ADVERTISEMENT

ನೆನೆದರೆ ಕಂಪನ

ಭಾವಸೇತು

ಡಾ.ಕೆ.ಬಿ.ರಂಗಸ್ವಾಮಿ
Published 13 ಅಕ್ಟೋಬರ್ 2018, 19:45 IST
Last Updated 13 ಅಕ್ಟೋಬರ್ 2018, 19:45 IST
   

ಈ ಘಟನೆ ನಡೆದು ಇಲ್ಲಿಗೆ ಸರಿಯಾಗಿ ಇಪ್ಪತ್ತೈದು ವರ್ಷಗಳಾದವು. ನಿನ್ನೆ ಮೊನ್ನೆ ನಡೆದಿದ್ದೇನೋ ಎಂಬಷ್ಟು ಅದರ ನೆನಪು ಹಚ್ಚಹಸುರಾಗಿದೆ. ಅದು 1993ನೇ ಇಸವಿಯ ಸೆಪ್ಟೆಂಬರ್‌ ತಿಂಗಳ 30 ನೇ ತಾರೀಕು. ಆ ವರ್ಷದಲ್ಲಿ ಅದು ಗಣಪತಿ ವಿಸರ್ಜನೆಯ ಕಟ್ಟಕಡೆಯ ದಿನ. ನಾನಾಗ ಕಲಬುರ್ಗಿಯ ಜನತಾ ಲೇ ಔಟ್ ನ ವಠಾರದಂಥ ಒಂದು ಪುಟ್ಟ ಬಾಡಿಗೆ ಮನೆಯಲ್ಲಿ ತಾಯಿ ಮತ್ತು ತಂಗಿ (ಚಿಕ್ಕಪ್ಪನ ಮಗಳು) ಯೊಂದಿಗೆ ವಾಸವಾಗಿದ್ದೆ.

ರಾತ್ರಿಯ ಊಟ ಮುಗಿಸಿ ಆಯಾಸಗೊಂಡಿದ್ದ ದೇಹವನ್ನು ಹಾಸಿಗೆಗೆ ಚಾಚುವಷ್ಟರಲ್ಲಾಗಲೇ ಸಮಯ ಹತ್ತೂವರೆಯಾಗಿಬಿಟ್ಟಿತ್ತು. ನನ್ನ ತಾಯಿ ಮತ್ತು ತಂಗಿ ಇನ್ನೂ ಮಲಗುವ ತಯಾರಿ ನಡೆಸುತ್ತಿದ್ದರು. ಸೆಪ್ಟೆಂಬರ್ ತಿಂಗಳಾಗಿದ್ದರೂ ಧಗೆಯೇನೂ ಕಡಿಮೆಯಿರಲಿಲ್ಲ. ನಮ್ಮ ಮನೆಯಲ್ಲಿದ್ದ ಹಳೆಯ ಟೇಬಲ್ ಫ್ಯಾನ್ ಭರ್ರೋ ಎಂದು ಶಬ್ದ ಮಾಡುತ್ತಾ ನನ್ನ ದಣಿದ ದೇಹಕ್ಕೆ ತಣ್ಣನೆ ಗಾಳಿ ಬೀಸುತ್ತಿತ್ತು. ನಾನಾಗ ಗೋಡೆಗೆ ಹತ್ತಿಕೊಂಡಂತೆ ನೆಲದ ಮೇಲೇ ಹಾಸಿಗೆ ಹಾಸಿಕೊಂಡು ಮಲಗುತ್ತಿದ್ದೆ.

ಇನ್ನೇನು ಕಣ್ಣಿಗೆ ಜೋಂಪು ಆವರಿಸಬೇಕು ಎನ್ನುವಷ್ಟರಲ್ಲಿ ಇದ್ದಕ್ಕಿದ್ದಂತೆ ನಾನು ಮಲಗಿದ್ದ ಹಾಸಿಗೆ ಜೋಕಾಲಿಯಾಡಿಸಿದಂತೆ ಅತ್ತಿತ್ತ ವಾಲಾಡತೊಡಗಿತು. ಜೊತೆಯಲ್ಲೇ ಪಕ್ಕದ ಗೋಡೆಯಿಂದ ಗಡಗಡ ಶಬ್ದ ಹೊಮ್ಮಿತು. ಮಂದ ಬೆಳಕು ಬೀರುತ್ತಿದ್ದ ವಿದ್ಯುತ್ ದೀಪ ಛಕ್ಕನೆ ಆರಿಹೋಗಿ ಸುತ್ತಲೂ ಕತ್ತಲಾವರಿಸಿತು. ಭರ್ರೋ ಎಂದು ಶಬ್ದ ಹೊರಡಿಸುತ್ತಿದ್ದ ಫ್ಯಾನ್ ಶಬ್ದ ನಿಲ್ಲಿಸಿ ತಟಸ್ಥವಾಗಿಬಿಟ್ಟಿತು. ನನ್ನ ಮನಸ್ಸು ಭೂಕಂಪವಾಗುತ್ತಿದೆ ಎಂಬುದನ್ನು ಥಟ್ಟನೆ ಗ್ರಹಿಸಿ ಹೊರಗೆ ಓಡಿಹೋಗುವಂತೆ ನನ್ನ ದೇಹಕ್ಕೆ ಆಜ್ಞಾಪಿಸಿತು. ಭೂಕಂಪವೆಂದರೆ ಹೇಗಿರುತ್ತದೆ ಎಂಬುದು ನಾನು ಆರನೇ ತರಗತಿಯಲ್ಲಿದ್ದಾಗಲೇ ಒಮ್ಮೆ ನನ್ನ ಅನುಭವಕ್ಕೆ ಬಂದಿತ್ತು. ಅದೀಗ ನನಗೆ ಸಹಾಯಕ್ಕೆ ಬಂದಿತು.

ADVERTISEMENT

ನಾನು ಧಡಕ್ಕನೆ ಎದ್ದು ಬೆಡ್ ರೂಮಿನಿಂದ ಹೊರಗಡಿಯಿಟ್ಟೆ...ಥಟ್ಟನೆ ಆ ಕತ್ತಲಲ್ಲಿ ಎರಡೂ ಬದಿಯಿಂದ ಬಿಗಿಯಾಗಿ ಒತ್ತಿ ಹಿಡಿದಂತಾಯಿತು. ಏನಾಗುತ್ತಿದೆ ಎಂದು ನನಗೆ ಗಲಿಬಿಲಿಯಾದಂತಾಗಿ ಬಿಗಿ ಹಿಡಿತವನ್ನು ಸಡಿಲಗೊಳಿಸಿಕೊಳ್ಳಲು ಕೊಸರಾಡುತ್ತಿರುವಾಗ, ಛಕ್ಕನೆ ದೀಪಗಳು ಬೆಳಗಿ ಸುತ್ತಲೂ ಬೆಳಕು ಆವರಿಸಿತು. ನನ್ನನ್ನು ಬಿಗಿಯಾಗಿ ಹಿಡಿದುಕೊಂಡಿದ್ದ ನನ್ನ ತಾಯಿ ಮತ್ತು ತಂಗಿ ಹಿಡಿತವನ್ನು ಸಡಿಲಗೊಳಿಸಿ ಹಿಂದೆ ಸರಿಯತೊಡಗಿದರು. ನಾನು ನನ್ನ ತಾಯಿಗೆ 'ಭೂಕಂಪ ಆಗಿದೆ. ಹೊರಗೆ ಓಡುವುದು ಬಿಟ್ಟು ನೀವಿಬ್ಬರೂ ನನ್ನನ್ನು ಬಿಗಿಯಾಗಿ ಹಿಡಿದುಕೊಂಡಿದ್ದಿರಲ್ಲಾ...?' ಎಂದಾಗ 'ಸತ್ತರೆ ಎಲ್ಲರೂ ಒಟ್ಟಿಗೆ ಸತ್ತುಬಿಡೋಣ ಎಂದು ಹಾಗೆ ಮಾಡಿದೆವು' ಎಂದ ಅವರ ಮಾತಿಗೆ ಹೇಗೆ ಪ್ರತಿಕ್ರಿಯಿಸುವುದೆಂದು ತಿಳಿಯದೆ ಸುಮ್ಮನಾಗಿಬಿಟ್ಟೆ. ಹೊರಗೆ ಬರುವಷ್ಟರಲ್ಲಿ ಅದಾಗಲೇ ಗುಂಪುಗೂಡಿದ್ದ ಜನರು ಭೂಕಂಪದ ಕುರಿತೇ ಗುಜುಗುಜು ಚರ್ಚೆಯಲ್ಲಿ ತೊಡಗಿದ್ದರು.

ಮಹಾರಾಷ್ಟ್ರದ ಲಾತೂರನ್ನು ಕೇಂದ್ರಬಿಂದುವಾಗಿಸಿಕೊಂಡಿದ್ದ ಅತ್ಯಂತ ತೀವ್ರ ಸ್ವರೂಪದ ಆ ಭೂಕಂಪ ಅಪಾರ ಸಾವು ನೋವುಗಳಿಗೆ ಮತ್ತು ಆಸ್ತಿಹಾನಿಗೆ ಕಾರಣವಾಗಿತ್ತು. ಅದರ ತೀವ್ರತೆ ಕಲಬುರ್ಗಿಯನ್ನೂ ಒಳಗೊಂಡು ಉತ್ತರ ಕರ್ನಾಟಕದ ಹಲವು ಭಾಗಗಳಿಗೂ ವ್ಯಾಪಿಸಿತ್ತು. ಪ್ರತಿ ವರ್ಷ ಸೆಪ್ಟೆಂಬರ್ 30 ರಂದು ಆ ದಿನದ ನೆನಪು ನನ್ನ ಮನದೆರೆಯ ಮೇಲೆ ಒಮ್ಮೆ ಹಾದುಹೋಗದೆ ಇರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.