‘ಏನು ಅನಾಹುತ ಆಗುತ್ತೋ ಕಾಣೇ. ಈ ವರ್ಷ ರಥೋತ್ಸವದಲ್ಲಿ ದೇವರ ಮೂರ್ತಿ ಭಗ್ನಗೊಂಡಿದೆ. ಇದರಿಂದ ನಮ್ಮೂರಿಗೆ ಕೇಡು ಆಗಬಹುದು’- ಯಾವುದೇ ಊರು ಇರಲಿ, ದೇವರ ಮೂರ್ತಿಗಳು ಭಗ್ನಗೊಂಡಲ್ಲಿ ಇಂತಹ ಮಾತು ಕೇಳಿ ಬರುವುದು ಸಾಮಾನ್ಯ. ಆದರೆ, ಈ ರೀತಿಯ ಮೌಢ್ಯಕ್ಕೆ ತಿಲಾಂಜಲಿ ಇಡುವಂತಹ ದಿಟ್ಟ ಹೆಜ್ಜೆಯೊಂದನ್ನು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ನಿಡಸೋಸಿ ಮಠದ ಮಠಾಧೀಶ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಇಟ್ಟಿದ್ದಾರೆ.
ಮೂರು ಶತಮಾನಗಳ ಇತಿಹಾಸ ಹೊಂದಿರುವ ನಿಡಸೋಸಿಯ ದುರುದಂಡೀಶ್ವರ ಸಿದ್ಧಸಂಸ್ಥಾನ ಮಠವು ಉತ್ತರ ಕರ್ನಾಟಕ ಹಾಗೂ ಪಶ್ಚಿಮ ಮಹಾರಾಷ್ಟ್ರದಲ್ಲಿ ಅಪಾರ ಸಂಖ್ಯೆ ಭಕ್ತಸಮೂಹ ಹೊಂದಿದೆ. ಎಲ್ಲಡೆಯಂತೆ ಇಲ್ಲಿಯೂ ಪೂಜೆ, ಭಜನೆ, ಪುರಾಣ, ಪ್ರವಚನ ಸೇರಿದಂತೆ ತ್ರಿವಿಧ ದಾಸೋಹ ನಡೆಯುತ್ತವೆ. ಇದರ ನಡುವೆಯೂ ಹತ್ತು ಹಲವು ಗೊಡ್ಡು ಸಂಪ್ರದಾಯಗಳಿಗೆ ಸೆಡ್ಡು ಹೊಡೆದು ಹೊಸ ಮನ್ವಂತರಕ್ಕೆ ಸ್ವಾಮೀಜಿ ನಾಂದಿ ಹಾಡಿದ್ದಾರೆ.
ಹಿಂದೂ ಧರ್ಮದಲ್ಲಿ ದೇವಾಲಯ, ಮಠ ಸೇರಿದಂತೆ ವಿವಿಧ ಧಾರ್ಮಿಕ ಕ್ಷೇತ್ರಗಳಲ್ಲಿ ಮೂರ್ತಿ ಪ್ರತಿಷ್ಠಾಪಿಸಿ ಪೂಜಿಸಲಾಗುತ್ತದೆ. ಹೀಗೆ ಪೂಜೆ ಮಾಡಿದ ಹಲವು ಮೂರ್ತಿಗಳು ಆಯಾ ಕಲ್ಲಿನ ಆಯುಷ್ಯದಂತೆಯೋ, ಆಕಸ್ಮಿಕವಾಗಿಯೋ ಭಗ್ನಗೊಳ್ಳುವುದು ಸಾಮಾನ್ಯ. ಭಗ್ನಗೊಂಡ ಮೂರ್ತಿಗಳಿದ್ದರೆ ಅಪಶಕುನ. ಇದರಿಂದ ತೊಡಕು, ತೊಂದರೆ ಬರುತ್ತದೆ. ಪಾಪ ಸುತ್ತಿಕೊಳ್ಳುತ್ತದೆ ಎಂಬ ಮೌಢ್ಯ ಜನರಲ್ಲಿ ಬೇರೂರಿದೆ. ಹೀಗಾಗಿಯೇ ಕೆರೆ, ಬಾವಿ, ಹೊಳೆ, ಹಳ್ಳಗಳಿಗೆ ಭಗ್ನ ಮೂರ್ತಿಗಳನ್ನು ಎಸೆಯುವುದನ್ನು ಕಾಣುತ್ತೇವೆ.
ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಪ್ರಯತ್ನದಿಂದ ನೂರಾರು ಭಗ್ನಮೂರ್ತಿಗಳು ದುರದುಂಡೀಶ್ವರ ಸಿದ್ಧಸಂಸ್ಥಾನ ಮಠಕ್ಕೆ ಸೇರಿದ ಮೂರು ಎಕರೆ ಪ್ರದೇಶದಲ್ಲಿ ತಲೆ ಎತ್ತಿದ ಬಿಲ್ವಾಶ್ರಮದಲ್ಲಿ ಇರಿಸಲಾಗಿದೆ. ಬೃಹದಾಕಾರದ ಹುಣಸೆಮರ ಹಾಗೂ 260ಕ್ಕೂ ಹೆಚ್ಚು ಬಿಲ್ವಪತ್ರೆಯ ಮರಗಳು ಇಲ್ಲಿವೆ. ಈ ಬಿಲ್ವಾಶ್ರಮದ ಆವರಣದಲ್ಲಿಯೇ 15 ವರ್ಷಗಳಿಂದ ಸಾವಿರಕ್ಕೂ ಹೆಚ್ಚು ಭಗ್ನಗೊಂಡ ವಿವಿಧ ದೇವರ ಮೂರ್ತಿಗಳನ್ನು ಸಂಗ್ರಹಿಸಿಡಲಾಗಿದೆ.
ಕರ್ನಾಟಕ-ಮಹಾರಾಷ್ಟ್ರ ರಾಜ್ಯಗಳ ವಿವಿಧ ದೇವಸ್ಥಾನಗಳಲ್ಲಿ ಭಗ್ನಗೊಂಡ ನಂದಿ, ಗಣೇಶ, ದುರ್ಗಾ, ಲಕ್ಷ್ಮಿ, ಹನುಮಂತ, ಶಿವ, ವಿಠ್ಠಲ-ರುಕ್ಮಿಣಿ, ಶಿವಲಿಂಗ, ನಾಗರಮೂರ್ತಿ
ಗಳ ಸಾಲೇ ಇಲ್ಲಿದೆ. ಭಗ್ನಗೊಂಡ ಮೂರ್ತಿಗಳನ್ನು ಹೊಳೆ, ಹಳ್ಳ, ಕೆರೆಗಳಲ್ಲಿ ಎಸೆಯುವುದನ್ನು ತಪ್ಪಿಸುವುದು ಹಾಗೂ ದೇವರಮೂರ್ತಿಗಳನ್ನು ಎಲ್ಲೆಂದರಲ್ಲಿ ಎಸೆಯುವುದರಿಂದ ಅವುಗಳಿಗೆ ಅಪಮಾನ ಮಾಡಿದಂತಾಗುತ್ತದೆ ಎಂಬ ಉದ್ದೇಶವೂ ಭಗ್ನಮೂರ್ತಿಗಳ ಸಂಗ್ರಹದ ಹಿಂದಿದೆ.
ಎಲ್ಲದಕ್ಕೂ ಮಿಗಿಲಾಗಿ ಭಗ್ನಗೊಂಡ ಮೂರ್ತಿಗಳು ಇದ್ದರೆ ಅಪಶಕುನ ಎಂಬ ಮೌಢ್ಯತೆಯು ಸಾಕಷ್ಟು ಜನರಲ್ಲಿ ಮನೆ ಮಾಡಿದೆ. ಇದರಿಂದ ತೊಂದರೆ ತಪ್ಪಿದ್ದಲ್ಲ ಎಂಬ ಮೂಢನಂಬಿಕೆಯನ್ನು ಜನರ ಮನದಿಂದ ಕಿತ್ತು ಹಾಕಲು ಇಂತಹ ಪ್ರಯತ್ನಕ್ಕೆ ಕೈ ಹಾಕಿ ಪಂಚಮ ಶಿವಲಿಂಗ ಸ್ವಾಮೀಜಿ ಯಶಸ್ವಿಯಾಗಿದ್ದಾರೆ. ಮೊದಲು ಸ್ವಾಮೀಜಿ ಸ್ವಇಚ್ಛೆಯಿಂದ ಎಲ್ಲೆಂದರಲ್ಲಿ ಬಿಸಾಕಿದ್ದ ಭಗ್ನ ಮೂರ್ತಿಗಳನ್ನು ತಂದು ಬಿಲ್ವಾಶ್ರಮದಲ್ಲಿ ಇರಿಸುತ್ತಿದ್ದರು. ಅಲ್ಲದೇ, ಮೂರ್ತಿ ಪ್ರತಿಷ್ಠಾಪನೆ ಮಾಡಲು ತೆರಳಿದ ಸಂದರ್ಭದಲ್ಲಿ ಭಕ್ತರಿಗೆ ಭಗ್ನಮೂರ್ತಿಗಳನ್ನು ಎಲ್ಲೆಂದರಲ್ಲಿ ಎಸೆಯಬಾರದು ಎಂಬ ಕಿವಿಮಾತುಗಳನ್ನೂ ಹೇಳುತ್ತಿದ್ದರು.
ದಿನ ಕಳೆದಂತೆ ಸ್ವಾಮೀಜಿ ಪ್ರೇರಣೆಯ ಮಾತುಗಳಿಂದ ಮಹಾರಾಷ್ಟ್ರದ ಕೊಲ್ಹಾಪುರ, ಸಾಂಗ್ಲಿ, ರತ್ನಾಗಿರಿ, ಸಾತಾರಾ, ಸೊಲ್ಲಾಪುರ ಹಾಗೂ ನಮ್ಮ ರಾಜ್ಯದ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಧಾರವಾಡ, ಗದಗ ಮುಂತಾದ ಜಿಲ್ಲೆಗಳಿಂದ ಜನರು ಭಗ್ನಮೂರ್ತಿಗಳನ್ನು ಎಲ್ಲೆಂದರಲ್ಲಿ ಎಸೆಯುವ ಬದಲಾಗಿ ಇಲ್ಲಿಗೆ ತಂದಿಡುತ್ತಿದ್ದಾರೆ. ಕೆಲವೊಂದಿಷ್ಟು ಜನರಂತೂ ತಂದು ಇರಿಸಿದ ಮೂರ್ತಿಗಳನ್ನು ಆಗಾಗ ಬಂದು ನೋಡಿಕೊಂಡು ಕಣ್ತುಂಬಿಕೊಳ್ಳುತ್ತಾರೆ. ಇನ್ನು ಕೆಲವರು ತಮ್ಮೂರಲ್ಲಿ ಯಾವಾಗೆಲ್ಲ ಜಾತ್ರೆ ಉತ್ಸವಗಳು ನಡೆಯುತ್ತಿರುತ್ತವೆಯೋ ಆಗೆಲ್ಲ ಇಲ್ಲಿಗೆ ಬಂದು ಪೂಜೆ ಮಾಡಿ ನಮಿಸುವ
ರೂಢಿ ಇದೆ.
ಮ್ಯೂಸಿಯಂ ರೂಪ?
ಹೀಗೆ ಭಗ್ನಮೂರ್ತಿಗಳನ್ನು ಬೃಹತ್ ಪ್ರಮಾಣದಲ್ಲಿ ಸಂಗ್ರಹಿಸಿ ದೊಡ್ಡದೊಂದು ಮ್ಯೂಸಿಯಂ ಮಾಡುವ ಉದ್ದೇಶವನ್ನು ಸ್ವಾಮೀಜಿ ಹೊಂದಿದ್ದಾರೆ. ಇದರಿಂದ ಆ ಕಾಲದ ಶಿಲ್ಪ ಕೆತ್ತನೆಯ ಶೈಲಿ ಹೇಗೆಲ್ಲೆ ಇತ್ತು ಎಂಬುವುದು ಮುಂದಿನ ಪೀಳಿಗೆಗೆ ತಿಳಿಸಿಕೊಡುವ ಉದ್ದೇಶವಿದೆ. ಎಲ್ಲದಕ್ಕೂ ಮಿಗಿಲಾಗಿ ಭಗ್ನಮೂರ್ತಿಗಳಿಂದ ಯಾವುದೇ ವಿಘ್ನಗಳು ಇಲ್ಲ ಎಂಬ ಸಂದೇಶ ಸಾರುವುದಾಗಿದೆ. ಭಗ್ನಗೊಂಡ ಮೂರ್ತಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಇಲ್ಲಿ ಹೆಚ್ಚುತ್ತಲೇ ಇವೆ. ಯಾರೇ ಆಗಲಿ ಭಗ್ನಮೂರ್ತಿಗಳನ್ನು ಎಲ್ಲೆಂದರಲ್ಲಿ ಎಸೆಯುವ ಬದಲು ತಮ್ಮ ಆಶ್ರಮದಲ್ಲಿ ತಂದು ಇಡಬಹುದೆಂಬ ಮುಕ್ತ ಅವಕಾಶವನ್ನು ಕಲ್ಪಿಸಿದ್ದಾರೆ.
ಇಲ್ಲಿ ಭಗ್ನಮೂರ್ತಿಗಳನ್ನು ಬೃಹತ್ ಪ್ರಮಾಣದಲ್ಲಿ ಸಂಗ್ರಹಿಸಿ ದೊಡ್ಡದೊಂದು ಮ್ಯೂಸಿಯಂ ಮಾಡುವ ಉದ್ದೇಶವಿದೆ. ಮ್ಯೂಸಿಯಂನಿಂದಾಗಿ ಆ ಕಾಲದ ಶಿಲ್ಪಕಲೆಯನ್ನು ಉಳಿಸಿಕೊಂಡು ಬಂದಂತಾಗುತ್ತದೆ. ಜನರಲ್ಲಡಗಿದ ಮೌಢ್ಯತೆ ದೂರ ಮಾಡಲು ಹತ್ತು ಹಲವು ಜಾಗೃತಿ ಕಾರ್ಯಕ್ರಮಗಳನ್ನೂ ಆಯೋಜಿಸಲಾಗುತ್ತಿದೆಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಪೀಠಾಧೀಶ ದುರದುಂಡೀಶ್ವರ ಸಿದ್ದಸಂಸ್ಥಾನ ಮಠ ನಿಡಸೋಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.