
ಅಂದು ಶುಕ್ರವಾರ, ವಿಕೇಂಡ್ ಆಗಿದ್ರಿಂದ್ದ ಮೆಟ್ರೊ ತುಂಬಾ ಜನ, ಸ್ನೇಹಿತೆಯ ಅಕ್ಕನನ್ನು ಭೇಟಿಯಾಗಲು ಮಂತ್ರಿ ಸ್ಕ್ವೇರ್ ಮೆಟ್ರೊ ನಿಲ್ದಾಣದಿಂದ ಮೆಜೆಸ್ಟಿಕ್ ಮೆಟ್ರೊ ನಿಲ್ದಾಣಕ್ಕೆ ಹೊರಟಿದ್ದ ನನಗೆ ಮಾಯಾನಗರಿಯಲ್ಲಿ ನಡೆಯುವ ಮಾಯೆಯೊಂದು ಕಣ್ಣಿಗೆ ಬಿತ್ತು. ನಾನು ಪ್ಲಾಟ್‌ಫಾರ್ಮ್‌ಗೆ ಬರುವುದರೊಳಗೆ ಮೆಟ್ರೊ ಬಂದಿತ್ತು. ಮೊದಲೇ ತಡವಾಗಿ ಬಂದಿದ್ದ ನನಗೆ ಅದೇ ಮೆಟ್ರೊದಲ್ಲಿ ಹೋಗುವುದು ಅನಿರ್ವಾಯವಾಗಿತ್ತು. ಗಡಿಬಿಡಿಯಲ್ಲಿ ಹೋಗುತ್ತಿದ್ದ ನನಗೆ ಎದುರಾಗಿದ್ದೇ ಆ ಅಪರಿಚಿತ ವ್ಯಕ್ತಿ.
30ರಿಂದ 35 ವರ್ಷ ಆಸುಪಾಸಿನ ಆ ವ್ಯಕ್ತಿಯ ಕೈ–ಕಾಲು ನಾ ಕಂಡಂತೆ ಗಟ್ಟಿಯೇ ಇತ್ತು. ಕಪ್ಪು ಶರ್ಟ್, ನೀಲಿ ಜೀನ್ಸ್ ತೊಟ್ಟಿದ್ದ ಆತ. ನೋಡಲು ಮೇಲ್ನೋಟಕ್ಕೆ ಸಭ್ಯನಂತೆ ಕಂಡ. ಮೆಟ್ರೊ ಒಳಗೆ ಹೋಗಲು ನುಗ್ಗುತ್ತಿದ್ದ ನನಗೆ ತಡೆಯಾಗಿ ‘ಮೇಡಂ ₹200 ಕ್ಯಾಶ್ ಇದೀಯಾ’ ಎಂದ. ಮೊದಲೇ ತಡವಾಗಿದ್ದ ನನಗೆ ‘ಇಲ್ಲ ಸರ್’ ಎಂದು ಮುನ್ನುಗ್ಗಿದೆ. ಮತ್ತೊಮ್ಮೆ ಕರೆದು ‘ಯುಪಿಐ ಇದೀಯಾ’ ಎಂದ. ನಾನು ಪ್ರತಿಕ್ರಿಯಿಸದೇ ಮೆಟ್ರೊ ಒಳಗೆ ಹೋದೆ.
ಈಗ ಹಣ ಕೈಯಲ್ಲಿ ಹಿಡಿದು ಹೊರಡುವವರ ಸಂಖ್ಯೆ ಕಡಿಮೆ. ಆ ವ್ಯಕ್ತಿಗೆ ಅನಿವಾರ್ಯವಿತ್ತೇನೋ, ನಾನು ಹಣ ನೀಡಿದರೆ ಆತ ನನಗೆ ಫೋನ್ ಮೂಲಕ ಯುಪಿಐನಲ್ಲಿ ಹಣ ಕಳುಹಿಸುತ್ತಿದ್ದನೇನೋ ಎಂದು ಯೋಚಿಸುತ್ತ, ಉಸಿರಾಡಲು ಜಾಗವಿಲ್ಲದಂತೆ ತುಂಬಿದ್ದ ಮೆಟ್ರೊದಲ್ಲಿ ಕಷ್ಟಪಟ್ಟು ನಿಂತಿದ್ದೆ. ಹಾಗೆ ಹಿಂತಿರುಗಿ ನೋಡಿದಾಗ ಆ ವ್ಯಕ್ತಿ ನನ್ನ ಮುಂದಿದ್ದ ಒಬ್ಬ ಯುವಕನ ಬಳಿ ನನಗೆ ಕೇಳಿದ ಪ್ರಶ್ನೆಯನ್ನೇ ಕೇಳುತ್ತಿದ್ದ, ಆತನು ಕೂಡ ಹಣವನ್ನು ನೀಡಲು ನಿರಾಕರಿಸಿದ.
ತುಂಬಾ ಕಸಿವಿಸಿಯಲ್ಲಿರುವಂತೆ ವರ್ತಿಸುತ್ತಿದ್ದ ಆ ವ್ಯಕ್ತಿ ಮುಂದೆ ಹೋಗಿ ಮತ್ತೊಬ್ಬರ ಬಳಿ ಹಣ ಕೇಳಿದ, ಅವರು ಆತನಿಗೆ ಯುಪಿಐ ಮೂಲಕ ₹200 ನೀಡಿದರು. ಆಗ ಅರ್ಥ ಆಯಿತು ನನಗೆ, ನಾನು ಭಾವಿಸಿದ್ದು ತಪ್ಪು ಎಂದು.
ಆ ವೇಳೆಗಾಗಲೇ ಮೆಜೆಸ್ಟಿಕ್ ನಿಲ್ದಾಣ ಬಂತು. ನಾ ಕೆಳಗೆ ಇಳಿದು ನನ್ನ ಸ್ನೇಹಿತೆಯ ಅಕ್ಕನನ್ನು ಹುಡುಕುತ್ತಿದ್ದೆ ಆಗ ಮತ್ತೆ ಅದೇ ವ್ಯಕ್ತಿ ಕಂಡ... ಪ್ಲಾಟ್‌ಫಾರ್ಮ್‌ನಲ್ಲಿ ನಿಂತಿದ್ದ ಮತ್ತೊಬ್ಬ ವ್ಯಕ್ತಿ ಬಳಿ ₹200 ಹಣ ಕೇಳಿ ಪಡೆದ, ಹಾಗೆ ನೋಡ ನೋಡುತ್ತಿದ್ದಂತೆ ನಾಲ್ಕೈದು ಜನರಿಂದ ಹಣ ವಸೂಲಿ ಮಾಡಿಯೇ ಬಿಟ್ಟ. ಹಣ ಕೊಟ್ಟವರೂ ಆವ ಇನ್ನೊಬ್ಬರ ಬಳಿ ಮತ್ತೆ ಹಣ ಕೇಳುವಾಗ ಮಂಕಾಗಿ ನಿಂತಿದ್ದು ನೋಡಿ ಅಯ್ಯೋ ಪಾಪ ಅನ್ನಿಸುತ್ತಿತ್ತು.
ಅವನ ಈ ಚಟುವಟಿಕೆಯನ್ನೇ ನೋಡುತ್ತಿದ್ದ ನನಗೆ, ಹೋದ ಕೆಲಸದ ಕುರಿತು ಎಚ್ಚರವಾಗಿದ್ದು ಮೊಬೈಲ್ ಕರೆ ಬಂದ ಬಳಿಕವೇ, ‘ನಾನು ಇಲ್ಲಿದ್ದೇನೆ, ನೀನು ಎಲ್ಲಿ ಕಾಣ್ಸತ್ತಿಲ್ಲ’ ಅಂತಾ. ನಾನು ಅವರನ್ನು ಹುಡುಕಿ ಹೊರಟೇ ಆದರೆ, ಆ ವ್ಯಕ್ತಿ ಮಾತ್ರ ನನ್ನ ಬೆನ್ನು ಬಿಡಲಿಲ್ಲ. ನನ್ನ ಹಿಂಬಾಲಿಸುತ್ತಲೇ ಇದ್ದ. ನನಗಿಂತಲೂ ಮುಂಚೆ ನಾ ಹುಡುಕುತ್ತಿದ್ದವರ ಬಳಿ ಹೋಗಿ, ನಾನು ಅವನು ಬಹಳ ವರ್ಷದಿಂದ ಪರಿಚಿತರು ಎಂಬುವಂತೆ ನನ್ನೆಡೆಗೆ ಕೈತೋರಿ, ಆಕೆ ಬಳಿ ಮಾತನಾಡುತ್ತಿದ್ದ. ಇದನ್ನು ನೋಡಿದ ನಾನು ಮರುಮಾತಾಡದೇ ಅಲ್ಲಿಂದ ಆಕೆಯನ್ನು ಕರೆದುಕೊಂಡು ಹಿಂತಿರುಗಿ ನೋಡದೆ ಹೊರಟೆ...
ಆ ವ್ಯಕ್ತಿ ಕಳ್ಳನಾ? ಭಿಕ್ಷುಕನಾ? ಅನುಕಂಪದಿಂದ ಹಣ ಗೀಟಿಸಿಕೊಳ್ಳುತ್ತಿದ್ದನಾ? ಯಾವುದು ಅಲ್ಲ. ದುಡ್ಡು ಮಾಡುವ ಕಲೆ ಗೊತ್ತಿರುವವ... ಹಾಗಂತ ಇದು ಪರಿಶ್ರಮದಿಂದ ಗಳಿಸಿದ ಹಣವಾ? ಖಂಡಿತ ಅಲ್ಲ. ಬೇರೆಯವರ ಮರುಳು ಮಾಡಿ ಮಾಡುತ್ತಿದ್ದ ಹಣ...
ಈ ರೀತಿಯ ಘಟನೆಗಳು ಬೆಂಗಳೂರಿನಲ್ಲಿ ದಿನನಿತ್ಯ ನೂರಾರು ನಡೆಯುತ್ತಲೇ ಇರುತ್ತವೆ. ಆದರೇ ಇದನ್ನು ಕಂಡ ನನಗೆ ಕಾಡಿದ್ದು ಜನ ಕಾರಣವೇ ಕೇಳದೆ ಹೇಗೆ ಯಾರೋ ಬಂದು ಕೇಳುತ್ತಿದ್ದಂತೆ ಹಣ ಕೊಡುತ್ತಾರೆ. ಬೆಂಗಳೂರಿನಲ್ಲಿ ಅಷ್ಟೂ ಉದಾರಿಗಳು ಇದ್ದಾರ? ಇಲ್ಲ, ಅವರು ಅಷ್ಟೂ ಮುಗ್ಧರ ಅಥವಾ ಅಷ್ಟೂ ಸಿರಿವಂತರ...! ಯಾವುದಕ್ಕೂ ಉತ್ತರ ಇಲ್ಲ.
ಕಷ್ಟದಲ್ಲಿರುವವರು, ಅಸಮರ್ಥರು, ವಯೋವೃದ್ಧರಿಗೆ ಹಣ ಕೊಡುವುದು ಸಾಮಾನ್ಯ. ಆದರೆ, ಎಲ್ಲವೂ ಸರಿಯಿರುವ ದುಡಿದು ತಿನ್ನಲು ಅಲಸ್ಯ ತೋರುವ ಈ ರೀತಿಯ ವ್ಯಕ್ತಿಗಳಿಗೆ ಹಣ ನೀಡುವಾಗ ಸ್ವಲ್ಪ ಎಚ್ಚರವಿರಲಿ. ಹಣ ಕಳೆದುಕೊಳ್ಳಲು ಕಳ್ಳತನವೇ ಆಗಬೇಕೆಂದಿಲ್ಲ. ಮೋಸ ಹೋಗುವವರು ಇರುವವರೆಗೆ ಮೋಸ ಮಾಡುವವರು ಇದ್ದೇ ಇರುತ್ತಾರೆ. ಆದರೆ, ನಿಮ್ಮ ಹಣದ ಹಿಂದಿನ ಪರಿಶ್ರಮವನ್ನು ಸುಲಭವಾಗಿ ವ್ಯರ್ಥವಾಗಲು ಬಿಡಬೇಡಿ...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.