ಬುಕರ್ ಪ್ರಶಸ್ತಿಯನ್ನು ಗಳಿಸಿ ಕನ್ನಡದ ಕೀರ್ತಿಯನ್ನು ವಿಶ್ವಮಟ್ಟದಲ್ಲಿ ಹರಡಿರುವ, ಬರಹಗಾರ್ತಿ ಮತ್ತು ಹೋರಾಟಗಾರ್ತಿ ಬಾನು ಮುಷ್ತಾಕ್ ಅವರ ಕೃತಿಗಳ ಬಗ್ಗೆ ವಿಶ್ಲೇಷಣೆ ಮಾಡುವಾಗ, ಅವುಗಳನ್ನು ಉಳಿದವರ ಕತೆಗಳಂತೆ ಕೇವಲ ಕಾಲ್ಪನಿಕ ಎಂದು ನೋಡುವುದು ಸಾಲದು. ಕತೆಗಳೆಲ್ಲವೂ ಆತ್ಮಕತೆಗಳೇ ಎನ್ನುವ ಸರಳೀಕೃತ ಧೋರಣೆಯನ್ನು ಒಪ್ಪಿಕೊಳ್ಳಲಾಗದಿದ್ದರೂ, ಕತೆಗಾರ್ತಿಯೊಬ್ಬರು ವೈಯಕ್ತಿಕ ಬದುಕಿನಲ್ಲಿ ಹೋರಾಟಗಾರ್ತಿಯೂ, ವಕೀಲೆಯೂ, ಸಮಾಜ ಸುಧಾರಕಿಯೂ, ರಾಜಕಾರಣಿಯೂ ಜೊತೆಗೆ ಮತ್ತೂ ಏನೇನೋ ಆದಾಗ ಆಕೆಯ ಬದುಕು ಮತ್ತು ಬರಹಗಳ ನಡುವಿನ ಗೆರೆ ಅಳಿಸಿಹೋಗುತ್ತದೆ. ಅದರಲ್ಲೂ ಅಲ್ಪಸಂಖ್ಯಾತ ಮುಸಲ್ಮಾನ ಸಮುದಾಯದ ಹೆಣ್ಣಾಗಿದ್ದು, ವೈಯಕ್ತಿಕ ಬದುಕಿನ ಹೋರಾಟಗಳು ಮತ್ತು ಹಲವಾರು ನೆಲೆಗಳಲ್ಲಿ ಮಹಿಳೆಯನ್ನು ದಮನಗೊಳಿಸುವ ಸಾರ್ವತ್ರಿಕ ಸಮಸ್ಯೆಗಳು ಬೇರೆಬೇರೆಯಲ್ಲದೇ ತಳುಕು ಹಾಕಿಕೊಂಡಾಗ ಅವುಗಳ ನಡುವಿನ ಭೇದ ಗುರುತಿಸುವುದು ಇನ್ನೂ ಕಷ್ಟ. ಹಾಗಿರುವಾಗ, ಬಾನು ಮುಷ್ತಾಕ್ ಅವರ ಕತೆಗಳನ್ನು ನಿರ್ಲಿಪ್ತವಾಗಿ ಸಾಹಿತ್ಯ ವಿಮರ್ಶೆಯ ಮೂಸೆಗೆ ಒಳಪಡಿಸುವುದು ಮತ್ತು ಅದನ್ನು ಸಾಹಿತ್ಯವಾಗಿ ಮಾತ್ರ ನೋಡುವುದು ಸ್ವಲ್ಪ ಕಷ್ಟ. ಮಹಿಳೆಯರ ಬರಹ ಕುರಿತು ಇದ್ದ/ಇರುವ ಪೂರ್ವಗ್ರಹಗಳ ಹಿನ್ನೆಲೆಯಲ್ಲಿ ನೋಡಿದರೆ, ಅಂದರೆ ಮಹಿಳೆಯರು ಬರೆದಿದ್ದೆಲ್ಲ ಅವರ ಸ್ವಂತ ಅನುಭವ ಎನ್ನುವಂತೆ ‘ತೀರ್ಮಾನಿಸಿಬಿಡುತ್ತಿದ್ದ’ ಕಾಲವೊಂದಿತ್ತು ಎಂದು ತಿಳಿಯುತ್ತದೆ. ಅನುಪಮಾ ನಿರಂಜನ ಅವರು ಹೇಳಿದ ಒಂದು ನಿದರ್ಶನ ನೆನಪಾಗುತ್ತಿದೆ. ಅವರು ಅಬಾರ್ಷನ್ ಬಗ್ಗೆ ಒಂದು ಕತೆ ಬರೆದಾಗ ಜನ ಅವರನ್ನು ‘ಈಗ ಹುಷಾರಾಗಿದ್ದೀರಾ?’ ಎಂದು ಕೇಳುತ್ತಿದ್ದರಂತೆ! ಅಂತಹ ಘಟ್ಟವನ್ನು ಮೀರಿ ಈಗ ಬಹಳ ಮುಂದೆ ಬಂದಿದ್ದೇವೆ.
ಹಾಗಾಗಿ, ಬಾನು ಅವರು ತಮ್ಮ ಕತೆಗಳಲ್ಲಿ, ವೈಯಕ್ತಿಕವೇ ಸಾರ್ವತ್ರಿಕ ಎನ್ನುವ ಹೇಳಿಕೆಯನ್ನು ಪದೇ ಪದೇ ಸಾಬೀತು ಮಾಡುತ್ತಾ, ಪ್ರಬಲ ಭಾವನೆಗಳು ಮತ್ತು ಚಿಂತನೆಗಳನ್ನು ವ್ಯಂಗ್ಯದಲ್ಲಿ ಅದ್ದಿ ಉಣಬಡಿಸುತ್ತಾ, ಬದುಕಿನಲ್ಲಿ ಎಲ್ಲಾ ರೀತಿಯ ಅಡೆತಡೆಗಳು, ಶೋಷಣೆಗಳನ್ನು ಸ್ವತಃ ಗೆದ್ದು ಬಂದದ್ದೂ ಅಲ್ಲದೇ, ಮುಸಲ್ಮಾನ ಜಗತ್ತಿನ ಸ್ಟಿರಿಯೊಟೈಪ್‌ಗಳನ್ನು ಸತತವಾಗಿ ನಾಶಮಾಡುತ್ತಾ ಬಂದಿದ್ದಾರೆ. ‘ಹೆಜ್ಜೆ ಮೂಡಿದ ಹಾದಿ’, ‘ಬೆಂಕಿ ಮಳೆ’, ‘ಎದೆಯ ಹಣತೆ’, ‘ಸಫೀರಾ’ ಮತ್ತು ‘ಬಡವರ ಮಗಳು ಹೆಣ್ಣಲ್ಲ’ ಎನ್ನುವ ಐದು ಕಥಾ ಸಂಕಲನಗಳು, ‘ಕುಬ್ರಾ’ ಎನ್ನುವ ಕಾದಂಬರಿ, ‘ಇಬ್ಬನಿಯ ಕಾವು’ ಎನ್ನುವ ಲೇಖನ ಸಂಕಲನ, ‘ಒದ್ದೆ ಕಣ್ಣಿನ ಬಾಗಿನ’ ಎನ್ನುವ ಕವನ ಸಂಕಲನವನ್ನು ಪ್ರಕಟಿಸಿದ್ದಾರೆ. ಒಟ್ಟು 1990ರಿಂದ 2023ರವರೆಗೆ ರಚಿಸಿದ ಕತೆಗಳಲ್ಲಿ ಹನ್ನೆರಡನ್ನು ಆರಿಸಿಕೊಂಡು ಅನುವಾದಕಿ ದೀಪಾ ಭಾಸ್ತಿಯವರು ಇಂಗ್ಲಿಷಿಗೆ ಅನುವಾದ ಮಾಡಿ, ಅದಕ್ಕೆ ‘ಹಾರ್ಟ್ ಲ್ಯಾಂಪ್’ ಎನ್ನುವ ಹೆಸರಿಟ್ಟಿದ್ದಾರೆ. ಈಗ ಅದು ಅಂತರರಾಷ್ಟ್ರೀಯ ಬುಕರ್ ಪ್ರಶಸ್ತಿ ಪಡೆದಿದೆ. ಲಿಂಗ ಅಸಾಮಾನತೆ ಮತ್ತು ಪುರುಷಪ್ರಧಾನ ಸಮುದಾಯದ ಕ್ರೌರ್ಯವನ್ನು ಧರ್ಮದ ಮುಸುಕಿನಲ್ಲಿ ಸತತವಾಗಿ ಪ್ರತಿಪಾದಿಸುತ್ತಾ ಬಂದಿರುವ ಸಮುದಾಯವನ್ನು ಕತೆಗಳ ಮೂಲಕ ಸುಧಾರಿಸಲು ಸಾಧ್ಯವೇ ಎಂದು ಪ್ರಶ್ನಿಸಿದರೆ ‘ಸಾಧ್ಯ’ ಎನ್ನುವ ಉತ್ತರದ ರೀತಿಯಲ್ಲಿದೆ ಬಾನು ಅವರಿಗೆ ದೊರೆತ ಅಂತರರಾಷ್ಟ್ರೀಯ ಪ್ರಶಸ್ತಿ. ಕುತೂಹಲಕಾರಿ ಸಂಗತಿ ಎಂದರೆ ಇಡೀ ಜಗತ್ತು ಮತ್ತು ದೇಶ, ರಾಜ್ಯ ಈ ಸಾಧನೆಯನ್ನು ಕೊಂಡಾಡುತ್ತಿರುವಾಗ ಬಾನು ಅವರ ಪ್ರಗತಿಪರ ವಿಚಾರಗಳನ್ನು ಸಹಿಸದೇ ಕಿರುಕುಳ ಕೊಟ್ಟಿದ್ದ (ಭೂತ ಪ್ರತ್ಯಯ ಗಮನಿಸಿ. ಬಾನು ಅದನ್ನೆಲ್ಲ ದಾಟಿ ಬಂದಿದ್ದಾರೆ) ಸಮುದಾಯ ಇದಕ್ಕೆ ಹೇಗೆ ಪ್ರತಿಕ್ರಿಯಿಸುತ್ತಿದೆ ಎನ್ನುವುದು. ಪ್ರಶಂಸಿಸಿದರೆ ತಾವು ತಪ್ಪಿದ್ದೆವು ಎಂದು ಒಪ್ಪಿಕೊಳ್ಳುವ, ಇಲ್ಲದಿದ್ದರೆ ಸಮುದಾಯದ ಹೆಣ್ಣುಮಗಳ ಕೀರ್ತಿಯನ್ನು ಮಾನ್ಯ ಮಾಡದಿರುವ ಸಂದಿಗ್ಧಕ್ಕೆ ಅವರು ಸಿಲುಕಿದ್ದಾರೆ! ಇರಲಿ, ಅದು ಬೇರೆ ವಿಚಾರ.
ಬಾನು ಅವರ ‘ಎದೆಯ ಹಣತೆ’ ಕತೆ ಪ್ರಕಟವಾದಾಗ ಅದು ಓದುಗರನ್ನು ಬಡಿದೆಬ್ಬಿಸಿತ್ತು. ಅದರ ಕ್ರೌರ್ಯ ಅವರ ಅಂತಃಕರಣವನ್ನು ಅಲ್ಲಾಡಿಸಿತ್ತು. ನಂತರ ಒಂದು ಸಂದರ್ಶನದಲ್ಲಿ ಬಾನು ಅವರು ಅದು ತಮ್ಮದೇ ಬದುಕಿನ ಘಟನೆ ಎಂದು ಹೇಳಿದಾಗ ಕತೆಗೆ ಮತ್ತೊಂದು ಆಯಾಮ ದೊರಕಿತು. ಅವರ ಹಲವಾರು ಕತೆಗಳು ಸತ್ಯ ಘಟನೆಗಳ ನಿರೂಪಣೆಯೇನೋ ಎನ್ನುವ ಸಂಶಯ ಹುಟ್ಟಿಸಿದವು. ಪ್ರಸ್ತುತ ಅಂತರರಾಷ್ಟ್ರೀಯ ಮಾಧ್ಯಮಗಳಲ್ಲಿ ಈ ಆಯಾಮವೇ ಮುನ್ನೆಲೆಗೆ ಬಂದಿದೆ. ಒಂದರ್ಥದಲ್ಲಿ ಅದು ಸಮರ್ಥನೀಯ ಕೂಡಾ.
ಬಾನು ಅವರ ಕತೆಗಳನ್ನು ಓದುವುದೂ, ಸಂದರ್ಶನಗಳಲ್ಲಿ ಅವರು ತಮ್ಮ ಬದುಕಿನ ಕತೆಗಳನ್ನು ನಿರ್ಭಾವುಕವಾಗಿ ನಿರೂಪಿಸುವುದೂ ಮೈ ನವಿರೇಳಿಸುವ ಅನುಭವ ಕೊಡುತ್ತವೆ. ಮನೆಯಲ್ಲಿ ಹಿರಿಯವಳಾಗಿ ಸಣ್ಣ ವಯಸ್ಸಿನಿಂದಲೇ ಜವಾಬ್ದಾರಿಯನ್ನು ಹೊತ್ತುಕೊಂಡವರು ಬಾನು. ಒಮ್ಮೆ ತಂದೆಗೆ ದೂರದ ಊರಿಗೆ ವರ್ಗವಾದಾಗ ಅವರ ಸೋದರ ತಾನೇ ಮನೆಯ ಯಜಮಾನ ಎಂದುಕೊಂಡು, ಶಾಲೆಗೇ ಹೋಗದ ಕಾರಣಕ್ಕೆ ಬಾನು ತಂಗಿಗೆ ಬೆಲ್ಟಿನಿಂದ ಹೊಡೆದಾಗ ಬಾನು ಬೆಲ್ಟ್ ಕಿತ್ತುಕೊಂಡಿದ್ದರು. ‘ಬೆರಳುಗಳನ್ನು ಕತ್ತರಿಸಿಬಿಡುತ್ತೇನೆ, ಹುಷಾರ್. ಮನೆಯಿಂದ ಓಡಿಸಿಬಿಡುತ್ತೇನೆ’ ಎಂದು ಬೆದರಿಸಿ ಪರಿಸ್ಥಿತಿಯನ್ನು ತಮ್ಮ ಕೈಗೆತ್ತಿಕೊಂಡಿದ್ದರು. ಮನೆಯ ಆರ್ಥಿಕ ಪರಿಸ್ಥಿತಿ ದುರ್ಬಲವಾಗಿದ್ದಾಗ, ಬಟ್ಟೆ ಹೊಲಿದು ಹಣ ಸಂಪಾದಿಸಿದರು. ಅವರ ತಂದೆಯು ಮಗಳ ಪ್ರತಿಭೆ ವೃಥಾ ಹಾಳಾಗುತ್ತಿದೆ ಎಂದು ಮರುಗಿ, ಮುನಿಸಿಪಲ್ ಚುನಾವಣೆಗೆ ನಿಲ್ಲಿಸಿದಾಗ ಅವರ ಚಿಹ್ನೆ ಹೊಲಿಗೆ ಮಷೀನ್ ಆಗಿತ್ತು! ಮುಸಲ್ಮಾನಳಾಗಿ ಚುನಾವಣೆಗೆ ನಿಂತಿದ್ದಕ್ಕೆ ಬೈದು ಅವರ ಸಮುದಾಯದವರೇ ವೋಟು ಹಾಕದೇ ಪ್ರತಿರೋಧಿಸಿದ್ದರು. ಆ ಚುನಾವಣೆಯಲ್ಲಿ ಬಾನು ಕೇವಲ ಒಂದು ವೋಟಿನಲ್ಲಿ ಸೋತಿದ್ದರು! ಛಲಬಿಡದ ಬಾನು ಮತ್ತೆ ಸ್ಪರ್ಧಿಸಿ ಎರಡು ಸಲ ಹಾಸನ ಮುನಿಸಿಪಲ್ ಚುನಾವಣೆಯಲ್ಲಿ ಗೆದ್ದರು.
ದಲಿತ ಸಂಘರ್ಷ ಸಮಿತಿ, ರೈತ ಸಂಘದ ಹೋರಾಟಗಳಲ್ಲಿ ನಂತರ ಬಂಡಾಯ ಚಳವಳಿಯಲ್ಲಿ, ಬಾಬಾಬುಡನ್ ಗಿರಿಗೆ ಸಂಬಂಧಿಸಿದ ಪ್ರತಿಭಟನೆಗಳಲ್ಲಿ... ಹೀಗೆ ಹಲವಾರು ಸಾರ್ವಜನಿಕ ಹೋರಾಟಗಳಲ್ಲಿ ಭಾಗವಹಿಸಿದರು. ‘ಒಮ್ಮೆ ಹೆಣ್ಣಾಗು ಪ್ರಭುವೇ’ ಎನ್ನುವ ಕಥೆ ಬರೆದದ್ದು ಮುಸಲ್ಮಾನ ಮಹಿಳೆಯರು ಅನುಭವಿಸುವ ಶೋಷಣೆಗಳನ್ನು ನಿರೂಪಿಸಲು. ಮುಸಲ್ಮಾನ ಸಮಾಜ ಅದರಿಂದ ಪಾಠ ಕಲಿಯುವ ಬದಲು ಬಾನು ಅವರನ್ನು ಕುಟುಂಬ ಸಮೇತ ಬಹಿಷ್ಕರಿಸಿ ಚಿತ್ರಹಿಂಸೆಗೆ ಗುರಿಮಾಡಿತು! ಆ ಸಮಯದ ಸಂಕಷ್ಟಗಳ ಬಗ್ಗೆ ಬಾನು ವಿವರವಾಗಿ ದಾಖಲಿಸಿದ್ದಾರೆ. ಮುಸಲ್ಮಾನ ಸಮುದಾಯದ ಬಗ್ಗೆ ಭಿಡೆ ಇಲ್ಲದೇ ವಿಮರ್ಶಿಸಿದ್ದಾರೆ. ಇಂತಹ ಅನುಭವಗಳಿಗೆ ಪಕ್ಕಾದ ಮಹಿಳೆ ತನ್ನ ಕೃತಿಗಳಲ್ಲಿ ಅದನ್ನು ಬಿಂಬಿಸುವುದು ಆಶ್ಚರ್ಯಕರವೇನೂ ಅಲ್ಲ. ಬಾನು ಅವರ ಕತೆಗಳು ಕೇವಲ ಸಮುದಾಯದ ಒಡಕುಗಳನ್ನು ದಾಖಲಷ್ಟೇ ಮಾಡಿಲ್ಲ, ಅವು ಅಪ್ಪಟ ಕಲಾಭಿವ್ಯಕ್ತಿಯಾಗಿ ಗೆದ್ದಿವೆ, ಓದುಗರನ್ನು ಕಾಡುತ್ತವೆ. ಪುರುಷಪ್ರಾಬಲ್ಯದ ದುಷ್ಟತನಗಳನ್ನು ಅನುಭವಿಸುವುದು ಮಾತ್ರವಲ್ಲ, ಅವನ್ನು ಪ್ರತಿರೋಧಿಸುವ ಶಕ್ತಿ ಇದ್ದವರಷ್ಟೇ ಇಂತಹ ಕತೆಗಳನ್ನು ಬರೆಯಲು ಸಾಧ್ಯ. ಒಂದು ಕಡೆ ಮುಸಲ್ಮಾನ ಸಮುದಾಯದ ಪುರುಷ ಪ್ರಧಾನ ಸಮಾಜದ ಕಟ್ಟುಪಾಡುಗಳು, ಮತ್ತೊಂದೆಡೆ ಇಡೀ ಸಮುದಾಯವೇ ಪ್ರತ್ಯೇಕತೆಯತ್ತ ಸಾಗುತ್ತಿರುವ ಹತಾಶೆ. ಹೀಗಿರುವಾಗ ಬಾನು ಅವರಿಗೆ ಸೃಜನಶೀಲ ಅಭಿವ್ಯಕ್ತಿಯೇ ಬಿಡುಗಡೆಯ ಮಾರ್ಗ ಎನ್ನಿಸಿದೆ. ಸಮಾಜದಲ್ಲಿನ ಮೂಲಭೂತ ಬದಲಾವಣೆಗಳು ಮಾತ್ರ ಲಿಂಗ ಅಸಮಾನತೆಯನ್ನು ತೊಡೆದುಹಾಕಬಹುದು ಎನ್ನಿಸಿದೆ.
ಬಾನು ಮುಷ್ತಾಕ್ ಅವರಿಗೆ ಬುಕರ್ ಪ್ರಶಸ್ತಿ ಪ್ರದಾನ ಮಾಡುವ ಸಂದರ್ಭದಲ್ಲಿ ತೀರ್ಪುಗಾರರ ಮಂಡಳಿ ಅಧ್ಯಕ್ಷರಾದ ಮ್ಯಾಕ್ಸ್ ಪೋರ್ಟರ್ ಅವರು ಬಾನು ಅವರ ಕೃತಿ ‘ಹಾರ್ಟ್ ಲ್ಯಾಂಪ್’ ಅನ್ನು ‘ಇಂಗ್ಲಿಷ್ ಓದುಗರಿಗೆ ‘ನಿಜವಾಗಿಯೂ ಹೊಸತೇನನ್ನೋ’ ನೀಡುವ, ‘ರ‍್ಯಾಡಿಕಲ್ ಅನುವಾದ’ ಮತ್ತು ‘ರೋಮಾಂಚಕ, ಸ್ಪೂರ್ತಿದಾಯಕ ನಿರೂಪಣೆಗಳನ್ನು’ ಒಳಗೊಂಡಿರುವ, ಕನ್ನಡದ ಬೇರುಗಳನ್ನು ವೈವಿಧ್ಯಮಯ ಸಾಮಾಜಿಕ-ರಾಜಕೀಯ ಉಪಭಾಷೆಗಳೊಂದಿಗೆ ಬೆಸೆಯುವ ಕೃತಿ’ ಎಂದು ವರ್ಣಿಸಿದರು. ಅವರ ಕತೆಗಳು ಹಿಂದಿ, ಉರ್ದು, ಇಂಗ್ಲಿಷ್, ಮಲಯಾಳ, ತಮಿಳು, ಪಂಜಾಬಿ, ಮರಾಠಿ ಮತ್ತಿತರ ಭಾಷೆಗಳಿಗೆ ಅನುವಾದಗೊಂಡು ಚರ್ಚೆಗೆ ಒಳಗಾಗುತ್ತಿರುವುದೇ ಇದಕ್ಕೆ ಸಾಕ್ಷಿ.
ಬಾನು ಅವರ ‘ಕರಿನಾಗರ ಹಾವುಗಳು’ ಕತೆಯನ್ನು ನಿರ್ದೇಶಕ ಗಿರೀಶ ಕಾಸರವಳ್ಳಿ ‘ಹಸೀನಾ’ ಎನ್ನುವ ಶೀರ್ಷಿಕೆಯಲ್ಲಿ ಚಲನಚಿತ್ರ ಮಾಡಿದಾಗ ಅದು ಹಲವಾರು ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿಗಳನ್ನು ಪಡೆದುಕೊಂಡಿತು. ಮಹಿಳೆಯರನ್ನು ದಮನಿಸಲು, ಇಸ್ಲಾಂ ಅನ್ನು ತಪ್ಪಾಗಿ ವ್ಯಾಖ್ಯಾನಿಸಿ ಪ್ರಚೋದಿಸುವ ಪಿತೃಪ್ರಭುತ್ವದ ಶಕ್ತಿಗಳನ್ನು ವಿರೋಧಿಸಲು ಮತ್ತು ಅವುಗಳನ್ನು ಎದುರಿಸಲು ಬಾನು ಬರಹವನ್ನು ಅವರು ಅಭಿವ್ಯಕ್ತಿ ಮಾಧ್ಯಮ ಮಾಡಿಕೊಂಡಿದ್ದು, ಜೊತೆಗೆ ನೇರ ಹೋರಾಟದಲ್ಲಿ ತೊಡಗಿಕೊಂಡಿದ್ದು ಸಾಮಾನ್ಯ ಸಂಗತಿಯೇನೂ ಅಲ್ಲ. ಕೆಲವೊಮ್ಮೆ ಕಡು ಸಿಟ್ಟನ್ನು ಹಸಿಹಸಿಯಾಗಿಯೇ ಕಾರಿಕೊಳ್ಳುವ ಕತೆಗಳನ್ನೂ ಬರೆದಿದ್ದಾರೆ. ಆದರೆ, ಅವರ ಯಾವ ಕತೆಯೂ ಓದುಗರಿಂದ ಸಹಾನುಭೂತಿಯನ್ನು ಅಪೇಕ್ಷಿಸುವುದಿಲ್ಲ. ಹೆಂಡತಿಯನ್ನು ಅಪಾರವಾಗಿ ಪ್ರೀತಿಸುವ, ಅವಳಿಗಾಗಿ ಮತ್ತೊಂದು ತಾಜ್ ಮಹಲನ್ನು ಕಟ್ಟುವ ವಚನ ನೀಡುವ ಗಂಡ, ಅವಳು ಸತ್ತ ನಲವತ್ತನೇ ದಿನವೇ ಚಿಕ್ಕವಯಸ್ಸಿನ ಹುಡುಗಿಯನ್ನು ಮದುವೆಯಾಗುವ ಕಟುಸತ್ಯವನ್ನು ತಣ್ಣಗಿನ ದನಿಯಲ್ಲಿ ದಾಖಲಿಸುತ್ತಾರೆ. ಕೆಲವೊಮ್ಮೆ ಮುಸಲ್ಮಾನ ಹೆಣ್ಣುಮಕ್ಕಳ ಜಗತ್ತಿನ ಕಷ್ಟಕೋಟಲೆಗಳಿಗೆ ಮುಕ್ತಿಯೇ ಇಲ್ಲವೇನೋ ಎನ್ನಿಸುವ ಹತಾಶೆಯ ಸಣ್ಣ ಸುಳಿಯನ್ನು ಕಾಣಿಸುತ್ತಾರೆ. ಆದರೆ, ಒಂದರ್ಥದಲ್ಲಿ ಅದರ ದಾಖಲಾತಿಯೂ ಒಂದು ಶಕ್ತಿಶಾಲೀ ಅಭಿವ್ಯಕ್ತಿಯೇ. ಹಾಗೆ ನೋಡಿದರೆ ಅವರ ಬದುಕಿನ ಒಂದೊಂದು ಹೆಜ್ಜೆಯೂ ಒಂದೊಂದು ಘಟನೆಯಿಂದ ಪ್ರೇರಿತವೇ ಆಗಿದೆ. ಅವರ ಪರಿಚಯದ ಮಹಿಳೆಯೊಬ್ಬರು ದುಷ್ಟ ಗಂಡನಿಂದ ವಿಚ್ಛೇದನ ಪಡೆಯಲು ಕೋರ್ಟ್ ಮೆಟ್ಟಿಲು ಹತ್ತಿದಾಗ ಆರು ವರ್ಷಗಳಾದರೂ ಕೇಸು ಇತ್ಯರ್ಥವಾಗಲೇ ಇಲ್ಲ. ವಕೀಲರಿಗೆ ಸ್ವಲ್ಪ ಬೇಗ ಕ್ಲೋಸ್ ಮಾಡಿಸಿ ಅಂದಾಗ ಆತ ತನ್ನ ಜೊತೆ ಆಕೆ ಹೊರಗೆ ‘ವಿಹಾರ’ಕ್ಕೆ ಬಂದರೆ ಬೇಗ ಮುಗಿಸುತ್ತೇನೆ ಎಂದರಂತೆ. ಆ ಘಟನೆಯಿಂದ ನೊಂದು ಬಾನು, ತಾವು ಅರ್ಧಕ್ಕೇ ನಿಲ್ಲಿಸಿದ್ದ ಕಾನೂನು ಪದವಿಯನ್ನು ಪೂರೈಸಿ, ವಕೀಲೆಯಾಗಿ ಸಾವಿರಾರು ಕೇಸುಗಳನ್ನು ನಡೆಸಿ ಮಹಿಳೆಯರಿಗೆ ನ್ಯಾಯ ದೊರಕಿಸಿಕೊಟ್ಟರು. ಅದಕ್ಕೇ ಹೇಳಿದ್ದು, ಬಾನು ಅವರ ಬದುಕು ಮತ್ತು ಬರಹಗಳ ನಡುವಿನ ಗೆರೆ ಅಳಿಸಿಹೋಗಿದೆ ಎಂದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.