ADVERTISEMENT

ಜಯದೇವಿ ಗಾಯಕವಾಡ ಸಂದರ್ಶನ: 'ಸಂವಿಧಾನ ಪೀಠಿಕೆ ಸಾಹಿತ್ಯ, ಚಳವಳಿಯ ಆಶಯವಾಗಲಿ'

ಡಾ.ಅನಸೂಯ ಕಾಂಬಳೆ
Published 13 ಡಿಸೆಂಬರ್ 2025, 23:30 IST
Last Updated 13 ಡಿಸೆಂಬರ್ 2025, 23:30 IST
<div class="paragraphs"><p>ಜಯದೇವಿ ಗಾಯಕವಾಡ</p></div>

ಜಯದೇವಿ ಗಾಯಕವಾಡ

   
ಡಿಸೆಂಬರ್‌ 20, 21 ರಂದು ರಾಯಚೂರಿನಲ್ಲಿ ನಡೆಯುವ 11ನೆಯ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಜಯದೇವಿ ಗಾಯಕವಾಡ ಆಯ್ಕೆಯಾಗಿದ್ದಾರೆ. ಸಂಶೋಧಕಿ, ಕಾದಂಬರಿಗಾರ್ತಿ, ಕವಯತ್ರಿಯೂ ಆಗಿರುವ ಅವರೊಂದಿಗೆ ನಡೆಸಿದ ಸಂದರ್ಶನ ಇಲ್ಲಿದೆ.

ನಿಮ್ಮ ಬದುಕನ್ನು ಹಿಂದಿರುಗಿ ನೋಡಿದರೆ...

ನಾನು ಏಕಕಾಲಕ್ಕೆ ಅಸ್ಪೃಶ್ಯತೆಯ ನೋವು, ಬಡತನದ ಸಂಕಟ, ಹೆಣ್ಣಿನ ತಾರತಮ್ಯತೆ ಅನುಭವಿಸಿದವಳು. ನನ್ನ ತಂದೆ–ತಾಯಿ ಉಪವಾಸ ಇದ್ದರೂ ನನ್ನನ್ನು ಓದಿಸಿದ್ದಾರೆ. ಅವರ ಶ್ರಮ, ತ್ಯಾಗದಿಂದ ಬದುಕು ಕಟ್ಟಿಕೊಂಡಿದ್ದೇನೆ. ಬಾಬಾ ಸಾಹೇಬ ಅಂಬೇಡ್ಕರ್ ಬದುಕು ಹೋರಾಟದಿಂದ ಪ್ರೇರಣೆಗೊಂಡು, ಬರವಣಿಗೆ ತೊಡಗಿಸಿಕೊಂಡಿದ್ದೇನೆ. ಅಂಬೇಡ್ಕರ್ ಇಲ್ಲದಿದ್ದರೆ ನನ್ನಂಥವರು ಇವತ್ತು ಯಾರದೋ ಗೌಡರ ಹೊಲದಲ್ಲಿ ಕಳೆ ತೆಗೆಯುವ ಕೆಲಸ ಮಾಡಬೇಕಾಗಿತ್ತು. ದಲಿತ ಸಂಘರ್ಷ ಸಮಿತಿ, ಚಳವಳಿಗಳಲ್ಲಿ ಭಾಗವಹಿಸಿ ಮಾತನಾಡುವುದನ್ನು ಕಲಿತುಕೊಂಡಿದ್ದೇನೆ. ಇಲ್ಲಿಯ ತನಕ ಒಂದಿಷ್ಟು ವೈಚಾರಿಕವಾಗಿ ಚಿಂತನೆಗೆ ತೊಡಗಿಸಿಕೊಂಡದ್ದು ಹೆಮ್ಮೆ ಅನಿಸುತ್ತದೆ.

ADVERTISEMENT

ತಾವು ಬರವಣಿಗೆಗೆ ತೊಡಗಿಸಿಕೊಂಡ ಅನುಭವದ ಬಗ್ಗೆ ಹೇಳಿ.

ನಾನು ಬೆಳೆದು ಬಂದ ಪರಿಸರದ ತಳ ಸಮುದಾಯದ ತಲ್ಲಣಗಳು, ಸಮಸ್ಯೆಗಳು ಬಹುವಾಗಿ ಕಾಡಿದವು. ಗ್ರಾಮೀಣ ಪ್ರದೇಶದ ಜನಸಾಮಾನ್ಯರ ಸ್ಥಿತಿಗತಿ, ಬಡತನ, ಅಜ್ಞಾನ, ಮೌಢ್ಯ, ಅಂಧಕಾರ ಕಾಡಿದವು, ವಸ್ತುಗಳಾದವು. ದಲಿತ ಮಹಿಳೆಯರ ಚಿಂತಾಜನಕ ಸ್ಥಿತಿ, ಅವರು ಶಿಕ್ಷಣದಿಂದ ವಂಚಿತರಾದದ್ದು, ದೇವದಾಸಿ ಪದ್ಧತಿ, ಬಾಲ್ಯ ವಿವಾಹ, ದೇವರು-ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಅಮಾನವೀಯ ಕೃತ್ಯಗಳು ನನ್ನನ್ನು ಘಾಸಿಗೊಳಿಸಿದವು. ನನ್ನ ಕೇರಿಯ ಸಂಕಟ, ವೇದನೆ, ಸಮಸ್ಯೆ ಸವಾಲುಗಳಂತಹ ವಸ್ತುಗಳೇ ನನ್ನ ಬರಹಗಳ ಅಭಿವ್ಯಕ್ತಿಯ ಮಾಧ್ಯಮವಾಗಿವೆ.

ದಲಿತ ಚಳವಳಿಗೆ ಮತ್ತು ದಲಿತ ಸಾಹಿತ್ಯ ಚಳವಳಿಗೆ ದಲಿತ ಸಾಹಿತ್ಯ ಪರಿಷತ್ತಿನ ಕೊಡುಗೆಯನ್ನು ಹೇಗೆ ಪರಿಗಣಿಸುತ್ತೀರಿ?

ದಲಿತ ಸಾಹಿತ್ಯ ಪರಿಷತ್ತು ಮೂವತ್ತೊಂದು ವರ್ಷಗಳಿಂದ ಸಾಹಿತ್ಯ ಸಂಘಟನೆ, ಚಳವಳಿಗೆ ಪ್ರೇರಕಶಕ್ತಿಯಾಗಿ ಕೆಲಸ ಮಾಡುತ್ತಾ ಬಂದಿದೆ. ಆ ಮೂಲಕ ದಲಿತ ಮತ್ತು ಪ್ರಗತಿಪರ ಬರಹಗಾರರನ್ನು ಚಳವಳಿಗೆ ತೊಡಗಿಸಿ ದಲಿತ ಚಳವಳಿಗೆ ಇಂಬು ನೀಡಿದೆ. ದಲಿತ ಸಾಹಿತ್ಯದಲ್ಲಿ ಅನೇಕ ಯುವ ಬರಹಗಾರರನ್ನು ಹುಟ್ಟು ಹಾಕಿದೆ. ಅನೇಕ ಬರಹಗಾರರ ಪುಸ್ತಕಗಳನ್ನು ಪ್ರಕಟಿಸಿ ಬೆಳಕಿಗೆ ತಂದಿದೆ. ಮೌಲಿಕ ಪುಸ್ತಕಗಳಿಗೆ ಪ್ರಶಸ್ತಿಗಳನ್ನು ನೀಡಿ ಗೌರವಿಸುವುದರ ಮೂಲಕ ಮುಖ್ಯವಾಹಿನಿಗೆ ತಂದಿದೆ. ಕಲಾವಿದರು, ಗಾಯಕರಿಗೆ ವೇದಿಕೆ ನೀಡುವುದರ ಮೂಲಕ ಸಾಂಸ್ಕೃತಿಕ ಪರಿಸರ ನಿರ್ಮಿಸುತ್ತಿದೆ. ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಅವಕಾಶ ವಂಚಿತರಾದ ಶೋಷಿತ ಸಮುದಾಯದವರನ್ನು ತಮ್ಮ ಪರಿಷತ್ತಿನಲ್ಲಿ ಅವಕಾಶ ಮಾಡಿಕೊಡುವುದರ ಮೂಲಕ ಸಂವಿಧಾನದ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿದಿದೆ. ಇದುವರೆಗೂ ಸಿದ್ಧಲಿಂಗಯ್ಯ, ಅರವಿಂದ ಮಾಲಗತ್ತಿ, ಮೂಡ್ನಾಕೂಡು ಚಿನ್ನಸ್ವಾಮಿ, ಸತ್ಯಾನಂದ ಪಾತ್ರೋಟ, ಚನ್ನಣ್ಣ ವಾಲೀಕಾರ, ಅಲ್ಲಾಗಿರಿ ರಾಜ, ಸಮತಾ ದೇಶಮಾನೆ, ಚಿನ್ನಸ್ವಾಮಿ ಸೋಸಲೆಯವರಂತಹ ಅನೇಕರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಮಾಡುವ ಮೂಲಕ ಕನ್ನಡ ಸಾಹಿತ್ಯಕ್ಕೆ ಕೊಡುಗೆ ನೀಡಿದೆ.

ಹೊಸ ತಲೆಮಾರನ್ನು ಬೆಳೆಸುವುದಕ್ಕೆ ದಲಿತ ಸಾಹಿತಿಗಳು ಮತ್ತು ದಲಿತ ಸಾಹಿತ್ಯ ಪರಿಷತ್ತು ಯಾವ ರೀತಿಯ ಕಾರ್ಯ ಯೋಜನೆಗಳನ್ನು ರೂಪಿಸಬೇಕು?

ಇತ್ತೀಚಿಗೆ ಯುವ ದಲಿತ ಲೇಖಕ, ಲೇಖಕಿಯರು ತುಂಬಾ ಸತ್ವಯುತವಾಗಿ, ಶಕ್ತಿಯುತವಾಗಿ ಬರೆಯುತ್ತಿದ್ದಾರೆ. ಗ್ರಾಮೀಣ ಪ್ರದೇಶದಿಂದ ಬಂದ ಅನೇಕ ಬರಹಗಾರರು ತಮ್ಮ ಸುತ್ತಲಿನಲ್ಲಿ ನಡೆಯುತ್ತಿರುವ ಸಮಸ್ಯೆ ತಲ್ಲಣಗಳಿಗೆ ಪರಿಹಾರ ರೂಪದಲ್ಲಿ ಸಾಹಿತ್ಯ ರಚಿಸುತ್ತಿರುವುದು ಖುಷಿಯ ಸಂಗತಿ. ಅನೇಕ ಹಿರಿಯ ಲೇಖಕರು ಈಗಾಗಲೇ ಅನೇಕರನ್ನು ಬೆಳೆಸಿದ್ದಾರೆ; ಬೆಳೆಸುತ್ತಿದ್ದಾರೆ. ಇನ್ನೂ ಹೆಚ್ಚಿನ ರೀತಿಯಲ್ಲಿ ಯುವ ಬರಹಗಾರರಿಗೆ ಪ್ರೋತ್ಸಾಹಿಸಬೇಕು. ಅವಕಾಶಗಳು ಅವರಿಗೆ ಸಿಗುವಂತೆ ಕಾಳಜಿ ವಹಿಸಬೇಕು. ಶಿಬಿರ, ಕಮ್ಮಟ, ವಿಚಾರ ಸಂಕಿರಣಗಳನ್ನು ಏರ್ಪಡಿಸಿ ತರಬೇತಿ ನೀಡಬೇಕು. ದಲಿತ ಸಾಹಿತ್ಯ ಪರಿಷತ್ತು ಸಾಹಿತ್ಯದ ಜೊತೆಗೆ ಚಳವಳಿಗಾರರನ್ನು, ಸಂಘಟನೆಯನ್ನು ಒಂದುಗೂಡಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಬೇಕು.

ಇತ್ತೀಚಿನ ಒಳ ಮೀಸಲಾತಿ ಕುರಿತು ನ್ಯಾ. ನಾಗಮೋಹನ್‌ದಾಸ ಅವರ ಒಳ ಮೀಸಲಾತಿ ವರದಿಯನ್ನು ಸರ್ಕಾರ ಜಾರಿಗೆ ತರಲು ಹೊರಟಿದೆ. ಅದು ದಲಿತ ಸಾಹಿತ್ಯ ಮತ್ತು ಚಳವಳಿಗೆ ಹೇಗೆ ಪರಿಣಾಮವನ್ನುಂಟು ಮಾಡಬಹುದು?

ಒಳ ಮೀಸಲಾತಿ ಜಾರಿಯಾಗಲಿ. ಅದು ವೈಜ್ಞಾನಿಕವಾಗಿ ಎಲ್ಲರಿಗೂ ನ್ಯಾಯ ಸಿಗುವ ರೀತಿಯಲ್ಲಿ ಆಗಬೇಕು. ಜನಸಂಖ್ಯೆ ಅನುಗುಣವಾಗಿ ಪಾಲು ಸಿಗಲಿ ಮತ್ತು ಅಲೆಮಾರಿ ಜನಾಂಗದಂತಹ ಸಣ್ಣ ಸಣ್ಣ ಸಮುದಾಯಗಳಿಗೂ ಅನ್ಯಾಯವಾಗಬಾರದು. ಎಡ-ಬಲ ಸಮುದಾಯಗಳು ಒಂದಾಗಿ ಹೋಗುವ ಅನಿವಾರ್ಯತೆ ಇದೆ. ದಲಿತ ಸಮುದಾಯ ಮೀಸಲಾತಿಗಷ್ಟೇ ಗಮನ ಕೊಡದೆ ರಾಜ್ಯಾಧಿಕಾರ ಹಿಡಿಯುವತ್ತ ಆಲೋಚಿಸಬೇಕು. ಆ ನಿಟ್ಟಿನಲ್ಲಿ ಚಳವಳಿಗಳು ಮತ್ತು ಸಾಹಿತ್ಯ ಗಟ್ಟಿಯಾಗಿ ರೂಪಗೊಳ್ಳಬೇಕಾಗಿದೆ.

ಇತ್ತೀಚಿಗೆ ವೈಚಾರಿಕ, ವೈಜ್ಞಾನಿಕ ಮನೋಭಾವ ಮತ್ತು ಚಳವಳಿಗಳ ಆಶಯ ಹಾಗೂ ಸಂವೇದನೆಗಳನ್ನು ಅಮಾನ್ಯಗೊಳಿಸುವಂತಹ ಸಾಮಾಜಿಕ ಜಾಲತಾಣಗಳು ಮುನ್ನೆಲೆಗೆ ಬಂದಿವೆ. ಅದಕ್ಕಾಗಿ ಹಿನ್ನಡೆಯನ್ನು ಅನುಭವಿಸುವಂತಾಗಿದೆ. ಈ ಸವಾಲುಗಳನ್ನು ಎದುರಿಸಲು ಯೋಜನೆಗಳು ಹೇಗಿರಬೇಕು?

ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳನ್ನು ನಿತ್ಯ ಹರಡುವ ಮತ್ತು ವೈಭವೀಕರಿಸುವ ಕೆಲಸ ನಡೆಯುತ್ತಿದೆ. ಶಾಂತಿಯನ್ನು ಕೆಡಿಸುವ ವಿಕೃತ ಮನಸ್ಸುಗಳು ಹೆಚ್ಚಾಗಿವೆ. ಇದರಿಂದ ಸಮಾಜದಲ್ಲಿ ದ್ವೇಷ, ತಾರತಮ್ಯ ಹೆಚ್ಚಾಗಿವೆ. ಈ ಸವಾಲುಗಳನ್ನು ಎದುರಿಸಲು ಸಂವಿಧಾನ ಪೀಠಿಕೆ ಸಾಹಿತ್ಯದ ಮತ್ತು ಚಳವಳಿಯ ಆಶಯವಾಗಬೇಕಾಗಿದೆ. ಸಂವಿಧಾನವೇ ನಮ್ಮ ಬದುಕಾಗಬೇಕು. ಶಾಲಾ-ಕಾಲೇಜುಗಳಲ್ಲಿ ಮತ ಧರ್ಮ ಜಾತಿ ಪದ್ಧತಿ ಲಿಂಗ ತಾರತಮ್ಯ ಮಾಡದೇ ನಾವು ಭಾರತೀಯರು ಎಂಬ ರಾಷ್ಟ್ರ ಮನೋಭಾವವನ್ನು ಮಕ್ಕಳಲ್ಲಿ ಬೆಳೆಸಬೇಕು. ಸಮಾನತೆ, ಸಹೋದರತೆ, ಸ್ವಾತಂತ್ರ್ಯ, ಭ್ರಾತೃತ್ವ ಮತ್ತು ಬಹುತ್ವವನ್ನು ಹಾಗೂ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯುವ ಯೋಜನೆಗಳನ್ನು ಸಾಹಿತಿಗಳು, ಚಳವಳಿಗಾರರು ರೂಪಿಸಬೇಕು. ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು, ಸರ್ವ ಜನಾಂಗದ ಶಾಂತಿಯ ತೋಟ ಇದುವೇ ಸಾಹಿತಿಗಳ, ಚಳವಳಿಗಾರರ ಉಸಿರಾಗಬೇಕು.

ಚಳವಳಿಯ ಕಾವು ಕಡಿಮೆ ಆಗಿರುವ ಕಾಲದಲ್ಲಿ ಲಿಂಗತ್ವ ಅಲ್ಪಸಂಖ್ಯಾತರ (ಟ್ರಾನ್ಸಜೆಂಡರ್) ಸಂವೇದನೆಯನ್ನು ಹೇಗೆ ವ್ಯಾಖ್ಯಾನಿಸುವುದು ಮತ್ತು ಬೆಂಬಲಿಸುವುದು?

ದಲಿತ ಚಳವಳಿಯ ಕಾವು ಕಡಿಮೆಯಾಗಿರುವಾಗ ಈ ಹೊತ್ತಿನಲ್ಲಿ ಮತ್ತೆ ಚಳವಳಿ ಸಂಘಟನೆ ಕಟ್ಟಬೇಕು. ದಲಿತ ಸಾಹಿತ್ಯ ಮತ್ತು ಚಳವಳಿಯು ರೈತರ ಹಿತಾಸಕ್ತಿ ಮಹಿಳೆಯರ ಹಿತ ಶೋಷಿತರ ಪರವಾಗಿ ಹೋರಾಟ ಮಾಡುತ್ತಲೇ ಬಂದಿವೆ. ಲಿಂಗತ್ವ ಅಲ್ಪಸಂಖ್ಯಾತರ (ಟ್ರಾನ್ಸ್ಜೆಂಡರ್) ಸಂವೇದನೆಯು ಅವರ ಸಾಹಿತ್ಯ ಮತ್ತು ಆತ್ಮಕತೆಗಳ ಮೂಲಕ ಕನ್ನಡಕ್ಕೆ ದಕ್ಕಿದೆ. ಅವರನ್ನೂ ಒಳಗೊಳ್ಳುವ ಸಾಹಿತ್ಯ ರಚನೆಯಾಗಬೇಕು. ಮತ್ತು ಅವರ ಸಮಸ್ಯೆಗಳ ಪರಿಹಾರಕ್ಕಾಗಿ ದನಿ ಎತ್ತುವ ಕೆಲಸ ಚಳವಳಿ ಮಾಡಬೇಕು. ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡಿ ಸಾಮಾಜಿಕ ಒಳಗೊಳ್ಳುವಿಕೆಗೆ ಅನುವು ಮಾಡಿಕೊಡಬೇಕು. ಅವರಿಗೆ ಆತ್ಮಗೌರವ ತಂದು ಕೊಡುವುದು ಪ್ರತಿಯೊಬ್ಬರ ಕರ್ತವ್ಯವಾಗಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.