ADVERTISEMENT

ನಾಟಕ ವಿಮರ್ಶೆ: ಮಕ್ಕಳ ರಂಗಭೂಮಿಗೆ ಚಿಂತನೆಯ ಬೆಸುಗೆ

ಪ್ರಜಾವಾಣಿ ವಿಶೇಷ
Published 31 ಜನವರಿ 2026, 23:41 IST
Last Updated 31 ಜನವರಿ 2026, 23:41 IST
<div class="paragraphs"><p>ಕಾಪಿಚಟ್ ಕಳ್ಳೇಕಾಯ್ ನಾಟಕದ ದೃಶ್ಯ &nbsp;</p></div>

ಕಾಪಿಚಟ್ ಕಳ್ಳೇಕಾಯ್ ನಾಟಕದ ದೃಶ್ಯ  

   

ಚಿತ್ರಗಳು: ತಾಯಿ ಲೋಕೇಶ್

‘ಒಳ್ಳೆ ಸಮಯ ಒಳ್ಳೆ ಸಮಯ ಒಳ್ಳೆ ಸಮಯವು, ಕಳ್ಳತನವ ಮಾಡಲಿಕ್ಕೆ ಒಳ್ಳೆ ಸಮಯವು’ ಎನ್ನುವ ಸದಾರಮೆಯ ಕಳ್ಳನಂತೆಯೇ ಇಲ್ಲಿಯೂ ತುಡುಗು ಮಾಡುವ ಒಂದು ಪಡ್ಡೆ ಹೈಕಳ ತಂಡವಿದೆ. ಅವರಿಗೆ ಸಿಕ್ಕ ಸಿಕ್ಕ ಕಡೆ ಕನ್ನ ಹಾಕದಿದ್ದರೆ ನೆಮ್ಮದಿ ಇಲ್ಲ. ಊರಿಗೆ ಊರೇ ಹೌಹಾರುವಂತೆ ಮಾಡಿರುವ ಈ ಕಳ್ಳರ ಗ್ಯಾಂಗ್ ಇನ್ನೇನು ಸಿಕ್ಕಿಹಾಕಿಕೊಂಡು ಬಿಡುತ್ತದೆ ಎನ್ನುವಾಗ ಎದ್ದು ಬಿದ್ದು ಈಜಿ ಊರು ಬಿಟ್ಟು ಪರಾರಿಯಾಗಿಬಿಡುತ್ತದೆ. ಹಾಗೆ ಅವರು ಎದ್ದು ಬಿದ್ದು ಸೇರಿದ್ದು ‘ಹಂಬಲ್ಪುರ’ವನ್ನು.

ADVERTISEMENT

ಹಂಬಲ್ಪುರದಲ್ಲಿ ದುಡಿಮೆಗೆ ಮಾತ್ರ ಬೆಲೆ ಉಳಿದದ್ದಕ್ಕಲ್ಲ. ಇಲ್ಲಿ ಹಣ ಸದ್ದೇ ಮಾಡುವುದಿಲ್ಲ, ಗುಣ ಮಾತ್ರ. ಬಾಳೆಹಣ್ಣಿನ ಗೊನೆ ಹೊತ್ತೊಯ್ದರೂ ಕೇಳುವವರಿಲ್ಲ, ಊಟ ಮಾಡಿದ ಗ್ಯಾಂಗ್ ತಿರುಗಿ ನೋಡದೆ ಹೋದರೂ ಯಾಕೆ ಎನ್ನುವವ ರಿಲ್ಲ. ಎಲ್ಲರೂ ನೆಮ್ಮದಿಯಿಂದ ಇರಬೇಕು ಎನ್ನುವುದೊಂದೇ ಸೂತ್ರ.

ಕಬ್ಬಿಣದ ಅಂಗಡಿಯಲ್ಲಿ ನೊಣಕ್ಕೇನು ಕೆಲಸ ಎನ್ನುವಂತೆ ಹಣ ಇಲ್ಲದ, ದುರಾಸೆ ಇಲ್ಲದ ಕಡೆ ಕಳ್ಳರಿಗೇನು ಕೆಲಸ? ಕೊನೆಗೆ ಅವರು ಅನಿವಾರ್ಯವಾಗಿ ತಮ್ಮ ದುರ್ಗುಣಗಳನ್ನು ಕಳಚಿ ಬಿಸಾಕಿ ಒಳ್ಳೆಯ ಮನುಷ್ಯರಾಗಬೇಕಾಗಿ ಬರುತ್ತದೆ.

ಬಾದಲ್ ಸರ್ಕಾರ್‌ ಈ ನಾಟಕ ಬರೆದದ್ದು 1977 ರಲ್ಲಿ. ‘ಹಟ್ಟಮಲಾರ್ ಒಪಾರೆ’ ಎನ್ನುವ ನಾಟಕ ಇದು. ಇದರ ಅರ್ಥ ಹಟ್ಟಮಲಾರ್‌ನ ಆಚೆಗೆ. ಅಂದರೆ ಇದು ಹಟ್ಟಮಲಾರ್‌ನ ಕಥೆ ಮಾತ್ರವಲ್ಲ. ಜಾಗತೀಕರಣದಿಂದಾಗಿ ದುರಾಸೆ, ದಗಲಬಾಜಿತನ, ಸೊಕ್ಕು, ಹಣವೇ ಎಲ್ಲವೂ ಆಗಿರುವ ಎಲ್ಲಾ ನೆಲದ ಕಥೆಯಾಗಿ ಇದು ಅರಳಿ ನಿಲ್ಲುತ್ತದೆ.

ಬೆಂಗಳೂರಿನ ‘ವಿಜಯನಗರ ಬಿಂಬ’ ರಂಗಭೂಮಿಗೆ ತನ್ನದೇ ಆದ ಕೊಡುಗೆಯನ್ನು ನೀಡಿದೆ. ಅದರಲ್ಲೂ ಮಕ್ಕಳ ರಂಗಭೂಮಿಗೆ. ಮಕ್ಕಳ ನಾಟಕ ಆಡಿಸುವುದು ಈ ತಂಡಕ್ಕೆ ಎಷ್ಟು ಇಷ್ಟ ಎನ್ನುವುದು ಇತ್ತೀಚೆಗೆ ಅವರು ರಂಗಕ್ಕೇರಿಸಿದ ಎರಡು ಮಕ್ಕಳ ನಾಟಕಗಳು ಸಾಬೀತುಪಡಿಸಿದವು.

ಬಾದಲ್ ಸರ್ಕಾರ್ ಅವರ ನಾಟಕ ಅದರಲ್ಲಿ ಒಂದು. ಬಾದಲ್ ಸರ್ಕಾರ್‌ ಅವರು ನಿಜಕ್ಕೂ ಯಾವುದಕ್ಕೆ ಒತ್ತು ನೀಡಲು ಬಯಸಿದ್ದಾರೋ ಅದನ್ನು ಸಮರ್ಥವಾಗಿ ಮಕ್ಕಳ ನಾಟಕಗಳಲ್ಲಿ ತಮ್ಮದೇ ಛಾಪು ಮೂಡಿಸಿರುವ ಸುಷ್ಮಾ ಎಸ್. ವಿ. ಚೆನ್ನಾಗಿ ಹಿಡಿದಿದ್ದಾರೆ. ಈ ಕಾರಣಕ್ಕಾಗಿಯೇ ಈ ನಾಟಕ ನೋಡಲು ಒಂದು ಹಾಸ್ಯದ ನಾಟಕ ಎನಿಸಿದರೂ ‘ಕಣ್ಣೀರಿನ ಕಡಲಿನ ಪಾಲು ಹಾಸ್ಯದ ಹರಿಗೋಲು’ ಎಂದು ಕೈಲಾಸಂ ಹೇಳುವ ಹಾಗೆ ನಾಟಕದ ಉದ್ದಕ್ಕೂ ಶಾಲ್ಮಲೆಯಂತೆ ಈ ಸಮಾಜದ ದುರಂತವನ್ನು ಸುಷ್ಮಾ ಕಟ್ಟಿಕೊಡುತ್ತಲೇ ಹೋಗಿದ್ದಾರೆ.

ನಾಟಕ ಮೊದಲು ಗೆಲ್ಲುವುದೇ ಅದನ್ನು ರೂಪಾಂತರಿಸುವ ರೀತಿಯಲ್ಲಿ. ಎಸ್.ವಿ.ಕಶ್ಯಪ್‌ಗೆ ನಾಟಕ ಕಟ್ಟುವುದು ಮಕ್ಕಳಾಟದಂತೆ. ಇದು ನಮ್ಮ ಊರಿನ, ನಮ್ಮ ಹಟ್ಟಿಯದ್ದೇ ಕಥೆ ಎನ್ನುವಂತೆ ಮಾಡಿ ಬಿಟ್ಟಿದ್ದಾರೆ. ವಿಶ್ವನಾಥ ಮಂಡಿ ಅವರ ಸೆಟ್ ಮಕ್ಕಳ ಕಲ್ಪನಾ ಲೋಕವನ್ನು ಮತ್ತಷ್ಟು ವಿಸ್ತರಿಸುತ್ತದೆ, ಹರಿವ ನದಿ, ಗೋಡೆಗೆ ಕೊರೆವ ಕಿಂಡಿ, ದನದ ಕೊಟ್ಟಿಗೆ ಎಲ್ಲವೂ ನಾಟಕಕ್ಕೆ ಕಳೆ ಕಟ್ಟುತ್ತದೆ. ಬೆಳಕೂ ನಾಟಕದ ಯಶಸ್ಸಿಗೆ ಅಷ್ಟೇ ದುಡಿದಿದೆ.

‘ಕಾಪಿಚಟ್ ಕಳ್ಳೇಕಾಯ್’

‘ಕಾಪಿಚಟ್ ಕಳ್ಳೇಕಾಯ್’ ನಾವು ನಾವಾಗಿಯೇ ಇರುವುದರ ಮಹತ್ವವನ್ನು ಹೇಳುವ ನಾಟಕ. ಬೆಕ್ಕಿಗೆ ಹುಲಿಯಾಗುವ, ಪಟ್ಟದ ಗೊಂಬೆಗೆ ಬಾರ್ಬಿಯಾಗುವ, ಅವರಿಗೆ ಇವರಾಗುವ, ಇವರಿಗೆ ಅವರಾಗುವ ಕನಸು. ಇವತ್ತಿನ ಮಾರಾಟ ಜಾಲ ಎಲ್ಲರಿಗೂ ಕನಸುಗಳನ್ನು ಮಾರುತ್ತಿದೆ. ಬೇರೊಬ್ಬರಂತೆ ಬದುಕಿದರೆ ಸಾರ್ಥಕತೆ ಎಂದು ನಂಬಿದವರ ಭ್ರಮೆಯನ್ನು ಕಳಚಿ ಹಾಕಿ ಸ್ವಂತಿಕೆಯ ಮಹತ್ವ ಏನು ಎನ್ನುವುದನ್ನು ಗುರುತಿಸುವುದೇ ಈ ನಾಟಕದ ಹೂರಣ.

ಮೂವರು ಕಥೆಗಾರರು ಕಥೆ ಕಟ್ಟುವುದರಿಂದ ಶುರುವಾಗುವ ಆಟ ನೋಡ ನೋಡುತ್ತಿದ್ದಂತೆಯೇ ಆ ಕಥೆಗಾರರ ಕೈ ತಪ್ಪಿಸಿ ಬೆಳೆಯುತ್ತದೆ. ಈ ನಾಟಕದ ರಚನೆ, ವಿನ್ಯಾಸ ಹಾಗೂ ನಿರ್ದೇಶನ ಎಸ್.ವಿ. ಕಶ್ಯಪ್ ಅವರದ್ದೇ. ನಾಟಕದುದ್ದಕ್ಕೂ ಲವಲವಿಕೆಯನ್ನು ಕಾಪಾಡುವಲ್ಲಿ ಕಶ್ಯಪ್ ಯಶಸ್ವಿಯಾಗಿದ್ದಾರೆ. ವಸ್ತ್ರವಿನ್ಯಾಸ ಈ ನಾಟಕದ ವಿಶೇಷ ಹೈಲೈಟ್.

ಹಂಬಲ್ಪುರ ನಾಟಕದ ದೃಶ್ಯ

ಮಕ್ಕಳು ಎರಡು ನಾಟಕದಲ್ಲೂ ಇಡೀ ರಂಗಸ್ಥಳವನ್ನು ಆವರಿಸಿಕೊಂಡುಬಿಡುತ್ತಾರೆ. ಹಾಡಿ ಕುಣಿದು ಮನಸ್ಸು ಗೆದ್ದುಬಿಡುತ್ತಾರೆ. ಎರಡು ನಾಟಕಗಳಿಗೂ ಸಂಗೀತ (ಸ್ಕಂದ, ಅಚಿಂತ್ಯ) ಪ್ರಸಾದನ (ಮಾಲತೇಶ್‌ ಬಡಿಗೇರ್‌) ವಸ್ತ್ರವಿನ್ಯಾಸ (ಶೋಭಾ ವೆಂಕಟೇಶ್‌) ನಿರ್ವಹಣೆ (ಬೃಂದಾ ಕಶ್ಯಪ್, ಎಸ್ ಆರ್ ವೆಂಕಟೇಶ್) ಉತ್ತಮವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.