ADVERTISEMENT

ನಾಟಕ ವಿಮರ್ಶೆ: ರಂಗದ ಮೇಲೆ ಬುಕರ್‌ ಪ್ರಶಸ್ತಿಯ ಎದೆಯ ಹಣತೆ

ಡಾ.ರುದ್ರೇಶ್ ಅದರಂಗಿ
Published 20 ಜುಲೈ 2025, 2:11 IST
Last Updated 20 ಜುಲೈ 2025, 2:11 IST
‘ಎದೆಯ ಹಣತೆ’ ನಾಟಕದ ದೃಶ್ಯ
‘ಎದೆಯ ಹಣತೆ’ ನಾಟಕದ ದೃಶ್ಯ   

ಹಸುಗೂಸನ್ನು ಎದೆಗೆ ಅವುಚಿಕೊಂಡ ಮಹರುನ್ ಗಂಡನ ಮನೆಯನ್ನು ತೊರೆದು ತವರಮನೆಗೆ ಬಂದಾಗ-ಹಜಾರದ ದಿವಾನ್ ಮೇಲೆ ತಂದೆ ಅಡ್ಡಾಗಿದ್ದ, ದೊಡ್ಡಣ್ಣ ಫಾರೂಕ್ ಗಪ್ಪೆಂದು ಉಪೇಕ್ಷೆಯಿಂದ ನೋಡುತ್ತಿದ್ದ, ಶೇವ್ ಮಾಡುತ್ತಿದ್ದ ಅಮಾನ್ ಬ್ರಷ್ ಹಿಡಿದಂತೆಯೇ ಹಜಾರಕ್ಕೆ ದೌಡಾಯಿಸಿದ್ದ, ಕುರ್‌ಆನ್ ಓದುತ್ತಿದ್ದ ಅತ್ತಿಗೆ ದಿಟ್ಟಿಸುತ್ತಿದ್ದಳು, ತಾಯಿ ತಸ್‌ಬೀಹ್ ಗರ ಬಡಿದವಳಂತೆ ನಿಂತಿದ್ದಳು, ಅತ್ತಿಗೆಯರು ವಿಲಕ್ಷಣವಾಗಿ ದಿಟ್ಟಿಸುತ್ತಿದ್ದರು... ಹೀಗೆ ಮೊದಲ ದೃಶ್ಯವೇ ವಿಶಾಲವಾದ ಕ್ಯಾನ್ವಾಸಿನ ಚಿತ್ರದಂತೆ ಮೂಡುವುದರೊಂದಿಗೆ ಬುಕರ್ ಪ್ರಶಸ್ತಿ ಪುರಸ್ಕೃತೆ ಬಾನು ಮುಷ್ತಾಕ್ ಅವರ ಕಥೆಯಾಧಾರಿತ ‘ಎದೆಯ ಹಣತೆ’ ನಾಟಕ ರಂಗದ ಮೇಲೆ ತೆರೆದುಕೊಳ್ಳುತ್ತದೆ.

ಇತ್ತೀಚೆಗೆ ಬೆಂಗಳೂರಿನಲ್ಲಿ ಹೆಗ್ಗೋಡಿನ ಸತ್ಯ ಶೋಧನಾ ರಂಗ ಸಮುದಾಯದ ‘ಜನಮನದಾಟ’ ಅಭಿನಯಿಸಿದ ‘ಎದೆಯ ಹಣತೆ’ ನಾಟಕದ ಪ್ರತಿ ದೃಶ್ಯದಲ್ಲಿಯೂ ಭಾವಗಳ ಅಭಿವ್ಯಕ್ತಿಯ ಸರಮಾಲೆಯೇ ಇದೆ.

ಸಂಭಾಷಣೆಗಳು ಭಾವಾಭಿವ್ಯಕ್ತಿಗೆ ಪ್ರೇರಕವಾಗಿದ್ದು, ಕಲಾವಿದರ ಅಭಿನಯವೇ ಪ್ರಧಾನವಾಗಿದೆ. ಕಥೆಯನ್ನು ಸರಳವಾಗಿ ಎರಡು ಸಾಲಿನಲ್ಲಿ ಹೇಳಬಹುದಾದರೂ, ಅದನ್ನು ಅಭಿವ್ಯಕ್ತಪಡಿಸಿರುವ  ಕಲಾತ್ಮಕತೆ ಪ್ರೇಕ್ಷಕರನ್ನು ಸೆಳೆಯುತ್ತದೆ. ಮೆಹರುನ್ ತವರುಮನೆಗೆ ಬರುವುದರೊಂದಿಗೆ ಪ್ರಾರಂಭವಾಗಿ ಪ್ರತಿ ದೃಶ್ಯವೂ ಕುತೂಹಲದಿಂದ ಸೂಜಿಮೊನೆಯ ಮೇಲೆ ನಿಲ್ಲಿಸುತ್ತದೆ. ಸಾಂಪ್ರದಾಯಿಕ ಕುಟುಂಬದಲ್ಲಿ ಬೆಳೆದ ಮೆಹರುನ್ ಇನಾಯತ್‌ನೊಂದಿಗೆ ವಿವಾಹವಾಗಿ ಬದುಕಿನ ನೊಗವನ್ನು ಹೊತ್ತವಳು. ಆರು ಮಕ್ಕಳ ತಾಯಿಯಾಗಿ ಬಸವಳಿದು, ಅವಳ ಅಸ್ತಿತ್ವವನ್ನು ಗುರುತಿಸುವ ಹಂತದಲ್ಲಿ ಚರ್ಮ ಸುಕ್ಕಾಗಿದ್ದಳು. ಇತ್ತ ಗಂಡ ಪಾತರಗಿತ್ತಿ ನರ್ಸ್‌ಳ ದಾಸನಾಗಿ, ಮೆಹರುನ್‌ಳ ಆತ್ಮವನ್ನು ನಗ್ನಗೊಳಿಸುವಂತೆ ‘ನೀನು ನನ್ನ ತಾಯಿ ಸಮಾನ’ ಎಂದಾಗ ನಿಂತ ನೆಲ ಕುಸಿದಂತಾಗುತ್ತದೆ. ಪರಕೀಯ ಭಾವನೆ ಹೆಚ್ಚಾದಾಗ ಆಸರೆಗಾಗಿ ತವರಿನತ್ತ ಮುಖ ಮಾಡುತ್ತಾಳೆ. ಅಣ್ಣಂದಿರು ಮುಖಕ್ಕೆ ಹೊಡೆದಂತೆ ಟ್ಯಾಕ್ಸಿಯಲ್ಲಿ ಗಂಡನ ಮನೆಗೆ ಸಾಗಹಾಕಿ ‘ನೀನೇ ಸರಿ ತೂಗಿಸ್ಕೊಂಡು ಹೋಗ್ಬೇಕು’ ಎನ್ನುವ ಉಪದೇಶ ಹೇಳಿ ಜಾರಿಕೊಳ್ಳುತ್ತಾರೆ. ಹಿರಿ ಮಗಳು ಸಲ್ಮಾ ತಮ್ಮ-ತಂಗಿಯರ ಆರೈಕೆಯಲ್ಲಿ ಅಮ್ಮನಿಗೆ ಆಸರೆಯಾಗಿರುತ್ತಾಳೆ. ಗಂಡನಮನೆ ಬಾಣಲೆಯಾದರೆ, ತವರಮನೆ ಬೆಂಕಿಯಂತಾದಾಗ ನಿರಾಶಳಾಗುತ್ತಾಳೆ. ಚೌಕಟ್ಟು ಒಡೆದಿತ್ತು, ಚಿತ್ರ ಬೇರೆಯಾಗಿತ್ತು. ಅವಳಲ್ಲಿ ಯಾವುದೋ ಆವೇಶ ಮನೆ ಮಾಡಿತ್ತು. ಅವಳು ನಿಧಾನವಾಗಿ ಮಂಚದಿಂದ ಇಳಿಯುತ್ತಾಳೆ. ತನ್ನ ಹಸುಗೂಸನ್ನು ನೋಡಿ ಹೊರಬಂದವಳು ಹಿರಿಮಗಳು ಸಲ್ಮಾಳನ್ನು ನೋಡಲು ಧೈರ್ಯ ಸಾಲದೇ ಅಂಗಳದಲ್ಲಿ ನಿಂತು ಕತ್ತಲನ್ನು ದಿಟ್ಟಿಸುತ್ತಾ ಸೀಮೆಎಣ್ಣೆಯನ್ನು ಮೈಮೇಲೆ ಸುರಿದುಕೊಳ್ಳುತ್ತಾಳೆ. ಹಸುಗೂಸಿನ ಅಳುವಿನಿಂದ ಎಚ್ಚೆತ್ತ ಸಲ್ಮಾ ಮಗುವನ್ನು ಎದೆಗವಚಿಕೊಂಡು ಅಂಗಳಕ್ಕೆ ಬಂದಾಗ ಅಮ್ಮನನ್ನು ನೋಡಿ ತತ್ತರಿಸಿ ಹೋಗುತ್ತಾಳೆ. ‘ಅಬ್ಬಾಗೋಸ್ಕರ ಸಾಯಲು ಸಿದ್ಧಳಾಗಿರುವ ನೀನು ನಮಗಾಗಿ ಬದುಕಲು ಸಾಧ್ಯವಿಲ್ಲವೆ?’ಎನ್ನುವ ಮಾತು ಆರುತ್ತಿದ್ದ ಮೆಹರುನ್‌ಳ ಎದೆಯ ಹಣತೆಯನ್ನು ಉದ್ದೀಪನಗೊಳಿಸುತ್ತದೆ. ಯಾವುದೇ ಕಥೆಗಾರರಿಗೂ ಸವಾಲೆಂದರೆ ಕಥೆಯನ್ನು ಕೊನೆಗಾಣಿಸುವುದು. ಕಥೆ ಹೇಗಾದರೂ ಕೊನೆಯಾಗಬಹುದು, ಆದರೆ ಸಂದೇಶ? ಬಾನು ಮುಷ್ತಾಕ್‌ರವರ ಕಥೆಗಳ ಪ್ರಧಾನ ಲಕ್ಷಣವೇ ಭರವಸೆಯಾಗಿದೆ.

ADVERTISEMENT

ನಾಟಕದ ವಸ್ತು ಗಂಭೀರವಾಗಿದ್ದು, ನಿರ್ದೇಶಕ ಗಣೇಶ ಎಂ. ಹೆಗ್ಗೋಡು ಅವರು ಸಾಲು ಸಾಲು ದೃಶ್ಯ ದೃಶ್ಯಗಳ ಮೂಲಕ ಬಂಧಗೊಳಿಸಿದ್ದಾರೆ. ಆಂಗಿಕ ಮತ್ತು ವಾಚಿಕ ಎರಡನ್ನೂ ಏಕಕಾಲದಲ್ಲಿ ನಿರ್ವಹಿಸಿರುವ ಕಲಾತ್ಮಕತೆ ಗಮನ ಸೆಳೆಯುತ್ತದೆ. ಏಕಕಾಲಕ್ಕೆ ಪಾತ್ರಗಳೇ ಸನ್ನಿವೇಶವನ್ನು ಕಟ್ಟಿಕೊಡುತ್ತ ಭಾವವನ್ನು ಪ್ರೇಕ್ಷಕರಿಗೆ ದಾಟಿಸುತ್ತವೆ. ಭಾವಾಭಿವ್ಯಕ್ತಿಯು ಎಲ್ಲಿಯೂ ವಾಚ್ಯವಾಗದೆ ಕಲಾವಿದರ ಭಾವವು ಪ್ರೇಕ್ಷಕರಲ್ಲಿ ಧ್ವನಿಯಾಗಿರುವುದು ನಾಟಕದ ಯಶಸ್ಸನ್ನು ಸೂಚಿಸುತ್ತದೆ. ಎನ್ಎಸ್‌ಡಿ ಪದವೀಧರೆ ಸಲ್ಮಾ ದಂಡಿನ್ ಅವರು ಮೆಹರುನ್ ಪ್ರಧಾನ ಪಾತ್ರ ಮಾಡಿರುವುದು ಅವರ ಅನುಭವಕ್ಕೆ ಸಾಕ್ಷಿಯಾಗಿದೆ.

ವಸ್ತುವಿನ ಗಂಭೀರತೆಯು ನಟನೆಯ ಮೂಲಕ ಮತ್ತಷ್ಟು ಚುರುಕನ್ನು ಪಡೆದುಕೊಂಡು ಸಂವಹನದಲ್ಲಿ ಸಾರ್ಥಕತೆಯನ್ನು ಪಡೆದಿದೆ. ಮೊದಲ ದೃಶ್ಯದಿಂದ ಕೊನೆಯ ದೃಶ್ಯದವರೆಗೂ ಆವರಿಸಿಕೊಂಡಿರುವ ಪಾತ್ರದ ಕಲಾವಂತಿಕೆ ಅಭಿನಯದ ಔನ್ಯತ್ಯವನ್ನು ಸಾಕ್ಷೀಕರಿಸುತ್ತದೆ. ಕಾರಿನಲ್ಲಿ ಚಲಿಸುವಾಗಿನ ಸ್ಥಿರಚಿತ್ರದ ಕ್ಯಾನ್ವಾಸ್ ಮನೆಯಲ್ಲಿ ರಂಗನ್ನು ಪಡೆದು ಅಂತ್ಯದಲ್ಲಿ ಪ್ರಜ್ವಲಿಸುವಂತೆ ಮಾಡಿದ್ದಾರೆ. ಮಗಳಾಗಿ ಸ್ನೇಹ, ಅಮಾನ್‌ನಾಗಿ ಅಶೋಕ್ ಕುಮಾರ್, ಇನಾಯತ್ತಾಗಿ ಸತೀಶ ಪಿ.ಬಿ.,ಚೇತನ್, ರಂಜಿತ್ ಶೆಟ್ಟಿ, ಯೋಗೀಶ್ ನಾಯ್ಕ ಕುಣಜಿ, ಸಂಗೀತದಲ್ಲಿ ಕೃಷ್ಣ ಬಡಿಗೇರ್, ಬೆಳಕಿನಲ್ಲಿ ಚೇತನ್ ಬೆಳಗಾವಿ ಮೊದಲಾದ ಅನುಭವೀ ಕಲಾವಿದರು ಮತ್ತು ತಂತ್ರಜ್ಞರು ನಾಟಕವನ್ನು
ಯಶಸ್ವಿಗೊಳಿಸಿದ್ದಾರೆ.

‘ಎದೆಯ ಹಣತೆ’ ನಾಟಕದ ದೃಶ್ಯ
ಜನಮನದಾಟ...
2005 ರಲ್ಲಿ ಶ್ರೀನಿವಾಸ ವೈದ್ಯ ಅವರ ಕಥೆಗಳ ಓದಿನೊಂದಿಗೆ ‘ಜನಮನದಾಟ’ ಪ್ರಾರಂಭವಾಯಿತು. ಇದುವರೆಗೂ ‘ಉಚಲ್ಯಾ’ ‘ರಹಸ್ಯ ವಿಶ್ವ’ ‘ಬಾಬಾ ಸಾಹೇಬ್ ಅಂಬೇಡ್ಕರ್’ ‘ಕುರುಕ್ಷೇತ್ರ’ ಮೊದಲಾದ ಇಪ್ಪತ್ತಕ್ಕೂ ಹೆಚ್ಚು ನಾಟಕಗಳನ್ನು ಎಂಟುನೂರಕ್ಕೂ ಅಧಿಕ ಪ್ರದರ್ಶನಗಳನ್ನು ರಾಜ್ಯ ಹೊರ ರಾಜ್ಯಗಳಲ್ಲಿ ನೀಡಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಪ್ರಸ್ತುತ ಬಾನು ಮುಷ್ತಾಕರ ‘ಎದೆಯ ಹಣತೆ’ ಹಾಗೂ ಪೂರ್ಣಚಂದ್ರ ತೇಜಸ್ವಿಯವರ ‘ಮಾಯಾಮೃಗ’ ನಾಟಕಗಳ ಪ್ರದರ್ಶನಕ್ಕಾಗಿ ರಾಜ್ಯದ ವಿವಿಧೆಡೆ ಸಂಚಾರ ಕೈಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.