ADVERTISEMENT

ಸಿಹಿ ಕಹಿಗಳ ಸಮತೋಲನ

ಪಶ್ಚಿಮದ ಅರಿವು /ಹಾರಿತಾನಂದ
Published 5 ಏಪ್ರಿಲ್ 2019, 19:45 IST
Last Updated 5 ಏಪ್ರಿಲ್ 2019, 19:45 IST
ಕಲೆ: ರಾಮಕೃಷ್ಣ ಸಿದ್ರಪಾಲ್‌
ಕಲೆ: ರಾಮಕೃಷ್ಣ ಸಿದ್ರಪಾಲ್‌   

ಯುಗಾದಿ ಎಂದರೆ ಯುಗದ ಆದಿ. ವರ್ಷದ ಮೊದಲ ದಿನ. ಚೈತ್ರಮಾಸದ ಮೊದಲ ದಿನವೇ ಯುಗಾದಿ. ಪ್ರಜಾಪತಿಯು ಇದೇ ದಿನ ಜಗತ್ತನ್ನು ಸೃಷ್ಟಿಮಾಡಿದನು ಎನ್ನುವುದು ಯುಗಾದಿ ಆಚರಣೆಯ ಹಿನ್ನೆಲೆಯಲ್ಲಿರುವ ಹಲವು ನಂಬಿಕೆಗಳಲ್ಲಿ ಒಂದು.

ಹೊರಗೆ ಪ್ರಕೃತಿಯು ಹಸಿರು ಚಗುರುಗಳಿಂದ ಕಂಗೊಳಿಸುತ್ತಿರುತ್ತದೆ. ಇದೇ ಸಮಯದಲ್ಲಿ ನಮ್ಮ ಅಂತರಂಗವನ್ನು ಕೂಡ ಸಂತೋಷ–ಸಂಭ್ರಮಗಳಿಂದ ತುಂಬಿಕೊಂಡು ವರ್ಷದುದ್ದಕ್ಕೂ ನಲಿಯುವ ಸಂಕಲ್ಪವನ್ನು ತೊಡುವ ದಿನವೇ ಯುಗಾದಿ. ಈ ಹಬ್ಬದ ಆಚರಣೆಯಲ್ಲಿರುವ ಪ್ರಮುಖ ವಿಧಿ ಎಂದರೆ ಬೇವು ಮತ್ತು ಬೆಲ್ಲವನ್ನು ಒಟ್ಟಾಗಿ ಸವಿಯುವುದು. ಜೀವನದಲ್ಲಿ ಕಹಿಯಷ್ಟೇ ಇರುವುದಿಲ್ಲ ಅಥವಾ ಸಿಹಿಯಷ್ಟೇ ಇರುವುದಿಲ್ಲ; ಈ ಎರಡು ಕೂಡ ನಿರಂತರವಾಗಿ ಎದುರಾಗುತ್ತಲೇ ಇರುತ್ತದೆ. ಕಷ್ಟ ಬಂದಾಗ ಕುಗ್ಗದೆ, ಸುಖ ಬಂದಾಗ ಹಿಗ್ಗದೆ ಜೀವನವನ್ನು ಸಮತೂಕದಿಂದ ನಡೆಸಿಕೊಂಡು ಹೋಗಬೇಕೆನ್ನುವ ಸಂದೇಶವನ್ನು ಬೇವು–ಬೆಲ್ಲಗಳ ಮಿಶ್ರಣದಲ್ಲಿ ಕಾಣಬಹುದು.

ಪ್ರತಿಕ್ಷಣವೂ ಹಬ್ಬವೇ...
ನಾವು ಉಸಿರಾಡುವ ಪ್ರತಿಯೊಂದು ಕ್ಷಣವೂ ಯುಗಾದಿಯೇ ಸರಿ. ಅದರೆ ನಮಗೆ ಅದರ ಎಚ್ಚರಿಕೆ ಇರುವುದಿಲ್ಲ. ಇದನ್ನು ನೆನಪಿಸುವ ಪರ್ವದಿನವೇ ಯುಗಾದಿ. ಯುಗದ ಆರಂಭದ ಬಗ್ಗೆ ಯಾಕಿಷ್ಟು ಸಂತೋಷ? ನಮಗೆ ಈ ಅನುಭವ ಸಹಜವೇ ಆಗಿದೆ. ಆದಿ ಎಂದರೆ ಅಲ್ಲಿ ಬೆಳವಣಿಗೆಗೆ ಅವಕಾಶ ಇರುತ್ತದೆ; ಆ ಬೆಳವಣಿಗೆಯಲ್ಲಿ ಶಕ್ತಿಯೂ ಕೂಡಿಕೊಳ್ಳುತ್ತದೆ. ಶಕ್ತಿಯು ಚಟುವಟಿಕೆಯನ್ನು ಪ್ರಚೋದಿಸುತ್ತದೆ; ಲವಲವಿಕೆಯಿಂದಲೇ ಸಂತೋಷ ಪಡುವ ಮನಸ್ಸು ಕೂಡ ಸಿದ್ಧವಾಗುತ್ತದೆ. ಹಾಗಾಗಿ ನಾವು ಯಾವುದನ್ನು ಕೊನೆಯ ಬಿಂದು ಎಂದುಕೊಳ್ಳುತ್ತವೆಯೋ ಅದು ವಾಸ್ತವವಾಗಿ ಆರಂಭದ ಬಿಂದುವೂ ಆಗಿರುತ್ತದೆ ಎಂಬ ವಿವೇಕವನ್ನು ಉಪದೇಶಿಸುವ ಹಬ್ಬವೇ ಯುಗಾದಿ ಎನಿಸಿಕೊಂಡಿದೆ.

ADVERTISEMENT

ಆಚರಣೆಯಮುಖ್ಯ ವಿವರಗಳು

* ಬೆಳಗ್ಗೆ ಎಣ್ಣೆ–ನೀರನ್ನು ಎರೆದುಕೊಳ್ಳುವುದು

* ಮನೆಯನ್ನು ತಳಿರು ತೋರಣಗಳಿಂದ ಅಲಂಕರಿಸುವುದು.

* ಸಂಕಲ್ಪ ಮಾಡಿ ದೇವರನ್ನು ಪೂಜಿಸುವುದು.

* ಪಂಚಾಂಗಶ್ರವಣ, ಎಂದರೆ ಮುಂದೆ ಒಂದು ವರ್ಷ ಹೇಗಿರುತ್ತದೆ ಎಂದು ತಿಳಿದುಕೊಂಡು ಅದಕ್ಕೆ ತಕ್ಕ ರೀತಿಯಲ್ಲಿ ನಮ್ಮ ಜೀವನವಿಧಾನವನ್ನು ರೂಪಿಸಿಕೊಳ್ಳುವುದು.

* ಬೇವು–ಬೆಲ್ಲಗಳನ್ನು ದೇವರಿಗೆ ನೈವೇದ್ಯ ಮಾಡಿ ಅದನ್ನು ಸ್ವೀಕರಿಸುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.