್ರುವರಿ 2025, 23:49 IST
Last Updated 15 ಫೆಬ್ರುವರಿ 2025, 23:49 IST
ಮಲೆ ಮಹದೇಶ್ವರ ಬೆಟ್ಟದಲ್ಲಿ ಪಾದಯಾತ್ರೆ
ಮಲೆ ಮಹದೇಶ್ವರ ಬೆಟ್ಟದಲ್ಲಿ ಪಾದಯಾತ್ರೆ   

‘ಪಾದಯಾತ್ರೆ ಎಂದರೆ ಸುಮ್ಮನೆ ನಡೆದುಕೊಂಡು ಹೋಗುವುದು ಎಂದುಕೊಂಡಿದ್ದೆವು. ಆದರೆ ದಾರಿಯುದ್ದಕ್ಕೂ ಅಷ್ಟೊಂದು ಜನರನ್ನು ಭೇಟಿ ಮಾಡುತ್ತೇವೆ, ಕುಳಿತು ಮಾತಾಡುತ್ತೇವೆ. ಹೊಸ ವಿಷಯಗಳನ್ನು ಕಲಿಯುತ್ತೇವೆ ಎಂದುಕೊಂಡಿರಲಿಲ್ಲ. ಹಸಿವು, ದಣಿವು, ಜನರ ಕಷ್ಟನಷ್ಟಗಳೇನು, ಪರಿಸರ ಎಂದರೆ, ಅಭಿವೃದ್ಧಿ ಎಂದರೆ ಏನು ಎಂಬುದು ಆಗ ಗೊತ್ತಾಯಿತು. ಬೈಕಿನಲ್ಲೋ, ಬಸ್ಸಿನಲ್ಲೋ, ರೈಲಿನಲ್ಲೋ ಹೋಗಿದ್ದರೆ ಸುಮ್ಮನೆ ಹೋಗಿಬಂದಂತಾಗುತ್ತಿತ್ತಷ್ಟೇ...’

ಮಂಡ್ಯ ಜಿಲ್ಲೆಯ ಮೇಲುಕೋಟೆಗೆ ಮೂರ್ನಾಲ್ಕು ಕಿ.ಮೀ. ದೂರದಲ್ಲಿ, ಜನಪದ ಸೇವಾ ಟ್ರಸ್ಟ್‌ನ ‘ಹೊಸ ಜೀವನ ದಾರಿ’–ತರಬೇತಿ ಕೇಂದ್ರದ ಆವರಣದಲ್ಲಿದ್ದ ಮರಗಳ ನೆರಳಿನಲ್ಲಿ ಕುಳಿತು ನೆನಪುಗಳೊಳಗೆ ಜಾರಿದ ಹೇಮಂತ, ಪುಷ್ಕರ, ರಜೀಕ್‌ ಸಾಬ್, ಲೋಕೇಶ, ಅಜಿತ್, ಪ್ರೀತಂ ಅವರ ಕಣ್ಗಳಲ್ಲಿ ಅಪೂರ್ವ ಎನ್ನಿಸುವ ಬೆಳಕಿತ್ತು. ಹೊಳಪಿತ್ತು.

ಮಾತಿಗೆ ಕುಳಿತುಕೊಳ್ಳುವ ಮುನ್ನ ಅವರು ಗಾಣದಿಂದ ಎಣ್ಣೆ ತೆಗೆಯುತ್ತಿದ್ದರು. ಖಾದಿ ಬಟ್ಟೆ ನೇಯುತ್ತಿದ್ದರು. ಬಟ್ಟೆಗಳಿಗೆ ಸಹಜ ಬಣ್ಣ ತುಂಬುತ್ತಿದ್ದರು. ಅದು ಅವರ ಕಲಿಕೆ–ಗಳಿಕೆಯ ಕಾಯಕ. ಅದೇ ಅವರ ಸದ್ಯದ ಜೀವನದ ದಾರಿ.

ADVERTISEMENT

‘ಹುತಾತ್ಮರ ದಿನ’ದ ಆಸುಪಾಸಿನಲ್ಲಿ ಪಾದಯಾತ್ರೆ ಶುರುವಾದಾಗ ಕೆಲವರಿಗಷ್ಟೇ ಅದೇನೆಂದು ಗೊತ್ತಿತ್ತು. ಕೆಲವರಿಗೆ ಅದು ಪೂರ್ಣ ಹೊಸತು. ಆ ಆರೂ ಮಂದಿ, ಸಾಂಪ್ರದಾಯಿಕ ಬೋಧನೆ–ಕಲಿಕೆಯನ್ನು ಒಲ್ಲೆ ಎಂದು ಶಾಲೆಯನ್ನೇ ಬಿಟ್ಟು ಬಂದ ಹದಿಹರೆಯದ ಹುಡುಗರು. ಶಾಲೆಯ ಒಟ್ಟಾರೆ ವ್ಯವಸ್ಥೆಯನ್ನೇ ಧಿಕ್ಕರಿಸಿ ದೂರ ನಿಂತವರು. ಅಶಿಸ್ತಿಗೇ ಅಂಟಿಕೊಂಡಿದ್ದವರು. ಅದೇ ಕಾರಣಕ್ಕೆ ಪೋಷಕರೊಂದಿಗೂ ಭಿನ್ನಾಭಿಪ್ರಾಯ ಎದುರಿಸಿದವರು. ದಿಕ್ಕಾಪಾಲಾಗಿದ್ದವರು. ಈಗ ಒಟ್ಟಾದವರು.

ಅವರೊಂದಿಗೆ ಇದ್ದು ದಾರಿ ತೋರಿದವರು, ಮಹಾತ್ಮ ಗಾಂಧೀಜಿಯ ಗ್ರಾಮ ಸ್ವರಾಜ್ಯದ ಕನಸನ್ನು ಅವರ ಮೂಲಕವೇ ಈ ಕಾಲಘಟ್ಟದಲ್ಲಿ ಮತ್ತೆ ಕಟ್ಟಬಹುದೇ ಎಂಬ ಹೊಸ ಕನಸಿನೊಂದಿಗೆ ಸಾಗುತ್ತಿರುವ ಪ್ರಯೋಗಶೀಲರು. ಈ ಹಿರಿಯರಿಗೆ ಇದು ಎರಡನೇ ಪಾದಯಾತ್ರೆ. ಮೊದಲನೆಯದ್ದು ಹಿಂದಿನ ವರ್ಷ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನಲ್ಲಿ ನಡೆದಿತ್ತು.

ಪುಸ್ತಕದ ಓದು ಬರಹಕ್ಕಿಂತಲೂ, ಪಾದಯಾತ್ರೆಯ ಮೂಲಕವೇ ಲೋಕವನ್ನು ಗ್ರಹಿಸುವ ಪಾಠಗಳನ್ನು ಹುಡುಗರಿಗೆ ಪರಿಚಯಿಸುವ ಪ್ರಯತ್ನ ಇದು. ದೇಹ–ಮನಸ್ಸು ಎರಡರ ಶ್ರಮವನ್ನು ಸಂಪೂರ್ಣವಾಗಿ ಬೇಡುವ ಯಾತ್ರೆ. ಬಿಸಿಲು–ನೆರಳೆನ್ನದೆ ನಡೆಯುತ್ತಲೇ ಊರು–ಕೇರಿ, ಜನರ ಕಷ್ಟಸುಖದೊಂದಿಗೆ ಬೆಸೆದುಕೊಳ್ಳುವ ಪರಿ. ತಮ್ಮ ಬದುಕಿಗೂ ಕನ್ನಡಿ ಹಿಡಿದುಕೊಳ್ಳುವ ಅಪೂರ್ವ ಅವಕಾಶ. ದೇವರು, ದಿಂಡಿರ ಮೇಲಿನ ಭಕ್ತಿಗೆ, ವಾರಾಂತ್ಯದ ಮನೋಲ್ಲಾಸಕ್ಕೆ, ದೇಹಸೌಖ್ಯಕ್ಕೆ ಬೆಟ್ಟಗುಡ್ಡಗಳಲ್ಲಿ ನಡೆಯುವುದು ಬೇರೆ. ಅದನ್ನು ಚಾರಣ, ಧಾರ್ಮಿಕ ಪಾದಯಾತ್ರೆ ಇತ್ಯಾದಿ ಎನ್ನೋಣ. ಜನಸೇವೆಯ ತೋರ್ಪಡಿಕೆಯ ರಾಜಕೀಯ ಪಾದಯಾತ್ರೆಗಳನ್ನೂ ಮರೆಯದಿರೋಣ. ಆದರೆ, ಈ ಹುಡುಗರದ್ದು ಜನರನ್ನು, ಜಗತ್ತನ್ನು ಸಣ್ಣ ವಯಸ್ಸಿಗೇ ಅರಿಯುವ ಯತ್ನ. ಆ ಮೂಲಕ ತಮ್ಮನ್ನೂ ಅರಿತುಕೊಳ್ಳುವ ಯತ್ನ.

ಒಂದು ಪಾದಯಾತ್ರೆಯಲ್ಲಿ ಹಲವು ನೋಟ, ಸಾಂಗತ್ಯ, ಹತ್ತಾರು ಕಥೆ, ಅಪರಿಮಿತ ಜೀವನದ್ರವ್ಯ. ಮೊಗೆದಷ್ಟೂ ಬೊಗಸೆ ತುಂಬುವ ಅಚ್ಚರಿದಾಯಕ ಪಾಠಗಳು. ನಡೆವ ನೆಲದೊಂದಿಗೆ ಒಂದಾದರಷ್ಟೇ ಸಿಗುವಂಥವು. ದಣಿವು, ವಿಶ್ರಾಂತಿಗಳ ಅರ್ಥಪೂರ್ಣ ಸಂಯೋಗ. ಜೀವನದ ಅರ್ಥದ ಹುಡುಕಾಟಕ್ಕೂ ದಾರಿ. ಇದು ಅವರು ಕೇಂದ್ರದಲ್ಲಿ ಕಲಿಯುತ್ತಿರುವ ಪಾಠಗಳಲ್ಲಿ ಪ್ರಮುಖವಾದದ್ದು.

ಮಲೆಮಹದೇಶ್ವರ ಬೆಟ್ಟ ಪ್ರದೇಶದ ತಪ್ಪಲಿನಲ್ಲಿರುವ ಮಾರ್ಟಳ್ಳಿಯಲ್ಲಿ ನಾಟಿ ಬೀಜಗಳು ಮತ್ತು ಸಾವಯವ ಕೃಷಿ ಜಾಗೃತಿಯಲ್ಲಿ ತೊಡಗಿರುವ ‘ಅನೀಶಾ’ ಸಂಸ್ಥೆಗೆ ಭೇಟಿ ನೀಡುವುದರಿಂದ ಆರಂಭವಾದ ಪಾದಯಾತ್ರೆಯು ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಬದನವಾಳುವಿನಲ್ಲಿ ಮುಗಿಯುವ ಹೊತ್ತಿಗೆ ಈ ಹುಡುಗರು 200ಕ್ಕೂ ಹೆಚ್ಚು ಕಿ.ಮೀ. ನಡೆದಿದ್ದರು. ನಗರ, ಪಟ್ಟಣಗಳ ಜೊತೆಗೆ 20ಕ್ಕೂ ಹೆಚ್ಚು ಹಳ್ಳಿಗಳಿಗೆ ಭೇಟಿ ನೀಡಿದ್ದರು. ಪ್ರತಿ ಹಳ್ಳಿಯ ಹತ್ತಾರು ಮಂದಿ ಸೇರಿದಂತೆ ನೂರಾರು ಜನಸಾಮಾನ್ಯರೊಂದಿಗೆ, ಹತ್ತಾರು ಸಂಘಟಕರೊಂದಿಗೆ ಮಾತನಾಡಿದ್ದರು.

ರಾಮಾಪುರ, ಹನೂರು, ಲೊಕ್ಕನಹಳ್ಳಿ, ಒಡೆಯರಪಾಳ್ಯದ ಟಿಬೆಟಿಯನ್ ಸೆಟ್ಲ್‌ಮೆಂಟ್, ಹಿರಿಯಂಬಲ, ಗೇರುಮಾಳ, ಪುಣಜನೂರು, ಕೋಳಿಪಾಳ್ಯ, ಬಸವಾಪುರ, ಚಾಮರಾಜನಗರ, ಹಂಗಳ, ಪಾರ್ವತಿಬೆಟ್ಟ, ಕೆಂದೇಗಾಲ, ಮಲೆಯೂರು ಹೀಗೆ... ಸುತ್ತಾಡಿದ  ಊರುಗಳಲ್ಲಿ ಒಂದೊಂದೂ ಅನನ್ಯ. ಜನರ ವಲಸೆ, ಧರ್ಮದ ಮೇಲಿನ ನಂಬಿಕೆ, ಭೌಗೋಳಿಕ ರಾಜಕೀಯ, ಕೂಲಿ ಕೆಲಸ, ಜಾತಿ, ಲಿಂಗ ವ್ಯವಸ್ಥೆಯ ಮೇಲಾಟಗಳು, ದಲಿತರ ಮೇಲಿನ ದೌರ್ಜನ್ಯಗಳು, ಮಾನವ–ಪ್ರಾಣಿ ಸಂಘರ್ಷ, ಭೂಕಬಳಿಕೆ, ಖಾದಿ, ಗ್ರಾಮೋದ್ಯೋಗ ಹೀಗೆ... ಎದುರಾದ ವಿಚಾರಗಳು ಒಂದೆರಡಲ್ಲ.

ಮೇಲುಕೋಟೆಯಿಂದ ವಾಹನದಲ್ಲಿ ‘ಅನೀಶಾ’ ಸಂಸ್ಥೆಯವರೆಗೆ ಹೋಗಿ, ಅಲ್ಲಿ ಸಹಜ ಕೃಷಿ, ನಾಟಿ ಬೀಜಗಳ ಸಂರಕ್ಷಣೆಯ ಬಗ್ಗೆ ಅರಿತಿದ್ದು, ಮಾರ್ಟಳ್ಳಿಗೆ ನಡಿಗೆ, ಅಲ್ಲಿನ ಕ್ರಿಶ್ಚಿಯನ್ನರೊಂದಿಗೆ ಮಾತನಾಡುವಾಗ ಶವಪೆಟ್ಟಿಗೆಗಳನ್ನು ತಯಾರಿಸುತ್ತಿದ್ದವರೊಂದಿಗೆ ಅಚಾನಕ್ಕಾಗಿ ಮಾತನಾಡಿದ್ದು, ಚುರುಗುಟ್ಟುವ ಬಿಸಿಲಿನಲ್ಲಿ ಪಾರ್ವತಿ ಬೆಟ್ಟದ ಜೀವವೈವಿಧ್ಯತೆಗೆ ಮುಖಾಮುಖಿಯಾದ ಸನ್ನಿವೇಶ, ಪುಣಜನೂರಿನಲ್ಲಿ ಸಾಮಾಜಿಕ ಹೋರಾಟಗಾರ ದೊರೆಸ್ವಾಮಿ ಅವರೊಂದಿಗೆ, ಸೋಲಿಗ ಸಮುದಾಯದವರೊಂದಿಗೆ ಆದಿವಾಸಿಗಳ ಬಗೆಹರಿಯದ ಬದುಕಿನ ಸಮಸ್ಯೆಗಳ ಬಗ್ಗೆ ಚರ್ಚೆ, ನ್ಯಾಚುರಲಿಸ್ಟ್‌ಗಳಾದ ಕೆ.ಮನು ಮತ್ತು ಶ್ರೀಕಂಠ ಅವರು ಹೆಜ್ಜೆ ಹಾಕುತ್ತಲೇ ಹೇಳಿದ ಪರಿಸರದ ಪಾಠಗಳು, ಮಾತೃಭೂಮಿಯ ಮೇಲೆ ಟಿಬೆಟನ್ನರ ಅಪಾರ ಪ್ರೀತಿ... ಹೀಗೆ ಪಾದಯಾತ್ರೆ ಅನೇಕ ಅನೂಹ್ಯ ಅನುಭವಗಳಿಗೆ ಕರೆದೊಯ್ದಿತ್ತು.

‘ಬೆಳಿಗ್ಗೆ ಪ್ರಾರ್ಥನೆ, ಉಪಾಹಾರದ ನಂತರ ಶುರುವಾಗುತ್ತಿದ್ದ ಪಾದಯಾತ್ರೆ ಕನಿಷ್ಠ 15–20 ಕಿ.ಮೀ.ವರೆಗೂ ನಡೆಯುತ್ತಿತ್ತು. ಅಷ್ಟರಲ್ಲಿ ಸಿಗುತ್ತಿದ್ದ ಹಳ್ಳಿಯಲ್ಲೇ ಊಟ, ವಾಸ್ತವ್ಯ, ಊಟವೇನು? ತಿಳಿದಿಲ್ಲ. ರಾತ್ರಿ ವಾಸ್ತವ್ಯ ಹೇಗಿರುತ್ತದೆ? ಗೊತ್ತಿಲ್ಲ. ಇಂಥ ಅನಿಶ್ಚಿತತೆಯ ನಡುವೆಯೇ ಶಿಸ್ತು, ಕಲಿಕೆ ಮತ್ತು ಬದುಕು ಸಾಗುತ್ತದೆ ಎಂಬ ಸತ್ಯವನ್ನು ಈ ಹುಡುಗರಿಗೆ ತಿಳಿಸಬೇಕಿತ್ತು. ಹಾಗೇ ಮಾಡಿದೆವು. ಜೊತೆಗೇ ಕೊಂಡೊಯ್ದಿದ್ದ ಚರಕದಲ್ಲಿ ನೂಲನ್ನು ತೆಗೆಯುವ ಕೆಲಸವೂ ನಡೆಯಿತು’ ಎಂದು ಟ್ರಸ್ಟ್‌ನ ಕಾರ್ಯದರ್ಶಿ ಸಂತೋಷ ಕೌಲಗಿ ಹೇಳಿದರು.

32ರ ಸುಮನಸ ಕೌಲಗಿಯವರನ್ನು ಈ ಹುಡುಗರು ಅಣ್ಣನೆಂದೇ ಭಾವಿಸಿದ್ದಾರೆ. ಇಂಗ್ಲೆಂಡ್‌ನ ಯೂನಿವರ್ಸಿಟಿ ಆಫ್‌ ಸಸ್ಸೆಕ್ಸ್‌ನ ಅಂತರರಾಷ್ಟ್ರೀಯ ಅಭಿವೃದ್ಧಿ ವಿಭಾಗದಲ್ಲಿ ಸ್ವರಾಜ್ಯ ಪರಿಕಲ್ಪನೆಯ ಬಗ್ಗೆಯೇ ಸಂಶೋಧನೆ ಮಾಡಿ ಪಿಎಚ್‌.ಡಿ ಪದವಿ ಪಡೆದಿದ್ದಾರೆ. ಅವರೂ ಪಾದಯಾತ್ರೆಯ ಭಾಗವಾಗಿದ್ದರು.

ಗಾಂಧೀಜಿಯ ವಿಚಾರಗಳಿಂದ ಪ್ರೇರಣೆ ಪಡೆದು, 60ರ ದಶಕದಲ್ಲಿ ಸಮಾಜಸೇವೆಯ ಆಶಯದೊಂದಿಗೆ ಟ್ರಸ್ಟ್‌ ಆರಂಭಿಸಿದ ಅವರ ತಾತ, ‘ದಾದಾ’ ಎಂದೇ ಪ್ರಖ್ಯಾತರಾದ ಸುರೇಂದ್ರ ಕೌಲಗಿ ಹಾಕಿಕೊಟ್ಟ ದಾರಿಯನ್ನೇ ಸುಮನಸ ಆಯ್ಕೆ ಮಾಡಿಕೊಂಡಿದ್ದಾರೆ. ಹೀಗೆ ಮೂರು ತಲೆಮಾರು ಕಾಲದ ಅಗತ್ಯಗಳಿಗೆ ತಕ್ಕಂತೆ ಸೇವೆಯ ವ್ಯಾಖ್ಯೆಯನ್ನು ಬದಲಾಯಿಸಿಕೊಳ್ಳುತ್ತಾ, ಟ್ರಸ್ಟ್‌ನ ಹೊಸ ರೂಪಗಳಿಗೆ ದಾಟಿಸುತ್ತಾ ಹಾಗೇ ಬದುಕುತ್ತಾ ಬರುತ್ತಿದ್ದಾರೆ. ಕುವೆಂಪು ಅವರ ‘ಅನಿಕೇತನ’ ಪದ್ಯ ನಿಮಗೆ ನೆನಪಾಗಲೇಬೇಕು.

ಪಾದಯಾತ್ರೆಯಿಂದ ವಿಷಯ ಬೇರೆಡೆಗೆ ಹೊರಳಿತು ಎನ್ನಿಸುತ್ತಿರಬಹುದು. ಹಾಗೇನಿಲ್ಲ. ‘ಹೊಸ ಜೀವನ ದಾರಿ’ ಎಂಬುದು ಕೌಲಗಿಯವರ ಮನೆ ಹೇಗೋ, ಈ ಆರು ಹುಡುಗರ ಮನೆಯೂ ಆಗಿಬಿಟ್ಟಿದೆ. ಮನೆಯ ಕುರಿತ ಭಾವ ಬಂಧಗಳು ಕಳಚಿ ಬೀಳುತ್ತಿರುವ ಹೊತ್ತಿನಲ್ಲಿ ಅದನ್ನು ಪುನರುಜ್ಜೀವಿಸುವ ನಿದರ್ಶನ ಇಲ್ಲಿ ಇದೆ ಎಂಬುದೇ ವಿಶೇಷ.

ಈ ಹುಡುಗರು ಆಗ ಮನೆ, ಶಾಲೆ ಬಿಟ್ಟು ಬಂದವರು. ಈಗ ಹೊಸ ಮನೆ, ಹೊಸ ಶಾಲೆಯಲ್ಲಿ ನೆಲೆ ನಿಂತಿದ್ದಾರೆ. ಇದು ಸಾಂಪ್ರದಾಯಿಕ ತರಗತಿ, ಬೆಲ್ಲು, ಸಮವಸ್ತ್ರ, ಬೋಧನೆ–ತರಗತಿಯುಳ್ಳ ಶಾಲೆಯಲ್ಲ. ಸ್ವಾವಲಂಬನೆ, ಅಹಿಂಸೆ, ಬೇಡಿಕೆ–ಪೂರೈಕೆಗಳ ನಡುವಿನ ವ್ಯತ್ಯಾಸವನ್ನು ಕಡಿಮೆ ಮಾಡುವಂಥ ಬದುಕು, ಯಂತ್ರಗಳನ್ನು ಕಳಚಿ ಕೈಗಳನ್ನೇ, ಗುಡಿ ಕೈಗಾರಿಕೆಯನ್ನೇ ನೆಚ್ಚಿಕೊಂಡು ಸಾಗಬೇಕೆಂಬ ಸಾತ್ವಿಕ ಹಟದ ನಿಲುವು. ಅಂಥ ನಿಲುವನ್ನು ಗಟ್ಟಿಗೊಳಿಸಿಕೊಳ್ಳುವತ್ತ ನಡೆದ ನಡಿಗೆ. ಈ ನಡಿಗೆಗೆ ಮೂನ್‌ಫ್ರಾಗ್‌ ಸಂಸ್ಥೆಯ ಕಾರ್ಪೊರೆಟ್‌ ಸಾಮಾಜಿಕ ಜವಾಬ್ದಾರಿಯ ನಿಧಿಯ ನೆರವೂ ಇದೆ.

‘ಜನಪದ ಸೇವಾ ಟ್ರಸ್ಟ್‌’ ನೆರಳಿನಲ್ಲಿರುವ ‘ಜೀವನಶಾಲೆ’ಯ ವಿಸ್ತೃತ ರೂಪವೆಂಬಂತೆ, ಎರಡು ವರ್ಷದ ಹಿಂದೆ ಅರಳಿ ನಿಂತಿರುವ ‘ಹೊಸ ಜೀವನ ದಾರಿ’ಯ ಪ್ರಯೋಗಪಾಠಗಳಲ್ಲಿ ಪಾದಯಾತ್ರೆಯೂ ಒಂದು. ಮಾನವ ಅಭಿವೃದ್ಧಿ, ಪರಿಸರ ಮತ್ತು ಜೀವನಶೈಲಿಗೆ ಇರುವ ಸಂಬಂಧಾಂತರಗಳನ್ನು ಸುಸ್ಥಿರ ನೆಲೆಯಲ್ಲಿ ವಿವರಿಸಿಕೊಳ್ಳಲು ಕೈದೀವಿಗೆಯಂಥ ಶಾಲೆ.

‘ಇದನ್ನು ಮೊದಲ ಬಾರಿಗೆ ನೋಡಿದವರಿಗೆ ಇದರಿಂದ ಏನು ಪ್ರಯೋಜನ ಎಂಬ ನಕಾರಾತ್ಮಕ ಭಾವನೆ ಬರಬಹುದು. ಆದರೆ, ಇದು ದೀರ್ಘಕಾಲದ ನಡಿಗೆಯನ್ನೇ ನೆಚ್ಚಿಕೊಂಡ ಕಲಿಕೆಯ ದಾರಿ. ಈ ಹುಡುಗರಿಗೆ ಕೊಂಚ ಸ್ಟೈಫಂಡ್‌, ಕೊಂಚ ಉಳಿತಾಯ. ಉಳಿಸಿದ್ದನ್ನೇ ಮತ್ತೆ ಬಂಡವಾಳವಾಗಿಸಿಕೊಳ್ಳುವ ಪಾಠಗಳೂ ಇವೆ.

‘ಪರಿಚಯ ಪತ್ರ, ಯಾರ ಕಣ್ಗಾವಲೂ ಇಲ್ಲದೆ, ಜಗವನ್ನು ಸುತ್ತಿ ಬರಬಲ್ಲ, ವ್ಯವಹರಿಸಬಲ್ಲ ಆತ್ಮವಿಶ್ವಾಸ ಈ ಎರಡು ವರ್ಷಗಳಲ್ಲಿ ಮೂಡಿದೆ. ನಾಲ್ಕು ವರ್ಷಕ್ಕೆಂದು ರೂಪಿಸಿದ್ದ ಕೋರ್ಸ್‌ ಎರಡೇ ವರ್ಷಕ್ಕೆ ಮುಗಿಯುವಂತಾಗಿದೆ’ ಎಂದು ಸಂತೋಷ ಕೌಲಗಿ ಅಚ್ಚರಿ ಪಡುವಷ್ಟರ ಮಟ್ಟಿಗೆ ಕೇಂದ್ರ ಮುನ್ನಡೆದಿದೆ.

ಬೇಡಿಕೆ, ಉತ್ಪಾದನೆ, ಮಾನವ–ಪರಿಸರ ಸಂಪನ್ಮೂಲಗಳ ಬಳಕೆ, ಯಾಂತ್ರೀಕರಣ, ಅಭಿವೃದ್ಧಿ ಎಲ್ಲವೂ ಅತಿಯಾಗಿರುವ ಕಾಲಘಟ್ಟದಲ್ಲಿ, ‘ಈ ಸ್ವರಾಜ್ಯದ ಪರಿಕಲ್ಪನೆಯ ಕಲಿಕೆ–ಪಾದಯಾತ್ರೆಯು ನಿಧಾನಗತಿಯಲ್ಲಿದೆ. ಪರಿಣಾಮಗಳು ಎದ್ದು ಕಾಣುವುದೇ ಇಲ್ಲವಲ್ಲ’ ಎಂದು ಅನ್ನಿಸಿದರೆ ಟ್ರಸ್ಟ್‌ನ ಎಲ್ಲರೂ, ‘ಸ್ವಲ್ಪ ಕಾಯಿರಿ. ನಾವೂ ಕಾಯುತ್ತಿದ್ದೇವೆ’ ಎಂದು ತಣ್ಣಗೆ ನಗುತ್ತಾರೆ. ಹಾಗೆ ಕಾಯುತ್ತಲೇ ಹಲವರ ಬದುಕುಗಳು ಬದಲಾದ ನಿದರ್ಶನಗಳು ಅವರೊಂದಿಗೆ ಇವೆ.

ಈಗ ಎಲ್ಲರೂ ದಿಢೀರ್‌ ಫಲಿತಾಂಶ ಬಯಸುತ್ತಿದ್ದಾರೆ. ಆದರೆ, ಜನಪದ ಸೇವಾ ಟ್ರಸ್ಟ್‌ನ ಎಲ್ಲರೂ ‘ಹೊಸ ಜೀವನ ದಾರಿಯಲ್ಲಿ ಫಲಿತಾಂಶ ಬರುವ ವೇಳೆಯಲ್ಲೇ ತಾನಾಗೇ ಬರಲಿ’ ಎಂದು ತಮ್ಮ ಕಾಯಕದಲ್ಲಿ ತೊಡಗಿದ್ದಾರೆ. ಈ ಹುಡುಗರೂ ಹೊಸ ಕಾಲದ ಎಲ್ಲ ಭ್ರಮೆಗಳನ್ನು ಕಳಚಿಕೊಳ್ಳುತ್ತಿದ್ದಾರೆ. ಹೊಸ ಜೀವನ ದಾರಿಯ ಆಶಾವಾದ ಅವರ ಕಣ್ಣು, ಪಾದಗಳಲ್ಲಿದೆ.

ಸ್ವರಾಜ್ಯ ಪರಿಕಲ್ಪನೆ, ಕುಮಾರಪ್ಪ ಚಿಂತನೆ

ಗಾಂಧೀಜಿಯ ಸ್ವರಾಜ್ಯ ಪರಿಕಲ್ಪನೆ ಹಾಗೂ ಅವರ ಅನುಯಾಯಿಯಾಗಿದ್ದ ಅರ್ಥಶಾಸ್ತ್ರಜ್ಞ ಜೆ.ಸಿ.ಕುಮಾರಪ್ಪ ಅವರ ಚಿಂತನೆಗಳಿಂದ ಪ್ರಭಾವಿತರಾಗಿ ಸುರೇಂದ್ರ ಕೌಲಗಿ–ಗಿರಿಜಾ ಕೌಲಗಿ ಅವರು ಸ್ನೇಹಿತರ ಬೆಂಬಲದೊಂದಿಗೆ ಸ್ಥಾಪಿಸಿದ್ದೇ ಜನಪದ ಸೇವಾ ಟ್ರಸ್ಟ್‌.

ಜನಪ್ರಿಯ ಮಾದರಿಗಳಿಗಿಂತ ಭಿನ್ನವಾಗಿ ಪರ್ಯಾಯ ಅಭಿವೃದ್ಧಿ–ಬದುಕಿನ ಮಾದರಿಗಳ ಹುಡುಕಾಟದಲ್ಲೇ ಆರು ದಶಕಕ್ಕೂ ಹೆಚ್ಚು ಕಾಲದಿಂದ ಸಕ್ರಿಯವಾಗಿರುವುದು ಅದರ ಹೆಗ್ಗಳಿಕೆ.

ಸದ್ಯ ಆರು ಹುಡುಗರೊಂದಿಗೆ ಸ್ಥಳೀಯ ಮಹಿಳೆಯರೂ ಇಲ್ಲಿ ಚರಕ ಬಳಸುತ್ತಾರೆ. ಖಾದಿ ಬಟ್ಟೆಗೆ ನೈಸರ್ಗಿಕ ಬಣ್ಣ ಹಾಕುತ್ತಾರೆ. ಕೈಮಗ್ಗದಲ್ಲಿ ಖಾದಿ ಬಟ್ಟೆಯನ್ನು ನೇಯುತ್ತಾರೆ. ಗಾಣದಲ್ಲಿ ಎಣ್ಣೆ ತೆಗೆಯುತ್ತಾರೆ. ಟ್ರಸ್ಟ್‌ ಹೂಡುವ ಬಂಡವಾಳ, ಉದ್ಯೋಗಿಗಳ ಪಾಲುದಾರಿಕೆ ಹಾಗೂ ಕೆಲವು ಸಂಸ್ಥೆಗಳ ನೆರವಿನೊಂದಿಗೆ ಇವೆಲ್ಲ ನಡೆಯುತ್ತವೆ. ಇದು ಉದ್ಯೋಗಿ ಮತ್ತು ಉದ್ಯೋಗದಾತರು ಸಮಾನವಾಗಿ ಒಳಗೊಳ್ಳುವ, ಬೇರೆಲ್ಲೂ ಕಾಣದ ವಿಕೇಂದ್ರೀಕರಣದ ಮಾದರಿ. ಮಾಲೀಕತ್ವ, ಪಾಲುದಾರಿಕೆ, ಶ್ರಮ ಎಲ್ಲವೂ ಇಲ್ಲಿ ವಿಕೇಂದ್ರೀಕರಣಗೊಳ್ಳುತ್ತವೆ. ವಿವಿಧೆಡೆಯಿಂದ ಶಾಲಾ–ಕಾಲೇಜು ವಿದ್ಯಾರ್ಥಿಗಳು, ಸಂಘ–ಸಂಸ್ಥೆಗಳ ಯುವಜನ, ಪೋಷಕರು ಇಲ್ಲಿಗೆ ಭೇಟಿ ಕೊಡುತ್ತಾರೆ. ಆಗಾಗ ಏರ್ಪಡಿಸುವ ಜೀವನ ಕೌಶಲ ಶಿಬಿರಗಳಲ್ಲೂ ಪಾಲ್ಗೊಳ್ಳುತ್ತಾರೆ.

ಗಾಣದಲ್ಲಿ ವಿದ್ಯಾರ್ಥಿಗಳು  
ನೇಯ್ಗೆ ನಿರತ ವಿದ್ಯಾರ್ಥಿ
ಮಲೆ ಮಹದೇಶ್ವರಬೆಟ್ಟದಲ್ಲಿ ಪಾದಯಾತ್ರೆ
ಬಂಡಿಪುರ ಕಾಡಿನಲ್ಲಿ ನಡಿಗೆ..
ಮಾರ್ಟಳ್ಳಿಯಲ್ಲಿ ಶವಪೆಟ್ಟಿಗೆ ತಯಾರಿಸುವ ಕ್ರಿಶ್ಚಿಯನ್‌ ವ್ಯಕ್ತಿಯೊಬ್ಬರೊಂದಿಗೆ
ಪುಣಜನೂರಿನ ಸೋಲಿಗ ಸಮುದಾಯದ ಮಹಿಳೆಯೊಂದಿಗೆ ಮಾತುಕತೆ
ಬದನವಾಳು ಖಾದಿ ಕೇಂದ್ರದಲ್ಲಿ ನೂಲುವ ಪ್ರಕ್ರಿಯೆಯತ್ತ ಗಮನ..
‘ಹೊಸ ಜೀವನ ದಾರಿ’ಯ ಹುಡುಗರೊಂದಿಗೆ ಸುಮನಸ ಕೌಲಗಿ
‘ಹೊಸ ಜೀವನ ದಾರಿ’ಯ ಹುಡುಗರೊಂದಿಗೆ ಸುಮನಸ ಕೌಲಗಿ

Cut-off box - ಸ್ವರಾಜ್ಯ ಪರಿಕಲ್ಪನೆ ಕುಮಾರಪ್ಪ ಚಿಂತನೆ ಗಾಂಧೀಜಿಯ ಸ್ವರಾಜ್ಯ ಪರಿಕಲ್ಪನೆ ಹಾಗೂ ಅವರ ಅನುಯಾಯಿಯಾಗಿದ್ದ ಅರ್ಥಶಾಸ್ತ್ರಜ್ಞ ಜೆ.ಸಿ.ಕುಮಾರಪ್ಪ ಅವರ ಚಿಂತನೆಗಳಿಂದ ಪ್ರಭಾವಿತರಾಗಿ ಸುರೇಂದ್ರ ಕೌಲಗಿ–ಗಿರಿಜಾ ಕೌಲಗಿ ಅವರು ಸ್ನೇಹಿತರ ಬೆಂಬಲದೊಂದಿಗೆ ಸ್ಥಾಪಿಸಿದ್ದೇ ಜನಪದ ಸೇವಾ ಟ್ರಸ್ಟ್‌. ಜನಪ್ರಿಯ ಮಾದರಿಗಳಿಗಿಂತ ಭಿನ್ನವಾಗಿ ಪರ್ಯಾಯ ಅಭಿವೃದ್ಧಿ–ಬದುಕಿನ ಮಾದರಿಗಳ ಹುಡುಕಾಟದಲ್ಲೇ ಆರು ದಶಕಕ್ಕೂ ಹೆಚ್ಚು ಕಾಲದಿಂದ ಸಕ್ರಿಯವಾಗಿರುವುದು ಅದರ ಹೆಗ್ಗಳಿಕೆ. ಸದ್ಯ ಆರು ಹುಡುಗರೊಂದಿಗೆ ಸ್ಥಳೀಯ ಮಹಿಳೆಯರೂ ಇಲ್ಲಿ ಚರಕ ಬಳಸುತ್ತಾರೆ. ಖಾದಿ ಬಟ್ಟೆಗೆ ನೈಸರ್ಗಿಕ ಬಣ್ಣ ಹಾಕುತ್ತಾರೆ. ಕೈಮಗ್ಗದಲ್ಲಿ ಖಾದಿ ಬಟ್ಟೆಯನ್ನು ನೇಯುತ್ತಾರೆ. ಗಾಣದಲ್ಲಿ ಎಣ್ಣೆ ತೆಗೆಯುತ್ತಾರೆ. ಟ್ರಸ್ಟ್‌ ಹೂಡುವ ಬಂಡವಾಳ ಉದ್ಯೋಗಿಗಳ ಪಾಲುದಾರಿಕೆ ಹಾಗೂ ಕೆಲವು ಸಂಸ್ಥೆಗಳ ನೆರವಿನೊಂದಿಗೆ ಇವೆಲ್ಲ ನಡೆಯುತ್ತವೆ. ಇದು ಉದ್ಯೋಗಿ ಮತ್ತು ಉದ್ಯೋಗದಾತರು ಸಮಾನವಾಗಿ ಒಳಗೊಳ್ಳುವ ಬೇರೆಲ್ಲೂ ಕಾಣದ ವಿಕೇಂದ್ರೀಕರಣದ ಮಾದರಿ. ಮಾಲೀಕತ್ವ ಪಾಲುದಾರಿಕೆ ಶ್ರಮ ಎಲ್ಲವೂ ಇಲ್ಲಿ ವಿಕೇಂದ್ರೀಕರಣಗೊಳ್ಳುತ್ತವೆ. ವಿವಿಧೆಡೆಯಿಂದ ಶಾಲಾ–ಕಾಲೇಜು ವಿದ್ಯಾರ್ಥಿಗಳು ಸಂಘ–ಸಂಸ್ಥೆಗಳ ಯುವಜನ ಪೋಷಕರು ಇಲ್ಲಿಗೆ ಭೇಟಿ ಕೊಡುತ್ತಾರೆ. ಆಗಾಗ ಏರ್ಪಡಿಸುವ ಜೀವನ ಕೌಶಲ ಶಿಬಿರಗಳಲ್ಲೂ ಪಾಲ್ಗೊಳ್ಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.