ADVERTISEMENT

ಅಪ್ಪನ ಪ್ರೀತಿಯೇ ಗೊತ್ತಿಲ್ಲ: ಪಾಟೀಲ ಪುಟ್ಟಪ್ಪ

ಪ್ರಜಾವಾಣಿ ವಿಶೇಷ
Published 15 ಜೂನ್ 2019, 17:47 IST
Last Updated 15 ಜೂನ್ 2019, 17:47 IST
ಕುಟುಂಬ ಸದಸ್ಯರೊಂದಿಗೆ ಪಾಟೀಲ ಪುಟ್ಟಪ್ಪ. ಎಡಬದಿಯ ಕೊನೆಯಲ್ಲಿ ಅವರ ತಂದೆ ಸಿದ್ಧಲಿಂಗಪ್ಪ, ತಾಯಿ ಮಲ್ಲಮ್ಮ. ಬಲಬದಿಯ ಕೊನೆಯಲ್ಲಿ ಕುಳಿತವರು ಪಾಟೀಲ ಪುಟ್ಟಪ್ಪ ಮತ್ತು ಅವರ ಪತ್ನಿ ಇಂದೂಮತಿ.
ಕುಟುಂಬ ಸದಸ್ಯರೊಂದಿಗೆ ಪಾಟೀಲ ಪುಟ್ಟಪ್ಪ. ಎಡಬದಿಯ ಕೊನೆಯಲ್ಲಿ ಅವರ ತಂದೆ ಸಿದ್ಧಲಿಂಗಪ್ಪ, ತಾಯಿ ಮಲ್ಲಮ್ಮ. ಬಲಬದಿಯ ಕೊನೆಯಲ್ಲಿ ಕುಳಿತವರು ಪಾಟೀಲ ಪುಟ್ಟಪ್ಪ ಮತ್ತು ಅವರ ಪತ್ನಿ ಇಂದೂಮತಿ.   

ಬಾಲ್ಯದಿಂದಲೂ ನಾನು ದೊಡ್ಡಪ್ಪನ ಮನೆಯಲ್ಲಿ ಬೆಳೆದಿದ್ದರಿಂದತಂದೆ ಪ್ರೀತಿ ಅಂದರೇನು ಎನ್ನುವುದೇ ಗೊತ್ತಿಲ್ಲ. ತಂದೆ ಪ್ರೀತಿಯಿಂದ ವಂಚಿತನಾಗಿರುವ ದುಃಖ ನನಗೆ ಈಗಲೂ ಇದೆ.

ನನ್ನ ಅಪ್ಪ ಸಿದ್ಧಲಿಂಗಪ್ಪನಿಗೆ ಮೂವರು ಅಣ್ಣಂದಿರು. ಅಪ್ಪ ಹಾಗೂ ದೊಡ್ಡ ಅಣ್ಣ ಲಿಂಗನಗೌಡ ಅವರಿಗೆ ಮಾತ್ರ ಮದುವೆಯಾಗಿತ್ತು. ಮಧ್ಯದ ಇಬ್ಬರು ಮದುವೆಯಾಗಿರಲಿಲ್ಲ. ಮದುವೆಯಾಗಿದ್ದ ದೊಡ್ಡಪ್ಪನಿಗೆ ಮಕ್ಕಳು ಆಗಿರಲಿಲ್ಲ. ಅದಕ್ಕಾಗಿ ನನ್ನನ್ನು ಅಪ್ಪ ಅವರಿಗೆ ಸಾಕಲು ಕೊಟ್ಟಿದ್ದ. ಅಪ್ಪ ದಾವಣಗೆರೆಯಲ್ಲಿಇರುತ್ತಿದ್ದರು. ದೊಡ್ಡಪ್ಪ ಹುಟ್ಟೂರಾದ ಹಾವೇರಿಯಲ್ಲಿ ಇರುತ್ತಿದ್ದರು. ಇದರಿಂದಾಗಿ ನನಗೆ ಅಪ್ಪನ ಪ್ರೀತಿ ಬಾಲ್ಯ ಹಾಗೂ ಯೌವ್ವನದಲ್ಲಿ ಸರಿಯಾಗಿ ದೊರಕಿಲ್ಲ.

ದೊಡ್ಡಪ್ಪನ ಮಗನಾಗಿಯೇ, ಅವರ ಆಶ್ರಯದಲ್ಲಿಯೇ ನಾನು ಬೆಳೆದೆ.ಅವರನ್ನು ಸುತ್ತಲಿನ ಜನರು ದೊಡ್ಡಗೌಡ್ರು ಎಂದು ಕರೆಯುತ್ತಿದ್ದರು. ಮನೆಗೆ ಇಂಗ್ಲಿಷ್‌ ಪತ್ರಿಕೆ ಬರುತ್ತಿತ್ತು. ಅವರು ಓದುವಾಗ ನಾನೂ ಪಕ್ಕದಲ್ಲಿಯೇ ಕುಳಿತುಕೊಳ್ಳುತ್ತಿದ್ದೆ. ನನ್ನ ಬದುಕಿಗೆ ಅಪ್ಪನ ಯಾವ ಕೊಡುಗೆಯೂ ಇಲ್ಲ. ಆದರೆ, ದೊಡ್ಡಪ್ಪನಿಗೆ ಮಗನಿಲ್ಲ ಎನ್ನುವ ಕೊರಗನ್ನು ನನ್ನಪ್ಪ ನೀಗಿಸಿದ್ದ.

ADVERTISEMENT

ನನ್ನಪ್ಪ ತುಂಬಾ ಬುದ್ಧಿವಂತನಾಗಿದ್ದ. ಇಂಗ್ಲಿಷ್‌ ಅನ್ನು ಚೆನ್ನಾಗಿ ಮಾತನಾಡುತ್ತಿದ್ದರು. ಸುತ್ತಮುತ್ತಲಿನ ಜನರು ಸಹ ಅವರಲ್ಲಿ ಬಂದು ಚರ್ಚೆ ನಡೆಸುತ್ತಿದ್ದರು. ಎಲ್ಲರೂ ಅವರನ್ನು ಪ್ರೀತಿಸುತ್ತಿದ್ದರು. ಆದರೆ, ಮಗನಾದ ನನಗೆ ಅಪ್ಪನ ಸನಿಹದ ಪ್ರೀತಿ ಮಾತ್ರ ಸಿಕ್ಕಿರಲಿಲ್ಲ. ಆ ನೋವು ನನಗೆ ಸದಾ ಕಾಡುತ್ತಿದೆ. ಯಾವಾಗಾದರೂ ಒಮ್ಮೆ ದಾವಣಗೆರೆಗೆಅಪ್ಪ ಇದ್ದಲ್ಲಿಗೆ ಹೋಗುತ್ತಿದ್ದೆ. ಪ್ರೀತಿಯಿಂದ ಮಾತನಾಡುತ್ತಿದ್ದರು. ಅಲ್ಲಿದ್ದಾಗ ಅಮ್ಮ, ರಾಮಾಯಣ, ಮಹಾಭಾರತದ ಕಥೆಗಳನ್ನು ಹೇಳುತ್ತಿದ್ದಳು. ಅವಳು ಹೇಳುತ್ತಿದ್ದ ಕಥೆಗಳು ನನಗೆ ಸ್ಫೂರ್ತಿ ನೀಡುತ್ತಿದ್ದವು. ಎಲ್ಲರಿಗೂ ಅಪ್ಪನ ಪ್ರೀತಿ ಸಿಗಬೇಕು. ಅಪ್ಪನ ತೋಳತೆಕ್ಕೆಯಲ್ಲಿ ನಲಿದಾಡಬೇಕು.

-ಪಾಟೀಲ ಪುಟ್ಟಪ್ಪ, ಹಿರಿಯ ಪತ್ರಕರ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.