ADVERTISEMENT

ಬುದ್ಧ-ನಮ್ಮೊಳಗೇ ಇರುವ ಬೆಳಕು

ಎಸ್.ನಟರಾಜ ಬೂದಾಳು
Published 29 ಏಪ್ರಿಲ್ 2023, 19:59 IST
Last Updated 29 ಏಪ್ರಿಲ್ 2023, 19:59 IST
ಬುದ್ಧ
ಬುದ್ಧ   

‘ನಿ ನಗೆ ನೀನೇ ಬೆಳಕು’–ಇದು ಬುದ್ಧನ ಕೊನೆಯ ನುಡಿ. ಬುದ್ಧದರ್ಶನ ಹೊರಗಿನಿಂದ ತಿಳಿದುಕೊಳ್ಳಬೇಕಾದದ್ದಲ್ಲ; ಬದಲಿಗೆ ತನ್ನೊಳಗೇ ಇರುವುದನ್ನು ಕಂಡುಕೊಳ್ಳುವ ಸಂಗತಿ. ಹಾಗಾಗಿ ಬುದ್ಧನಾಗುವ ಸಾಧ್ಯತೆ ಎಲ್ಲರಿಗೂ ಇದೆ. ಇಡೀ ಜಗತ್ತು ಈ ಹೊತ್ತು ತಲ್ಲಣಿಸುತ್ತಿದೆ. ಧರ್ಮದ, ಜಾತಿಯ, ಭಾಷೆಯ, ದೇಶಗಳ, ಜನಾಂಗಗಳ, ಮನುಷ್ಯರ ಬಣ್ಣದ ಗಂಡು-ಹೆಣ್ಣಿನ ನಡುವಿನ ತಾರತಮ್ಯದ ಗೆರೆಗಳು ಮತ್ತು ನಿಸರ್ಗ ವಿರೋಧಿಯಾದ ಪೊಳ್ಳು ತತ್ವಜ್ಞಾನಗಳು ಇವತ್ತಿನ ಬಹುಪಾಲು ಸಂಕಟಗಳಿಗೆ ಕಾರಣವಾಗಿವೆ. ಇವುಗಳಿಗೆ ಪರಿಹಾರ ಹುಡುಕಿಕೊಡುವುದೇ ಬುದ್ಧನ ಗುರಿಯಾಗಿತ್ತು.

ಬೌದ್ಧ ತಾತ್ವಿಕತೆಯು ಕೇವಲ ಕೇಳಿಸಿಕೊಳ್ಳುವ, ತಾತ್ವಿಕತೆಯಲ್ಲ; ಬದುಕುವ ಬಾಳು. ಅದು ಪ್ರಪಂಚದ ಈ ಹೊತ್ತಿನ ರೋಗಕ್ಕೆ ಮದ್ದು ದೊರಕುವ ಆಸ್ಪತ್ರೆ. ಬುದ್ಧ ಗುರುತತ್ವ ವೈದ್ಯನಾಗಿರುವುದರಿಂದ ಅವನ ಬಳಿ ದುಃಖಕ್ಕೆ ಈಡಾದ ಯಾವ ಮನುಷ್ಯನೂ ಹೋಗಬಹುದು. ಅದನ್ನು ಒಂದು ಧರ್ಮ ಎನ್ನುವುದಕ್ಕಿಂತ ಅದೊಂದು ರೋಗ ಪರಿಹಾರ ಎನ್ನುವುದೇ ಸೂಕ್ತವಾದದ್ದು. ಹಾಗಾಗಿ ಅದನ್ನು ತಿಳಿದುಕೊಳ್ಳುವುದು ಎಂದರೆ: ಸರಿ ಇಲ್ಲದಿರುವುದನ್ನು ಸರಿಪಡಿಸಿಕೊಂಡು ಬಾಳುವುದು.

ಕಳ್ಳತನ ಮಾಡಬೇಡಿ, ಸುಳ್ಳು ಹೇಳಬೇಡಿ, ಹಾದರ ಮಾಡಬೇಡಿ, ಮದ್ಯ ಕುಡಿಯಬೇಡಿ, ಇತ್ಯಾದಿ ವಿಧಿ-ನಿಷೇಧಗಳ ಪಟ್ಟಿ ಎಲ್ಲ ಧರ್ಮಗಳಲ್ಲಿಯೂ ಇದೆ. ಬೌದ್ಧದರ್ಶನದಲ್ಲಿಯೂ ಇದೆ. ಹಾಗಾದರೆ ಬೌದ್ಧ ಧರ್ಮದ ವಿಶೇಷ ಏನು? ಈ ಪ್ರಶ್ನೆಗಳಿಗೆ ಬೌದ್ಧ ದರ್ಶನದಲ್ಲಿ ಸ್ಪಷ್ಟ ಮತ್ತು ಖಚಿತವಾದ ಉತ್ತರಗಳಿವೆ. ನಮ್ಮ ಈವರೆಗಿನ ಲೋಕಗ್ರಹಿಕೆಯ ಕ್ರಮವನ್ನು ಕೈಬಿಡದ ಹೊರತು ಬೌದ್ಧ ತಾತ್ವಿಕತೆಯನ್ನು ಕೇವಲ ಕೇಳಿಸಿಕೊಂಡರೆ ಏನೂ ಪ್ರಯೋಜನವಿಲ್ಲ.

ADVERTISEMENT

ಬೌದ್ಧ ದರ್ಶನದ ನಿಲುವುಗಳು ಇವು

ಅಕಾಲ್ಪನಿಕತೆ ಬುದ್ಧ ಗುರು ಮುಂದಿಟ್ಟ ಬಹು ಮುಖ್ಯ ನಿಲುವು. ನಮ್ಮ ಅನುಭವಕ್ಕೆ ಬರದ ಭ್ರಮೆ, ಕಲ್ಪನೆ, ಊಹೆ, ಕಾಲ್ಪನಿಕ ನಂಬಿಕೆಗಳು ಅದೆಷ್ಟೇ ಪ್ರಾಚೀನವಾದರೂ, ಕೋಟ್ಯಂತರ ಜನ ನಂಬಿ ಬದುಕುತ್ತಿದ್ದರೂ, ಸುತ್ತಲಿನ ಸಂಸ್ಥೆಗಳು ಹೇಳುತ್ತಿದ್ದರೂ ಅವುಗಳನ್ನು ನಿಜವೆಂದು ಒಪ್ಪಿಕೊಳ್ಳಬೇಡಿ. ಏಕೆಂದರೆ ಇವೇ ಈಗ ನಮ್ಮ ಬದುಕನ್ನು ನಿಯಂತ್ರಿಸುತ್ತಿವೆ. ಕಾಲ್ಪನಿಕ ಸಂಗತಿಗಳ ದೊಡ್ಡ ಪಟ್ಟಿ ಇದೆ. ಬ್ರಹ್ಮವಾದ, ಆತ್ಮವಾದ, ಜಾತಿವಾದ, ಲಿಂಗ ತಾರತಮ್ಯವಾದ, ಜನಾಂಗೀಯವಾದ ಅಸ್ಪೃಶ್ಯತೆ ಮುಂತಾದುವುಗಳೆಲ್ಲವೂ ಭಾಷೆಯಲ್ಲಿ ಕಟ್ಟಿದ ಭ್ರಮಾತ್ಮಕ ಸಂಗತಿಗಳು. ಆದರೆ ಘೋರವಾದ ಪರಿಣಾಮಗಳನ್ನು ಉಂಟುಮಾಡುತ್ತಿವೆ. ಬುದ್ಧ ಇಂಥವುಗಳನ್ನು ಇಲ್ಲದ ಮೊಲದ ಕೊಂಬಿನ ಬಗೆಗಿನ ಚರ್ಚೆ ಎನ್ನುತ್ತಾನೆ. ಇತರ ಧರ್ಮಗಳು ಏನನ್ನಾದರೂ ಹೇಳಲಿ, ಪಾಲಿಸುವವರು ಪಾಲಿಸಲಿ. ಅದು ಅವರ ಸ್ವಾತಂತ್ರ್ಯ. ಆದರೆ ನಿಸರ್ಗ ವಿವೇಕ ಯಾವ ಸಂಗತಿಗಳನ್ನು ಒಪ್ಪಿಕೊಳ್ಳುತ್ತದೆಯೋ ಅವುಗಳನ್ನು ಮಾತ್ರ ಒಪ್ಪಿ ಪಾಲಿಸಿ ಎನ್ನುವುದು ಬೌದ್ಧ ತಾತ್ವಿಕತೆಯ ನಿಲುವು.

ತ್ರಿಲಕ್ಷಣಗಳು: ಅನಿತ್ಯ, ಅನಾತ್ಮ ಮತ್ತು ದುಃಖ–ಇವು ಲೋಕದ ನಿಜ ಲಕ್ಷಣಗಳು. ಎಲ್ಲವೂ ಸದಾ ಬದಲಾಗುತ್ತಲೇ ಹೋಗುತ್ತವೆ; ಯಾವುದರಲ್ಲಿಯೂ ಅದರದ್ದೇ ಆದ ಸ್ವಂತದ್ದು ಎನ್ನುವುದು ಇರುವುದಿಲ್ಲ; ಮತ್ತು ಲೋಕ ಸದಾ ತಲ್ಲಣಿಸುತ್ತಿರುತ್ತದೆ, ಸ್ಥಿರವಾಗಿರುವುದಿಲ್ಲ. ಇದನ್ನು ಬುದ್ಧ ತಿಳಿಸಿಕೊಟ್ಟಿದ್ದಾನೆ.

ಸಾಮರಸ್ಯ-ಲೋಕದ ನಡೆ ಲೋಕವೆನ್ನುವುದು ಹರಿಯುತ್ತಿರುವ ಪ್ರವಾಹ. ಇಲ್ಲಿ ಯಾರಿಗೂ, ಯಾವುದಕ್ಕೂ ಸ್ವತಂತ್ರ ಅಸ್ತಿತ್ವವಿಲ್ಲ. ಎಲ್ಲ ಮತ್ತೊಂದನ್ನು ಅವಲಂಬಿಸಿಯೇ ಇರಬೇಕು. ಎಲ್ಲವೂ ಎಲ್ಲರಿಂದ ಮತ್ತು ಎಲ್ಲರಿಗಾಗಿ ಇದೆ. ಇಲ್ಲಿ ಯಾರನ್ನೂ ಯಾವುದನ್ನೂ ಇಲ್ಲವಾಗಿಸಿ ಬಾಳಲಾಗದು. ಎಲ್ಲವೂ ಮತ್ತೊಂದರ ಸಂಬಂಧದಲ್ಲಿ ಮಾತ್ರ ಉಂಟಾಗಬಲ್ಲದು. ಹಾಗಾಗಿ ಎಲ್ಲದರ ನಡುವೆ ಸಾಮರಸ್ಯವೊಂದೇ ಅನಿವಾರ್ಯ ದಾರಿ. ಮತ್ಯಾವುದಕ್ಕೋ ಕೆಡುಕು ಮಾಡಿ ತನಗೆ ಒಳಿತು ಮಾಡಿಕೊಳ್ಳುವುದು ಸಾಧ್ಯವಿಲ್ಲ. ಇದಕ್ಕೆ ವ್ಯತಿರಿಕ್ತವಾದ ನಡೆಯೇ ನಮ್ಮ ನಡುವಿನ ಸಂಘರ್ಷಕ್ಕೆ ಕಾರಣವಾಗಿದೆ. ಹಾಗಾಗಿ ಪ್ರಜಾಪ್ರಭುತ್ವ, ವಿಜ್ಞಾನ ಮತ್ತು ಬೌದ್ಧ ತಾತ್ವಿಕತೆಯ ನಡುವೆ ಸಮಾನತೆ ಇದೆ. ಈ ಪ್ರತೀತ್ಯ ಸಮುತ್ಪಾದ ತತ್ವವು ಲೋಕವನ್ನು ಸರಿಯಾಗಿ ವಿವರಿಸಿಕೊಡುವ ವೈಜ್ಞಾನಿಕ ತಿಳಿವಳಿಕೆಯಾಗಿದೆ.

ಪ್ರಮಾಣ ನಿರಾಕರಣೆ: ‘ಯಾವುದನ್ನೂ ಪ್ರಶ್ನಿಸದೆ ಒಪ್ಪಿಕೊಳ್ಳಬೇಡಿ; ನನ್ನ ಮಾತನ್ನು ಕೂಡ’ ಎನ್ನುವುದು ಬುದ್ಧನ ನಿಲುವು. ‘ಪರಂಪರೆಯ ಆಚರಣೆಯಲ್ಲಿದೆ, ಧಾರ್ಮಿಕ ಗ್ರಂಥಗಳಲ್ಲಿದೆ, ತಾರ್ಕಿಕವಾಗಿ ಸರಿಯಿದೆ, ಇಂಥವರು ಹೇಳಿದ್ದಾರೆ ಅಥವಾ ಹೇಳಿಲ್ಲ, ಹೇಳುತ್ತಿರುವವರು ನಂಬಿಕೆಗೆ ಅರ್ಹರು/ಅರ್ಹರಲ್ಲ, ಹೇಳುತ್ತಿರುವವರು ಗುರುಗಳು ಅಥವಾ ಗುರುಗಳಲ್ಲ ಎಂಬ ಕಾರಣಗಳಿಗಾಗಿ ಯಾವುದನ್ನೂ
ಒಪ್ಪಿಕೊಳ್ಳಬೇಡಿ ಅಥವಾ ತಿರಸ್ಕರಿಸಬೇಡಿ. ಬದಲಿಗೆ ಸ್ವತಃ ವಿವೇಚಿಸಿ ನೋಡಿದಾಗ ಯಾವ ಸಂಗತಿಗಳು ಲೋಕಕ್ಕೆ ಕೇಡುಂಟುಮಾಡುತ್ತವೆಯೋ, ಅಂಥವುಗಳಿಂದ ದೂರವಿರಿ’. ತಮ್ಮನ್ನು ಪ್ರಶ್ನಿಸುವುದನ್ನು ಒಪ್ಪದ ಕೆಲವೇ ಪ್ರಮಾಣ ಗ್ರಂಥಗಳು ಲೋಕದ ಬಹುಪಾಲು ಸಂಕಟಕ್ಕೆ ಕಾರಣವಾಗಿವೆ ಎನ್ನುವುದು ಕಣ್ಣೆದುರಿನ ಸತ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.