ನಾ.ಡಿಸೋಜ, ಫಿಲೋಮೆನಾ
ನನ್ನ ತಂದೆಯವರಿಗೆ ಇಬ್ಬರು ಹೆಂಡಿರು. ನನ್ನ ದೊಡ್ಡಮ್ಮ ತೀರಿಕೊಂಡ ನಂತರ ಅವರು ಮದುವೆಯಾದದ್ದು ನನ್ನ ತಾಯಿಯನ್ನ. ಆದರೆ ನನ್ನ ದೊಡ್ಡಮ್ಮನ ಬಳಗ ನಮ್ಮಿಂದ ಕೊನೆಯವರೆಗೂ ದೂರವಾಗಲಿಲ್ಲ. ಹೀಗಾಗಿ ನಾವು ಈ ಕುಟುಂಬದ ಜೊತೆಯಲ್ಲಿ ಸಂಪರ್ಕವಿರಿಸಿಕೊಂಡೇ ಬೆಳೆದೆವು. ನನ್ನ ಅಣ್ಣ ಜೋಗದಲ್ಲಿ ಇದ್ದಾಗ ವಾಸ ಮಾಡಿ ಕೊಂಡಿದ್ದುದು ನನ್ನ ದೊಡ್ಡಮ್ಮನ ಅಣ್ಣನ ಮನೆಯಲ್ಲಿ. ಈ ಮನೆಯಲ್ಲಿ ಒಂದು ಮಗು ಹುಟ್ಟಿದಾಗ ಅದು ತೀರಾ ಕೆಂಪಗಿದ್ರುದರಿಂದ (ಬೆಳೆದ ಮೇಲೆ ಈ ಮಗು ಎಲ್ಲ ಹುಡುಗಿಯರಂತೆ ಕಪ್ಪಗಾಯಿತು ಅನ್ನುವುದು ಬೇರೆ ವಿಷಯ) ಮನೆಯಲ್ಲಿ ಇದನ್ನ ಎಲ್ಲ ಕೆಂಪಿ ಎಂದೇ ಕರೆದರು. ಆದರೆ ಇವಳಿಗೆ ಇಗರ್ಜಿಯಲ್ಲಿ ಫಿಲೋಮೆನಾ ಎಂದು ಹೆಸರಿಟ್ಟರೂ ಹತ್ತಿರದ ದೂರದ ಸಂಬಂಧಿಕರು ಇವಳನ್ನ ಕರೆಯುತ್ತಿದ್ದುದೇ ಕೆಂಪಿ ಎಂದು. ಈ ಹೆಸರು ಆಕೆ ದೊಡ್ಡವಳಾದ ಮೇಲೂ ಮುಂದುವರೆಯಿತು.
ಸಾಗರದಲ್ಲಿ ತೀರಿಕೊಂಡ ನನ್ನ ತಂದೆಯ ಮರಣಕ್ಕೆಂದು ಒಂದು ಲಾರಿಯಲ್ಲಿ ಹೊರಟ ಈ ಕೆಂಪಿಯ ತಂದೆ, ತಾಯಿ, ನನ್ನ ಅಣ್ಣ ದಾರಿಯಲ್ಲಿ ಒಂದು ಅಪಘಾತವಾದಾಗ ತಾಯಿಯ ಕೈಲಿದ್ದ ಮಗು ಚೆಂಡಿನಂತೆ ಹಾರಿ ಇನ್ನೇನು ನೆಲಕ್ಕೆ ಬೀಳ ಬೇಕು ಅನ್ನುವಾಗ ನನ್ನಣ್ಣ ಈ ಮಗುವನ್ನ ಕೈ ಬೊಗಸೆಯಲ್ಲಿ ಹಿಡಿದು ಉಳಿಸಿದ ಅನ್ನುವುದು ಪ್ರಚಲಿತವಾದ ವಿಷಯ. ಮುಂದೆ ನಮ್ಮ ಅಜ್ಜಿ ಈ ಮಗುವನ್ನ ಮತ್ತು ನನ್ನನ್ನ ಗಂಟು ಹಾಕಿ ಇವನಿಗೆ ಇವಳನ್ನ ಕೊಡಬೇಕು ಎಂದು ಮಾತು ಗಟ್ಟಿಮಾಡಿದರು. ಮೊದಲು ತಮಾಷೆಯ ಮಾತಾಗಿ ಇದ್ದುದು ನಂತರ ಅದು ನಿಜವಾದದ್ದು ಹೌದು. ಮನೆಮಂದಿಯೆಲ್ಲ ಈ ಅಜ್ಜಿಯ ಮಾತಿಗೆ ತಮ್ಮ ಅನುಮತಿಯ ಮುದ್ರೆಯನ್ನ ಒತ್ತಿದರು.
ದಂಪತಿಯ ವಿರಾಮದ ಗಳಿಗೆಗಳು...
ಸಾಗರದಲ್ಲಿ ನಾವು ಇದ್ದಾಗ ನಮ್ಮ ಮನೆ ಜೋಗ ರಸ್ತೆಯಲ್ಲಿ, ಈ ಹುಡುಗಿಯ ಮನೆ ಕ್ರೈಸ್ತರ ಕೇರಿಯಲ್ಲಿ, ಈ ಎರಡೂ ಮನೆಗಳ ನಡುವಣ ಅಂತರ ಸುಮಾರು ಎರಡು ಕಿಲೋ ಮೀಟರು. ಸಾಗರದ ಜೋಗ ರಸ್ತೆಯ ನಮ್ಮ ಮನೆಯ ಮುಂದೆ ಒಂದು ದೊಡ್ಡ ನೇರಲೇ ಹಣ್ಣಿನ ಮರ. ನೇರಳೆ ಹಣ್ಣು ಬಿಡುವ ಕಾಲದಲ್ಲಿ ಈ ಹುಡುಗಿ ನೇರಲೇ ಹಣ್ಣು ಆರಿಸಲೆಂದು ನಮ್ಮ ಮನೆಯವರೆಗೂ ಬರುತ್ತಿದ್ದುದು ಕೇವಲ ನೇರಲೇ ಹಣ್ಣಿನ ಆಸೆಗೆ ಮಾತ್ರವಲ್ಲ ಅನ್ನುವುದು ನನಗೆ ತಿಳಿದದ್ದು ಆನಂತರ. ಈ ಹುಡುಗಿಯ ಜೊತೆಯಲ್ಲಿ ನಾನು ಬಹಳ ಆಟ ಆಡುತ್ತಿದ್ದುದು ನಿಜ. ಅವೆಲ್ಲ ಬಾಲ್ಯದ ಆಟಗಳು. ನಂತರದ ದಿನಗಳಲ್ಲಿ ನಮ್ಮ ಅಣ್ಣನಿಗೆ ಮೈಸೂರಿಗೆ ವರ್ಗವಾಗಿ ನನ್ನ ಮತ್ತು ಈಹುಡುಗಿಯ ಭೇಟಿ ದೂರವಾಯಿತು.
ಮೈಸೂರಿನಲ್ಲಿ ನನ್ನ ಅತ್ತಿಗೆ ಕೆಲ ಹುಡುಗಿಯರನ್ನು ನನ್ನ ಮುಂದೆ ಪೆರೇಡ್ ಮಾಡಿಸಿದರಾದರೂ ನನ್ನ ಮನಸ್ಸಿನಲ್ಲಿ ಇದ್ದವಳು ಈ ಸಾಗರದ ಕೆಂಪಿಯೇ.
ಶರಾವತಿ ಯೋಜನೆಯಲ್ಲಿ ನನಗೊಂದು ಕೆಲಸ ಸಿಕ್ಕ ನಂತರ ನಾನು ಮತ್ತೆ ಸಾಗರಕ್ಕೆ ಬಂದೆ. ಅಷ್ಟು ಹೊತ್ತಿಗೆ ನನ್ನ ಅಜ್ಜಿ ಕಾಲವಾಗಿದ್ದಳು. ಆದರೆ ಅವಳು ಕಟ್ಟಿದ ಆ ಕನಸು ಕನಸಾಗಿಯೇ ಇತ್ತು. ಮತ್ತೆ ಈ ಹುಡುಗಿಯ ಸಾಮೀಪ್ಯ. ಆಕೆ ತಾಳಗುಪ್ಪೆಗೆ ಹೋಗುವಾಗ ನಾನೇ ಮುಂದಾಗಿ ಬಸ್ಸಿನ ಟಿಕೇಟು ತೆಗೆದದ್ದು, ಜೊತೆಗೆ ಮಾತು, ನೋಟ, ನಾಚಿಕೆ, ಮುನಿಸು, ಇತ್ಯಾದಿಗಳೆಲ್ಲ ನಡೆದು, ನಿಧಾನವಾಗಿ ಪತ್ರ ವ್ಯವಹಾರ ಪ್ರಾರಂಭವಾಗಿ ಪ್ರತಿ ಬುಧವಾರ ಒಂದು ಪತ್ರ ಕಾರ್ಗಲ್ಲಿಗೆ, ಅಲ್ಲಿಂದ ಒಂದು ಪತ್ರ ಸಾಗರಕ್ಕೆ ಬಂದು ನಮ್ಮ ಸ್ನೇಹ ಬಿಗಿಯಾದದ್ದು ಪೋಸ್ಟ್‌ಮನ್ನನಿಗೂ ತಿಳಿದ ವಿಷಯ.
ನಾ. ಡಿಸೋಜ ದಂಪತಿಗೆ ಚಿತ್ರದುರ್ಗದ ಮುರುಘರಾಜೇಂದ್ರ ಶರಣರಿಂದ ಗೌರವ.
ಇದೇ ಸಂದರ್ಭದಲ್ಲಿ “ಪೊಲೀಸ್‌ಕಾರನ್ ಮಗಳ್' ಅನ್ನುವ ಒಂದು ಚಿತ್ರ ಜನಪ್ರಿಯವಾಗಿತ್ತು. ನನ್ನ ಮಾವನಾಗಲಿರುವ ವ್ಯಕ್ತಿ ಕೂಡ ಪೊಲೀಸ್ ಆಗಿದ್ದರಿಂದ ನಾನು ಸ್ನೇಹಿತರ ಹಾಸ್ಕಕ್ಕೆ ಗುರಿಯಾದದ್ದೂ ಇದೆ.
ಇದರ ನಡುವೆ ನನ್ನ ಮದುವೆ ಒಂದು ಸಮಸ್ಯೆ ಆಗುತ್ತದೇನೋ ಅನ್ನುವ ಭೀತಿ ನನಗಿತ್ತು. ನಾನು ಇಗರ್ಜಿಗೆ ಹೋಗುವುದನ್ನ ನಿಲ್ಲಿಸಿ ಬಹಳ ವರ್ಷಗಳು ಆಗಿದ್ದವು. ಅಲ್ಲಿಯ ಕೆಲ ನಿಯಮಗಳು, ಕೆಲವರ ವರ್ತನೆ ನನಗೆ ಹಿಡಿಸದೇ ಇದ್ದುದರಿಂದ ನಾನು ಇಗರ್ಜಿಯಿಂದ ದೂರವಾಗಿದ್ದೆ. ಆದರೆ ಮದುವೆ ಅನ್ನುವುದು ಇಬ್ಬರ ನಡುವಣ ಸಂಬಂಧವಾಗಿದ್ದರಿಂದ ನಾನು ಇಗರ್ಜಿಗೆ ಬರಲು, ಎಲ್ಲ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿ ಯಾಗಲು ಒಪ್ಪಿಕೊಂಡಿದ್ದೆ. ಆದರೆ ನನ್ನ ವರ್ತನೆಯಿಂದಾಗಿ ನನ್ನ ಮೇಲೆ ಒಂದು ಕಣ್ಣು ಇರಿಸಿ ಕೊಂಡಿದ್ದ ಪಾದರಿ ಅಡ್ಡ ಬಂದರೆ ಅನ್ನುವ ಆತಂಕ ನನಗೆ ನನ್ನ ಮಾವನಿಗೆ ಇತ್ತು. ಆದರೆ ಹೀಗೆ ಏನೂ ಆಗಲಿಲ್ಲ. ನಾನು ಮದುವೆಯ ಕರಾರು ಪತ್ರ ಸಹಿ ಮಾಡಲು ಪಾದರಿ ಬಳಿ ಹೋದಾಗ ಆತ “ನಿಮಗೆ ಪ್ರಶ್ನೆ ಕೇಳುವುದು ಏನಿಲ್ಲ, ನನಗಿಂತ ಹೆಚ್ಚು ನಿಮಗೇ ಗೊತ್ತಿದೆ'' ಎಂದ.
1969ರಲ್ಲಿ, ಮುಂಬಯಿ ಸೇರಿ ಕೊಂಡಿದ್ದ ನನ್ನ ಅಣ್ಣ ಬಂದು ಸಾಗರದಲ್ಲಿ ಮದುವೆ ಅನ್ನುವುದನ್ನ ಮುಗಿಸಿದಾಗ ನಮ್ಮ ಹತ್ತಿರದ ಸಂಬಧಿಕರು ಹೇಳಿದ ಹಾಗೆ ನಾನು ಕೆಂಪಿಯ ಗಂಡನಾದೆ. ಪದ್ಧತಿಯಂತೆ ನನ್ನಿಂದ ಒಂದು ಎಂಟು ಆಣೆಯ ನಾಣ್ಯವನ್ನ ಕೇಳಿ ಪಡೆದುಕೊಂಡ. ಹೆಂಗಸರು ಅದನ್ನ ಅವಳ ಸೆರಗಿಗೆ ಕಟ್ಟಿ ಇನ್ನು ಮುಂದೆ ಅವಳು ನನ್ನ ಮನೆಯ ಯಜಮಾನಿ ಅನ್ನುವುದನ್ನ ಖಚಿತ ಪಡಿಸಿದರು. ಮನೆಯಲ್ಲಿ ನನ್ನ ತಾಯಿ, ಜೊತೆಗೆ ಮದುವೆ ಆಗದ ನನ್ನ ತಂಗಿ.ಮೂವರು ಹೆಂಗಸರು ನಾನೊಬ್ಬ ಗಂಡಸು. ನಾನು ಮದುವೆಯಾಗಿ ಹೆಂಡತಿಯನ್ನ ಕರೆತರುವ ದಿನ ನನ್ನ ಸ್ನೇಹಿತರು ಬ್ಯಾಂಡ್ ಹೊಡೆಯುವ ಒಂದು ಕಾರ್ಯಕ್ರಮ ಇರಿಸಿ ಕೊಂಡಿದ್ದರು, ಅದನ್ನ ಹೇಗೋ ತಪ್ಪಿಸಿ ಕೊಂಡೆ.
ಶರಾವತಿ ಯೋಜನೆಯಲ್ಲಿ ಕೋಟಿ ಕೋಟಿ ರೂಪಾಯಿಗಳ ಕೆಲಸ ನಡೆದಿದ್ದರೂ ನಾನು ಸಂಬಳವನ್ನ ನಂಬಿ ಬದುಕಿದವ. ತಿಂಗಳ ಮೊದಲ ದಿನ ಅಮ್ಮ ಕೊಟ್ಟ ಪಟ್ಟಿಗೆ ಅನುಗುಣವಾಗಿ ಮನೆಗೆ ಸಾಮಾನು ತಂದು ಹಾಕಿ ಅವಳ ಕೈಗೆ ಒಂದಿಷ್ಟು ಹಣ ಇಟ್ಟರೆ ಅವಳು ಮತ್ತೆ ಹಣ ಕೇಳಿದ್ದಿಲ್ಲ. ಶಾಲಾ ಶಿಕ್ಷಕನೋರ್ವನ ಮಡದಿ ಆಗಿದ್ದ ಆಕೆ ಸರಳ ಬದುಕಿಗೆ ಹೊಂದಿಕೊಂಡಿದ್ದಳು. ಈ ಸರಳ ಬದುಕು ನನಗೆ ಕೆಲಸ ಸಿಕ್ಕ ನಂತರವೂ ಮುಂದುವರೆದಿತ್ತು. ಅದು ಮುದುವೆಯ ನಂತರವೂ ಹಾಗೆಯೇ ಸಾಗಿತು. ಮದುವೆಯ ಸಂದರ್ಭದಲ್ಲಿ ನಾನು ವರದಕ್ಷಿಣೆ ಅದು ಇದು ಕೇಳಿರಲಿಲ್ಲ. ಪೊಲೀಸ್ ಕಾನಸ್ಟೇಬಲ್ ಓರ್ವನ ಮಗಳಿಂದ ಅದನ್ನೆಲ್ಲ ಕೇಳಲು ನನ್ನ ಮನಸ್ಸು ಒಪ್ಪಲಿಲ್ಲ. ಅಲ್ಲದೆ ಇದು ಅಜ್ಜಿ ಮಾಡಿದ್ರ, ನಾವು ನಾವೇ ಒಪ್ಪಿ ಕೊಂಡ ಮದುವೆಯಾಗಿದ್ದರಿಂದ ಇದೆಲ್ಲಕ್ಕೂ ಅವಕಾಶ ಇರಲಿಲ್ಲ. ಜೊತೆಗೆ ಮಗಳಿಗೆ ಕೊಡ ಬೇಕಾದುದನ್ನ ಕೊಟ್ಟು ಅವರು ಮದುವೆ ಮಾಡಿದರು.
ನಾ. ಡಿಸೋಜ ಕುಟುಂಬ
ನಮ್ಮ ಮನೆಯಲ್ಲಿ ಒಂದು ಶಿಸ್ತು ಇತ್ತು. ಸೂಜಿ ಇಂಥಲ್ಲಿ ಇರಬೇಕು, ಕತ್ತರಿ ಇಂಥಲ್ಲಿ ಇರಬೇಕು, ಯಾವುದೇ ಅವ್ಯವಸ್ಥೆ ಆಗಬಾರದು ಇತ್ಯಾದಿ. ಹೊಸದಾಗಿ ಬಂದ ಹುಡುಗಿಗೆ ಇದೆಲ್ಲ ಪಿರಿಪಿರಿ ಅನಿಸಿತು. ಮನೆಯವರಿಗೂ ಕೂಡ. ಆದರೆ ಕ್ರಮೇಣ ಇದು ಅಭ್ಯಾಸವಾಯಿತು.
ಆಗಲೇ ನಾನು ಲೇಖಕ ಅನಿಸಿ ಕೊಂಡಿದ್ದೆ. ಕತೆ ಕಾದಂಬರಿಗಳು ಬಂದಿದ್ದವು. ಶರಾವತಿಯಲ್ಲಿ ಸಿನಿಮಾ ಮೊದಲಾದ ಮನರಂಜನೆಗಳು ಇಲ್ಲದ್ದರಿಂದ ನಾವು ನಾಟಕವಾಡುವುದು, ನಾನು ಅಲ್ಲಿ ಇಲ್ಲಿ ಎಂದು ತಿರುಗಾಡುವುದು ನಡೆದೇ ಇತ್ತು. ಇದನ್ನ ನನ್ನ ಹೆಂಡತಿ ಎಂದೂ ತಡೆಯಲಿಲ್ಲ. ಮೊದಮೊದಲು ಬೇಡವೆಂದರೂ ತಾಯಿ ಮನೆಗೆ ಹೋಗುವ ಹಟ ಮಾಡುತ್ತಿದ್ದವಳು ಕ್ರಮೇಣ ಇದನ್ನೂ ನಿಲ್ಲಿಸಿದಳು. ಒಂದು ವರ್ಷಕ್ಕೆಲ್ಲ ನಮಗೆ ಮಗಳು ಹುಟ್ಟಿದ್ದು ಇವಳ ಜವಾಬ್ದಾರಿಯನ್ನ ಹೆಚ್ಚಿಸಿತು. ಮನೆಯಲ್ಲಿ ಅಮ್ಮ ಮತ್ತು ತಂಗಿ ಇದ್ದುದು ಇವಳ ಹೆಗಲ ಮೇಲಿನ ಕೆಲಸ ತುಸು ಕಡಿಮೆ ಆಯಿತು. ಮುಂದೆ ಮತ್ತೆ ಮಕ್ಕಳಾದರೂ ಅವರೆಲ್ಲ ಬೆಳೆದದ್ದು ನನ್ನ ತಾಯಿಯ ಮಡಿಲಲ್ಲಿಯೇ.ನಮ್ಮ ಮಕ್ಕಳನ್ನ ನೋಡಿ ಕೊಳ್ಳುವಲ್ಲಿ ನನ್ನ ಅತ್ತೆಯ ಪಾತ್ರ ಕೂಡ ಇತ್ತು.
ಹೀಗೆಂದು ಮಕ್ಕಳನ್ನ ನೋಡಿ ಕೊಳ್ಳುವುದರಲ್ಲಿ ನನ್ನ ಹೆಂಡತಿ ಹಿಂದೆ ಬೀಳಲಿಲ್ಲ. ರಾತ್ರಿಯ ಹೊತ್ತು ಮಗು ಕಿಟಾರನೆ ಕಿರುಚಿ ಎದ್ದಾಗ ಅದಕ್ಕೆ ಮೊದಲು ಸಿಗುತ್ತಿದ್ದುದು ತಾಯಿಯ ಮುತ್ತು. ಈ ಮಗು ಈ ಮುತ್ತಿಗಾಗಿ ಕಾದಂತೆ ಹಾಗೆಯೇ ಮಲಗಿ ನಿದ್ದೆ ಹೋಗುತ್ತಿತ್ತು. ಮಗು ನನ್ನದೇ ಆದರೂ ಈ ಮುತ್ತಿನ ವ್ಯವಹಾರದ ಬಗ್ಗೆ ನನಗೆ ಒಂದು ಬಗೆಯ ಅಸೂಯೆ ಬರುತ್ತಿತ್ತು.
ಕಚೇರಿ ಕೆಲಸ, ಬರವಣಿಗೆ, ನಾಟಕ, ಓಡಾಟ ಎಂದು ನಾನು ಸದಾ ಬಿಜಿಯಾಗಿ ಇರುತ್ತಿದ್ದೆ. ಹೀಗಾಗಿ ಮನೆಯ ಕಡೆ ಹೆಚ್ಚು ಗಮನ ಕೊಡಲು ನನ್ನಿಂದ ಆಗುತ್ತಿರಲಿಲ್ಲ. ಆದರೂ ನನ್ನ ಮಡದಿ ಇದನ್ನ ಯಾವತ್ತೂ ವಿರೋಧಿಸಲಿಲ್ಲ. ಅವಳು, ನನ್ನ ತಾಯಿ ತಂಗಿ ಇಗರ್ಜಿಗೆ ಒಟ್ಟಿಗೇನೆ ಹೋಗಿ ಬರುತ್ತಿದ್ದರಲ್ಲದೆ ನನ್ನನ್ನ ಬರುವಂತೆ ಆಕೆ ಎಂದೂ ಹೇಳಲಿಲ್ಲ. ಮನೆಯಲ್ಲಿ ಜಪತಪ ಎಲ್ಲ ಮೊದಲೂ ಇರಲಿಲ್ಲ. ಈಗಲೂ ಅದು ಪ್ರಾರಂಭವಾಗಲಿಲ್ಲ.
ನನ್ನ ಮಾವ ದೈವ ಭಕ್ತ. ಸಂಜೆ ಮನೆಯಲ್ಲಿ ಮಕ್ಕಳನ್ನೆಲ್ಲ ಸೇರಿಸಿ ಕೊಂಡು ದೊಡ್ಡ ದನಿಯಲ್ಲಿ ಆತ ಮಾಡುತ್ತಿದ್ದ ಪ್ರಾರ್ಥನೆ ಕೇರಿಗೆಲ್ಲ ಪ್ರಸಿದ್ಧವಾದದ್ದು. ಆದರೆ ಇವಳು ಬಂದ ಮೇಲೆ ನಮ್ಮಲ್ಲಿ ಇದು ಪ್ರಾರಂಭವಾಗಲಿಲ್ಲ.
ಸರಕಾರೀ ಕಾಲೋನಿಯಲ್ಲಿ ನಾವು ಇದ್ದುದರಿಂದ ಅಲ್ಲಿಯ ಹೆಂಗಸರು ಮಕ್ಕಳು ಶ್ರೀಮಂತರಾಗಿಯೇ ತಮ್ಮನ್ನು ಬಿಂಬಿಸಿಕೊಳ್ಳುತ್ತಿದ್ದರು. ಶರಾವತಿಯಲ್ಲಿ ಬೇರೆ ರೀತಿಯಲ್ಲಿ ಹಣ ಮಾಡಲು ಅವಕಾಶ ಇದ್ದುದರಿಂದ ಇದು ಅವರಿಗೆ ಸುಲಭವೂ ಆಗಿತ್ತು. ಇದರ ಒಂದು ಬಿಸಿ ನಮ್ಮ ಮನೆಗೆ ತಾಗಲಿಲ್ಲ ಅನ್ನುವುದೇ ಒಂದು ಸಮಾಧಾನ. ಸೀರೆ ಬೇಕು ಬಂಗಾರ ಬೇಕು ಎಂದು ನನ್ನ ತಾಯಿ, ತಂಗಿ ಎಂದೂ ಕೇಳಿದವರಲ್ಲ. ಅವರ ಸಾಲಿಗೆ ನನ್ನ ಹೆಂಡತಿಯೂ ಸೇರಿ ಕೊಂಡಳು. ನನ್ನ ತಂಗಿಯ ಮದುವೆಯಾಯಿತು. ಕಾರ್ಗಲ್ಲಿನಿಂದ ಮಾಸ್ಕಿಕಟ್ಟೆಗೆ, ಅಲ್ಲಿಂದ ಸಾಗರಕ್ಕೆ ನನಗೆ ವರ್ಗವಾಯಿತು. ನನ್ನ ಮಗಳ ಒಂದು ಶಸ್ತ್ರ ಚಿಕಿತ್ಸೆಯಿಂದಾಗಿ ನಾನು ತುಸು ಕಂಗಾಲಾದೆ. ಆಗೆಲ್ಲ ನನಗೆ ಧೈರ್ಯವಾಗಿ ನಿಂತವಳು ನನ್ನ ಮಡದಿ. ನಾನು ಮನೆ ಕಟ್ಟ ಹೊರಟಾಗಲೂ ನನ್ನ ಕೈಹಿಡಿದವಳು ಅವಳೇ. ಅವಳ ತಾಯಿಯ ಮನೆಯವರು ಹಾಕಿದ ಅಷ್ಟೂ ಬಂಗಾರವನ್ನ ತಂದು ನನ್ನ ಕೈಗಿತ್ತಳು. ನಾನು ಹೃದಯ ಚಿಕಿತ್ಸೆ ಅದು ಇದು ಎಂದು ಆಸ್ಪತ್ರೆ ಸೇರಿದಾಗಲೂ ನನ್ನ ನೆರಳಾಗಿ ಇದ್ದವಳು, ಆಸ್ಪತ್ರೆಯಲ್ಲಿ ಕೆಲಸದವರ ಜೊತೆಯಲ್ಲಿ ಜಗಳವಾಡಿ ನನಗೆ ದೊರಕಲೇ ಬೇಕಾದ ಎಲ್ಲ ಸೌಲಭ್ಯಗಳೂ ದೊರೆಯುವಂತೆ ಮಾಡಿದವಳು ಈಕೆ. ಅಮ್ಮತೀರಿಕೊಂಡ ನಂತರ ಇಡೀ ಮನೆಯ ಜವಾಬ್ದಾರಿಯನ್ನ ಹೊತ್ತಳು. ಅಕ್ಕಪಕ್ಕದ ಮನೆಗಳವರು ಇವಳ ಬಗ್ಗೆ ಹೇಳುವ ಒಂದು ಮಾತಿದೆ “ಶೋಬನಮ್ಮ (ಶೋಭಾ ನಮ್ಮ ಮಗಳು) ತುಂಬಾ ಧೈರ್ಯವಂತೆ''.
ನನ್ನ ಅತ್ತೆ ಕೂಡ ಹೀಗೆಯೇ ಇದ್ದರು. ಅನಕ್ಷರಸ್ಥಳಾಗಿದ್ರ ಆಕೆ ಎಲ್ಲಿ ಹೋಗಿ ಏನು ಬೇಕಾದರು ಮಾಡಿಕೊಂಡು ಬರುತ್ತಿದ್ದರು. ಮಗಳಲ್ಲಿ ಈ ಗುಣ ಇದೆ. ನಲ್ಲಿಯವನು ಸರಿಯಾಗಿ ನೀರು ಬಿಡದೆ ಹೋದಾಗ, ನಗರ ಸಭೆಯ ಕರ್ಮಚಾರಿಗಳು ರಸ್ತೆಯನ್ನ ಸರಿಯಾಗಿ ಗುಡಿಸದೇ ಹೋದಾಗ, ಮನೆಕಟ್ಟುವವರು ಸಿಕ್ಕಾಪಟ್ಟೆ ದೂಳು ಹಾರಿಸಿದಾಗ ಇವಳು ಅವರನ್ನ ಗದರಿಸಿ ಸರಿದಾರಿಗೆ ತರುತ್ತಾಳೆ. ಹೋಗಲಿ ಸುಮ್ಮನಿರು ಎಂದರೂ ನನ್ನ ಮಾತನ್ನ ಕೇಳುವುದಿಲ್ಲ. ಚೌಕಾಸಿ ಮಾಡಿ ತರಕಾರಿ ಕೊಂಡು ತಂದು ಅದನ್ನ ಮನೆಯಲ್ಲಿ ಒಣಗಿಸಿ, ಕೊಳೆಸಿ ಹಾಳು ಮಾಡುತ್ತಾಳೆ. ಆದರೂ ಇವಳು ನನಗೆ ಅಚ್ಚು ಮೆಚ್ಚು... ಕೂಡಿದವರಿಗೆ... ಅನ್ನುವ ಹಾಗೆ ಇರಬಹುದು. ಹೊಸ ಊರುಗಳನ್ನ ನೋಡುವುದು ಅಂದರೆ ಅವಳಿಗೆ ಹುಚ್ಚು. ಎಲ್ಲೇ ಕಾರ್ಯಕ್ರಮವಿರಲಿ ನನಗಿಂತ ಮೊದಲು ಆಕೆ ಸಿದ್ಧ. ಮೂರು ನಾಲ್ಕು ದಿನಕ್ಕೆ ಬೇಕಾಗುವ ನೀರು, ದಾರಿಗೆ ತಿಂಡಿ ಇಲ್ಲ ಊಟ, ಅಲ್ಲಿ ಹಾಸಲು ಹೊದೆಯಲು ಎಂದೆಲ್ಲ ಸಿದ್ಧ ಮಾಡುವುದರಲ್ಲಿ ಅವಳಿಗೆ ಉತ್ಸಾಹ. ಅವಳ ಈ ಆಸಕ್ತಿ ನಮ್ಮನ್ನ ಗೋವಾ, ಮದರಾಸು, ವೇಲಾಂಗಣಿ, ಭೂಪಾಲ, ನವದೆಹಲಿ, ಮುಂಬಯಿ ಎಂದೆಲ್ಲ ಕರೆದೊಯ್ದಿದೆ. ಕರ್ನಾಟಕದಲ್ಲಂತೂ ನಾವು ನೋಡದ ಜಾಗವಿಲ್ಲ. ನನ್ನನ್ನ ಬಹಳ ಜನ ಕೇಳುತ್ತಾರೆ “ಅಲ್ಲ ನೀವು ಎಲ್ಲ ಕಡೆ ಹೆಂಡತೀನ ಕರೆದು ಕೊಂಡು ಹೋಗುತ್ತೀರಲ್ಲ?''
“ಹೌದು'' ಅನ್ನುತೇನೆ ನಾನು. “ಬೇರೆ ಯಾರ ಹೆಂಡಿರೂ ನನ್ನ ಜೊತೆ ಬರುವುದಿಲ್ಲವಲ್ಲ. ಅದಕ್ಕೆ'' ಅಲ್ಲದೆ ಇಲ್ಲೊಂದು ಸ್ವಾರ್ಥ ಇದೆ. ಎರಡು ಮೂರು ದಿನ ನನ್ನ ಹೆಂಡತಿ ಮನೆಗೆಲಸ, ಅಡಿಗೆ ಮಾಡು ಇತ್ಯಾದಿ ರಗಳೆ ಇಲ್ಲದೆ ನಿಶ್ಚಿಂತೆಯಿಂದ ಇರಲಿ ಅನ್ನುವುದು.
ನಾನು ಇವಳನ್ನ ನನ್ನ ಜೊತೆ ಕರೆದು ಕೊಂಡು ಹೋದುದರಿಂದ ಇವಳಿಗೆ ತುಂಬಾ ಪ್ರಯೋಜನ ಆಗಿದೆ. ಇವಳು ನನ್ನ ಪ್ರೀತಿಯ ಕನ್ನಡ ನಾಡನ್ನ ನೋಡಿದ್ದಾಳೆ, ಇಲ್ಲಿಯ ಪ್ರಖ್ಕಾತರ ಪರಿಚಯ ಇವಳಿಗೆ ಆಗಿದೆ, ನಾಡಿನ ವೈವಿಧ್ಯಮಯ ಬದುಕನ್ನ ಇವಳು ನೋಡಿದ್ದಾಳೆ, ಇವಳಿಗೆ ಪ್ರಿಯವಾದ ಭಕ್ಷ್ಯಗಳ ಪರಿಚಯ ಇವಳಿಗೆ ಆಗಿದೆ. ನನ್ನ ಜೊತೆಯಲ್ಲಿ ಇವಳೂ ವೇದಿಕೆ ಏರಿದ್ದಾಳೆ, ಜನ ನನಗೆ ಶಾಲು ಹೊದಿಸುವಾಗ ಧಾರವಾಡದ ಸೀರೆಯನ್ನ ಇವಳಿಗೆ ಹೊದಿಸಿ ಸಂತಸ ಪಟ್ಟಿದ್ದಾರೆ. ನಾನು ನನ್ನ ಹೆಂಡತಿಗೆ ರಾಶಿ ರಾಶಿ ಬಂಗಾರ ಮಾಡಿ ತೊಡಿಸಿಲ್ಲ, ಸೀರೆಗಳನ್ನ ಕೊಡಿಸಿಲ್ಲ. ಆದರೆ ಬೇರೊಂದು ರೀತಿಯಲ್ಲಿ ಅವಳು ಜನರ ಗೌರವಕ್ಕೆ ಪಾತ್ರಳಾಗಿದ್ದಾಳೆ. ಈ ತೃಪ್ತಿ ಅವಳಿಗೂ ಇದೆ ನನಗೂ ಕೂಡ.
ನನ್ನ ಸಾಹಿತ್ಯದ ಹಿಂದೆ ನನ್ನ ಹೆಂಡತಿ ಇದ್ದಾಳೆ ಅಂದರೆ ಅದು ಸತ್ಯ. ನಮ್ಮ ಹೆಂಗಸರಿಗೆ ಒಂದು ವಿಶೇಷ ದೃಷ್ಟಿ ಇರುತ್ತದೆ. ಅವರು ಅಲ್ಲಲ್ಲಿ ಏನೋ ವಿಶೇಷವನ್ನ ಗಮನಿಸುತ್ತಾರೆ. ಮಾನವೀಯವಾದ ಹಲವು ಘಟನೆಗಳು ಅವರ ಗಮನಕ್ಕೆ ಬರುತ್ತವೆ. ಇಂತಹಾ ಹಲವು ಘಟನೆಗಳನ್ನ ಫಿಲೋಮೆನಾ ನನಗೆ ತಂದು ಹೇಳಿದ್ದಾಳೆ. ನನ್ನ "ದೇವರ ಕೆಲಸದ ಮನುಷ್ಯ', "ದೇವರ ಶಿಲುಬೆ ಮನೆಗೆ ಬಂದದ್ದು' ಇನ್ನೂ ಹಲವು ಕತೆಗಳನ್ನ ನಾನು ಬರೆದಿದ್ದರೆ ಅದಕ್ಕೆ ಮೂಲ ಇವಳು. ಅಲ್ಲಿ ಹೀಗೆ ಹೀಗೆ ಆಯಿತು ಅನ್ನುವುದೇ ನನಗೆ ಒಂದು ಕತೆಗೆ ಪ್ರೇರಣೆ.
ಅಲ್ಲದೆ ನಾವು ಗಂಡಸರು ಎಷ್ಟೇ ತಿರುಗಾಡಲಿ ಕೆಲ ವಿಷಯಗಳು ನಮ್ಮ ಗಮನಕ್ಕೆ ಬರುವುದಿಲ್ಲ. ಹೀಗೆ ಗಮನಕ್ಕೆ ಬಾರದ ವಿಷಯಗಳನ್ನ ತಂದು ನನಗೆ ಒಪ್ಪಿಸುವ ಪತ್ರಿಕೆ ನನ್ನ ಹೆಂಡತಿ.
ಹಿಂದೆಲ್ಲ ನಾನು ಬರವಣಿಗೆ ಮಾಡುತ್ತಿದ್ದೆ. ಈ ಬರವಣಿಗೆಗೆ ತೊಂದರೆ ಆಗದ ಹಾಗೆ ನೋಡಿ ಕೊಳ್ಳುತ್ತಿದ್ದವಳು ಕೆಂಪಿ. ಟೀ ಕುಡಿಯಬೇಕು ಅನಿಸಿದಾಗ ಟೀ, ಊಟದ ಸಮಯಕ್ಕೆ ಊಟ ತಾನಾಗಿ ಬರುತ್ತಿತ್ತು. ಹೊರಗಿನ ಎಲ್ಲ ವ್ಯವಹಾರವನ್ನ ಅವಳೇ ನೋಡಿ ಕೊಳ್ಳುವುದರಿಂದ ನನಗೆ ಹೆಚ್ಚಿನ ತಲೆಬಿಸಿ ಇಲ್ಲ.
ಅಲ್ಲದೆ ಎಲ್ಲ ಲೆಖಕರಂತೆ ನನಗೂ ವ್ಯವಹಾರ ಜ್ಞಾನ ಕಡಿಮೆ. ಇದರ ಮೇಲೂ ಅವಳ ಕಣ್ಣು ಇರುತ್ತದೆ. ಎಲ್ಲಿ ಎಷ್ಟು ಕೊಟ್ಟಿರಿ, ಏಕೆ ಕೊಟ್ಟರಿ ಕೇಳುತ್ತಾಳೆ. ನನಗೆ ಬರುವ ದೂರವಾಣಿಗಳ ನಂಬರನ್ನ ಇವಳು ಸಂಗ್ರಹಿಸುತ್ತಾಳೆ, ಕೆಲ ಎಚ್ಚರಿಕೆಯ ಮಾತುಗಳೂ ಕೇಳಿ ಬರುತ್ತವೆ. ಆದರೆ ಇದೆಲ್ಲ ಅಧಿಕಾರವಾಣಿಯಿಂದ ಅವಳು ಮಾಡುವುದಿಲ್ಲ. ಅದೇ ನನಗೆ ಪ್ರಿಯವಾದದ್ದು.
ಈಗ ನನ್ನ ಬರವಣಿಗೆಗೆ ಕಂಪ್ಯೂಟರ್ ಬಂದಿದೆ. ಆದರೆ ಹಿಂದಿನ ವ್ಯವಸ್ಥೆ ಗೆ ಬೇರೆ ಯಾವುದೇ ಧಕ್ಕೆ ಆಗಿಲ್ಲ. ಎಲ್ಲವೂ ಇನ್ನೂ ಸುಸೂತ್ರವಾಗಿ ನಡೆದು ಕೊಂಡಿದೆ. ಇವಳು ನನ್ನ ಕತೆ ಕಾದಂಬರಿಗಳನ್ನ ಓದುತ್ತಾಳೆ. ಆದರೆ ಅದು ಹೇಗಿದೆ ಅನ್ನುವುದನ್ನ ಎಂದೂ ನನ್ನ ಮುಂದೆ ಹೇಳುವುದಿಲ್ಲ. ಮಕ್ಕಳ ಜೊತೆಯಲ್ಲಿ, ಇತರರ ಎದಿರು ಆ ಬಗ್ಗೆ ಹೇಳುವುದನ್ನ ನಾನು ಕೇಳಿಸಿ ಕೊಂಡು ಇವಳ ಅಭಿಪ್ರಾಯ ತಿಳಿಯಬೇಕು. ನೇರವಾಗಿ ನನ್ನ ಕತೆಗಳ ವಿಮರ್ಶೆ ಇವಳು ಮಾಡಿದ್ದು ಅಪರೂಪ. ನಾನು ಕೂಡ ಯಾವುದೇ ಕತೆ ಕಾದಂಬರಿಯ ಬಗ್ಗೆ ಇವಳ ಹತ್ತಿರ ಮಾತನಾಡುವದಿಲ್ಲ. ಅದು ನನ್ನದೇ ಆದ ಒಂದು ಪ್ರಪಂಚ. ಅಲ್ಲಿ ಬೇರೆ ಯಾರಿಗೂ ಪ್ರವೇಶವಿಲ್ಲ. ನಾನು ದೈಹಿಕವಾಗಿ ತುಸು ಬಳಲಿದವನು. ಮೂರು ನಾಲ್ಕು ಬಾರಿ ಆಸ್ಪತ್ರೆಗೆ ದಾಖಲಾಗಿ ಚೇತರಿಸಿ ಕೊಂಡವನು. ಹೀಗಾಗಿ ನನ್ನವಳಿಗೆ ಸದಾ ನನ್ನ ಚಿಂತೆ. ಈಗ ಮಕ್ಕಳು ನನ್ನ ಆರೈಕೆಗೆ ಇದ್ದಾರೆ, ಆದರೆ ಹಿಂದೆ ಇವಳೊಬ್ಬಳೇ ನಿಂತು ನನ್ನನ್ನ ನೋಡಿಕೊಂಡಿದ್ದಳು.
ಈಗಲೂ ಅಷ್ಟೆ ನಾವು ಎಲ್ಲಿಗಾದರೂ ಹೊರಟರೆ ತನ್ನ ಆರೈಕೆಗಿಂತ ನನ್ನ ಬಗ್ಗೆಯೇ ಇವಳಿಗೆ ಚಿಂತೆ. ನೀರು, ಹಣ್ಣು, ಬಿಸ್ಕೇಟು ಎಂದು ಒಂದು ಚೀಲ ಸಿದ್ಧ ಮಾಡಿಕೊಳ್ಳುತ್ತಾಳೆ. ದಾರಿಯುದ್ದಕ್ಕೂ ಅದು ಬೇಕೆ ಇದು ಬೇಕೆ ಎಂದು ಕೇಳುತ್ತಾಳೆ. ನನ್ನ ಊಟ ತಿಂಡಿಗೆ ತುಸು ತಡವಾಯಿತು ಅಂದರೆ ಮಿಡುಕಾಡುವವಳು ಇವಳು. ಮದುವೆ ಮತ್ತಿತರ ಸಂದರ್ಭಗಳಲ್ಲಿ ಸಮಯ ಮೀರುತ್ತಿದೆ ಅನ್ನುವಾಗ ಯಾರಾದರೂ ನನ್ನನ್ನ ವಿಶೇಷವಾಗಿ ಕರೆದು ನನ್ನ ಊಟದ ವ್ಯವಸ್ಥೆ ಮಾಡುತ್ತಾರೆ ಅಂದರೆ ಅಲ್ಲಿ ಇವಳ ಕೈವಾಡ ಇರುತ್ತದೆ. ಪಿ.ಲಂಕೇಶರ ಅವ್ವ ಕವಿತೆಯಲ್ಲಿ ಆಕೆ ತನ್ನ ಮಕ್ಕಳು ಗಂಡನಿಗಾಗಿ ಬನದ ಕರಡಿಯ ಹಾಗೆ ಹೋರಾಡುತ್ತಿದ್ದಳು ಅನ್ನುವ ಮಾತಿದೆ. ನನ್ನಾಕೆ ಎಷ್ಟೋ ಸಾರಿ ನನಗಾಗಿ ಹೀಗೆ ಕಾದಾಡಿದ್ದಾಳೆ.
ನನ್ನ ಮೂರು ಮಕ್ಕಳು ದೂರ ಇದ್ದಾರೆ. ಮೊಮ್ಯಕ್ಕಳು ನಿತ್ಕ ನನ್ನೊಡನೆ ಸ್ವಲ್ಪ ನನ್ನ ಹೆಂಡತಿಯೊಡನೆ ಹೆಚ್ಚಾಗಿ ಮಾತನಾಡುತ್ತವೆ. ತಿಂಗಳಿಗೊಮ್ಮೆ ಮಕ್ಕಳ ಮನೆಗೆ ಹೋಗುವುದು ನಡೆದೇ ಇದೆ. ಹೀಗೆ ಹೋಗುವಾಗ ಮಾತ್ರ ಕಾರು ನಮಗೆ ಸಾಲುವುದಿಲ್ಲ, ಲಾರಿಯೇ ಬೇಕು. ಒಮ್ಮೆ ಬೆಂಗಳೂರಿಗೆ ಹೋಗುವಾಗ ಕಾರು ಕೆಟ್ಟು ತೆಗೆದು ಕೊಂಡು ಹೋದ ಸುಮಾರು ಇಪ್ಪತ್ತು ಗಂಟುಗಳನ್ನ ಕಾರಿನಿಂದ ಬಸ್ಸಿಗೆ ಹಾಕುವಾಗ ಬಸ್ಸಿನಲ್ಲಿಯ ಜನರಿಂದ ಬೈಸಿ ಕೊಂಡವನು ನಾನು. ಇಂತಹಾ ಅನುಭವಗಳೂ ಅನೇಕ.
ನನ್ನ ಸಿಟ್ಟು, ಮುಂಗೋಪ, ತಾಳ್ಮೆ ಕಳೆದು ಕೊಳ್ಳುವ ಸ್ವಭಾವ, ಮನೆಯಲ್ಲಿಯ ಒಂದು ವ್ಯವಸ್ಥೆ ಕೆಟ್ಟಾಗ ನಾನು ಕಿರುಚಿ ಕೊಳ್ಳುವುದು, ಒರಟು ಒರಟಾದ ಅವಳ ಮಾತಿಗೆ, ಕೃತಿಗೆ ನಾನು ತೋರುವ ಅಸಹನೆ, ಇದೆಲ್ಲವನ್ನು ಸಹಿಸಿಕೊಂಡು ಅವಳು ನನ್ನ ಜೊತೆಯಲ್ಲಿ ಬಾಳುವೆ ಸಾಗಿಸಿದ್ದಾಳೆ. ಪ್ರಾರಂಭದಲ್ಲಿ ಹೆಂಡತಿಯನ್ನ ಹೊಡೆದದ್ದು. ಬೈಯ್ದದ್ದು ಇದೆ. ಅದು ನಂತರ ಪಶ್ಚಾತ್ತಾಪಕ್ಕೆ ಕಾರಣವಾಯಿತು. ಆಗ ಮೈಯಲ್ಲಿ ಶಕ್ತಿಯೂ ಇತ್ತು. ಆದರೆ ಇತ್ತೀಚೆಗೆ ಅದೆಲ್ಲ ಕಡಿಮೆ ಆಗಿದೆ. ಮನೆಯಲ್ಲಿ ನಾವು ನಾವೇ ಇರುವುದರಿಂದ ಅದಕ್ಕೆಲ್ಲ ಆಸ್ಪದವೂ ಇಲ್ಲ.
ನಾನು ಹೆಂಡತಿಯನ್ನ ಹೆಸರು ಹಿಡಿದು ಕೂಗಿದ್ದುದಿಲ್ಲ. ಕೆಂಪಿ ಎಂದಾಗಲೀ, ಫಿಲು ಎಂದಾಗಲಿ ಕರೆದ ನೆನಪು ನನಗೆ ಇಲ್ಲ. ಅಷ್ಟೂ ಕರೆಯ ಬೇಕೆಂದರೆ “ಕೇಳಸ್ತಾ ?'' ಎಂದು ಕೇಳುತ್ತೇನೆ. ಆಕೆ ಅಲ್ಲಿಂದಲೇ ಅದನ್ನ ಕೇಳಿಸಿ ಕೊಂಡು ಉತ್ತರಿಸುತ್ತಾಳೆ. ಆದರೆ ಎಲ್ಲವನ್ನೂ ಮೂರು ಸಾರಿ ಅವಳಿಗೆ ಹೇಳಬೇಕು, ಅಷ್ಟೆ.
ನಮ್ಮ ಮೂವರೂ ಮಕ್ಕಳು ಮದುವೆಯಾಗಿ ಬದುಕಿನಲ್ಲಿ ಒಂದು ನೆಲೆಗೆ ಬಂದು ತಲುಪಿದ್ದಾರೆ. ನನ್ನ ಮಗಳು ಶೋಭಾದೊಂದು ಕಂಪ್ಯೂಟರ್ ಸಂಸ್ಥೆ ಇದೆ. ಮೊದಲ ಮಗ ನವೀನ ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ಓದಿ ಕಂಪನಿಯೊಂದರಲ್ಲಿ ಗ್ರಾಫಿಕ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದಾನೆ. ಎರಡನೆಯ ಮಗ ಸಂತೋಷ ಖಾಸಗಿಯಾಗಿ ವಿದ್ಯುತ್ ಉಪಕರಣಗಳ ಸರಬರಾಜು ಮಾಡುತ್ತಾನೆ. ಅಳಿಯ ಸೊಸೆಯಂದಿರು (ನರೇಶ್, ರೇಶ್ಯಾ ಕವಿತಾ) ತಮ್ಮ ತಮ್ಮ ಕುಟುಂಬಗಳ ನಿರ್ವಹಣೆಯಲ್ಲಿ ನಿರತರಾಗಿದ್ದಾರೆ.
ಮೊಮ್ಮಕ್ಕಳು (ತೇಜಸ್, ಫ್ಯಾಬಿನ್ ಮತ್ತು ಐರಿಶ್) ಎಂದಿನ ತುಂಟತನದಿಂದ ನಮ್ಮ ಸಂತಸವನ್ನ ಹೆಚ್ಚಿಸಿದ್ದಾರೆ. ತೇಜಸ್ ಚಿತ್ರಕಲೆಯಲ್ಲಿ ದ.ಕ. ಜಿಲ್ಲೆಗೆ ಡಿಸ್ಬಿಂಗ್ಶನ್ ತಂದಿದ್ದಾನೆ. ಫ್ಯಾಬಿನ್ ನನ್ನನ್ನ "ಕನ್ನಡ ಡಿಸೋಜ' ಎಂದು ಕರೆಯುತ್ತಾನೆ. ಐರಿಶ್ ಚಿತ್ರ ಮತ್ತು ನೃತ್ಯದಲ್ಲಿ ಸದಾ ನಿರತಳಾಗಿರುತ್ತಾಳೆ.
ನನಗೆ 75 ಆದಾಗ ನನ್ನ ಮಕ್ಕಳು ಸಾಗರದಲ್ಲಿ ಒಂದು ಕಾರ್ಯಕ್ರಮವನ್ನ ವಿಶೇಷವಾಗಿ ರೂಪಿಸಿದ್ದರು. ತಂದೆ ತಾಯಿಯನ್ನ ವೇದಿಕೆಯ ಮೇಲೆ ಕೂರಿಸಿ ಅವರು ತಮ್ಮ ಪ್ರೀತಿಯನ್ನ ವ್ಯಕ್ತಪಡಿಸಿದ್ದರು. ಇದು ಮನಸ್ಸಿಗೆ ಮುದ ನೀಡಿದ ಒಂದು ಸಂದರ್ಭ.
ಚೀನಿ ಭಾಷೆಯಲ್ಲಿ ಒಂದು ಗಾದೆ ಇದೆ “ಕುಂಟನೊಡನೆ ನಡೆಯುವವನು ಕ್ರಮೇಣ ತಾನೂ ಕುಂಟುತ್ತಾನಂತೆ', ನನ್ನೊಡನೆ ಈ 43 ವರ್ಷಗಳನ್ನ ಕಳೆದ ಫಿಲೋಮೆನಾ ನನ್ನನ್ನು ಅರ್ಥ ಮಾಡಿಕೊಂಡಿದ್ರಾಳೆ, ನನ್ನಿಂದ ಕಲಿತಿದ್ದಾಳೆ, ನನ್ನನ್ನು ಅನುಕರಿಸಿದ್ದಾಳೆ. ಇದೇ ದಾಂಪತ್ಯ ಎಂದು ನಾನು ಅಂದು ಕೊಂಡಿದ್ದೇನೆ. ಇದಕ್ಕಾಗಿ ಅವಳಿಗೆ ಕೃತಜ್ಞತೆ ಹೇಳುತ್ತಿದ್ದೇನೆ.
-ನಾ.ಡಿಸೋಜ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.