ADVERTISEMENT

PM Krishi Sinchai Yojana | ಬಂಗಾರವಾದ ಬಂಜರು ನೆಲ; ಬೇಸಿಗೆಯಲ್ಲೂ ಬತ್ತದ ಜಲ

​ಪ್ರಜಾವಾಣಿ ವಾರ್ತೆ
Published 29 ಜೂನ್ 2025, 0:30 IST
Last Updated 29 ಜೂನ್ 2025, 0:30 IST
ಬೆಟ್ಟಗುಡ್ಡಗಳಲ್ಲಿ ಕಟ್ಟಿದ ಚೆಕ್‌ಡ್ಯಾಂ
ಬೆಟ್ಟಗುಡ್ಡಗಳಲ್ಲಿ ಕಟ್ಟಿದ ಚೆಕ್‌ಡ್ಯಾಂ   
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಮಳೆಗಾಲದಲ್ಲಿ ಬೆಟ್ಟಗುಡ್ಡಗಳಿಂದ ಇಳಿದ ವ್ಯರ್ಥವಾಗಿ ಹರಿದು ಹೋಗುತ್ತಿದ್ದ ನೀರಿಗೆ ಚೆಕ್‌ ಡ್ಯಾಂ, ನಾಲಾ ಬಂಡ್‌ಗಳು, ಕಲ್ಲಿನ ತಡೆಗೋಡೆಗಳನ್ನು ನಿರ್ಮಿಸಲಾಯಿತು. ಈಗ ಅವುಗಳಲ್ಲಿ ನೀರು ನಿಂತು ಸಾವಿರಾರು ಎಕರೆ ಹಸಿರು ಹೊದ್ದು ಕಂಗೊಳಿಸುತ್ತಿದೆ.

ಸುತ್ತಲೂ ಬೆಟ್ಟಗುಡ್ಡಗಳ ಸಾಲು. ಕೃಷಿ ಮಾಡಲು ಅನ್ನದಾತನಿಗೆ ಇದೇ ಸವಾಲು. ಎಷ್ಟು ಭೂಮಿ ಇದ್ದರೇನು ಫಲ? ನಿಲ್ಲೋದೇ ಇಲ್ಲ ಇಲ್ಲಿ ಜೀವಜಲ...ಹೀಗೆ ಕಳೆದ ಮೂರು ವರ್ಷಗಳ ಹಿಂದೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಕೋಥಳಿ, ಚಿಂಚಣಿ, ಹಿರೇಕೋಡಿ ಮುಂತಾದ ಗ್ರಾಮಗಳ ರೈತರು ಗೊಣಗಿಕೊಳ್ಳುತ್ತಿದ್ದರು.

ಇಂದು ಹಾಗಿಲ್ಲ. ಬರಡು ನೆಲವು ಬಂಗಾರವಾಗಿದೆ. ಬಂಜರುಭೂಮಿಯು ಕೃಷಿಗೆ ಯೋಗ್ಯವಾಗಿದೆ. ಇದಕ್ಕೆಲ್ಲ ಕಾರಣ ಬೆಟ್ಟಗುಡ್ಡ, ಹಳ್ಳಕೊಳ್ಳಗಳಿಗೆ ಕಟ್ಟಿದ ಚೆಕ್ ಡ್ಯಾಂ, ನಾಲಾ ಬಂಡ್‌ಗಳು. ಇವುಗಳು ವ್ಯರ್ಥವಾಗಿ ಹರಿಯುವ ಮಳೆ ನೀರನ್ನು ಹಿಡಿದಿಟ್ಟುಕೊಳ್ಳಲು ಅನುಕೂಲ ಮಾಡಿವೆ. ಬೆಟ್ಟಗುಡ್ಡಗಳಿಂದ ಕೂಡಿದ ಈ ಭಾಗದಲ್ಲಿ ಮಳೆ ಸುರಿದರೆ ಕಾದ ಹಂಚಿನ ಮೇಲೆ ನೀರು ಸುರಿದಂತೆಯೇ ಸರಿ. ನೀರು ವ್ಯರ್ಥವಾಗಿ ಹರಿದು ಹೋಗುತ್ತಿತ್ತು. ಹೀಗೆ ವ್ಯರ್ಥವಾಗಿ ಹರಿದು ಹೋಗುವ ನೀರನ್ನು ತಡೆದು ನಿಲ್ಲಿಸಿದ್ದರಿಂದ ಬೆಟ್ಟಗುಡ್ಡಗಳು ಹಸಿರ ಹೊದಿಕೆ ಹೊದ್ದಿದ್ದರೆ, ಬಂಜರು ಭೂಮಿ ಹಸಿರ ತೆನೆ ಹೊತ್ತು ‘ತಾನ...ತನನನ’ ಅಂತಾ ಹಾಡು ಹಾಡುತ್ತಿದೆ.

ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯ ಜಲಾನಯನ ಘಟಕದ ಅಡಿಯಲ್ಲಿ 2022-25ನೇ ಸಾಲಿನ ಮೂರು ವರ್ಷಗಳ ಅವಧಿಯಲ್ಲಿ ಹಿರೇಕೋಡಿ ಉಪ ಜಲಾನಯನ ಯೋಜನೆಯ 6195 ಹೆಕ್ಟೇರ್ ಪ್ರದೇಶದಲ್ಲಿ 58 ಚೆಕ್ ಡ್ಯಾಂ, 68 ನಾಲಾ ಬಂಡ್, 20 ಕಲ್ಲಿನ ತಡೆಗೋಡೆ, 2800 ಹೆಕ್ಟೇರ್ ಪ್ರದೇಶದಲ್ಲಿ ಬದು ನಿರ್ಮಾಣ ಮಾಡಲಾಗಿದೆ. ಹೀಗೆ ಮಳೆಗಾಲದಲ್ಲಿ ವ್ಯರ್ಥವಾಗಿ ಹರಿದು ಹೋಗುವ ನೀರನ್ನು ತಡೆದು ನಿಲ್ಲಿಸಲಾಗುತ್ತಿದೆ. ಇದರಿಂದ 800 ಅಡಿಗೂ ಹೆಚ್ಚು ಆಳಕ್ಕೆ ಕೊಳವೆ ಕೊರೆದರೂ ಬಾರದ ನೀರು ಇದೀಗ 400-500 ಅಡಿಗೆ ಉಕ್ಕುತ್ತಿದೆ. ಬೇಸಿಗೆಯಲ್ಲೂ ಬೇಸಾಯ ಮಾಡುವ ಶಕ್ತಿ ಈ ಭಾಗದ ರೈತರಲ್ಲಿ ಬಂದಿದೆ!

ADVERTISEMENT

ಯೋಜನೆ ವ್ಯಾಪ್ತಿಯು ನಾಗರಾಳ, ಹಿರೇಕೋಡಿ, ಕೋಥಳಿ, ಚಿಂಚಣಿ ಗ್ರಾಮ ಪಂಚಾಯಿತಿಗಳನ್ನು ಒಳಗೊಂಡಿದ್ದು, ಹತ್ತಕ್ಕೂ ಹೆಚ್ಚು ಗ್ರಾಮಗಳ ಸಾವಿರಾರು ರೈತರು ಈ ಯೋಜನೆಯ ಲಾಭವನ್ನು ಪಡೆದುಕೊಂಡಿದ್ದಾರೆ. ಮೂರು ವರ್ಷಗಳ ಹಿಂದೆ ಆರು ಎಕರೆ ಜಮೀನು ಇದ್ದ ರೈತ ಕೇವಲ 2-3 ಎಕರೆ ಭೂಮಿಯನ್ನು ನೀರಾವರಿಗೊಳಪಡಿಸುವಷ್ಟು ನೀರು ಲಭ್ಯವಾಗುತ್ತಿತ್ತು; ಅದೂ ಮಳೆಗಾಲದಲ್ಲಿ. ಬೇಸಿಗೆಯಲ್ಲಿ ಬೆಳೆ ಬೆಳೆಯದೇ ಹಾಗೇ ಬಿಡಲಾಗುತ್ತಿತ್ತು.

ಇದೀಗ ವರ್ಷಕ್ಕೆ ಎರಡು ಮೂರು ಬೆಳೆ ಬೆಳೆಯಲು ಅನುಕೂಲವಾಗಿದೆ. ಅಲ್ಲದೇ, ಬಂಜರು ಇದ್ದ ನೆಲವನ್ನೂ ಉಳುಮೆ ಮಾಡಿ ಬಹುತೇಕ ರೈತರು ಬೇಸಾಯ ಮಾಡಿ ಆರ್ಥಿಕವಾಗಿ ಸ್ಥಿತಿವಂತರಾಗುವತ್ತ ಹೆಜ್ಜೆ ಇಟ್ಟಿದ್ದಾರೆ.

ಚಿಕ್ಕೋಡಿ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರಾಗಿದ್ದ ಮಂಜುನಾಥ ಜನಮಟ್ಟಿ, ಸೇವಾ ನಿವೃತ್ತಿ ಹೊಂದಿರುವ ಕೃಷಿ ಅಧಿಕಾರಿ ಎಸ್.ಎಚ್. ಜಾತಗಾರ, ಮುಂತಾದವರ ಇಚ್ಛಾಶಕ್ತಿಯಿಂದ ಇಂತಹದೊಂದು ಅಭೂತಪೂರ್ವ ಕಾರ್ಯ ಸಾಕಾರಗೊಳ್ಳಲು ಸಾಧ್ಯವಾಗಿದೆ. ಬೆಟ್ಟಗುಡ್ಡಗಳಲ್ಲಿ ನಿರ್ಮಿಸಿದ ಚೆಕ್‍ ಡ್ಯಾಂಗಳಲ್ಲಿ ನೀರು ನಿಲ್ಲುತ್ತಿದ್ದು, ಹಳ್ಳ ಕೊಳ್ಳಗಳಿಗೆ ಅಡ್ಡಲಾಗಿ ಕಟ್ಟಿರುವ ನಾಲಾ ಬಂಡ್‌ಗಳಿಂದಾಗಿ ಅಂತರ್ಜಲಮಟ್ಟ ಹೆಚ್ಚುತ್ತಿದೆ.

‘ನಾಲಾ ಬಂಡ್‌, ಚೆಕ್ ಡ್ಯಾಂ ನಿರ್ಮಾಣದಿಂದ ನಮ್ಮೂರಿನಲ್ಲಿ ಕೊಳವೆಬಾವಿ, ತೆರೆದ ಬಾವಿಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದೆ. ಇದರಿಂದ ಕೃಷಿ ಮಾಡಲು ರೈತರಿಗೆ ಅನುಕೂಲವಾಗಿದ್ದಲ್ಲದೇ, ಕುಡಿಯುವ ನೀರಿನ ಸಮಸ್ಯೆಯೂ ನೀಗಿದೆ’ ಎಂದು ಕೋಥಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಿತೇಂದ್ರ ಪಾಟೀಲ ಹೇಳುತ್ತಾರೆ.

ಹಿರೇಕೋಡಿ ಉಪ ಜಲಾನಯನ ಯೋಜನೆಯ ಅವಧಿ 2022 ರಿಂದ 2025ರ ಮಾರ್ಚ್‌ಗೆ ಕೊನೆಗೊಂಡಿದೆ. ಈ ಮೂರು ವರ್ಷಗಳ ಅವಧಿಯಲ್ಲಿ ವಿವಿಧ ಕಾಮಗಾರಿ, ಸ್ವ ಉದ್ಯೋಗ ಕೈಗೊಳ್ಳಲು ಸಹಾಯಧನ, ತರಬೇತಿ, ಅರಣ್ಯೀಕರಣ ಹೊರಗುತ್ತಿಗೆ ನೌಕರರಿಗೆ ಸಂಬಳ ಸೇರಿದಂತೆ ಒಟ್ಟು ₹ 13.62 ಕೋಟಿ ವೆಚ್ಚ ಮಾಡಲಾಗಿದೆ. ಯೋಜನೆಯ ಅನುಷ್ಠಾನ ಅವಧಿಯಲ್ಲಿ 3680 ರೈತರು ಈ ಯೋಜನೆಯ ಲಾಭ ಪಡೆದುಕೊಂಡಿದ್ದಾರೆ. ನೀರು ಸಂರಕ್ಷಣೆ ಹಾಗೂ ಮಣ್ಣಿನ ಸವಕಳಿ ತಡೆ ಪರಿಣಾಮವಾಗಿ ವರ್ಷದಿಂದ ವರ್ಷಕ್ಕೆ ಕೃಷಿ ಯೋಗ್ಯ ಭೂಮಿ ಹೆಚ್ಚಾಗುತ್ತಿದೆ. 2024ರಲ್ಲಿ ಕೇಂದ್ರ ಸರ್ಕಾರದ ಯೋಜನೆ ಅನುಷ್ಠಾನ ಪರಿಶೀಲನೆ ಮಾಡಲು ಬಂದಿದ್ದ ಅಧಿಕಾರಿಗಳು ಈ ಯೋಜನೆಯ ಯಶಸ್ವಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಯೋಜನೆ ವ್ಯಾಪ್ತಿಯ ಬೆಟ್ಟಗುಡ್ಡದಿಂದ ಕೂಡಿದ ಬಂಜರು ಭೂಮಿಯು ಇದೀಗ 240 ಹೆಕ್ಟೇರ್ ಪ್ರದೇಶದಲ್ಲಿ ಮಾವು, ಪೇರಲ, ಲಿಂಬೆ, ತೆಂಗು, ಚಿಕ್ಕು, ನುಗ್ಗೆ ಮುಂತಾದ ಗಿಡಗಳಿಂದ ಕಂಗೊಳಿಸುತ್ತಿದೆ. 245 ಹೆಕ್ಟೇರ್ ಪ್ರದೇಶದಲ್ಲಿ ಮಹಾಗಣಿ, ಅರಳಿ, ತೇಗ ಮುಂತಾದ ಗಿಡಗಳಿಂದ ಕೂಡಿದ ಕಿರುಕಾಡು ಬೆಳೆಸಲಾಗಿದೆ. ಹಸಿರು ಹೊದ್ದು ನಿಂತ ಬೆಟ್ಟ ಇದೀಗ ಪ್ರಾಣಿ ಪಕ್ಷಿ ಸಂಕುಲಕ್ಕೆ ಸ್ವರ್ಗವಾಗಿದೆ. ಕೃಷಿ ಇಲಾಖೆಯ ಅಧಿಕಾರಿಗಳ ಕರ್ತವ್ಯ ಪ್ರಜ್ಞೆ ಹಾಗೂ ಸ್ಥಳೀಯ ರೈತರ ಆಸಕ್ತಿದಾಯಕ ಪಾಲ್ಗೊಳ್ಳುವಿಕೆಯಿಂದ ಇಷ್ಟೆಲ್ಲ ಸಾಧ್ಯವಾಗಿದೆ.

ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯ ಪರಿಣಾಮ ಆರು ಸಾವಿರ ಹೆಕ್ಟೇರ್ ಜಮೀನು ಬೇಸಿಗೆಯಲ್ಲೂ ಹಸಿರು ಹೊದ್ದು ನಿಲ್ಲಲು ಸಾಧ್ಯವಾಗಿದೆ.
– ಎಚ್.ಡಿ. ಕೋಳೆಕರ, ಉಪ ನಿರ್ದೇಶಕ ಕೃಷಿ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.